ಸ್ಕೀಮ್ ಯೋಜನೆ ಹುಷಾರ್!
– ಜನರಿಗೆ ನಾನಾ ರೀತಿಯ ಬಹುಮಾನಗಳ ಆಫರ್
– ಸೆಲೆಬ್ರಿಟಿಗಳ ಮೂಲಕ ಪ್ರಚಾರ: ಏನಿದು ಯೋಜನೆ
NAMMUR EXPRESS NEWS
ಬೆಂಗಳೂರು: ಬೆಂಗಳೂರು, ಮೈಸೂರು, ಮಲೆನಾಡು, ಕರಾವಳಿ ಸೇರಿ ಎಲ್ಲೆಡೆ ಈಗ ವಿವಿಧ ಸ್ಕೀಮ್ ಶುರುವಾಗಿದೆ. ಆದರೆ ಈ ಬಗ್ಗೆ ಗ್ರಾಹಕರಿಗೆ ಯಾವುದೇ ಗ್ಯಾರಂಟಿ ಇಲ್ಲ. ನಂಬಿಕೆ ಆಧಾರದಲ್ಲಿ ಈ ಬ್ಯುಸಿನೆಸ್ ನಡೆಯುತ್ತಿದೆ. ಹಲವು ಬಗೆಯ ಸ್ಕೀಮ್ನಲ್ಲಿ ತಿಂಗಳಿಗೊಂದು ಫ್ಲ್ಯಾಟ್, ಕಾರು, ಬೈಕ್, ಕೆಜಿ ಚಿನ್ನ ಸೇರಿದಂತೆ ನಾನಾ ರೀತಿಯ ಬಹುಮಾನಗಳ ಮೂಲಕ ಗ್ರಾಹಕರನ್ನು ಸೆಳೆಯಲಾಗುತ್ತಿದೆ. ಇದರ ಪ್ರಚಾರಕ್ಕೆ ಸೆಲೆಬ್ರಿಟಿಗಳನ್ನು ಬಳಸಿಕೊಳ್ಳಲಾಗುತ್ತಿದೆ. ಸ್ಕೀಮ್ವೊಂದಕ್ಕೆ ತಿಂಗಳ ಕಂತು 1 ಸಾವಿರ ರೂ. ನಿಗದಿಪಡಿಸಲಾಗಿದೆ. ಸ್ಕೀಮ್ ಆಯೋಜನೆ ಮಾಡುವ ಸಂಸ್ಥೆಗಳು ಸ್ಕೀಮ್ ಪ್ರಚಾರಕ್ಕೆ ಮತ್ತು ಹೆಸರು ನೋಂದಾಯಿಸಲು ಯುವಕರನ್ನು ನೇಮಿಸಿ ಅವರಿಗೆ ವೇತನದ ಜತೆ ಕಮಿಷನ್ ನೀಡುತ್ತವೆ. ಅಲ್ಲದೆ ಸ್ಕೀಮ್ಗೆ ಸೇರ್ಪಡೆಯಾದ ಸದಸ್ಯರು ಮತ್ತಷ್ಟು ಸದಸ್ಯರನ್ನು ಸೇರಿಸಿದರೆ ಅದಕ್ಕೂ ಕಮಿಷನ್ ನೀಡಲಾಗುತ್ತದೆ. ಸ್ಕೀಮ್ಗೆ ಸೇರಿಸಲು ತಿಂಗಳ ವೇತನ ಪಡೆಯುವ ಸರಕಾರಿ ಉದ್ಯೋಗಿಗಳು, ಕಾರ್ಪೊರೇಟ್ ಸಂಸ್ಥೆಗಳ ಸಿಬ್ಬಂದಿ, ಖಾಸಗಿ ಸಂಸ್ಥೆಗಳ ಸಿಬ್ಬಂದಿ, ಮಧ್ಯಮ ವರ್ಗದವರನ್ನು ಟಾರ್ಗೆಟ್ ಮಾಡಿ ಪ್ರಚಾರ ಮಾಡಲಾಗುತ್ತಿದೆ. ಸಿನಿಮಾ, ಧಾರವಾಹಿ, ರಿಯಾಲಿಟಿ ಶೋ ಸೆಲೆಬ್ರಿಟಿಗಳನ್ನು ಬಳಸಿ ಫೇಸ್ಬುಕ್, ಇನ್ಸ್ಟಾಗ್ರಾಮ್ , ಎಕ್ಸ್, ಯೂಟ್ಯೂಬರ್ಗಳ ಮೂಲಕ ಸ್ಕೀಮ್ನ ಬಗ್ಗೆ ಪ್ರಚಾರ ನಡೆಸಲಾಗುತ್ತದೆ. ಸ್ಕೀಮ್ ಸೇರಿದಂತೆ ಯಾವುದೇ ಡ್ರಾದಲ್ಲಿ 1 ಸಾವಿರ ರೂ. ಬಹುಮಾನ ಗೆದ್ದರೂ ಶೇ.30 ರಂತೆ 300 ರೂ. ತೆರಿಗೆ ಕಟ್ಟಬೇಕು. 1 ಲಕ್ಷ ರೂ. ಗೆದ್ದರೆ 30 ಸಾವಿರ ರೂ. ತೆರಿಗೆಯನ್ನು ಬಹುಮಾನ ಪಡೆದುಕೊಂಡವರು ಸಂದಾಯ ಮಾಡಬೇಕಾಗಿರುವುದು ಆದಾಯ ತೆರಿಗೆ ಇಲಾಖೆ ನಿಯಮ.
ಯಾವುದೇ ಯೋಜನೆ ಆಯ್ಕೆ ಮಾಡುವಾಗ ಜಾಗೃತಿ ಇರಲಿ. ಎಲ್ಲವೂ ಮೋಸ ಅಲ್ಲದಿದ್ದರೂ ಎಲ್ಲವೂ ನಂಬಿಕೆಗೆ ಅರ್ಹ ಅಲ್ಲ ಎಂದು ಪೊಲೀಸ್ ಇಲಾಖೆ ತಿಳಿಸಿದೆ.