ನೆಲಮಂಗಲದಲ್ಲಿ ಕಾರು ಅಪಘಾತಕ್ಕೆ 6 ಬಲಿ!
– ಕಾರಿನ ಮೇಲೆ ಉರುಳಿಬಿದ್ದ ಕಂಟೈನರ್ ಒಂದೇ ಕುಟುಂಬದ 6 ಮಂದಿಯ ಸಾವು
– ಗೋಲ್ಮಾಲ್: ಮಾಜಿ ಸಚಿವ ‘ವರ್ತೂರು ಪ್ರಕಾಶ್’ ಆಪ್ತೆ ಅರೆಸ್ಟ್.!
– ಬೆಳಗಾವಿ : ಮನೆಗೆ ನುಗ್ಗಿ 9 ತಿಂಗಳ ಗರ್ಭಿಣಿಯ ಬರ್ಬರ ಹತ್ಯೆ
NAMMUR EXPRESS NEWS
ನೆಲಮಂಗಲ: ಎರಡು ಕಾರು, ಎರಡು ಲಾರಿ, ಸ್ಕೂಲ್ ಬಸ್ ನಡುವೆ ನಡೆದ ಸರಣಿ ಅಪಘಾತದಲ್ಲಿ ಒಂದೇ ಕುಟುಂಬದ ಆರು ಮಂದಿ ದಾರುಣವಾಗಿ ಸಾವನ್ನಪ್ಪಿದ ಘಟನೆ ನೆಲಮಂಗಲ ತಾಲೂಕಿನ ಟಿ.ಬೇಗೂರು ಬಳಿ ನಡೆದಿದೆ. ತುಮಕೂರು—ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ದುರ್ಘಟನೆ ನಡೆದಿದೆ. ಕಾರಿನ ಮೇಲೆ ಕಂಟೈನರ್ ಉರುಳಿ ಬಿದ್ದ ಪರಿಣಾಮ ಕಾರಿನಲ್ಲಿದ್ದ 6 ಮಂದಿ ಸಾವನ್ನಪ್ಪಿದ್ದಾರೆ. ಕಾರಿನಲ್ಲಿದ್ದವರು ವೀಕೆಂಡ್ ಪ್ರವಾಸಕ್ಕೆ ತೆರಳುತ್ತಿದ್ದರು ಎಂದು ಹೇಳಲಾಗಿದೆ. ಅಪಘಾತದಿಂದಾಗಿ ತುಮಕೂರು ರಸ್ತೆಯಲ್ಲಿ ಸುಮಾರು 10 ಕಿ.ಮೀ.ನಷ್ಟು ಟ್ರಾಫಿಕ್ ಜಾಮ್ ಉಂಟಾಯಿತು. ಕಂಟೈನರ್ ಅಡಿಯಲ್ಲಿ ಸಿಲುಕಿದ್ದ ಕಾರನ್ನು ಹೊರತೆಗೆಯಲು ಪೊಲೀಸರು ಹರಸಾಹಸಪಟ್ಟರು. ಕೊನೆಗೆ 3 ಕ್ರೈನ್ ಗಳ ಸಹಾಯದೊಂದಿಗೆ ಕಾರನ್ನು ಕಂಟೈನರ್ ನ್ನು ಮೇಲೆತ್ತಲಾಯಿತು.
ಗೋಲ್ಮಾಲ್: ಮಾಜಿ ಸಚಿವ ‘ವರ್ತೂರು ಪ್ರಕಾಶ್’ ಆಪ್ತೆ ಅರೆಸ್ಟ್.!
ಬೆಂಗಳೂರು : ಬೆಂಗಳೂರಿನಲ್ಲಿ ಚಿನ್ನ ಖರೀದಿಸಿ 2 ಕೋಟಿಗೂ ಹೆಚ್ಚು ವಂಚನೆ ಎಸಗಿದ ಮಾಜಿ ಸಚಿವ ವರ್ತೂರು ಪ್ರಕಾಶ್ ಆಪ್ತೆಯನ್ನು ಪೊಲೀಸರು ಬಂಧಿಸಿದ್ದಾರೆ. ಗಣ್ಯರ ಹೆಸರು ಬಳಸಿಕೊಂಡು ಚಿನ್ನ ಖರೀದಿಸಿ ಕೋಟ್ಯಾಂತರ ರೂ ಹಣ ಪಾವತಿಸದೇ ವಂಚಿಸಿದ ಮಾಜಿ ಸಚಿವರ ಸ್ನೇಹಿತೆಯನ್ನು ಪುಲಕೇಶಿ ನಗರದ ಉಪ ವಿಭಾಗದ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಶ್ವೇತಾಗೌಡ ಎಂದು ಗುರುತಿಸಲಾಗಿದೆ. ಆಭರಣ ಖರೀದಿಸಿ ಆಕೆ ವಂಚಿಸುತ್ತಿದ್ದಳು. ನವರತ್ನ ಜ್ಯುವೆಲರ್ಸ್ ಮಳಿಗೆಯಲ್ಲಿ ಶ್ವೇತಾ – ಖರೀದಿಸಿದ್ದ 2.945 ಕೆಜಿ ಚಿನ್ನವನ್ನು ನಗರದ ಡಾಲರ್ಸ್ ಕಾಲೋನಿಯಲ್ಲಿರುವ ಮಾಜಿ ಸಚಿವ ಹಾಗೂ ಕೋಲಾರ ಜಿಲ್ಲಾ ಬಿಜೆಪಿ ಮುಖಂಡ ವರ್ತೂರು ಪ್ರಕಾಶ್ ಮನೆಗೆ, ಅಂಗಡಿ ಸಿಬ್ಬಂದಿ ತಲುಪಿಸಿದ್ದರು. ಶ್ವೇತಾ ಮಾಜಿ ಸಚಿವರ ಮನೆ ವಿಳಾಸವನ್ನೇ ಕೊಟ್ಟಿದ್ದಳು. ಸದ್ಯ ವರ್ತೂರು ಪ್ರಕಾಶ್ ಗೂ ಪೊಲೀಸರು ನೋಟಿಸ್ ನೀಡಿದ್ದಾರೆ ಎನ್ನಲಾಗಿದೆ. ಆರೋಪಿಯಿಂದ ಚಿನ್ನ, ಕಾರು ಸೇರಿದಂತೆ ಇತರ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ. ತಾನು ಚಿನ್ನಾಭರಣ ವ್ಯಾಪಾರ ಮಾಡುವುದಾಗಿ ಎಂದು ಹೇಳಿ ಕೆಲ ಚಿನ್ನ ವ್ಯಾಪಾರಿಗಳಿಂದ ಸಗಟು ದರದಲ್ಲಿ ಆಭರಣ ಖರೀದಿಸಿ ಆಕೆ ವಂಚಿಸುತ್ತಿದ್ದಳು.
– ಬೆಳಗಾವಿ : ಮನೆಗೆ ನುಗ್ಗಿ 9 ತಿಂಗಳ ಗರ್ಭಿಣಿಯ ಬರ್ಬರ ಹತ್ಯೆ
ಬೆಳಗಾವಿ: ಮನೆಗೆ ನುಗ್ಗಿ 9 ತಿಂಗಳ ಗರ್ಭಿಣಿಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಳಗಾವಿಯ ಅಥಣಿ ತಾಲೂಕಿನ ಚಿಕ್ಕೊಡ ಗ್ರಾಮದಲ್ಲಿ ನಡೆದಿದೆ. ಕೊಲೆಯಾದವರನ್ನು ಸುವರ್ಣ ಮಠಪತಿ (33) ಎಂದು ಗುರುತಿಸಲಾಗಿದೆ. ಮನೆಯಲ್ಲಿ ಯಾರೂ ಇಲ್ಲದ ವೇಳೆ ನುಗ್ಗಿದ ದುಷ್ಕರ್ಮಿಗಳು ಸುವರ್ಣ ಮಠಪತಿ (33) ಹೊಟ್ಟೆಗೆ ಒದ್ದು ಆಯುಧಗಳಿಂದ ಹೊಡೆದು ಬರ್ಬರವಾಗಿ ಕೊಲೆ ಮಾಡಿದ್ದಾರೆ. ಈ ಸಂಬಂಧ ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಯಾವುದಾದರೂ ದ್ವೇಷಕ್ಕೆ ಈ ಕೊಲೆ ನಡೆದಿರಬಹುದೆಂದು ಶಂಕಿಸಲಾಗಿದೆ. ಅಥಣಿ ಪೊಲೀಸರು 2 ತಂಡಗಳನ್ನು ರಚಿಸಿ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.