Categories
ರಾಜ್ಯ

ಕರ್ನಾಟಕ ಟಾಪ್ ನ್ಯೂಸ್

ಕರ್ನಾಟಕ ಟಾಪ್ ನ್ಯೂಸ್
– ಮಧುಗಿರಿ: ಸ್ಫೋಟ ಪ್ರಕರಣ, ಡ್ರೋನ್ ಪ್ರತಾಪ್‌ಗೆ ಜಾಮೀನು ಮಂಜೂರು
– ಮಂಡ್ಯ: ಪುತ್ರನ ಸಾವಿಗೆ ನೊಂದ ಅಮ್ಮನಿಗೆ ಹೃದಯಾಘಾತ
– ಹುಬ್ಬಳ್ಳಿ: ಸಿಲೆಂಡರ್‌ ಸ್ಪೋಟ, 10 ಅಯ್ಯಪ್ಪ ಮಾಲಾಧಾರಿಗಳಿಗೆ ಗಾಯ!
– ಬೆಂಗಳೂರು: ಕೆಲಸ ಹುಡುಕುತ್ತಿರುವ ಹೆಣ್ಮಕ್ಕಳೇ ಹುಷಾರು
– ಧಾರವಾಡ: ಟಿಟಿ ವಾಹನ – ಲಾರಿ ನಡುವೆ ಮುಖಾಮುಖಿ ಡಿಕ್ಕಿ, ಮೂವರ ಸಾವು
– ಅಲ್ಲು ಅರ್ಜುನ್ ಮನೆ ಮೇಲೆ ಕಲ್ಲು ತೂರಾಟ ನಡೆಸಿರುವವರ ಬಂಧನ
– ಬೆಂಗಳೂರು: ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ
– ಬೆಳಗಾವಿ: ರಾಜ್ಯದಲ್ಲಿ ಮತ್ತೊಂದು ಬಾಣಂತಿ ಬಲಿ

NAMMUR EXPRESS NEWS
ಮಧುಗಿರಿ: ಇತ್ತೀಚಿಗೆ ಮಧುಗಿರಿ ತಾಲೂಕಿನ ಕೃಷಿ ಹೊಂಡದಲ್ಲಿ ಸೋಡಿಯಂ ಮೆಟಲ್ ಬಳಸಿ ಸ್ಫೋಟ ಮಾಡಿದ್ದ ಪ್ರಕರಣದಲ್ಲಿ ಜೈಲಿನಲ್ಲಿದ್ದ ಮಾಜಿ ಬಿಗ್ ಬಾಸ್ ಸ್ಪರ್ಧಿ ಡ್ರೋನ್ ಪ್ರತಾಪ್‌ಗೆ ನ್ಯಾಯಾಲಯದಿಂದ ಜಾಮೀನು ದೊರಕಿದೆ. ಡಿ. 24ಕ್ಕೆ ಅವರು ಜೈಲಿನಿಂದ ಹೊರಗೆ ಬರುವ ಸಾಧ್ಯತೆಯಿದೆ. ಸೋಡಿಯಂ ಮೆಟಲ್ ಬಳಸಿ ಕೃಷಿ ಹೊಂಡದಲ್ಲಿ ಸ್ಫೋಟ ಮಾಡಿದ್ದ ಪ್ರಕರಣದಲ್ಲಿ ಡ್ರೋನ್ ಪ್ರತಾಪ್ ಅವರನ್ನು ಮಿಡಿಗೇಶಿ ಠಾಣೆಯ ಪೊಲೀಸರು ಬಂಧಿಸಿದ್ದರು. ಬಳಿಕ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಆದರೆ ಈಗ ಅವರಿಗೆ ಮಧುಗಿರಿ 4ನೇ ಹೆಚ್ಚುವರಿ ಸೆಷನ್ಸ್​ ನ್ಯಾಯಾಲಯ ಜಾಮೀನು ನೀಡಿದೆ. ಮಧುಗಿರಿ ತಾಲೂಕಿನ ಜನಕಲೋಟಿ ಗ್ರಾಮದ ಕೃಷಿ ಹೊಂಡದಲ್ಲಿ ಸೋಡಿಯಂ ಮೆಟಲ್ ಬಳಸಿ ಸ್ಫೋಟದ ಪ್ರಯೋಗ ಮಾಡಿದ ದೃಶ್ಯವನ್ನು ಸಾಮಾಜಿಕ ಜಾಲತಾಣದಲ್ಲಿ ಡ್ರೋನ್ ಪ್ರತಾಪ್ ಅಪ್ಲೋಡ್‌ ಮಾಡಿದ್ದರು. ಈ ವಿಡಿಯೋವನ್ನು ಆಧರಿಸಿ ಮಿಡಿಗೇಶಿ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣವನ್ನು ದಾಖಲಿಸಿಕೊಂಡು ಡ್ರೋನ್‌ ಪ್ರತಾಪ್‌ನನ್ನು ಬಂಧಿಸಿ, ಜೈಲಿಗೆ ಕಳುಹಿಸಿದ್ದರು.

* ಮಂಡ್ಯ: ಪುತ್ರನ ಸಾವಿನಿಂದ ನೊಂದ ಅಮ್ಮನಿಗೆ ಹೃದಯಾಘಾತ..!

ಮಂಡ್ಯ:ಮಂಡ್ಯದಲ್ಲಿ ಕರುಳು ಹಿಂಡುವಂತಹ ಘಟನೆಯೊಂದು ಬೆಳಕಿಗೆ ಬಂದಿದೆ. ಇಲ್ಲೊಂದು ಕಡೆ ಸಾವಿನಲ್ಲೂ ತಾಯಿ-ಮಗ ಒಂದಾಗಿದ್ದಾರೆ. ಅಪಘಾತವೊಂದರಲ್ಲಿ ಕೃಷ್ಣಮೂರ್ತಿ (20) ಎಂಬ ಯುವಕ ಸಾವನ್ನಪ್ಪಿದ್ದು, ಸುದ್ದಿ ಕೇಳಿ ತಾಯಿ ಮಹದೇವಮ್ಮ ಆಘಾತಕ್ಕೊಳಗಾಗಿ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ಇನ್ನು ಈ ಘಟನೆ  ನಡೆದಿದ್ದು, ತಾಯಿ ಮಗ ಇಬ್ಬರನ್ನೂ ಕೂಡ ಗ್ರಾಮಸ್ಥರು ಅಕ್ಕಪಕ್ಕವೇ ಅಂತ್ಯ ಸಂಸ್ಕಾರ ಮಾಡಿದ್ದಾರೆ.

* ಹುಬ್ಬಳ್ಳಿ: ಸಿಲೆಂಡರ್‌ ಸ್ಪೋಟ, 10 ಅಯ್ಯಪ್ಪ ಮಾಲಾಧಾರಿಗಳಿಗೆ ಗಾಯ!

ಹುಬ್ಬಳ್ಳಿ: ಹುಬ್ಬಳ್ಳಿ ಸಾಯಿ ನಗರದ ಅಚ್ಚವ್ವನ ಕಾಲೊನಿಯ ಈಶ್ವರ ದೇವಸ್ಥಾನದಲ್ಲಿ ಅಡುಗೆ ಅನಿಲದ ಸಿಲೆಂಡರ್ ಸ್ಫೋಟಗೊಂಡ ಪರಿಣಾಮ, 10 ಅಯ್ಯಪ್ಪ ಮಾಲಾಧಾರಿಗಳು ತೀವ್ರ ಗಾಯಗೊಂಡಿರುವ ಘಟನೆ ಭಾನುವಾರ ತಡರಾತ್ರಿ ನಡೆದಿದೆ. ಗಾಯಾಳು ಮಾಲಾಧಾರಿಗಳನ್ನು ಕೆಎಂಸಿಆರ್‌ಐಗೆ ದಾಖಲಿಸಲಾಗಿದ್ದು, ಎಲ್ಲರ ದೇಹ ಬಹುತೇಕ ಶೇ 90 ಕ್ಕೂ ಹೆಚ್ಚು ಪ್ರಮಾಣದ ಸುಟ್ಟು ಗಾಯಗೊಂಡಿದ್ದಾರೆ. ಗಾಯಾಳು 10 ಜನರಲ್ಲಿ 9 ಜನ ಮಾಲಾಧಾರಿಗಳ ಸ್ಥಿತಿ ಚಿಂತಾಜನಕವಾಗಿದೆ. 58 ವರ್ಷದ ಅಜ್ಜಾಸ್ವಾಮಿ ಅವರ ಸ್ಥಿತಿ ಗಂಭೀರವಾಗಿದೆ. ಘಟನೆಯಲ್ಲಿ ಸಾಯಿನಗರದ ನಿವಾಸಿಗಳಾದ ರಾಜು ಹರ್ಲಾಪುರ(21), ಸಂಜಯ ಸವದತ್ತಿ(20), ವಿನಾಯಕ ಬಾರಕೇರ(12), ಪ್ರಕಾಶ ಬಾರಕೇರ(42), ಮಂಜು ತೋರದ(22), ಅಜ್ಜಾಸ್ವಾಮಿ(58), ಪ್ರವೀಣ ಚಲವಾದಿ(24), ತೇಜಸ್ ರೆಡ್ಡಿ(26) ಮತ್ತು ಶಂಕರ ರಾಯನಗೌಡ್ರ(29) ಗಾಯಗೊಂಡಿದ್ದಾರೆ.

ನಡೆದದ್ದು ಹೇಗೆ?

ಅಯ್ಯಪ್ಪ ಮಾಲೆ ಧರಿಸಿ ವೃತ ಅಚರಿಸುತ್ತಿದ್ದ ಇವರು, ಈಶ್ವರ ದೇವಸ್ಥಾನದಲ್ಲಿ ವಾಸ್ತವ್ಯ ಮಾಡುತ್ತಿದ್ದರು. ರಾತ್ರಿ ಮಲಗಿದ್ದಾಗ ಮಾಲಾಧಾರಿಯೊಬ್ಬರ ಕಾಲು ಸಿಲೆಂಡರ್‌ಗೆ ತಾಗಿ ಉರುಳಿದೆ. ಪರಿಣಾಮ ರೆಗ್ಯೂಲೇಟರ್ ಸಡಿಲಗೊಂಡು ಗ್ಯಾಸ್ ಸೋರಿಕೆಯಾಗಿ ಈ ಘಟನೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

* ಬೆಂಗಳೂರು: ರಾಜ್ಯ, ಹೊರರಾಜ್ಯಗಳ ಸ್ಪಾಗಳಲ್ಲಿ ಹೈಟೆಕ್‌ ವೇಶ್ಯಾವಾಟಿಕೆ ದಂಧೆ

ಬೆಂಗಳೂರು: ರಾಜ್ಯ, ಹೊರರಾಜ್ಯಗಳ ಸ್ಪಾಗಳಲ್ಲಿ ಹೈಟೆಕ್‌ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಆರೋಪಿಯನ್ನು ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಮಹಿಳಾ ಸಂರಕ್ಷಣಾ ದಳದ ಅಧಿಕಾರಿಗಳು ಗೂಂಡಾ ಕಾಯ್ದೆಯಡಿ ಬಂಧಿಸಿದ್ದಾರೆ. ಮಹದೇವಪುರದ ಅನಿಲ್ ಕುಮಾರ್ ಅಲಿಯಾಸ್ ಅನಿಲ್ ರೆಡ್ಡಿ (40) ಬಂಧಿತ ಆರೋಪಿ. ಈತ ಹೊರರಾಜ್ಯ ಹಾಗೂ ವಿದೇಶಿ ಮಹಿಳೆಯರಿಗೆ ಸ್ಪಾಗಳಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ, ಹೆಚ್ಚಿನ ಸಂಬಳದ ಆಮಿಷವೊಡ್ಡಿ ಅಕ್ರಮ ಬಂಧನದಲ್ಲಿ ಇರಿಸಿಕೊಂಡು ಹೈಟೆಕ್ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ. ಆರೋಪಿ ಅನಿಲ್ ಕುಮಾರ್ ವಿರುದ್ಧ ಆಂಧ್ರಪ್ರದೇಶ ಹಾಗೂ ಮಹದೇವಪುರ ಪೊಲೀಸ್ ಠಾಣೆಗಳಲ್ಲಿ ಮಾನವ ಕಳ್ಳ ಸಾಗಣೆ, ಅತ್ಯಾಚಾರ ಸೇರಿ 4 ಅಪರಾಧ ಪ್ರಕರಣಗಳು ದಾಖಲಾಗಿವೆ. ಆದರೂ ಈತ ವೃತ್ತಿಪರ ವೇಶ್ಯಾಗೃಹಗಳನ್ನು ನಡೆಸುವುದನ್ನು ಮುಂದುವರಿಸಿದ್ದ. ಹೀಗಾಗಿ ಮಹದೇವಪುರ ಠಾಣೆ ಪೊಲೀಸರು ಹಾಗೂ ಸಿಸಿಬಿ ಅಧಿಕಾರಿಗಳು ಆರೋಪಿ ಅನಿಲ್‌ ಕುಮಾರ್‌ನನ್ನು ಗೂಂಡಾ ಕಾಯ್ದೆಯಡಿ ಬಂಧಿಸಲು ಸಲ್ಲಿಸಿದ್ದ ಪ್ರಸ್ತಾವನೆಗೆ ನಗರ ಪೊಲೀಸ್ ಆಯುಕ್ತರು ಸಮ್ಮತಿ ನೀಡಿದ ಮೇರೆಗೆ ಆರೋಪಿಯನ್ನು ಬಂಧಿಸಿ ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

* ಧಾರವಾಡ: ಟಿಟಿ ವಾಹನ – ಲಾರಿ ನಡುವೆ ಮುಖಾಮುಖಿ ಡಿಕ್ಕಿ, ಮೂವರ ಸಾವು

ಧಾರವಾಡ: ಟಿಟಿ ವಾಹನ ಮತ್ತು ಲಾರಿ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿ ಹೊಡೆದು ಮೂವರು ಸಾವನ್ನಪ್ಪಿರುವ ಅವಘಡ ಅಳ್ನಾವರ ತಾಲೂಕಿನ ಅಡಬಗಟ್ಟಿ ಸಮೀಪ ಮುಂಜಾನೆ ಸಂಭವಿಸಿದೆ. ಮೃತರನ್ನು ಸವದತ್ತಿ ತಾಲೂಕಿನ ಶಿರಸಂಗಿಯ ಹನುಮಂತ ಮಲ್ಲಾಡ್ (36), ಮಹಾಂತೇಶ ಚವಾಣ (37) ಹಾಗೂ ಮಹಾದೇವಪ್ಪ ಹುಲ್ಲಳ್ಳಿ (39) ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಶಿರಸಂಗಿಯಿಂದ ಗೋವಾ ಕಡೆಗೆ ತೆರಳುತ್ತಿದ್ದ ಲಾರಿ, ಗೋವಾದಿಂದ ಚಿತ್ರದುರ್ಗಕ್ಕೆ ಸಂಚರಿಸುತ್ತಿದ್ದ ಟೆಂಪೂಗೆ ಡಿಕ್ಕಿಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

* ಅಲ್ಲು ಅರ್ಜುನ್ ಮನೆ ಮೇಲೆ ಕಲ್ಲು ತೂರಾಟ ನಡೆಸಿರುವವರ ಬಂಧನ

ಬೆಂಗಳೂರು: ಕಾಲ್ತುಳಿತ ಪ್ರಕರಣದ ಹಿನ್ನೆಲೆಯಲ್ಲಿ ನಟ ಅಲ್ಲು ಅರ್ಜುನ್ ಮನೆಯ ಮೇಲೆ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ 8 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಅಲ್ಲು ಅರ್ಜುನ್ ಮನೆ ಮೇಲೆ ಕಲ್ಲು ತೂರಾಟ ನಡೆಸುತ್ತಿರುವುದನ್ನು ಮೊಬೈಲ್ ಕ್ಯಾಮೆರಾ ವೀಡಿಯೊಗಳು ಸೆರೆಹಿಡಿದಿದೆ. ಉಸ್ಮಾನಿಯಾ ವಿಶ್ವವಿದ್ಯಾಲಯದ ಸದಸ್ಯರ ಗುಂಪು ಅರ್ಜುನ್ ಅವರ ನಿವಾಸದ ಹೊರಗೆ ಟೊಮೆಟೊ, ಕಲ್ಲುಗಳನ್ನು ಎಸೆದಿರುವುದು ದೃಢವಾಗಿದೆ. ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ತೆಲುಗು ನಟ ಅಲ್ಲು ಅರ್ಜುನ್ ಮನೆ ಮೇಲೆ ಕಲ್ಲು ತೂರಾಟ ನಡೆಸಲಾಗಿತ್ತು. ಕಾಲ್ತುಳಿತದಲ್ಲಿ ಮೃತಪಟ್ಟ ರೇವತಿ ಕುಟುಂಬಕ್ಕೆ ಒಂದು ಕೋಟಿ ರೂಪಾಯಿ ಪರಿಹಾರ ನೀಡಬೇಕೆಂದು ಒತ್ತಾಯಿಸಿ ಕಲ್ಲು ತೂರಿ , ಹೂವಿನ ಕುಂಡಗಳನ್ನು ಪುಡಿ ಮಾಡಿ ಆಕ್ರೋಶ ಹೊರ ಹಾಕಿದ್ದರು. ಅಲ್ಲು ಅರ್ಜುನ್ ಮನೆಯ ಮುಂದೆ ಪ್ರತಿಭಟನೆ ನಡೆಸಲಾಗಿದ್ದು, ಪ್ರತಿಭಟನಾಕಾರರನ್ನು ಅಲ್ಲು ಅರ್ಜುನ್ ಸಿಬ್ಬಂದಿ ತಡೆದಿದ್ದಾರೆ. ಈ ವೇಳೆ ಆಕ್ರೋಶಗೊಂಡು ಮನೆಯ ಮೇಲೆ ಕಲ್ಲುತೂರಾಟ ನಡೆಸಲಾಗಿದೆ. ಘಟನೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

* ಬೆಂಗಳೂರು: ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ

ಬೆಂಗಳೂರು: ನಗರದ ಕೆಆರ್ ಪುರಂನ ಸೊನ್ನೆನಹಳ್ಳಿಯಲ್ಲಿ ರಸ್ತೆಯಲ್ಲಿ ಆಟವಾಡುತ್ತಿದ್ದ ಬಾಲಕನ ಮೇಲೆ ಗುಂಪು ಗುಂಪಾಗಿ ಬೀದಿ ನಾಯಿಗಳು ದಾಳಿ ಮಾಡಿದ ಘಟನೆ ನಡೆದಿದೆ. ನಾಯಿಗಳು ದಾಳಿ ಮಾಡುತ್ತಿದ್ದಂತೆ ತಪ್ಪಿಸಿಕೊಳ್ಳಲು ಬಾಲಕ ಓಡುವ ವೇಳೆ ಬಾಲಕ ನೆಲದ ಮೇಲೆ ಬಿದ್ದಿದ್ದಾನೆ. ಈ ಸಂದರ್ಭ ನಾಯಿಗಳು ಬಾಲಕನ ಮೇಲೆ ಎರಗಿವೆ. ಕೂಡಲೇ ಬಾಲಕ ಕಿರುಚಿಕೊಂಡಿದ್ದು, ಕಿರುಚಾಟ ಕೇಳಿ ಸ್ಥಳೀಯರು ಆಗಮಿಸಿದ್ದಾರೆ. ಸ್ಥಳೀಯರು ಬಂದು ನಾಯಿಗಳನ್ನು ಓಡಿಸಿದ ಹಿನ್ನೆಲೆ ಭಾರೀ ಅನಾಹುತ ತಪ್ಪಿದೆ. ಬಾಲಕನ ಮೇಲೆ ಶ್ವಾನಗಳು ದಾಳಿ ನಡೆಸಿದ ದೃಶ್ಯ ಸ್ಥಳೀಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

* ಬೆಳಗಾವಿ: ರಾಜ್ಯದಲ್ಲಿ ಮತ್ತೊಂದು ಬಾಣಂತಿ ಬಲಿ

ಬೆಳಗಾವಿ: ರಾಜ್ಯದಲ್ಲಿ ಮತ್ತೊಂದು ಬಾಣಂತಿ ತಾಯಿಯ ನಿಧನ ಪ್ರಕರಣ ದಾಖಲಾಗಿದೆ. ಬೆಳಗಾವಿ ಜಿಲ್ಲೆಯ ಮಹಿಳೆಯೊಬ್ಬರು ಸಿ-ಸೆಕ್ಷನ್‌ ಮೂಲಕ ಹೆಣ್ಣು ಮಗುವಿಗೆ ಜನ್ಮ ನೀಡಿದ ಕೇವಲ ಒಂದೇ ದಿನಕ್ಕೆ ಜಿಲ್ಲಾ ಆಸ್ಪತ್ರೆಯಲ್ಲಿ ಡಿ. 22ಕ್ಕೆ ನಿಧನರಾಗಿದ್ದಾರೆ. ವೈದ್ಯಕೀಯ ನಿರ್ಲಕ್ಷ್ಯವೇ ಆಕೆಯ ಸಾವಿಗೆ ಕಾರಣವಾಗಿದೆ ಎಂದು ಆಕೆಯ ಕುಟುಂಬದವರು ಆರೋಪಿಸಿದ್ದಾರೆ. 28 ವರ್ಷದ ತಾಯಿ ವೈಶಾಲಿ ಕೊಟಬಾಗಿ ಶನಿವಾರ ಬಿಮ್ಸ್‌ನ ಲೇಬರ್‌ ವಾರ್ಡ್‌ಗೆ ದಾಖಲಾಗಿದ್ದು, ಯಶಸ್ವಿಯಾಗಿ ತನ್ನ ಮಗುವಿಗೆ ಜನ್ಮ ನೀಡಿದ್ದಾರೆ ಎಂದು ವರದಿ ತಿಳಿಸಿದೆ. ಡಿ. 22ರಂದು ಬೆಳಗಿನ ಜಾವದವರೆಗೂ ವೈಶಾಲಿಯ ಆರೋಗ್ಯ ಸ್ಥಿತಿ ಸ್ಥಿರವಾಗಿತ್ತು ಎಂದು ಆಕೆಯ ಅತ್ತೆ ಈರವ್ವ ತಿಳಿಸಿದ್ದಾರೆ. ಆದಾಗ್ಯೂ, ಬೆಳಿಗ್ಗೆ 7 ಗಂಟೆಯ ಸುಮಾರಿಗೆ, ವೈಶಾಲಿ ಎದೆನೋವು ಎಂದು ತಿಳಿಸಿದ್ದಾರೆ. ತಿಳಿಸಿ ಹಲವು ಹೊತ್ತಾದರೂ ಚಿಕಿತ್ಸೆಗೆ ತಡ ಮಾಡಿದ್ದೇ ಆಕೆಯ ಸಾವಿಗೆ ಕಾರಣ ಎನ್ನಲಾಗಿದೆ.
ಬೆಳಿಗ್ಗೆ 7 ಗಂಟೆಯ ಸುಮಾರಿಗೆ, ವೈಶಾಲಿ ಎದೆನೋವಿನ ಬಗ್ಗೆ ದೂರು ನೀಡಲು ಪ್ರಾರಂಭಿಸಿದರು. ಆ ನೋವು ವೇಗವಾಗಿ ಉಲ್ಬಣಗೊಂಡಿದೆ. ಕೆಲವು ಸಮಯದ ನಂತರ ಆಕೆಯನ್ನು ಐಸಿಯುಗೆ ವರ್ಗಾಯಿಸಲಾಯಿತು, ಆದರೆ ಆಕೆಯ ಸ್ಥಿತಿಯು ಹದಗೆಡುತ್ತಲೇ ಇತ್ತು. ಹಾಜರಾದ ವೈದ್ಯರು ಎದೆನೋವಿಗೆ ಚಿಕಿತ್ಸೆ ನೀಡಿ ಆಕೆಯ ಜೀವ ಉಳಿಸಲು ಎಲ್ಲ ಪ್ರಯತ್ನಗಳನ್ನು ಮಾಡಿದ್ದಾರೆ ಎಂದು ದೃಢಪಡಿಸಿದರು. ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಮ್ಸ್ ನಿರ್ದೇಶಕ ಡಾ.ಅಶೋಕ್ ಕುಮಾರ್ ಶೆಟ್ಟಿ, ಆಕೆಯ ಸಾವಿಗೆ ವೈದ್ಯಕೀಯ ನಿರ್ಲಕ್ಷ್ಯಕ್ಕಿಂತ ಹೃದಯ ಸಂಬಂಧಿ ತೊಡಕುಗಳೇ ಕಾರಣ ಎಂದು ಹೇಳಿದ್ದಾರೆ. ವೈಶಾಲಿ ಕುಟುಂಬದ ದೂರಿನ ಮೇರೆಗೆ ಆಂತರಿಕ ತನಿಖೆ ನಡೆಸಲಾಗುವುದು ಎಂದು ಡಾ.ಶೆಟ್ಟಿ ಭರವಸೆ ನೀಡಿದ್ದಾರೆ. ಕರ್ನಾಟಕದಲ್ಲಿ ಕಳೆದ ಐದು ವರ್ಷಗಳಲ್ಲಿ 3,350 ತಾಯಂದಿರ ಸಾವುಗಳು ಸಂಭವಿಸಿವೆ ಎಂದು ಮುಖ್ಯಮಂತ್ರಿಗಳ ಕಚೇರಿ ಸೋಮವಾರ ತಿಳಿಸಿದೆ. ಸರ್ಕಾರ ನೀಡಿದ ಅಂಕಿಅಂಶಗಳ ಪ್ರಕಾರ, ಈ ಅವಧಿಯಲ್ಲಿ ಸಾವುನೋವುಗಳು ಇಳಿಮುಖವಾಗಿವೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.