ನಿಷಿಧಿ ಮಂಟಪ ಲೋಕಾರ್ಪಣೆಗೆ ಸಿದ್ಧತೆ
– ಶಾಸಕ ಬಾಲಕೃಷ್ಣರಿಂದ ಸಭೆ-ಪರಿಶೀಲನೆ: ಸರ್ವರಿಗೂ ಸ್ವಾಗತ
– ಐದು ದಶಕಗಳ ಕಾಲ ಶ್ರೀ ಕ್ಷೇತ್ರದ ಪೀಠಾಧ್ಯಕ್ಷರಾಗಿ ಅಪಾರ ಸೇವೆ
NAMMUR EXPRESS NEWS
ಶ್ರವಣಬೆಳಗೊಳ: ಇಲ್ಲಿನ ದಿಗಂಬರ ಜೈನ ಮಹಾಸಂಸ್ಥಾನ ಮಠದ ಹಿಂದಿನ ಪೀಠಾಧ್ಯಕ್ಷರಾಗಿದ್ದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಮಹಾ ಸ್ವಾಮೀಜಿಯವರ ನಿಷಿಧಿ ಮಂಟಪ ಲೋಕಾರ್ಪಣೆ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಮಂಗಳವಾರ ಪಟ್ಟಣದ ಶ್ರೀ ಕಾನಜಿ ಭವನದಲ್ಲಿ ಸ್ವಸ್ತಿಶ್ರೀ ಅಭಿನವ ಚಾರುಕೀರ್ತಿ ಪಂಡಿತಾಚಾರ್ಯ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಗಳ ಜತೆ ಸ್ಥಳೀಯ ಶಾಸಕ ಸಿ.ಎನ್.ಬಾಲಕೃಷ್ಣ ಪೂರ್ವಭಾವಿ ಸಭೆ ನಡೆಸಿದರು. ನಂತರ ನಿಷಿಧಿ ಮಂಟಪ ಹಾಗೂ ಕಾರ್ಯಕ್ರಮದ ವೇದಿಕೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು, ಪೂಜ್ಯ ಚಾರುಶ್ರೀಗಳವರು ಐದು ದಶಕಗಳ ಕಾಲ ಶ್ರೀ ಕ್ಷೇತ್ರದ ಪೀಠಾಧ್ಯಕ್ಷರಾಗಿ ಅಪಾರ ಸೇವೆ ಸಲ್ಲಿಸಿದ್ದಾರೆ. ಕ್ಷೇತ್ರದ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಅಭಿವೃದ್ಧಿಗೆ ಅವಿರತ ಶ್ರಮಿಸಿದ್ದರು. ಶ್ರವಣಬೆಳಗೊಳ ಎಂಬ ಧಾರ್ಮಿಕ ಕೇಂದ್ರವನ್ನು ಜೈನಕಾಶಿ ಎಂದು ವಿಶ್ವ ಪ್ರಸಿದ್ದಗೊಳಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಅಭಿನವ ಚಾರುಶ್ರೀಗಳವರು ಹಿಂದಿನ ಸ್ವಾಮೀಜಿ ಅವರ ಸ್ಮರಣೆಯನ್ನು ಶಾಶ್ವತಗೊಳಿಸಲು ಶಿಲಾಮಯ ನಿಷಿಧಿ ಮಂಟಪವನ್ನು ಸ್ಥಾಪಿಸಿ, ಅಲ್ಲಿ ಪೂಜ್ಯರ ಶ್ರೀ ಚರಣ ಪಾದುಕೆ ಹಾಗೂ ಸ್ಮರಣ ಶಿಲಾಶಾಸನವನ್ನು ಪ್ರತಿಷ್ಠಾಪಿಸುತ್ತಿರುವುದು ಗುರುಭಕ್ತಿಯ ದ್ಯೋತಕವಾಗಿದೆ ಎಂದು ಹೇಳಿದರು. ಈ ಗುರುವಂದನೆ ಕಾರ್ಯದಲ್ಲಿ ಸಮರ್ಪಣಾ ಮನೋಭಾವದಿಂದ ಎಲ್ಲರೂ ಕೈಜೋಡಿಸಿ ಸಮಾರಂಭದ ಯಶಸ್ಸಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು. ಸಭೆಯಲ್ಲಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಅಫ್ತಾಬ್ ಪಾಷ, ಮಾಜಿ ಅಧ್ಯಕ್ಷ ಎಸ್.ಆರ್.ಲೋಕೇಶ್, ಸದಸ್ಯರಾದ ಎನ್.ಆರ್.ವಾಸು, ಅನುರಾಧ ಲೋಹಿತ್, ಯಶಸ್ ಜೈನ್, ರಾಧಾ ಬಸವರಾಜ್, ಭಾರತಿ ಚಂದ್ರೇಗೌಡ, ಕೃಷ್ಣಮೂರ್ತಿ, ಚಂದ್ರಶೇಖರ್, ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ. ಬಿ.ಆರ್.ಯುವರಾಜ್, ಪಿಎಸ್ಐ ನವೀನ್, ಸೆಸ್ಕ್ ಎಇ ಚಂದ್ರಶೇಖರ್ ಮುಂತಾದವರಿದ್ದರು.