ಅಕಾಲಿಕ ಮಳೆಯಿಂದ ರೈತರಿಗೆ ಸಂಕಷ್ಟ!
– ಮಲೆನಾಡಿನಲ್ಲಿ ಭತ್ತ, ಅಡಿಕೆ ರೈತರಿಗೆ ಸಾಕಷ್ಟು ತೊಂದರೆ
– ಭತ್ತದ ಬೆಳೆ ಕಟಾವು ಮಾಡಲು ಮಳೆ ಬಿಡುತ್ತಿಲ್ಲ
– ಅಡಿಕೆ ಕೊಯ್ಲು ತಡ: ಅಡಿಕೆ ಹಣ್ಣಾಗಿ ನಷ್ಟ
NAMMUR EXPRESS NEWS
ಮಲೆನಾಡಿನ ಪ್ರಮುಖ ಬೆಳೆಗಳೆಂದರೆ ಅಡಿಕೆ ಹಾಗೂ ಭತ್ತ. ಹೆಚ್ಚೂ ಕಡಿಮೆ ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಯ ಅರ್ಧಕರ್ಧ ಭಾಗದ ಜನರ ಜೀವನ ನಿಂತಿರುವುದೇ ಅಡಿಕೆ ಬೆಳೆ ಮೇಲೆ. ಸದ್ಯ ಮಲೆನಾಡು ಜಿಲ್ಲೆಯಲ್ಲಿ ಅಡಿಕೆ, ಭತ್ತ, ಸೇರಿದಂತೆ ಎಲ್ಲಾ ಬೆಳೆಗಳು ಕಟಾವಿಗೆ ಬಂದಿದ್ದವು. ಆದರೆ ಅನಿರೀಕ್ಷಿತ ಮಳೆಯಿಂದಾಗಿ ಯಾವುದೇ ಬೆಳೆಯನ್ನು ಕೊಯ್ಲು ಮಾಡಲು ಸಾಧ್ಯವಾಗುತ್ತಿಲ್ಲ. ಮಳೆ ಕಡಿಮೆ ಆಗಬಹುದು ಅನ್ನೋ ಕಾರಣಕ್ಕೆ ಕೊಯ್ಲು ಮಾಡಿದ್ದವರೂ ಸಹ
ಬೆಳೆಗಳನ್ನು ಸಂಸ್ಕರಣೆ ಮಾಡಲಾಗದೇ ಒದ್ದಾಡುತ್ತಿದ್ದಾರೆ. ವರ್ಷವಿಡೀ ಅನಾಕೂಲಕರವಾದ ವಾತಾವರಣ ಸೃಷ್ಟಿಸಿರುವ ಮಳೆಗೆ ಮಲೆನಾಡಿನ ರೈತರು ಸಂಪೂರ್ಣವಾಗಿ ಬೆಳೆ ಕಳೆದುಕೊಳ್ಳುವ ಆಂತಕದಲ್ಲಿದ್ದಾರೆ. ಅಡಿಕೆ ಕೊಯ್ಲು, ಒಣಗಿಸಲು ಪರದಾಟ ನಡೆಸುತ್ತಿದ್ದಾರೆ.
ಅಡಿಕೆ, ಭತ್ತದ ಕೊಯ್ಲು ಒಂದು ತಿಂಗಳು ತಡ!
ನವೆಂಬರ್ ತಿಂಗಳ ಆರಂಭದಿಂದಲೇ ಮಲೆನಾಡಿನಲ್ಲಿ ಅಡಿಕೆ ಹಾಗೂ ಭತ್ತದ ಕೊಯ್ಲು ಆರಂಭವಾಗುತ್ತಿತ್ತು, ಆದರೆ ನವೆಂಬರ್ ತಿಂಗಳ ಆರಂಭದಿಂದಲೂ ಮಳೆ ನಿರಂತರವಾಗಿ ಸುರಿಯುತ್ತಿರುವುದರಿಂದ ಯಾವುದೇ ಬೆಳೆಗಳನ್ನು ಕೊಯ್ಲು ಮಾಡಲು ರೈತರಿಗೆ ಸಾಧ್ಯವಾಗುತ್ತಿಲ್ಲ. ಡಿಸೆಂಬರ್ ತಿಂಗಳು ಬಂದರೂ ಕೂಡ ಭತ್ತದ ಬೆಳೆ ಕಟಾವು ಮಾಡದಿದ್ದರೆ ಭತ್ತ ಉದುರಿ ಹೋಗುತ್ತದೆ. ಭತ್ತದ ಪೈರನ್ನು ಕಟಾವು ಮಾಡಲು ಮಳೆ ಬಿಡುತ್ತಿಲ್ಲ. ಮಳೆಯ ಮಧ್ಯೆಯೂ ಹೇಗೋ ಭತ್ತದ ಬೆಳೆಯನ್ನ ಕಟಾವು ಮಾಡಿದ ರೈತರ ಸ್ಥಿತಿಯಂತೂ ಹೇಳತೀರದಾಗಿದೆ. ಭತ್ತ ಬೆಳೆ ಕಟಾವು ಮಾಡಿ ಗದ್ದೆಯಲ್ಲೇ ಇದೆ. ಮಳೆಯಿಂದಾಗಿ ಭತ್ತದ ಗದ್ದೆಗಳಲ್ಲಿ ನೀರು ತುಂಬಿಕೊಂಡಿದೆ. ಹೀಗಾಗಿ ಕೊಯ್ದು ಹಾಕಿರುವ ಭತ್ತದ ಫಸಲು ಗದ್ದೆಯಲ್ಲೇ ಮೊಳಕೆಯೊಡೆಯುತ್ತಿದೆ. ಇದರಿಂದಾಗಿ ರೈತರಿಗೆ ಒಂದಾದ ಮೇಲೆ ಒಂದರಂತೆ ಸಂಕಷ್ಟಗಳು ಎದುರಾಗುತ್ತಾ ಇದೆ ಅಕಾಲಿಕವಾದ ಮಳೆಯಿಂದ ಇದಕ್ಕೆ ಏನು ಪರಿಹಾರ ಎಂಬುದು ದಿಕ್ಕು ತೋಚದಂತಹ ಪರಿಸ್ಥಿತಿಗೆ ರೈತರು ಬಂದಿದ್ದಾರೆ.