ತುಳು ರಂಗಭೂಮಿಯಲ್ಲಿ ಮಿಂಚಿದ “ಶನಿ ಮಹಾತ್ಮೆ”!
* ಪ್ರೇಕ್ಷಕರ ಕಣ್ಣಾಲಿಗಳು ಒದ್ದೆಯಾಗುವಂತೆ ದೃಶ್ಯ!
* ಅಜಾನುಬಾಹು ದೇಹದ ಶನಿಯ ಅಟ್ಟಹಾಸ!
NAMMUR EXPRESS NEWS
ಮಂಗಳೂರು: ಲ। ಕಿಶೋರ್ ಡಿ. ಶೆಟ್ಟಿ ನೇತೃತ್ವದ ಶ್ರೀಲಲಿತೆ ತಂಡದವರು ಕದ್ರಿ ನವನೀತ ಶೆಟ್ಟಿ ರಚನೆಯಲ್ಲಿ ಜೀವನ್ ಉಳ್ಳಾಲ್ ನಿರ್ದೇಶನದಲ್ಲಿ ನ.10ರಂದು ಸುರತ್ಕಲ್ನಲ್ಲಿ ಚೊಚ್ಚಲ ಪ್ರದರ್ಶನ ನೀಡಿರುವ ಶನಿ ಮಹಾತ್ಮೆ ತುಳು ನಾಟಕವು ಈ ಹಿಂದಿನ ಶನಿ ಕಥೆಯಾಧಾರಿತ ಎಲ್ಲ ಕಥೆಗಳಿಗಿಂತ ಭಿನ್ನವಾಗಿದೆ.
ರಂಗಚಾವಡಿ ವಾರ್ಷಿಕ ಸಾಂಸ್ಕೃತಿಕ ಹಬ್ಬದ ಕಾರ್ಯಕ್ರಮದ ಹಿನ್ನೆಲೆಯಲ್ಲಿ ತುಂಬಿ ತುಳುಕುತ್ತಿದ್ದ ಸುರತ್ಕಲ್ನ ಬಂಟರ ಭವನದಲ್ಲಿ ನ. 10ರಂದು ಪ್ರದರ್ಶನಗೊಂಡ ಈ ನಾಟಕ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಅದರಲ್ಲಿರುವ ಹರಿಶ್ಚಂದ್ರ – ಚಂದ್ರಮತಿಯ ದೃಶ್ಯವಂತೂ ಪ್ರೇಕ್ಷಕರ ಕಣ್ಣಾಲಿಗಳು ಒದ್ದೆಯಾಗುವಂತೆ ಮಾಡಿದೆ. ಅಂಥ ಅಭಿನಯ ನೀಡಿರುವ ಚಂದ್ರಮತಿ ಮತ್ತು ಹರಿಶ್ಚಂದ್ರ ಪಾತ್ರಧಾರಿಗಳಿಗೆ ದೊಡ್ಡ ಶಹಬ್ಬಾಸ್ ಹೇಳಲೇಬೇಕಾಗಿದೆ.
ಈ ನಾಟಕದಲ್ಲಿ ಶನಿ ಕಾಟದಿಂದಾಗಿ ಸಂಕಷ್ಟಕ್ಕೆ ಸಿಲುಕಿದ ಹಲವಾರು ಪುರಾಣ ಪುರುಷರ ಕಥೆಗಳನ್ನು ಒಪ್ಪ ಓರಣವಾಗಿ ಪ್ರೇಕ್ಷಕರ ಮುಂದೆ ಕಟ್ಟಿ ಕೊಡಲಾಗಿದೆ. ಕದ್ರಿ ನವನೀತ್ ಶೆಟ್ಟಿ ರಚನೆಯ ಈ ನಾಟಕದಲ್ಲಿ ಸೂರ್ಯದೇವ, ದೇವಗುರು ಬೃಹಸ್ಪತಿ, ಪರಮೇಶ್ವರ, ನಳ ಮಹಾರಾಜ, ವಿಕ್ರಮಾದಿತ್ಯ, ಹರಿಶ್ಚಂದ್ರ ಮುಂತಾದವರು ಶನಿ ಪ್ರಭಾವದಿಂದ ಪಡುವ ಕಷ್ಟವನ್ನು ಮನಸ್ಪರ್ಶಿಯಾಗಿ ಕಟ್ಟಿ ಕೊಡಲಾಗಿದೆ. ಬೇರೆ ಬೇರೆ ಯುಗದ ಕಥೆಗಳನ್ನು ಹೆಕ್ಕಿ ಒಂದೇ ನಾಟಕದಲ್ಲಿ ತೋರಿಸಿರುವುದು ಈ ನಾಟಕದ ಒಂದು ವಿಶೇಷತೆಯಾಗಿದೆ. ಶನಿಯ ಪಾತ್ರವಂತೂ ಅದ್ಭುತವಾಗಿತ್ತು. ಅಜಾನುಬಾಹು ದೇಹದ ಶನಿಯ ಅಟ್ಟಹಾಸ ಪ್ರೇಕ್ಷಕರಲ್ಲಿ ಒಂದು ರೀತಿಯ ಭಯಭಕ್ತಿ ಮೂಡುವಂತೆ ಮಾಡಿತ್ತು.