ಕಂಬಳಕ್ಕೆ 1.20 ಕೋಟಿ ರೂ. ಸರ್ಕಾರದ ಪ್ರೋತ್ಸಾಹ ಧನ
– ಪ್ರವಾಸೋದ್ಯಮ ಸಚಿವರಿಂದ ಶಿಫಾರಸು: ಅಧಿವೇಶನದಲ್ಲಿ ಬಿಸಿ ಬಿಸಿ ಚರ್ಚೆ: ಪ್ರತಿಯೊಂದು ಕಂಬಳಕ್ಕೆ 5 ಲಕ್ಷ ರೂ ನಂತೆ ಅನುದಾನ
– ಕರಾವಳಿ ಶಾಸಕರ ಪ್ರಯತ್ನಕ್ಕೆ ಜಯ
NAMMUR EXPRESS NEWS
ಮಂಗಳೂರು : ತುಳುನಾಡಿನ ಜನಪದ ಕ್ರೀಡೆ ಕಂಬಳಕ್ಕೆ ಈಗ ರಾಜ್ಯ ಸರ್ಕಾರ 1.20 ಕೋಟಿ. ರೂ ಪ್ರೋತ್ಸಾಹ ಧನ ಘೋಷಿಸಿದೆ. ಕರಾವಳಿ ಜಿಲ್ಲೆಗಳಲ್ಲಿ ನವೆಂಬರ್ ನಿಂದ ಆರಂಭಗೊಂಡ ಕಂಬಳ ಏಪ್ರಿಲ್ ವರೆಗೆ ಮುಂದುವರೆಯುತ್ತಿದ್ದು, ಒಟ್ಟು 25 ಕಂಬಳಗಳ ಪಟ್ಟಿ ಸಿದ್ಧಗೊಂಡಿದೆ.
ಕಂಬಳದಿಂದ ಸರ್ಕಾರಕ್ಕೆ ಕೋಟ್ಯಾಂತರ ರೂ ತೆರಿಗೆ ಪಾವತಿಯಾಗುತ್ತಿದೆ. ಆದರೂ ಸರ್ಕಾರ ಅನುದಾನ ಬಿಡುಗಡೆಗೆ ಮೀನ ಮೇಷ ಎಣಿಸುತ್ತಿತು. ಈ ಹಿನ್ನೆಲೆಯಲ್ಲಿ ಸರ್ಕಾರದ ಗಮನ ಸೆಳೆಯುವ ಪ್ರಯತ್ನವನ್ನ ಮಾಡುತ್ತಾ ಇದೆ. ವಿಧಾನಸಭೆ ಅಧಿವೇಶನದಲ್ಲಿ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಒತ್ತಾಯಿಸಿದ್ದರು. ಇದಕ್ಕೆ ದನಿಗೂಡಿಸಿದ ಸ್ಪೀಕರ್ ಯು.ಟಿ ಖಾದರ್ ಕಂಬಳಕ್ಕೆ ಸರ್ಕಾರ ಅನುದಾನ ಬಿಡುಗಡೆ ಮಾಡಲಿ ಅನುದಾನವಿಲ್ಲದೆಯೂ ಕಂಬಳ ಮಾಡೋ ಶಕ್ತಿ ನಮಗಿದೆ ಎಂದು ಚಾಟಿ ಬೀಸಿದ್ದರು. ಶಾಸಕರಾದ ಐವನ್ ಡಿಸೋಜಾ, ಮಂಜುನಾಥ್ ಭಂಡಾರಿ ಸಹ ಅನುದಾನದ ಬಗ್ಗೆ ಪರಿಷತ್ ನಲ್ಲಿ ಗಮನಸೆಳೆಯುತ್ತಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸುತ್ತಿದ್ದ ಪ್ರವಾಸೋದ್ಯಮ ಸಚಿವ ಹೆಚ್ ಕೆ ಪಾಟೀಲ್ ಪ್ರತಿಯೊಂದು ಕಂಬಳಕ್ಕೆ 5 ಲಕ್ಷ ರೂ ನಂತೆ ಒಟ್ಟು 25 ಕಂಬಳಕ್ಕೆ 1.20 ಕೋಟಿ. ರೂ ಪ್ರೋತ್ಸಾಹ ಧನ ನೀಡಲು ಸೂಚಿಸಿದ್ದಾರೆ. ಸಿದ್ದರಾಮಯ್ಯ ಸರ್ಕಾರ 2023 – 24ನೇ ಸಾಲಿನಲ್ಲಿ 10 ಕಂಬಳಕ್ಕೆ 25 ಲಕ್ಷ ರೂ ಮಾತ್ರ ಬಿಡುಗಡೆ ಮಾಡಿದ್ದು, ಸಮಿತಿಯು ಎಲ್ಲಾ 24 ಕಂಬಳಗಳಿಗೂ ತಲಾ ಎರಡು ಲಕ್ಷ ರೂ ನಂತೆ ನೀಡಲು ನಿರ್ಧರಿಸಿದೆ. 2012-13ನೇ ಬಜೆಟ್ ನಲ್ಲಿ ಆಗಿನ ಸಿಎಂ ಡಿ.ವಿ ಸದಾನಂದ ಗೌಡ ಅವರು ಒಂದು ಕೋಟಿ ರೂ ಅನುದಾನವನ್ನ ಕಂಬಳ ಕ್ರೀಡೆಗೆ ಘೋಷಿಸಿದ್ದರು. 2021 -22 ಮತ್ತು 2022 – 2023 ರಲ್ಲಿ ತಲಾ ಒಂದು ಕೋಟಿ ರೂ ಅನುದಾನ ಬಿಡುಗಡೆಗೊಂಡಿದ್ದು, 20 ಕಂಬಳಗಳ ಸಂಘಟಕರಿಗೆ ಪ್ರವಾಸೋದ್ಯಮ ಇಲಾಖೆಯ ಮೂಲಕ ತಲಾ 5 ಲಕ್ಷ ನೀಡಲಾಗುತ್ತಿತ್ತು.