ಕುಂದಾದ್ರಿಯಲ್ಲಿ ವಾರ್ಷಿಕೋತ್ಸವದ ಸಂಭ್ರಮ!
– ಜಾತ್ರಾ ಮಹೋತ್ಸವಕ್ಕೆ ಸಾವಿರಾರು ಭಕ್ತರು ಭೇಟಿ
– ಆರಗ, ಮಂಜುನಾಥ ಗೌಡ ಸೇರಿ ಗಣ್ಯರು ಹಾಜರ್
– ಒಳ್ಳೆ ಸಮಾಜ ಕಟ್ಟೋಣ, ಒಳ್ಳೆಯದನ್ನು ಮಾಡೋಣ: ಡಾ.ದೇವೇಂದ್ರ ಕೀರ್ತಿ ಭಟ್ಟಾರಕ ಶ್ರೀಗಳ ಕರೆ
NAMMUR EXPRESS NEWS
ತೀರ್ಥಹಳ್ಳಿ: ಅತಿಶಯ ಶ್ರೀ ಕ್ಷೇತ್ರ ಹೊಂಬುಜ ಮಹಾಸಂಸ್ಥಾನದ ಶಾಖಾ ಕ್ಷೇತ್ರ ಆಚಾರ್ಯ ಶ್ರೀ ಕುಂದ ಕುಂದರ ತಪೋಭೂಮಿ ಶ್ರೀ ಕುಂದಾದ್ರಿ ಕ್ಷೇತ್ರದಲ್ಲಿ ಭಗವಾನ್ ಶ್ರೀ 1008 ಪಾರ್ಶ್ವನಾಥ ಸ್ವಾಮಿ ಮತ್ತು ಜಗನ್ಮಾತೆ ಶ್ರೀ ಪದ್ಮಾವತಿ ದೇವಿ ಅಮ್ಮನವರ ವಾರ್ಷಿಕ ಜಾತ್ರಾ ಮಹೋತ್ಸವ ಸಂಭ್ರಮದಿಂದ ನಡೆಯಿತು. ಹೊಂಬುಜ ಜೈನಮಠದ ಪರಮ ಪೂಜ್ಯ ಜಗದ್ಗುರು ಸ್ವಸ್ತಿ ಶ್ರೀ ಡಾ.ದೇವೇಂದ್ರ ಕೀರ್ತಿ ಭಟ್ಟಾರಕ ಮಹಾ ಸ್ವಾಮಿಗಳವರು ಸಾನಿಧ್ಯ ವಹಿಸಿ ಆಶೀರ್ವಚನ ನೀಡಿ ಕುಂದಾದ್ರಿ ತಾಣದ ಮಹತ್ವ ತಿಳಿಸಿದರು. ಒಳ್ಳೆ ಸಮಾಜ ಕಟ್ಟೋಣ, ಒಳ್ಳೆಯದನ್ನು ಮಾಡೋಣ ಎಂದರು. ಬೆಳಿಗ್ಗೆ 8ರಿಂದ ಕಲಿಕುಂಡ ಯಂತ್ರಾರಾಧನೆ, ಶ್ರೀ ಪಾರ್ಶ್ವನಾಥ ಸ್ವಾಮಿಗೆ ವಿಶೇಷ ಅಭಿಷೇಕ ಪೂಜೆ, ಶ್ರೀ ಪದ್ಮಾವತಿ ದೇವಿ ಅಮ್ಮನವರ ಷೋಡಶೋಪಚಾರ ಪೂಜೆ ಮತ್ತು ಆಚಾರ್ಯ ಶ್ರೀ ಕುಂದ ಕುಂದಾಚಾರ್ಯರ ಪಾದುಕಾ ಮಂದಿರದಲ್ಲಿ ವಿಶೇಷ ಪೂಜೆ ನಡೆಯಿತು
ಕುಂದಾದ್ರಿ ಬೆಟ್ಟ ಅಪವಿತ್ರಗೊಳಿಸಬೇಡಿ!
ವಾರ್ಷಿಕ ಕಾರ್ಯಕ್ರಮದಲ್ಲಿ ಭಾಗಿಯಾದ ಶಾಸಕ ಆರಗ ಜ್ಞಾನೇಂದ್ರ ಮಾತನಾಡಿ, ಹುಂಚ ದೇವಿ ಹಾಗೂ ಶ್ರೀಗಳ ಆಶೀರ್ವಾದದಿಂದ ನನ್ನ ಕುಟುಂಬ ಚೆನ್ನಾಗಿದೆ. ಕುಂದಾದ್ರಿ ಜೈನ ಸಂಸ್ಕೃತಿಯ ಪ್ರತೀಕ. ಈ ತಾಣಕ್ಕೆ ಸಾವಿರಾರು ಜನರ ಬರುತ್ತಾರೆ. ಇಲ್ಲಿ ಅಕ್ರಮ ಚಟುವಟಿಕೆ ಹೆಚ್ಚಾಗಿತ್ತು. ಇದೀಗ ಕಡಿಮೆ ಆಗಿದೆ. ಇಲ್ಲಿ ಬಂದು ಮಜಾ ಮಸ್ತಿ ಮಾಡಬಾರದು. ಅಂತವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದರು. ಗಣ್ಯರಾದ ಆರಗ ಜ್ಞಾನೇಂದ್ರ, ಆರ್. ಎಂ. ಮಂಜುನಾಥ್ ಗೌಡ, ಡಾ. ಜೀವಂದರ್ ಜೈನ್, ಡಾ. ಸುಂದರೇಶ್, ನಾಬಳ ಸಚ್ಚಿ0ದ್ರ ಹೆಗ್ಡೆ, ರಾಘವೇಂದ್ರ ಶೆಟ್ಟಿ, ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸುರೇಂದ್ರ, ಸದಸ್ಯರಾದ ಕುಂದಾದ್ರಿ ರಾಘವೇಂದ್ರ ಸೇರಿ ಮೂಡುಬಿದಿರೆ, ಕಾರ್ಕಳ, ಹುಂಚ, ಎನ್ ಆರ್ ಪುರ ಸೇರಿ ರಾಜ್ಯದ ವಿವಿಧ ಭಾಗದಿಂದ ಸಾವಿರಾರು ಭಕ್ತರು ಆಗಮಿಸಿದ್ದರು.
ಡಾ. ಆರ್.ಎಂ.ಮಂಜುನಾಥ ಗೌಡ ಹೇಳಿದ್ದೇನು?
ಮಲೆನಾಡು ಅಭಿವೃದ್ಧಿ ಮಂಡಳಿ ಅಧ್ಯಕ್ಷರಾದ ಡಾ.ಆರ್.ಎಂ.ಮಂಜುನಾಥ ಗೌಡ ಮಾತನಾಡಿ, ಕುಂದಾದ್ರಿ ಅಭಿವೃದ್ಧಿಗೆ ರಸ್ತೆ ಪ್ರಮುಖವಾದುದು. ಇಲ್ಲಿಗೆ ಮಲೆನಾಡು ಅಭಿವೃದ್ಧಿ ಮಂಡಳಿಯಿಂದ 50 ಲಕ್ಷ ಅನುದಾನ ನೀಡಿದ್ದೇವೆ. ಕುಂದಾದ್ರಿಯನ್ನು ಪ್ರವಾಸೋದ್ಯಮ ಇಲಾಖೆ ವ್ಯಾಪ್ತಿಗೆ ಸೇರಿಸಲು ಸರ್ಕಾರದ ಜತೆ ಮಾತುಕತೆ ನಡೆಸುತ್ತೇನೆ. ಜೈನರು ನಾವು ಎಲ್ಲರೂ ಒಂದಾಗಿ ಬದುಕುತ್ತಿದ್ದೇವೆ. ಎಲ್ಲರೂ ಸೇರಿ ಕುಂದಾದ್ರಿ ತಾಣದ ಅಭಿವೃದ್ಧಿ ಮಾಡೋಣ ಎಂದರು.