ಚಿನ್ನದ ಬೆಲೆ ಗಗನದತ್ತ: ಜನರಿಗೆ ಶಾಕ್!
– ಚಿನ್ನದ ಬೆಲೆಯಲ್ಲಿ ಹೊಸ ಹೊಸ ಮೈಲಿಗಲ್ಲು
– ಬೆಳ್ಳಿ ಬೆಲೆಯೂ ಕೂಡ ದಾಖಲೆ ಮಟ್ಟಕ್ಕೆ ಏರಿಕೆ
NAMMUR EXPRESS NEWS
ಹಬ್ಬದ ಋುತುವಿನಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆ ಏರುಮುಖಿಯಾಗಿದೆ. ಇದೇ ಟ್ರೆಂಡ್ ಮುಂದುವರಿದರೆ ಆಭರಣ ಚಿನ್ನ ಹತ್ತು ಗ್ರಾಂಗೆ 77,000 ರೂ. ದಾಟಲಿದ್ದು, ಬೆಳ್ಳಿ ಕೆ.ಜಿಗೆ ಒಂದು ಲಕ್ಷ ರೂ. ದಾಟಲಿದೆ ಎಂದು ಆಭರಣ ವ್ಯಾಪಾರಿಗಳು ಅಂದಾಜಿಸಿದ್ದಾರೆ.
ಬೆಂಗಳೂರಿನಲ್ಲಿ ಶನಿವಾರ 22 ಕ್ಯಾರಟ್ ಚಿನ್ನದ ದರವು ಹತ್ತು ಗ್ರಾಂಗೆ 72,220 (ಗ್ರಾಂಗೆ 7.220 ರೂ.) ಹಾಗೂ 24 ಕ್ಯಾರಟ್ ಚಿನ್ನ ಹತ್ತು ಗ್ರಾಂಗೆ 78,050 (ಒಂದು ಗ್ರಾಂಗೆ 7,805), ಬೆಳ್ಳಿ ಕೆ.ಜಿಗೆ 93,100 ರೂ. ತಲುಪಿದೆ.
ಕಳೆದ ಜುಲೈನಲ್ಲಿ ಕೇಂದ್ರ ಸರಕಾರವು ಅಬಕಾರಿ ಸುಂಕ ಇಳಿಸಿದ ಬಳಿಕ ಖರೀದಿ ಭರಾಟೆ ಜೋರಾಗಿದೆ. ಅದರ ಜತೆಗೆ ಈ ಸಲ ಮುಂಗಾರು ಉತ್ತಮವಾಗಿರುವ ಕಾರಣ ಹಬ್ಬದ ಋುತುವಿನಲ್ಲಿ ಆಭರಣ ಖರೀದಿ ಜೋರಾಗುವ ನಿರೀಕ್ಷೆ ಇದೆ. ವಿಶೇಷವಾಗಿ ಗ್ರಾಮೀಣ ಪ್ರದೇಶದ ಜನ ಹಿಂದೆಂದಿಗಿಂತಲೂ ಈ ಸಲ ಚಿನ್ನ, ಬೆಳ್ಳಿ ಖರೀದಿಗೆ ಮುಂದಾಗಬಹುದು ಎನ್ನುವುದು ಚಿನಿವಾರ ಪೇಟೆ ನಿರೀಕ್ಷೆ.
ಸಾಮಾನ್ಯವಾಗಿ ವಾರ್ಷಿಕ 10% ಏರಿಕೆ ಕಾಣುತ್ತಿದ್ದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ದರ ಈ ಬಾರಿ ಅತ್ಯಧಿಕ 40% ಏರಿಕೆ ಕಂಡಿದೆ. ಯುದ್ಧ ಸೇರಿದಂತೆ ಜಾಗತಿಕ ರಾಜಕೀಯ-ಭೌಗೋಳಿಕ ಪರಿಸ್ಥಿತಿಗಳೂ ಇದಕ್ಕೆ ಕಾರಣ. ಜತೆಗೆ, ಅಮೆರಿಕದ ಫೆಡರಲ್ ರಿಸರ್ವ್ ಇತ್ತೀಚೆಗೆ ಬಡ್ಡಿದರ ಇಳಿಸಿರುವುದು ಹಾಗೂ ಈ ದರವನ್ನು ಮತ್ತಷ್ಟು ಇಳಿಕೆ ಮಾಡುವ ನಿರೀಕ್ಷೆಯೂ ಚಿನ್ನದ ದರದ ನಾಗಾಲೋಟಕ್ಕೆ ಮತ್ತೊಂದು ಕಾರಣ ಎಂದು ತಜ್ಞರು ಹೇಳಿದ್ದಾರೆ.