ತುಂಗಾ, ಮಾಲತಿ ನದಿ ಮೂಲದ ಮರಳು ನಾಪತ್ತೆ..!
– ಸಾವಿರಾರು ಮರಳು ಲೋಡ್ ನದಿ ಬದಿಯಲ್ಲಿ ಇಲ್ಲ
– ತಪಾಸಣೆ ಇಲ್ಲದೆ ಚೆಕ್ಪೋಸ್ಟ್ ದಾಟುವ ಲಾರಿಗಳು
– ಹಳ್ಳ, ಕೊಳ್ಳಗಳ ಮರಳಿಗೂ ಕಳ್ಳರ ಕನ್ನ: ಹಿಡಿಯೋರು ಇಲ್ಲ!
NAMMUR EXPRESS NEWS
ತೀರ್ಥಹಳ್ಳಿ : ಅಕ್ರಮ ಮರಳು ದಂಧೆಗೆ ತೀರ್ಥಹಳ್ಳಿ ತಾಲೂಕಿನಲ್ಲಿ ಮುಕ್ತ ಅವಕಾಶ ದೊರಕಿದ್ದು ತುಂಗಾ, ಮಾಲತಿ, ಕುಶಾವತಿ ನದಿ, ಹಳ್ಳಗಳ ಮರಳು ನೀರು ಇಳಿಯುತ್ತಿದ್ದಂತೆ ಕಾಣೆಯಾಗಿದೆ. ಮಧ್ಯರಾತ್ರಿಯಿಂದ ಬೆಳಗಿನ ಜಾವದವರೆಗೆ ಮರಳು ಅಕ್ರಮ ಸಾಗಣೆ ಎಲ್ಲೆಡೆ ಕಂಡು ಬರುತ್ತಿದೆ. ಲಾರಿಯಿಂದ ಹಿಡಿದು ಪಿಕಪ್ ಅಲ್ಲಿ ಕಳ್ಳ ಮರಳು ಸಾಗಣೆ ನಡೆಯುತ್ತಿದೆ. ಆದರೆ ಇದನ್ನು ತಡೆಯುವವರು ಡೀಲ್ ಆಗಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ. ಅಕ್ರಮ ಮರಳಿನ ಲಾರಿಗಳು ಗಾಜನೂರು, ಮುಡುಬ, ಸಿರಿಗೆರೆ ಚೆಕ್ ಪೋಸ್ಟ್ನಲ್ಲಿ ತಪಾಸಣೆ ಇಲ್ಲದೆ ಸಲೀಸಾಗಿ ಸಾಗುತ್ತಿವೆ. ಮಂಡಗದ್ದೆ ತುಂಗಾ ಹಿನ್ನೀರು, ಮಹಿಷಿ ಸೇತುವೆ, ಅರೇಹಳ್ಳಿ, ಮಳಲೂರು, ಹುಣಸವಳ್ಳಿ, ಹೊಳೆಕೊಪ್ಪ, ಶಿರುಪತಿ, ಆರಗ, ಅರಳಸುರುಳಿ ಸೇರಿದಂತೆ ಅನೇಕ ಭಾಗದಲ್ಲಿ ಅಕ್ರಮ ಮರಳು ಸಾಗಣೆ ಎಗಿಲ್ಲದೆ ನಡೆಯುತ್ತಿದೆ. ತುಂಗಾ, ಮಾಲತಿ, ಕುಶಾವತಿ ನದಿಗಳಲ್ಲೂ ಮರಳು ಸಾಗಣೆ ನಿರಂತರವಾಗಿದೆ.
ಅಧಿಕಾರಿಗಳು, ಸಿಬ್ಬಂದಿ ಶಾಮೀಲು?
ಗಣಿ ಮತ್ತು ಭೂ ವಿಜ್ಞಾನ, ಕಂದಾಯ, ಅರಣ್ಯ, ಪೊಲೀಸ್, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಅಕ್ರಮ ಮರಳು ಸಾಗಣೆ ದಂಧೆ ನಿಯಂತ್ರಿಸುವ ಅಧಿಕಾರದ ಮುಖ್ಯ ಹೊಣೆಗಾರಿಕೆ ಹೊಂದಿವೆ. ವಿಶೇಷ ಎಂದರೆ, ಈ ಇಲಾಖೆಗಳ ಕೆಲವು ಅಧಿಕಾರಿಗಳು ದಂಧೆಗೆ ಬೆಂಗಾವಲಾಗಿರುವುದು ಅಕ್ರಮಕ್ಕೆ ಕಾರಣ ಎಂಬ ಚರ್ಚೆ ಆಗುತ್ತಿದೆ. ಡಾ.ಕಸ್ತೂರಿರಂಗನ್ ವರದಿ ಅನ್ವಯ ನಿಷೇಧಿತ ಪ್ರದೇಶವಾಗಿ ಗುರುತಾದ ಹೆದ್ದೂರು ಗ್ರಾ.ಪಂ. ವ್ಯಾಪ್ತಿಯ ಹೊಳೆಕೊಪ್ಪ, ಬೆಜ್ಜವಳ್ಳಿ ಗ್ರಾಮದ ತುಂಗಾನದಿ ತೀರದ ಮಹಿಷಿ ಸೇತುವೆ ಸಮೀಪ, ಮಾಲತಿ, ಕುಶಾವತಿ ನದಿ ತೀರದಲ್ಲೂ ಮರಳು ಅಕ್ರಮ ಸಾಗಣೆ ನಿರಂತರವಾಗಿದೆ. ಜಿಲ್ಲಾ, ತಾಲೂಕು ಆಡಳಿತ ಮರಳು ದಂಧೆ ವಿರುದ್ಧ ಕಾನೂನು ಕ್ರಮ ಜರುಗಿಸಲಾಗದಷ್ಟು ಅಸಹಾಯಕ ಸ್ಥಿತಿಯಲ್ಲಿ ಇದ್ದಂತಿದೆ.