ಚಿಕ್ಕಮಗಳೂರು ಟಾಪ್ ನ್ಯೂಸ್
– ಸರ್ಕಾರಿ ನೌಕರರಿಗೆ ಬೆದರಿಕೆ ಆರೋಪ: ಭೋಜೇಗೌಡ ವಿರುದ್ಧ ದೂರು
– ಕೊಪ್ಪ: 60 ಅಡಿ ಆಳದ ಬಾವಿಗೆ ಬಿದ್ದ 90 ವರ್ಷದ ವೃದ್ಧೆ!
– ಕಳಸ: ಶಿರಸ್ತೇದಾರ್ ವಿರುದ್ಧ ಲೋಕಾಯುಕ್ತಕ್ಕೆ ದೂರು
NAMMUR EXPRESS NEWS
ಚಿಕ್ಕಮಗಳೂರು: ವಿಧಾನ ಪರಿಷತ್ ಸದಸ್ಯ ಎಸ್.ಎಲ್ ಭೋಜೇಗೌಡರ ವಿರುದ್ಧ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರ ಚುನಾವಣೆಗೆ ಸಂಬಂಧಿಸಿದಂತೆ ನಿರ್ದೇಶಕರಿಗೆ ಬೆದರಿಕೆ ಒಡ್ಡುತ್ತಿದ್ದಾರೆ ಎಂದು ಆರೋಪಿಸಿ ಹಾಗೂ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಚುನಾವಣಾಧಿಕಾರಿಗೆ ಭಾನುವಾರ ದೂರು ಸಲ್ಲಿಸಲಾಗಿದೆ.
ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಬೋಜೇಗೌಡ ರಾಜಕೀಯ ಹಸ್ತಕ್ಷೇಪ ಮಾಡಿ ನೌಕರರಿಗೆ ಬೆದರಿಸುತ್ತಿದ್ದಾರೆ ಎಂದು ಜಿಲ್ಲಾಧ್ಯಕ್ಷ ಅಭ್ಯರ್ಥಿ ದೇವೇಂದ್ರ ಆರೋಪಿಸಿದ್ದಾರೆ.
ಆಯ್ಕೆಯಾದ ನಿರ್ದೇಶಕರಿಗೆ ಸರ್ಕಾರಿ ಕೆಲಸ ನಿರ್ವಹಿಸಲು ಬಿಡದೇ ಕರ್ತವ್ಯದ ಅವಧಿಯಲ್ಲಿ ಪದೇ ಪದೇ ಮನೆಗೆ ಕರೆದು ಬೆದರಿಕೆ ಹಾಕುತ್ತಿದ್ದು, ಆಣೆ ಪ್ರಮಾಣ ಮಾಡಿಸಿ ಬಲವಂತಪಡಿಸಲಾಗುತ್ತಿದೆ. ರೆಸಾರ್ಟ್ನಲ್ಲಿ ಕಡ್ಡಾಯವಾಗಿ ವಾಸ್ತವ್ಯ ಹೂಡುವ ಬೆದರಿಕೆ ಹಾಕಿದ್ದು, ಇದರಿಂದ ನೌಕರರು ನಿರ್ಭಯವಾಗಿ ಮತದಾನ ಮಾಡಲು ಮುಜುಗರಪಡುವಂತಾಗಿದ್ದು,
ಚುನಾವಣೆಗೆ ಅಡ್ಡಿಪಡಿಸುತ್ತಿರುವ ವಿಧಾನ ಪರಿಷತ್ ಸದಸ್ಯರ ವಿರುದ್ಧ ಸೂಕ್ತ ಕ್ರಮ ಕೈಗೊಂಡು ಯಾವುದೇ ಒತ್ತಡವಿಲ್ಲದೇ ಚುನಾವಣೆ ನಡೆಸಲು ಅವಕಾಶ ಮಾಡಿಕೊಡುವಂತೆ ದೂರಿನಲ್ಲಿ ಒತ್ತಾಯಿಸಿದ್ದಾರೆ.
60 ಅಡಿ ಆಳದ ಬಾವಿಗೆ ಬಿದ್ದ ವೃದ್ಧೆ!
ಕೊಪ್ಪ: ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನಮರಕಟ್ಟೆ ಗ್ರಾಮದಲ್ಲಿ 60 ಅಡಿ ಬಾವಿಗೆ ಬಿದ್ದ ವೃದ್ದೆಯನ್ನು ಅಗ್ನಿಶಾಮಕದಳ ಸಿಬ್ಬಂದಿಗಳು ರಕ್ಷಿಸಿದ್ದಾರೆ. ಕಮಲ ಎಂಬ 90 ವರ್ಷದ ವೃದ್ಧೆ ಕಾಲು ಜಾರಿ 60 ಅಡಿ ಆಳದ ಬಾವಿಗೆ ಬಿದ್ದಿದ್ದರು. ಬಾವಿಗೆ ಬಿದ್ದ ವೃದ್ಧೆ ಬಾವಿಯೊಳಗಿದ್ದ ಪೈಪ್ ಹಿಡಿದು ಮುಳುಗದಂತೆ ಒಂದು ಗಂಟೆಗೂ ಹೆಚ್ಚು ಕಾಲ ಸಾವು ಬದುಕಿನ ನಡುವೆ ಹೋರಾಡಿದ್ದಾರೆ ಎನ್ನಲಾಗಿದೆ. ಸ್ಥಳಕ್ಕೆ ಬಂದ ಅಗ್ನಿಶಾಮಕದಳ ಸಿಬ್ಬಂದಿಗಳು ಬಾವಿಯಲ್ಲಿದ್ದ ವೃದ್ದೆಯ ರಕ್ಷಣೆ ಮಾಡಿದ್ದಾರೆ. ಅಗ್ನಿ ಶಾಮಕದಳ ಸಿಬ್ಬಂದಿಯ ಕಾರ್ಯಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದರು
ಅಕ್ರಮವಾಗಿ ಸಾಗುವಳಿ ಚೀಟಿ ವಿತರಣೆ: ಶಿರಸ್ತೇದಾರ್ ವಿರುದ್ಧ ಲೋಕಾಯುಕ್ತಕ್ಕೆ ದೂರು..!!
ಕಳಸ: ನಿಯಮಬಾಹಿರವಾಗಿ ಅಕ್ರಮ ಸಾಗುವಳಿ ಚೀಟಿ ವಿತರಣೆ ಮಾಡಿದ ಆರೋಪದ ಮೇಲೆ ಶಿರಸ್ತೇದಾರ್ ವಿರುದ್ಧ ಲೋಕಾಯುಕ್ತಕ್ಕೆ ದೂರು ಸಲ್ಲಿಸಲಾಗಿದೆ. ಚಿಕ್ಕಮಗಳೂರು ಜಿಲ್ಲಾಧಿಕಾರಿ ಕಚೇರಿ ಶಿರಸ್ತೇದಾರ್ ಹೇಮಂತ್ ಕುಮಾರ್ ಕಳಸ ತಾಲ್ಲೂಕಿನ ತಾಲ್ಲೂಕು ಕಛೇರಿಯಲ್ಲಿ ಪ್ರಭಾರಿ ಶಿರಸ್ತೆದಾರರಾಗಿ ಕಾರ್ಯನಿರ್ವಹಿಸುವಾಗ 50 ಕ್ಕೂ ಹೆಚ್ಚು ಸಾಗುವಳಿ ಚೀಟಿ ಅಕ್ರಮವಾಗಿ ನೀಡಿದ್ದಾರೆಂದು ಲೋಕಾಯುಕ್ತದಲ್ಲಿ ದೂರು ದಾಖಲಾಗಿದೆ. 2022 ರ ಫೆಬ್ರವರಿ ತಿಂಗಳಲ್ಲಿ ಕಳಸ ತಾಲೂಕು ಪ್ರಭಾರ ತಹಶೀಲ್ದಾರ್ ಆಗಿ 1 ತಿಂಗಳು ಕರ್ತವ್ಯ ನಿರ್ವಹಿಸಿದ ಸಂದರ್ಭದಲ್ಲಿ ಈ ಅಕ್ರಮ ಎಸಗಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಆಡಳಿತಾತ್ಮಕ ಹಿತ ದೃಷ್ಠಿಯಿಂದ ಕಚೇರಿ ನಿರ್ವಹಣೆಗೆ ಮಾತ್ರ ಸೀಮಿತವಾಗಿದ್ದರೂ ಹೇಮಂತ್ ಕುಮಾರ್ ಕಾನೂನುಗಳನ್ನು ಗಾಳಿಗೆ ತೂರಿ ಅಕ್ರಮವಾಗಿ ಸಾಗುವಳಿ ಚೀಟಿ ಮಂಜೂರು ಮಾಡಿದ್ದಾರೆ. ಅಕ್ರಮವಾಗಿ 50 ಕ್ಕೂ ಹೆಚ್ಚು ಸಾಗುವಳಿ ಪತ್ರ ನೀಡಿದ್ದು, ಇದು ಕಾನೂನು ರೀತಿ ಅಕ್ಷಮ್ಯ ಅಪರಾಧವಾಗಿದೆ. ಹೀಗಾಗಿ ಇವರ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಮಾಹಿತಿ ಹಕ್ಕು ಕಾರ್ಯಕರ್ತ ಎಂ. ಎ. ಸಲಾವುದ್ದೀನ್ ಒತ್ತಾಯಿಸಿದ್ದಾರೆ.