ಕರಾವಳಿ ಟಾಪ್ ನ್ಯೂಸ್
– ಕಾಸರಗೋಡು: ಪಿಸ್ತಾ ಸಿಪ್ಪೆ ಗಂಟಲಲ್ಲಿ ಸಿಲುಕಿ 2 ವರ್ಷದ ಮಗು ದಾರುಣ ಸಾವು
– ಕಡಬ: ಹಾಡಹಗಲೇ ಮನೆಗೆ ನುಗ್ಗಿ ಕಳವು
– ಮಲ್ಪೆ: ಸಮುದ್ರಕ್ಕೆ ಬಿದ್ದು ಕಾಣೆಯಾಗಿದ್ದ ಮೀನುಗಾರನ ಮೃತದೇಹ ಪತ್ತೆ
– ಉಡುಪಿ: ವೈದ್ಯಕೀಯ ಸೀಟು ಕೊಡಿಸುವುದಾಗಿ ನಂಬಿಸಿ ವಂಚನೆ
NAMMUR EXPRESS NEWS
ಕಾಸರಗೋಡು : ಎರಡು ವರ್ಷದ ಪುಟ್ಟ ಮಗುವೊಂದು ಪಿಸ್ತಾದ ಸಿಪ್ಪೆ ತಿಂದು ಗಂಟಲಲ್ಲಿ ಸಿಲುಕಿ ಸಾವಿಗೀಡಾದ ಘಟನೆ ನಡೆದಿದೆ. ಗಲ್ಫ್ ದೇಶದಿಂದ ಅಪ್ಪ ತಂದಿದ್ದ ಪಿಸ್ತದ ಸಿಪ್ಪೆಯೊಂದು ಮಗುವಿನ ಗಂಟಲಿನಲ್ಲಿ ಸಿಲುಕಿಕೊಂಡಿದ್ದು, ಮಗು ಉಸಿರಾಡಲು ತೊಂದರೆ ಅನುಭವಿಸಿ, ಸಾವಿಗೀಡಾದ ಘಟನೆಯೊಂದು ಕುಂಬಳೆಯಲ್ಲಿ ನಡೆದಿದೆ. ಕುಂಬಳೆ ಭಾಸ್ಕರ ನಗರದ ಅನ್ವರ್ ಮೆಹರೂಫಾ ದಂಪತಿ ಪುತ್ರ ಅನಾಸ್ ಎಂಬ ಎರಡು ವರ್ಷದ ಮಗುವೇ ಸಾವಿಗೀಡಾಗಿದ್ದು, ಅನಾಸ್ ಪಿಸ್ತಾವನ್ನು ತಿನ್ನುತ್ತಿದ್ದಾಗ, ಸಿಪ್ಪೆ ಗಂಟಲಿನಲ್ಲಿ ಸಿಲುಕಿದೆ. ಮನೆಯವರು ಕೂಡಲೇ ಸಿಪ್ಪೆಯ ಒಂದು ತುಂಡನ್ನು ತೆಗೆದು ನಂತರ ಕೂಡಲೇ ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ವೈದ್ಯರು ತಪಾಸಣೆ ಸಂದರ್ಭದಲ್ಲಿ ಗಂಟಲಿನಲ್ಲಿ ಯಾವುದೇ ವಸ್ತು ದೊರಕಿಲ್ಲ ಎಂದು ಹೇಳಿದ್ದರಿಂದ ಮನೆಗೆ ವಾಪಾಸು ಕರೆದುಕೊಂಡು ಬಂದಿದ್ದಾರೆ. ಆದರೆ ಮಗುವಿಗೆ ಉಸಿರಾಟದ ತೊಂದರೆ ಆಗಿದೆ. ಕೂಡಲೇ ಮತ್ತೆ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಮಗು ಸಾವಿಗೀಡಾಗಿದೆ ಎಂದು ವರದಿಯಾಗಿದೆ.
* ಕಡಬ: ಹಾಡಹಗಲೇ ಮನೆಗೆ ನುಗ್ಗಿ ನಗ-ನಗದು ಕಳವು
ಕಡಬ: ಹಾಡಹಗಲೇ ಮನೆಯೊಂದರ ಬಾಗಿಲು ಮುರಿದು ಒಳ ನುಗ್ಗಿರುವ ಕಳ್ಳರು ನಗದು ಮತ್ತು ಚಿನ್ನಾಭರಣ ದೋಚಿರುವ ಘಟನೆ ಕಡಬ ಠಾಣಾ ವ್ಯಾಪ್ತಿಯ ನೆಕ್ಕಿಲಾಡಿ ಗ್ರಾಮದ ಬಜಕೆರೆ ಎಂಬಲ್ಲಿ ಜ.12ರಂದು ನಡೆದಿದೆ. ಬಜಕೆರೆ ನಿವಾಸಿ ಜೇಮ್ಸ್ ಹಾಗೂ ಮನೆಯವರು ನೆಲ್ಯಾಡಿಯಲ್ಲಿ ನಡೆದ ಕಾರ್ಯಕ್ರಮಕ್ಕೆಂದು ಮನೆಗೆ ಬೀಗ ಹಾಕಿ ತೆರಳಿದ್ದರು. ಸಂಜೆ ವೇಳೆಗೆ ಮನೆಗೆ ಹಿಂತಿರುಗಿದಾಗ ಮನೆಯ ಹಿಂಬಾಗಿಲ ಬೀಗ ಮುರಿದು ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ. ಕಳ್ಳರು ಮನೆಯ ಕಪಾಟಿನಲ್ಲಿದ್ದ 10 ಪವನ್ ಚಿನ್ನಾಭರಣ ಹಾಗೂ ಒಂದು ಲಕ್ಷ ನಗದನ್ನು ದೋಚಿದ್ದಾರೆ ಎಂದು ವರದಿಯಾಗಿದೆ.
ಸ್ಥಳಕ್ಕೆ ಶ್ವಾನ ಹಾಗೂ ಬೆರಳಚ್ಚು ತಜ್ಞರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
* ಮಲ್ಪೆ: ಆಯತಪ್ಪಿ ಸಮುದ್ರಕ್ಕೆ ಬಿದ್ದು ಕಾಣೆಯಾಗಿದ್ದ ಮೀನುಗಾರನ ಮೃತದೇಹ ಪತ್ತೆ
ಮಲ್ಪೆ: ಮೀನುಗಾರಿಕೆ ವೇಳೆ ಬೋಟಿನಿಂದ ಆಯತಪ್ಪಿ ಸಮುದ್ರಕ್ಕೆ ಬಿದ್ದು ನಾಪತ್ತೆಯಾಗಿದ್ದ ಮೀನುಗಾರನೋರ್ವರ ಮೃತದೇಹವು ಬಿದ್ದ ಪರಿಸರದಲ್ಲಿ ಸಿಕ್ಕಿದೆ.
ಮೃತ ಮೀನುಗಾರನನ್ನು ಜನಾರ್ದನ (41) ಎಂದು ಗುರುತಿಸಲಾಗಿದೆ. ಜನಾರ್ದನ ಅವರು ಲಂಬೋದರ ಎಂಬ ಆಳಸಮುದ್ರ ಬೋಟಿನಲ್ಲಿ ಕೆಲಸ ಮಾಡುತ್ತಿದ್ದರು. ಜ. 5ರಂದು ಸುಮಾರು 10 ನಾಟಿಕಲ್ ಮೈಲು ದೂರ ಸಮುದ್ರದಲ್ಲಿ ಬಲೆ ಹಾಕಿ ಮೀನುಗಾರಿಕೆ ಮಾಡುತ್ತಿದ್ದಾಗ ರಾತ್ರಿ 12 ಗಂಟೆ ಸುಮಾರಿಗೆ ಇತರ ಕೆಲಸಗಾರರು ಸೇರಿ ಬಲೆಯನ್ನು ಎಳೆಯುತ್ತಿದ್ದರು.
ಈ ವೇಳೆ ಜನಾರ್ದನ ಅವರು ಆಯತಪ್ಪಿ ಬೋಟಿನಿಂದ ಸಮುದ್ರದ ನೀರಿಗೆ ಬಿದ್ದು ಕಾಣೆಯಾಗಿದ್ದರು. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು.
* ಉಡುಪಿ: ವೈದ್ಯಕೀಯ ಸೀಟು ಕೊಡಿಸುವುದಾಗಿ ನಂಬಿಸಿ ಲಕ್ಷಾಂತರ ರೂ. ವಂಚನೆ
ಉಡುಪಿ : ವೈದ್ಯಕೀಯ ವಿದ್ಯಾಭ್ಯಾಸ ನಡೆಸಲು ಸೀಟ್ ದೊರಕಿಸಿಕೊಡುವುದಾಗಿ ನಂಬಿಸಿ ವೈದ್ಯಕೀಯ ವಿದ್ಯಾರ್ಥಿಯೊಬ್ಬನನ್ನು ವಂಚಿಸಿದ ಘಟನೆ ಸಂಭವಿಸಿದೆ.
ಬೆಂಗಳೂರು ಮೂಲದ ಸಂತೋಷ್ ಅವರು ವೈದ್ಯ ವಿದ್ಯಾಭ್ಯಾಸ ಮುಗಿಸಿಕೊಂಡು ಎಂಪಿಎಚ್ ವಿದ್ಯಾಭ್ಯಾಸವನ್ನು ಯುಕೆಯಲ್ಲಿ ಮಾಡಲು ಉದ್ದೇಶಿಸಿದ್ದರು. ಅದರಂತೆ ಅವರ ಪರಿಚಯದ
ಡಾ। ಸುದರ್ಶನ್ ಅವರಿಗೆ ಕರೆ ಮಾಡಿ ವಿಚಾರಿಸಿದಾಗ ದುಬೈನಲ್ಲಿರುವ ಆರೋಪಿ ಅಫ್ತಾಬ್ ಅವರನ್ನು ಭೇಟಿ ಮಾಡುವಂತೆ ತಿಳಿಸಿದ್ದು, ಅದರಂತೆ ಸಂತೋಷ್ ಅವರು ದುಬೈಗೆ ತೆರಳಿ ಅಫ್ತಾಬ್ ಅವರನ್ನು ಭೇಟಿ ಮಾಡಿದ್ದರು.
ಅನಂತರ ಯುಕೆಯಲ್ಲಿ ವಿದ್ಯಾಭ್ಯಾಸಕ್ಕಾಗಿ ಸೀಟಿಗೆ 18 ಲ.ರೂ.ಗೆ ಇಬ್ಬರ ನಡುವೆ ಒಪ್ಪಂದವಾಯಿತು. ಅಫ್ತಾಬ್ ಸಂತೋಷ್ ಅವರಿಗೆ ಕರೆ ಮಾಡಿ ವಿದ್ಯಾಭ್ಯಾಸಕ್ಕಾಗಿ ಸೀಟನ್ನು ಖಾಯಂ ಮಾಡಲು ಮೊದಲಿಗೆ 8.5 ಲ.ರೂ. ನೀಡುವಂತೆ ಕೇಳಿದ್ದರು. ಅದರಂತೆ ಸಂತೋಷ್ ಅವರಲ್ಲಿ ಎನ್ಆರ್ಐ ಖಾತೆಯನ್ನು ಹೊಂದಿರದ ಕಾರಣ ಹಣವನ್ನು ಜಮೆ ಮಾಡಲು ಅಫ್ತಾಬ್ ಆತನಿಗೆ ಪರಿಚಯವಿರುವ 2ನೇ ಆರೋಪಿ ಸುಮನ್ ಎಸ್. ಅವರನ್ನು ಭೇಟಿ ಆಗುವಂತೆ ತಿಳಿಸಿದ್ದನು. ಸುಮನ್ ಅವರ ಬನ್ನಂಜೆಯ ಬ್ಯಾಂಕ್ ಆಪ್ ಬರೋಡ ಶಾಖೆಯ ಖಾತೆಗೆ ಬೆಂಗಳೂರಿನಲ್ಲಿರುವ ನಂದಿನಿ ಲೇಔಟ್ ಆ್ಯಕ್ಸಿಸ್ ಬ್ಯಾಂಕ್ ಶಾಖೆಯಿಂದ ಆರ್ ಟಿಜಿಎಸ್ ಮುಖಾಂತರ 8.5 ಲ.ರೂ.ಗಳನ್ನು ವರ್ಗಾವಣೆ ಮಾಡಿದ್ದರು. ಬಳಿಕ ಆರೋಪಿಗಳು ಸಂತೋಷ್ ಅವರ ಕರೆಯನ್ನು ಸ್ವೀಕರಿಸದೇ ಸಂತೋಷ್ ಅವರಿಗೆ ವಂಚನೆ ಎಸಗಿದ್ದಾರೆ ಎಂದು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.