ಉಡುಪಿ ಕೃಷ್ಣಮಠದಲ್ಲಿ ಮೂರು ತೇರಿನ ರಂಗು!
– ಹರಿದು ಬಂದ ಭಕ್ತ ಜನಸಾಗರ
– ಪಟಾಕಿ ಸಿಡಿಸಿ ಸಂಭ್ರಮದಿಂದ ಕೃಷ್ಣದೇವರ ಮೆರವಣಿಗೆ
NAMMUR EXPRESS NEWS
ಉಡುಪಿ: ಕಡಗೋಲು ಕೃಷ್ಣನ ಉಡುಪಿಯಲ್ಲಿ ಮಕರ ಸಂಕ್ರಾಂತಿಯ ಮೂರು ತೇರಿನ ಉತ್ಸವ ಅತ್ಯಂತ ವಿಜೃಂಭಣೆಯಿಂದ ನೆರವೇರಿತು.
ಸಪ್ತೋತ್ಸವ ಸಹಿತ ಕೃಷ್ಣನಿಗೆ ಮೂರುತೇರಿನ ಉತ್ಸವ ಶತಮಾನಗಳಿಂದ ನಡೆಸಿಕೊಂಡು ಬರಲಾಗುತ್ತಿದೆ. ಈ ಬಾರಿಯೂ ಅತ್ಯಂತ ವೈಭವದಿಂದ ರಥೋತ್ಸವ ನಡೆಯಿತು.
ಭಕ್ತರ ಜನಸಾಗರವೇ ಸೇರಿದ್ದು, ತೇರು ಹೊರಡುವ ವೇಳೆಯಲ್ಲಿ, ಗುಡುಗು ಸಿಡಿಲು ಸಹಿತ ತುಂತುರು ಮಳೆ ಆರಂಭವಾಯಿತು. ಆದರೆ ಮಳೆಯನ್ನೂ ಲೆಕ್ಕಿಸದೆ ಸಾವಿರಾರು ಭಕ್ತರು ಮೂರುತೇರಿನ ಉತ್ಸವಕ್ಕೆ ಸಾಕ್ಷಿಯಾದರು. ಉಲ್ಲಾಸ ಉತ್ಸಾಹದಿಂದ ರಥ ಎಳೆದು ಖುಷಿ ಪಟ್ಟರು. ಹರೇ ಕೃಷ್ಣ ಗೋವಿಂದ ಎಂದು ಅತ್ಯುತ್ಸಾಹದಿಂದ ರಥ ಎಳೆದಿದ್ದಾರೆ.
– ಪಟಾಕಿ ಸಿಡಿಸಿ ಸಂಭ್ರಮದಿಂದ ಕೃಷ್ಣದೇವರ ಮೆರವಣಿಗೆ!
ಮಕರ ಸಂಕ್ರಾಂತಿಯ ಐದು ದಿನ ಮುಂಚಿತವಾಗಿ ಸಪ್ತೋತ್ಸವ ಅತ್ಯಂತ ವಿಜೃಂಭಣೆಯಿಂದ ನಡೆಸಲಾಗುತ್ತೆ. 6ನೇ ದಿನ ಮೂರು ತೇರಿನ ಉತ್ಸವ ನಡೆದರೆ, ಏಳನೇ ದಿನಕ್ಕೆ ಚೂರ್ಣೋತ್ಸವ ನಡೆಯುವ ಸಂಪ್ರದಾಯವಿದೆ. ಮಕರ ಸಂಕ್ರಾಂತಿ ಉತ್ಸವದ ವೇಳೆ, ಬ್ರಹ್ಮರಥದಲ್ಲಿ ಕೃಷ್ಣದೇವರು ವಿರಾಜಮಾನರಾದರೆ, ಗರುಡ ಹಾಗೂ ಮಹಾಪೂಜಾ ರಥಗಳಲ್ಲಿ ಮುಖ್ಯಪ್ರಾಣ ಚಂದ್ರೇಶ್ವರ ಅನಂತೇಶ್ವರ ದೇವರ ವೈಭವದ ಮೆರವಣಿಗೆ ನಡೆಯುತ್ತದೆ. ಪಟಾಕಿ ಸಿಡಿಸಿ ಸಂಭ್ರಮದಿಂದ ಕೃಷ್ಣದೇವರ ಮೆರವಣಿಗೆ ನಡೆಸಲಾಯಿತು. ಮೂರು ತೇರಿನ ಮಹೋತ್ಸವಕ್ಕೂ ಮುನ್ನ ಮಧ್ವ ಸರೋವರದಲ್ಲಿ ಕೃಷ್ಣ ಮುಖ್ಯಪ್ರಾಣರ ತೆಪ್ಪೋತ್ಸವ ಜರುಗಿತು. ಪರ್ಯಾಯ ಹೊತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥರು ಹಾಗೂ ವಿದೇಶಗಳಿಂದ ಆಗಮಿಸಿದ್ದ ಅವರ ಅಭಿಮಾನಿಗಳು ಉತ್ಸವದಲ್ಲಿ ಪಾಲ್ಗೊಂಡರು.