ಹೊಸದುರ್ಗದಲ್ಲಿ ಕನ್ನಡ ರಾಜ್ಯೋತ್ಸವದ ರಂಗು!
– ಡಾ.ರಾಜ್, ಪುನೀತ್ ರಾಜಕುಮಾರ್ ಅಭಿಮಾನಿಗಳ ಸಂಘದ ವತಿಯಿಂದ ನಡೆದ ಕನ್ನಡ ರಾಜ್ಯೋತ್ಸವ
– ಕಲಾ ತಂಡಗಳ ಜತೆ ಭುವನೇಶ್ವರಿ ದೇವಿಯ ಮೆರವಣಿಗೆ
NAMMUR EXPRESS NEWS
ಹೊಸದುರ್ಗ: ಕನ್ನಡವನ್ನ ಬರೀ ಹೊಗಳಿಕೆಗೆ ಸೀಮಿತಗೊಳಿಸದೇ ಅದನ್ನು ಉಸಿರಾಗಿಸಿಕೊಂಡಾಗ ಕನ್ನಡವನ್ನು ಉಳಿಸಿ ಬೆಳೆಸಲು ಸಾಧ್ಯವಾಗುತ್ತದೆ. ನಾವು ನವಂಬರ್ ತಿಂಗಳ ಕನ್ನಡಿಗರಾಗದೆ ಬದುಕಿನ ಉಸಿರಿರುವವರೆಗೂ ಕನ್ನಡಿಗರಾದಾಗ ಮಾತ್ರ ಈ ಕನ್ನಡ ರಾಜ್ಯೋತ್ಸವಕ್ಕೆ ಅರ್ಥ ಕಲ್ಪಿಸಿದಂತಾಗುತ್ತದೆ ಎಂದು ಸಮಾಜ ಸೇವಕ ಆಗ್ರೋ ಶಿವಣ್ಣ ತಿಳಿಸಿದ್ದಾರೆ.
ಡಾ.ರಾಜ್, ಪುನೀತ್ ರಾಜಕುಮಾರ್ ಅಭಿಮಾನಿಗಳ ಸಂಘದ ವತಿಯಿಂದ ನಡೆದ ಕನ್ನಡ ರಾಜ್ಯೋತ್ಸವ ಸಮಾರಂಭದ ಶೋಭಾ ಯಾತ್ರೆ ಉದ್ಘಾಟಿಸಿ ಅವರು ಮಾತನಾಡಿದರು. ಡಾ. ರಾಜ್, ಪುನೀತ್ ರಾಜ್ ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಗೌಡ್ರ ತಿಪ್ಪೇಸ್ವಾಮಿ ಮಾತನಾಡಿ ಕಳೆದ 44 ವರ್ಷಗಳಿಂದ ರಾಜಕುಮಾರ್ ಹೆಸರಿನಲ್ಲಿ ಸಂಘ ಸ್ಥಾಪಿಸಿ ನಿರಂತರವಾಗಿ ಕನ್ನಡ ರಾಜ್ಯೋತ್ಸವ ಆಚರಿಸುತ್ತಾ ಬಂದಿದ್ದು ನಿರಂತರವಾಗಿ ರಕ್ತದಾನದಂತ ಸಮಾಜಮುಖಿ ಕೆಲಸಗಳನ್ನು ಮಾಡುತ್ತಾ ಬಂದಿದ್ದು ಎಲ್ಲಾ ಧರ್ಮದ ಸದಸ್ಯರನ್ನು ಒಳಗೊಂಡಂತೆ ನಮ್ಮ ಸಂಘ ಕಾರ್ಯನಿರ್ವಹಿಸುತ್ತಿದೆ ಎಂದರು.
ನಗರದ ವೀರಭದ್ರ ಸ್ವಾಮಿ ದೇವಸ್ಥಾನದಿಂದ ತಾಯಿ ಭುವನೇಶ್ವರಿಯ ಮೆರವಣಿಗೆಯು ಕನ್ನಡ ಅಭಿಮಾನಿಗಳ ಕನ್ನಡ ಗೀತೆಗಳು, ಕೀಲು ಕುಣಿತ ಸ್ತಬ್ಧ ಚಿತ್ರಗಳೊಂದಿಗೆ ಭುವನೇಶ್ವರಿ ವೃತ್ತ ಮದಕರಿ ವೃತ್ತ ಬಸವೇಶ್ವರ ವೃತ್ತ ಗಾಂಧಿ ವೃತ್ತದ ಮೂಲಕ ಸಾಗಿ ಅಂಬೇಡ್ಕರ್ ವೃತ್ತದಲ್ಲಿ ಕನ್ನಡ ಧ್ವಜವನ್ನು ಆರಿಸಲಾಯಿತು. ಕಾರ್ಯದರ್ಶಿ ಶಹಜಾನ್,ಶೀತಲ್ ಕುಮಾರ್,ಓಬಳೇಶ್ ನಾಯಕ,ಗೂಳಿಹಟ್ಟಿ ಕೃಷ್ಣಮೂರ್ತಿ ತಮ್ಮಣ್ಣ, ಕೊಟ್ರೇಶ್, ಸ್ಟಾರ್ ಮುನ್ನ, , ತುಂಬಿನಕೆರೆ ಬಸವರಾಜ್ ಅಲ್ತಾಫ್ ಪಾಷಾ, ನಾಗರಾಜ್, ಪಯಾಜ್, ಸುರೇಶ್ ಎಂ, ಜಾದು ಮೋಹನ್, ಗಿರೀಶ್, ರಾಮಣ್ಣ, ಗೌರಮ್ಮ ನಾಯಕ, ಹಾಗೂ ಅಪಾರ ಕನ್ನಡ ಅಭಿಮಾನಿಗಳು ಭಾಗವಹಿಸಿದ್ದರು.