ಭದ್ರಾ ವ್ಯಾಪ್ತಿಯಲ್ಲಿ ಆನೆ ಬಿಡಾರಕ್ಕೆ ವಿರೋಧ!
* ಶೃಂಗೇರಿ ಕ್ಷೇತ್ರ ಮಲೆನಾಡು ನಾಗರಿಕ ರೈತ ಹಿತರಕ್ಷಣಾ ಸಮಿತಿ ಸಭೆ
* ಅ.17 ರೊಳಗೆ ಭರವಸೆ ಈಡೇರದಿದ್ದಲ್ಲಿ ಪ್ರತಿಭಟನೆ
* ರೈತ ಸಂಘಟನೆಗಳ ವಿರುದ್ಧದ ತಮ್ಮ ಹೇಳಿಕೆಗೆ ಶಾಸಕರು ಕ್ಷಮೆಯಾಚಿಸಲು ಪಟ್ಟು
NAMMUR EXPRESS NEWS
ಬಾಳೆಹೊನ್ನೂರು: ಶೃಂಗೇರಿ ಕ್ಷೇತ್ರ ಮಲೆನಾಡು ನಾಗರಿಕ ರೈತ ಹಿತರಕ್ಷಣಾ ಸಮಿತಿಯಿಂದ ಸಭೆಯನ್ನು ನಡೆಸಿ ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಯಿತು. ಭದ್ರಾ ವ್ಯಾಪ್ತಿಯಲ್ಲಿ ಆನೆ ಬಿಡಾರಕ್ಕೆ ವಿರೋಧ ವ್ಯಕ್ತಪಡಿಸಿದ್ದಲ್ಲದೆ ಅ.17ರೊಳಗೆ ಭರವಸೆ ಈಡೇರದಿದ್ದಲ್ಲಿ ಪ್ರತಿಭಟನೆ ನಡೆಸಲು ತೀರ್ಮಾನ ಮಾಡಲಾಯಿತು. ರೈತ ಸಂಘಟನೆಗಳ ವಿರುದ್ಧದ ತಮ್ಮ ಹೇಳಿಕೆಗೆ ಶಾಸಕರು ಕ್ಷಮೆಯಾಚಿಸಲು ಸಭೆ ಹೇಳಿತು.
ಬಾಳೆಹೊನ್ನೂರು ಪಟ್ಟಣದ ವಿದ್ಯಾಗಣಪತಿ ಸಮುದಾಯ ಭವನದಲ್ಲಿಸಭೆಯಲ್ಲಿ ನರಸಿಂಹರಾಜಪುರ, ಶೃಂಗೇರಿ, ಕೊಪ್ಪ ತಾಲ್ಲೂಕಿನ ಹಾಗೂ ಖಾಂಡ್ಯ ಹೋಬಳಿಯ ರೈತರು, ಹಾಗೂ ಸಮಿತಿಯ ಸದಸ್ಯರು ಭಾಗವಹಿಸಿದ್ದರು.
ಸಭೆಯಲ್ಲಿ ಕೈಗೊಂಡ ಮಹತ್ವದ ನಿರ್ಣಯಗಳೇನು..??!
* ತಿಂಗಳೊಳಗೆ ನಿಯೋಗ ಕರೆದುಕೊಂಡು ಹೋಗುವುದಾಗಿ ತಿಳಿಸಿದ್ದ ಶಾಸಕರು ಹಾಗೂ ಸಂಸದರು ಇದುವರೆಗೂ ಕರೆದುಕೊಂಡು ಹೋಗಿಲ್ಲ, ಈ ತಿಂಗಳ 17ನೇ ತಾರೀಖಿನ ಒಳಗಾಗಿ ಈ ಬಗ್ಗೆ ಕ್ರಮ ವಹಿಸಬೇಕು ಇಲ್ಲವಾದಲ್ಲಿ ಪ್ರತಿಭಟನೆ ಮಾಡುವ ನಿರ್ಧಾರ ಮಾಡಲಾಯಿತು.
* ಸ್ಥಳದಲ್ಲೇ ಸಮಿತಿ ಅಧ್ಯಕ್ಷರು ಸಂಸದರಿಗೆ ಕರೆ ಮಾಡಿ, ರಾಜ್ಯ ಸರ್ಕಾರ ಕಸ್ತೂರಿ ರಂಗನ್ ವರದಿ ತಿರಸ್ಕಾರ ಮಾಡಿರುವುದರಿಂದ, ಕೇರಳ ಮಾದರಿಯಲ್ಲಿ ತಿರಸ್ಕರಿಸಿ ದಾಖಲೆ ಸಲ್ಲಿಸಲು ಸಹಕಾರ ಕೋರಲಾಯಿತು.
* ಸೆಕ್ಷನ್ 4 ಅನ್ನು 17 ಮಾಡುವ ಪ್ರಕ್ರಿಯೆ ಕುರಿತು ತುರ್ತಾಗಿ ಜಿಲ್ಲಾಧಿಕಾರಿಗಳ ಭೇಟಿಯಾಗಿ ಪ್ರಕ್ರಿಯೆ ಪಾಲಿಸಲು ಒತ್ತಾಯ ಹಾಗೂ ಕಾನೂನು ಹೋರಾಟ
* 64ಎ ಕೇಸ್ ಆಗಿರುವ ಜಾಗಗಳಲ್ಲಿ ಸಾಗುವಳಿ ಮಾಡಿಕೊಂಡಿರುವ ರೈತರಿಗೆ ಅರಣ್ಯಾಧಿಕಾರಿಗಳು, ಕಾಫಿ ಕುಯಿಲು ಆದನಂತರ ಬಿಟ್ಟು ಕೊಡುತ್ತೇವೆ ಎಂದು Affidavit ನಲ್ಲಿ ಬರೆದುಕೊಡಿ ಎಂದು ಕೇಳುತ್ತಿದ್ದು ಇದನ್ನು ಶಾಸಕರು ಹಾಗೂ ಸಂಸದರ ಗಮನಕ್ಕೆ ತಂದು ತಡೆಹಿಡಿಯಲು ಒತ್ತಾಯಿಸುವುದು. ತಪ್ಪಿದಲ್ಲಿ ಅರಣ್ಯ ಇಲಾಖೆ ಕಛೇರಿಗೆ ಮುತ್ತಿಗೆ.
* ಕೆಲವು ಗ್ರಾಮಗಳ ರೈತರ ಮನೆಗೆ ಅರಣ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ನಿಮ್ಮ ಮೇಲೆ 64a ಕೇಸ್ ಇದೆ, ಹಾಗೇ ನಿಮ್ಮ ಜಾಗ ಸೆಕ್ಷನ್ 4 ಅಲ್ಲಿ ಬರುತ್ತದೆ, ಆದ್ದರಿಂದ ಬಿಟ್ಟುಕೊಡುವ ಬಗ್ಗೆ ಬರೆದು ಕೊಡುವ ಬಗ್ಗೆ ಹೇಳುತ್ತಿದ್ದಾರೆ, ರೈತರು ಬರೆದುಕೊಡದಂತೆ ಎಚ್ಚರಿಸುವುದು ಮತ್ತು ಅಧಿಕಾರಿಗಳ ವಿರುದ್ದ ಕ್ರಮವಹಿಸಲು ಶಾಸಕರು ಮತ್ತು ಸಂಸದರು ಮೂಲಕ ಒತ್ತಡ ತರುವುದು. ತಪ್ಪಿದಲ್ಲಿ ಅರಣ್ಯ ಇಲಾಖೆ ಕಛೇರಿಗೆ ಮುತ್ತಿಗೆ ಹಾಕಲಾಗುವುದು
* ಭದ್ರಾ ಅಭಯಾರಣ್ಯ ವ್ಯಾಪ್ತಿಯಲ್ಲಿ ಆನೆ ಬಿಡಾರ ಮಾಡಲು ತೀವ್ರ ವಿರೋಧ ವ್ಯಕ್ತವಾಗಿದ್ದು, ಈ ನಿಟ್ಟಿನಲ್ಲಿ ಹೋರಾಟ
* ಈಗಿರುವ ಒತ್ತುವರಿ ಸಮಸ್ಯೆ ಪರಿಹಾರ ಆಗುವವರೆಗೆ ACF ಕೋರ್ಟ್ ಗೆ ಹೊಸ ಪ್ರಕರಣ ದಾಖಲಿಸುತ್ತಿರುವುದನ್ನು ತಡೆ ಹಿಡಿಯುವುದು
* ಮುಂದಿನ ದಿನಗಳಲ್ಲಿ ಖಾಂಡ್ಯ ನಾಗರೀಕ ಹಿತರಕ್ಷಣಾ ಸಮಿತಿ ಸಲಹೆಯಂತೆ ಪ್ರಧಾನಿಗೆ ಶಾಲಾ ಮಕ್ಕಳಿಂದ ಪತ್ರ ಅಭಿಯಾನ
* ಸಮಿತಿ ಕಡೆಯಿಂದ ಮಾಹಿತಿ ಸಭೆ (ಸಂವಾದ) ಆಯೋಜನೆ. ಶಾಸಕರು, ಸಂಸದರು ಹಾಗೂ ವಿಧಾನ ಪರಿಷತ್ ಶಾಸಕರನ್ನು ಒಂದೇ ಕಡೆ ಸೇರಿಸಿ ಚರ್ಚೆ ಮಾಡುವುದು.
ಇನ್ನು ಬಹಳ ಮುಖ್ಯವಾಗಿ ಸಮಿತಿಯ ಸಾರ್ವಜನಿಕ ವಾಟ್ಸಾಪ್ ಗ್ರೂಪ್ ಗಳಲ್ಲಿ ಬರುತ್ತಿರುವ ಚರ್ಚೆಗಳ ಕುರಿತು: ಸಮಿತಿಯ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳ ಹೇಳಿಕೆ ಮಾತ್ರ ಸಮಿತಿಯ ನಿಲುವು ಆಗಿರುತ್ತದೆ,ಉಳಿದವರ ಹೇಳಿಕೆ ಅವರ ವೈಯಕ್ತಿಕ ಅಭಿಪ್ರಾಯ ಅದಕ್ಕೆ ಸಮಿತಿ ಹೊಣೆಯಲ್ಲ ಎಂಬ ನಿರ್ಣಯಗಳನ್ನು ಕೈಗೊಳ್ಳಲಾಯಿತು.
ಶಾಸಕರು ಕ್ಷಮೆಯಾಚಿಸಬೇಕು!
ರೈತ ಸಂಘಟಕರ ಕುರಿತು ಶಾಸಕರ ಹೇಳಿಕೆ ಕುರಿತು ಪತ್ರಿಕಾ ಹೇಳಿಕೆಗೆ ಶಾಸಕರು ಕ್ಷಮೆಯಾಚಿಸಬೇಕು ಎಂದು ಪತ್ರಿಕಾ ಹೇಳಿಕೆಯಲ್ಲಿ ಸಮಿತಿ ತಿಳಿಸಿದೆ. ಇದು ಸರ್ವ ಸದಸ್ಯರ ಅಭಿಪ್ರಾಯವಾಗಿತದೆ ಎಂದು ಸಮಿತಿ ತಿಳಿಸಿದೆ. ಈ ಸಂದರ್ಭದಲ್ಲಿ ಮಲೆನಾಡು ನಾಗರಿಕ ರೈತ ಹಿತರಕ್ಷಣಾ ಸಮಿತಿ ಅಧ್ಯಕ್ಷ ಎಂ.ಎನ್.ನಾಗೇಶ್, ರಂಜಿತ್ ಶೃಂಗೇರಿ, ಕಾರ್ತಿಕ್ ಕಾರ್ಗದ್ದೆ, ನವೀನ್ ಕರಗಣೆ, ಪುರುಷೋತ್ತಮ್, ಹಿರಿಯಣ್ಣ, ಆದರ್ಶ, ವಕೀಲ ರವೀಂದ್ರ ಕೆಸುವಿನಮನೆ, ರತ್ನಾಕರ್ ಗಡಿಗೇಶ್ವರ, ಚಂದ್ರಶೇಖರ್ ರೈ ಇತರರು ಉಪಸ್ಥಿತರಿದ್ದರು.