ಪಂಚಾಯತ್ ರಾಜ್ ಇಲಾಖೆ ಕ್ರೀಡಾಕೂಟದಲ್ಲಿ ತೀರ್ಥಹಳ್ಳಿ ಚಾಂಪಿಯನ್!
– ಜಿಲ್ಲಾ ಮಟ್ಟದ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ
– ತೀರ್ಥಹಳ್ಳಿ ತಾಲೂಕಿನ ಸಿಬ್ಬಂದಿಗಳಿಗೆ ಸಮಗ್ರ ಚಾಂಪಿಯನ್
– ಹೊಸ ನಗರ ತಾಲೂಕು ಎರಡನೇ ಸ್ಥಾನಕ್ಕೆ ತೃಪ್ತಿ!
NAMMUR EXPRESS NEWS
ತೀರ್ಥಹಳ್ಳಿ: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ನೌಕರರ ಜಿಲ್ಲಾ ಮಟ್ಟದ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಶಿವಮೊಗ್ಗ ನಡೆದಿದ್ದು, ಜಿಲ್ಲೆಯ 262 ಗ್ರಾಮ ಪಂಚಾಯತ್, 7 ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಪಂಚಾಯತ್ ಇಂಜಿನಿಯರಿಂಗ್ ಉಪ ವಿಭಾಗಗಳು ಸೇರಿ 2 ಸಾವಿರಕ್ಕೂ ಹೆಚ್ಚು ಅಧಿಕಾರಿಗಳು, ನೌಕರರು ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿದ್ದರು. 50ಕ್ಕೂ ಹೆಚ್ಚು ವಿಭಾಗದಲ್ಲಿ ಕ್ರೀಡಾಕೂಟಗಳನ್ನು ಆಯೋಜಿಸಿದ್ದು, 10 ಕ್ಕೂ ಹೆಚ್ಚು ಗುಂಪು ಕ್ರೀಡೆ, 45 ವೈಯಕ್ತಿಕ ಕ್ರೀಡೆಗಳು 2 ದಿನದಲ್ಲಿ ನಡೆಯಿತು. ಶಿವಮೊಗ್ಗದಲ್ಲಿ ನಡೆದ ಈ ಕ್ರೀಡಾಕೂಟಕ್ಕೆ ಜಿಲ್ಲಾ ಪಂಚಾಯತ್ ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಹೇಮಂತ್ ಕುಮಾರ್ ಚಾಲನೆ ನೀಡಿದರು. 2 ದಿನ ಸಂಜೆ ಗ್ರಾಮೀಣ ಅಭಿವೃದ್ಧಿ ನೌಕರರು ಹಾಗೂ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಅತ್ಯಂತ ಯಶಸ್ವಿಯಾಗಿ ಜರುಗಿತು. ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಸಿ.ಎಸ್.ಷಡಕ್ಷರಿ ಭಾಗವಹಿಸಿದ್ದರು.
ತೀರ್ಥಹಳ್ಳಿ ಪ್ರಥಮ, ಹೊಸ ನಗರ ದ್ವಿತೀಯ
ಇಡೀ ಕ್ರೀಡಾಕೂಟದಲ್ಲಿ ಶೈಲಾ ಎನ್ ಕಾರ್ಯನಿರ್ವಾಹಕ ಅಧಿಕಾರಿಗಳು ತಾಲೂಕು ಪಂಚಾಯತ್ ತೀರ್ಥಹಳ್ಳಿ ಇವರ ನೇತೃತ್ವದ RDPR ತೀರ್ಥಹಳ್ಳಿ 140 ಅಂಕಗಳೊಂದಿಗೆ ಸಮಗ್ರ ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡಿತು. 137 ಅಂಕದೊಂದಿಗೆ ಕಳೆದ ಬಾರಿಯ ಸಮಗ್ರ ಪ್ರಶಸ್ತಿಯನ್ನು ಪಡೆದ ಹೊಸನಗರ ತಾಲೂಕು ಎರಡನೇ ಸ್ಥಾನಕ್ಕೆ ತೃಪ್ತಿ ಪಡಬೇಕಾಯಿತು.