ಕಾಲು ಜಾರಿ ನೇತ್ರಾವತಿ ನದಿಗೆ ಬಿದ್ದ ಆರ್ಎಸ್ಎಸ್ ಕಾರ್ಯಕರ್ತ ಸಾವು..!!
* ಸೋಮವಾರ ಕಾಲುಜಾರಿ ನದಿಗೆ ಬಿದ್ದಿದ್ದ ಪ್ರಸಾದ್
* ಅಗ್ನಿಶಾಮಕದಳ,ಮುಳುಗು ತಜ್ಞರಿಂದ ಹುಡುಕಾಟ ಮೃತ ದೇಹ ಪತ್ತೆ
* ಸಂಘದ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದ್ದ ನಿಷ್ಠಾವಂತ ಕಾರ್ಯಕರ್ತ
NAMMUR EXPRESS NEWS
ಬೆಳ್ತಂಗಡಿ: ಸೋಮವಾರ ಕಾಲು ಜಾರಿ ನೇತ್ರಾವತಿ ನದಿಗೆ ಬಿದ್ದಿದ್ದ ಆರ್ ಎಸ್ ಎಸ್ ಕಾರ್ಯಕರ್ತ ಪ್ರಸಾದ್ ಸಾವನ್ನಪ್ಪಿರುವ ಘಟನೆ ಬೆಳಾಲು ಗ್ರಾಮದ ಕೂಡಿಗೆ ಎಂಬಲ್ಲಿ ನಡೆದಿದೆ.
ಬೆಳಾಲು ಗ್ರಾಮದ ಸುರುಳಿ ಕುಂಡಡ್ಕ ನಿವಾಸಿ ಪ್ರಸಾದ್ (38) ಮೃತ ವ್ಯಕ್ತಿ. ಸೋಮವಾರ ಸಂಜೆ ಪ್ರಸಾದ್ ಮೂವರೊಂದಿಗೆ ನೀರಿಗೆ ಇಳಿದಿದ್ದು ಈ ವೇಳೆ ಪ್ರಸಾದ್ ನೀರಿನಲ್ಲಿ ಮುಳುಗಿದ್ದಾರೆ, ಪ್ರಸಾದ್ರನ್ನು ಜತೆಗಿದ್ದವರು ರಕ್ಷಿಸಲು ಯತ್ನಿಸಿದ್ದು, ಈ ವೇಳೆ ಪ್ರಸಾದ್ ಮುಳುಗಿ ನಾಪತ್ತೆಯಾಗಿದ್ದರು.
ಸ್ಥಳಕ್ಕೆ ಬಂದ ಅಗ್ನಿಶಾಮಕದಳ ಹಾಗೂ ಶೌರ್ಯ ವಿಪತ್ತು ನಿರ್ವಹಣೆ ತಂಡದ ಸದಸ್ಯರು ಶೋಧ ಕಾರ್ಯಾಚರಣೆ ನಡೆಸಿದ್ದರು. ಮುಳುಗು ತಜ್ಞ ಈಶ್ವರ್ ಮಲ್ಪೆ ಅವರು ಕೂಡ ಆಗಮಿಸಿದ್ದರು. ಮುಳುಗು ತಜ್ಞ ಬೆಳ್ತಂಗಡಿಯ ಸಂಜಯ ನಗರದ ಇಸ್ಮಾಯಿಲ್ ಹಾಗೂ ಅಗ್ನಿಶಾಮಕದಳದವರು ರಾತ್ರಿ 11 ರ ಹೊತ್ತಿಗೆ ಪ್ರಸಾದ್ ಮೃತದೇಹವನ್ನು ಮೇಲಕ್ಕೆತ್ತಿದ್ದಾರೆ.
ಪ್ರಸಾದ್ ಅವರು ವಿವಾಹಿತರಾಗಿದ್ದು ಪತ್ನಿ ಹಾಗೂ ಓರ್ವ ಪುತ್ರನನ್ನು ಅಗಲಿದ್ದಾರೆ. ಪ್ರಸಾದ್ ಆರ್ ಎಸ್ ಎಸ್ ನಿಷ್ಟಾವಂತ ಕಾರ್ಯಕರ್ತರಾಗಿದ್ದರು.
ಸಂಘದ ವಿವಿಧ ಜವಾಬ್ದಾರಿ ನಿರ್ವಹಿಸಿದ್ದ ನಿಷ್ಠಾವಂತ ಕಾರ್ಯಕರ್ತ..
ಪ್ರಸಾದ್ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ನಿಷ್ಠಾವಂತ ಕಾರ್ಯಕರ್ತನಾಗಿದ್ದು ಸಂಘದ ಹಲವು ಜವಾಬ್ದಾರಿಗಳನ್ನು ನಿರ್ವಹಿಸಿದ್ದರು. ಸಂಘದ ಪ್ರಚಾರಕರಾಗಿ 5 ವರ್ಷ ಕಾರ್ಯನಿರ್ವಹಿಸಿ ಪ್ರಸ್ತುತ ಪುತ್ತೂರು ಜಿಲ್ಲಾ ಧರ್ಮ ಜಾಗರಣ ಜಿಲ್ಲಾ ಸಂಯೋಜಕರಾಗಿದ್ದರು. ಇಂದು ಬೆಳಿಗ್ಗೆ 11 ಗಂಟೆಯಿಂದ 1 ಗಂಟೆ ತನಕ ಪ್ರಸಾದ್ ಅವರ ಅಂತಿಮ ದರ್ಶನಕ್ಕೆ ಸ್ವಗ್ರಾಮ ಬೆಳಾಲ್ ನಲ್ಲಿ ವ್ಯವಸ್ಥೆ ಕಲ್ಪಿಸಲಾಗಿದ್ದು ನಂತರ ಸ್ವಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಯಲಿದೆ.