ಮಂಗಳೂರು : ಟ್ರಾಫಿಕ್ ಪೊಲೀಸ್ ಬೆನ್ನು ಹತ್ತಿದ ವೇಳೆ, ದ್ವಿಚಕ್ರ ವಾಹನ ಸವಾರ ಮೃತ್ಯು!
– ವಾಹನ ಬೆನ್ನಟ್ಟಿದ್ದ ಪೊಲೀಸ್ ಸಿಬ್ಬಂದಿ ಬಸ್ ಹತ್ತಿ ಪರಾರಿ
– ಸಾರ್ವಜನಿಕರಿಂದ ರಸ್ತೆ ತಡೆದು ಪ್ರತಿಭಟನೆ!
NAMMUR EXPRESS NEWS
ಮಂಗಳೂರು: ಸುರತ್ಕಲ್ ಸಮೀಪ ಹೆಲ್ಮೆಟ್ ಧರಿಸದ ದ್ವಿಚಕ್ರ ಸವಾರರೊಬ್ಬರನ್ನು ಟ್ರಾಫಿಕ್ ಪೊಲೀಸ್ ಸಿಬ್ಬಂದಿ ಬೆನ್ನು ಹತ್ತಿದ ವೇಳೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ದ್ವಿಚಕ್ರ ವಾಹನ ಸವಾರ ಮೃತಪಟ್ಟ ಘಟನೆ ಕಾನ ಕುಳಾಯಿ ಗುಡ್ಡೆ ಜಂಕ್ಷನ್ನಲ್ಲಿ ನಡೆದಿರುವುದು ವರದಿಯಾಗಿದೆ.
ಮೃತರನ್ನು ಕಾನ ನಿವಾಸಿ ರೆಮ್ಮಿ (38) ಎಂದು ತಿಳಿಯಲಾಗಿದೆ. ಘಟನೆ ಸಂಭವಿಸುತ್ತಿದ್ದಂತೆ ದ್ವಿಚಕ್ರ ವಾಹನ ಬೆನ್ನಟ್ಟಿದ್ದ ಪೊಲೀಸ್ ಸಿಬ್ಬಂದಿ ಬಸ್ ಹತ್ತಿ ಪರಾರಿಯಾಗಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ. ಸುರತ್ಕಲ್ ಕಡೆಗೆ ಅತಿ ವೇಗದಿಂದ ತನ್ನ ದ್ವಿಚಕ್ರ ವಾಹನವನ್ನು ತಿರುಗಿಸಿದಾಗ ಎದರುರಿನಿಂದ ಬರುತ್ತಿದ್ದ ಖಾಸಗಿ ಸಿಟಿ ಬಸ್ ಢಿಕ್ಕಿ ಹೊಡೆಯಿತೆನ್ನಲಾಗಿದೆ. ಅಪಘಾತದ ರಭಸಕ್ಕೆ ರಸ್ತೆಗೆ ಎಸೆಯಲ್ಪಟ್ಟ ರೆಮ್ಮಿ ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಗೆ ಸಾಗಿಸುವ ದಾರಿಮಧ್ಯೆ ಮೃತಪಟ್ಟರೆಂದು ತಿಳಿದು ಬಂದಿದೆ.
* ಸಾರ್ವಜನಿಕರಿಂದ ರಸ್ತೆ ತಡೆದು ಪ್ರತಿಭಟನೆ!
ಅಪಘಾತ ನಡೆದ ಬೆನ್ನಲ್ಲೇ ಸ್ಥಳದಲ್ಲಿ ಜಮಾಯಿಸಿದ ಸಾರ್ವಜನಿಕರು ಪೊಲೀಸರ ಕ್ರಮವನ್ನು ಖಂಡಿಸಿ ಪ್ರತಿಭಟನೆ ನಡೆಸಿದರು.
ಅಪಘಾತಕ್ಕೆ ಪೊಲೀಸರ ಅನಾಗರಿಕ ವರ್ತನೆಯೇ ಕಾರಣ ಎಂದು ತಪ್ಪಿತಸ್ಥ ಪೊಲೀಸ್ ಅಧಿಕಾರಿ, ಸಿಬ್ಬಂದಿಯ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ ಸಾರ್ವಜನಿಕರು ಸುರತ್ಕಲ್ – ಕಾನ ಮುಖ್ಯ ರಸ್ತೆ ಬಂದ್ ಮಾಡಿ ಪ್ರತಿಭಟನೆ ನಡೆಸಿದರು.
ರಾತ್ರಿ 10 ಗಂಟೆಯ ಬಳಿಕವಷ್ಟೇ ಗ್ಯಾಸ್ ಟ್ಯಾಂಕರ್ಗಳು, ಘನ ವಾಹನಗಳ ಸಂಚಾರಕ್ಕೆ ಅವಕಾಶ ನೀಡಬೇಕು. ಖಾಸಗಿ ಬಸ್ಗಳ ಅತಿ ವೇಗಕ್ಕೆ ಕಡಿವಾಣ ಹಾಕಲು ಮುಖ್ಯ ಸ್ಥಳಗಳಲ್ಲಿ ಸ್ಪೀಡ್ ಬ್ರೇಕರ್ಗಳನ್ನು ಅಳವಡಿಸಬೇಕು. ಅಪಘಾತ ಪ್ರದೇಶಗಳನ್ನು ಗುರುತಿಸಿ ಬ್ಯಾರಿಕೇಡ್ ಗಳನ್ನು ಅಳವಡಿಸುವ ಕೆಲಸ ಪೊಲೀಸ್ ಇಲಾಖೆಯಿಂದ ಆಗಬೇಕೆಂದು ಮಂಗಳೂರು ಮಹಾನಗರ ಪಾಲಿಕೆಯ ನಾಮ ನಿರ್ದೇಶಿತ ಸದಸ್ಯ ಕಿಶೋರ್ ಕುಮಾರ್ ಸಹಿತ ನಾಗರಿಕರು ಪೊಲೀಸರನ್ನು ಆಗ್ರಹಸಿದರು. ಸ್ಥಳಕ್ಕೆ ಬಂದ ಮನಪಾ ಸ್ಥಳೀಯ ಕಾರ್ಪೊರೇಟರ್ ವರುಣ್ ಚೌಟರನ್ನು ನಾಗರಿಕರು ತರಾಟೆಗೈದರು. ಈ ವೇಳೆ ಸ್ಥಳಕ್ಕಾಗಮಿಸಿದ ಸುರತ್ಕಲ್ ಪೊಲೀಸರು ಪ್ರತಿಭಟನಾಕಾರರ ಮನವೊಲಿಸಿ ರಸ್ತೆಯನ್ನು ಸುಗಮ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು.