ಟಾಪ್ 3 ನ್ಯೂಸ್
– ಹಾವೇರಿ : ರಾಜ್ಯದಲ್ಲಿ ಮತ್ತೊಂದು ಭೀಕರ ಕಾರು ಅಪಘಾತ
– ಒಂದೇ ಕುಟುಂಬದ ನಾಲ್ವರು ದುರ್ಮರಣ.!
– ಶಾಸಕ ಮುನಿರತ್ನ ಮೇಲೆ ಮೊಟ್ಟೆ ಎಸೆತ
– ಕಾಶ್ಮೀರದಲ್ಲಿ ಸೇನಾ ಟ್ರಕ್ ಅಪಘಾತ
ಬೀಜಾಡಿಯ ಯೋಧ ಅನುಪ್ ಪೂಜಾರಿ ಹುತಾತ್ಮ
NAMMUR EXPRESS NEWS
ಹಾವೇರಿ : ಹಾವೇರಿಯಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ಒಂದೇ ಕುಟುಂಬದ ನಾಲ್ವರು ಮೃತಪಟ್ಟಿದ್ದಾರೆ. ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನಲ್ಲಿ ಈ ಘಟನೆ ನಡೆದಿದೆ. ಎರಡು ಕಾರುಗಳು ಮುಖಾಮುಖಿ ಡಿಕ್ಕಿ ಹೊಡೆದಿವೆ. ಅಪಘಾತದಲ್ಲಿ ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿದ್ದಾರೆ. ಇನ್ನಿಬ್ಬರು ಹುಬ್ಬಳ್ಳಿ ಕಿಮ್ಸ್ ಆಸ್ಪತೆಯಲ್ಲಿ ಮೃತಪಟ್ಟಿದ್ದಾರೆ. ಹಾವೇರಿ ಜಿಲ್ಲೆಯ ತಡಸ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಅಪಘಾತ ಸಂಭವಿಸಿದೆ.
2 ಕಾರುಗಳ ನಡುವೆ ಪರಸ್ಪರ ಡಿಕ್ಕಿಯಾಗಿ ಈ ದುರ್ಘಟನೆ ಸಂಭವಿಸಿದೆ. ಇಬ್ಬರು ಸ್ಥಳದಲ್ಲೇ ಮೃತಪಟ್ಟರೆ, ಮತ್ತಿಬ್ಬರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಘಟನೆ ನಡೆದ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
– ಶಾಸಕ ಮುನಿರತ್ನ ಮೇಲೆ ಮೊಟ್ಟೆ ಎಸೆತ
ರಾಜರಾಜೇಶ್ವರಿ ನಗರ ಶಾಸಕ ಮುನಿರತ್ನ ಮೇಲೆ ಮೊಟ್ಟೆ ಎಸೆದ ಪ್ರಕರಣ ಬೆಂಗಳೂರು ನಗರದ ಲಕ್ಷ್ಮೀದೇವಿ ನಗರ ವಾರ್ಡ್ ವ್ಯಾಪ್ತಿಯಲ್ಲಿ ನಡೆದಿದೆ. ಲಗ್ಗೆರೆಯಲ್ಲಿ ಮಾಜಿ ಪ್ರಧಾನಿ ವಾಜಪೇಯಿಯವರ ಹುಟ್ಟುಹಬ್ಬದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಭಾಗಿಯಾಗುವ ಸಲುವಾಗಿ ರಸ್ತೆಯಲ್ಲಿ ನಡೆದು ಹೋಗುತ್ತಿದ್ದಾಗ ಈ ಘಟನೆ ನಡೆದಿದೆ. ಬೇರೆ ಸಂದರ್ಭದಲ್ಲಿ ಕರೆದರೂ ಪೊಲೀಸರು ಬಾರದಿರುವಾಗ ಇಂದು ಇದ್ದಕ್ಕಿದ್ದಂತೆ ಒಂದಿಡೀ ಪೊಲೀಸ್ ತುಕಡಿ ಬಂದು ನಿಂತದ್ದು, ಪೊಲೀಸರಿಗೆ ಮಾಹಿತಿ ಇದ್ದೇ ಈ ಘಟನೆ ನಡೆದಿದೆ ಎಂದು ಮುನಿರತ್ನ ಹೇಳಿದ್ದಾರೆ. ಕುಸುಮಾ ಅವರನ್ನು ಶಾಸಕಿಯನ್ನಾಗಿ ಮಾಡಲು ಡಿಕೆ ಸುರೇಶ್, ಡಿಕೆ ಶಿವಕುಮಾರ್ ಅವರ ಕಡೆಯವರಿಂದ ನನ್ನ ಮೇಲೆ ಆಸೀಡ್ ದಾಳಿ ನಡೆದಿದೆ ಎಂದು ರಾಜರಾಜೇಶ್ವರಿ ನಗರ ಶಾಸಕ ಮುನಿರತ್ನ ಗಂಭೀರ ಆರೋಪ ಮಾಡಿದ್ದಾರೆ.
ಕಾಶ್ಮೀರದಲ್ಲಿ ಸೇನಾ ಟ್ರಕ್ ಅಪಘಾತ
– ಬೀಜಾಡಿಯ ಯೋಧ ಅನುಪ್ ಪೂಜಾರಿ ಹುತಾತ್ಮ
ಕುಂದಾಪುರ: ಕಾಶ್ಮೀರದ ಮೆಂಧರ್ ಎಂಬಲ್ಲಿ ನಡೆದ ಸೇನಾ ಟ್ರಕ್ ಅಪಘಾತದಲ್ಲಿ ಐವರು ಯೋಧರು ಮೃತಪಟ್ಟಿದ್ದು, ಈ ಪೈಕಿ ತಾಲೂಕಿನ ಬೀಜಾಡಿಯ ಅನೂಪ್ ಪೂಜಾರಿ (31) ಅವರು ಕೂಡ ಹುತಾತ್ಮರಾಗಿದ್ದಾರೆ. ಮಂಗಳವಾರ ಸಂಜೆ ಕಾಶ್ಮೀರದ ಪೂಂಚ್ ಜಿಲ್ಲೆಯ ಮೆಂಧರ್ ಗ್ರಾಮದ ಗಡಿ ನಿಯಂತ್ರಣ ರೇಖೆಯ ಬಳಿ ಯೋಧರು ಪ್ರಯಾಣಿಸುತ್ತಿದ್ದ ಟ್ರಕ್ ರಸ್ತೆಯಿಂದ 350 ಅಡಿ ಆಳದ ಕಣಿವೆಗೆ ಉರುಳಿದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ. ಸೇನಾ ವಾಹನಲ್ಲಿ 10 ಯೋಧರು ಪ್ರಯಾಣಿಸುತ್ತಿದ್ದು, ಈ ಪೈಕಿ 5 ಮಂದಿ ಹುತಾತ್ಮರಾಗಿದ್ದಾರೆ. ಉಳಿದವರಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರಗೆ ದಾಖಲಿಸಲಾಗಿದೆ. ಹುತಾತ್ಮ ಯೋಧ ಅನೂಪ್ ಪೂಜಾರಿ ಅವರು ಮರಾಠ ಲೈಟ್ ಇನ್ಫೆಂಟ್ರಿ ಬಟಾಲಿಯನ್ನಲ್ಲಿ ಸೇವೆ ಕಳೆದ 13 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದರು. ಬೀಜಾಡಿ ನಿವಾಸಿ ಚಂದು ಪೂಜಾರಿ, ನಾರಾಯಣ ಪೂಜಾರಿ ದಂಪತಿಗಳ ಪುತ್ರರಾದ ಅನುಪ್ ಅವರಿಗೆ ವಿವಾಹವಾಗಿದ್ದು 2 ವರ್ಷದ ಹೆಣ್ಣು ಮಗುವಿದೆ. ಕಳೆದ ತಿಂಗಳು ರಜೆಗೆ ಊರಿಗೆ ಬಂದಿದ್ದ ಅವರು ಡಿ.15 ರಂದು ಕೋಟೇಶ್ವರದಲ್ಲಿ ನಡೆದ ಕೊಡಿ ಹಬ್ಬದಲ್ಲಿ ಪಾಲ್ಘೊಂಡಿದ್ದಲ್ಲದೆ ಮಗಳ ಹುಟ್ಟುಹಬ್ಬವನ್ನು ಆಚರಿಸಿದ್ದರು. ಬಳಿಕ ಸೇವೆಗೆ ಹಿಂದಿರುಗಿದ್ದರು. ಗುರುವಾರ ತೆಕ್ಕಟ್ಟೆಯಿಂದ ಪಾರ್ಥೀವ ಶರೀರವನ್ನು ತೆರೆದ ವಾಹನದಲ್ಲಿ ಕೋಟೇಶ್ವರ ಮೂಲಕವಾಗಿ ಮೆರವಣಿಗೆ ನಡೆಸಿ ಹುಟ್ಟೂರಾದ ಬೀಜಾಡಿಗೆ ಕರೆತಂದು ಸಕಲ ವಿಧಿಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲಾಗುತ್ತದೆ. ಬೀಜಾಡಿ ಪಡುಶಾಲೆಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ತೆ ಕಲ್ಪಿಸಲಾಗುತ್ತದೆ.