ಚಿಕ್ಕಮಗಳೂರು ಟಾಪ್ ನ್ಯೂಸ್..!!
– ಕಳಸ ಪಿಎಸ್ಐ ನಿತ್ಯಾನಂದ ಗೌಡ ಸಸ್ಪೆಂಡ್
– ಮುಸುಕುಧಾರಿ ಹಣ, ಒಡವೆ ದೋಚಿ ಪರಾರಿ
– ಬಸ್ ನಿಲುಗಡೆಗೆ ಗ್ರಾಮಸ್ಥರ ಆಗ್ರಹ
– ಕಡವೆ ಶಿಕಾರಿ., ಓರ್ವನ ಬಂಧನ
NAMMUR EXPRESS NEWS
ಕಳಸ ಪಿಎಸ್ಐ ನಿತ್ಯಾನಂದ ಗೌಡ ಸಸ್ಪೆಂಡ್..!
ಕಳಸ:ವರದಕ್ಷಿಣೆ ಕಿರುಕುಳ,ಪತ್ನಿ ಮೇಲೆ ಹಲ್ಲೆ ಆರೋಪ ಎದುರಿಸುತ್ತಿರುವ ಕಳಸ ಪೋಲೀಸ್ ಠಾಣೆಯ ಪಿಎಸ್ಐ ನಿತ್ಯಾನಂದ ಗೌಡನನ್ನು ಇಲಾಖೆಯಲ್ಲಿ ಅಶಿಸ್ತಿನ ವರ್ತನೆ ಕಾರಣದಿಂದ ಅಮಾನತು ಮಾಡಲಾಗಿದೆ. ಕಳೆದೆರಡು ದಿನಗಳಿಂದ ಈ ವಿಷಯವಾಗಿ ಕಳಸ ಪೋಲೀಸ್ ಠಾಣೆಯಲ್ಲಿ ದೂರು ಪ್ರತಿದೂರು ನೀಡುವುದರ ಮೂಲಕ ಹೈಡ್ರಾಮವೇ ನಡೆದಿತ್ತು. ಪತ್ನಿ ಅಮಿತಾ ಪತಿಯ ವಿರುದ್ಧ 50 ಲಕ್ಷ ವರದಕ್ಷಿಣೆ ಕಿರುಕುಳ,ಹಲ್ಲೆ, ಪರ ಸ್ತ್ರೀಯರೊಂದಿಗೆ ಅಸಭ್ಯ ವರ್ತನೆಯಂತಹ ಆರೋಪಗಳನ್ನು ಮಾಡಿ ದೂರು ದಾಖಲಿಸಿದ್ದರು. ನಿತ್ಯಾನಂದ ಗೌಡ ಕೂಡ ಪತ್ನಿಯ ವಿರುದ್ಧ ಪ್ರತಿದೂರು ನೀಡಿದ್ದ. ಇಲಾಖೆಯಲ್ಲಿ ಅಶಿಸ್ತಿನ ವರ್ತನೆಯಿಂದಾಗಿ ಹಿರಿಯ ಅಧಿಕಾರಿಗಳು ನಿತ್ಯಾನಂದ ಗೌಡನನ್ನು ಅಮಾನತುಗೊಳಿಸಿ ಆದೇಶಿಸಿದ್ದಾರೆ.
ಮುಸುಕುಧಾರಿ ಹಣ,ಒಡವೆ ದೋಚಿ ಪರಾರಿ..!!
ಚಿಕ್ಕಮಗಳೂರು:ರಾಜ್ಯದೆಲ್ಲೆಡೆ ಮುಸುಕುಧಾರಿ ಗ್ಯಾಂಗ್ನ ಅಟ್ಟಹಾಸ ಅತಿಯಾಗಿದ್ದು ಹಲವು ಕಡೆಗಳಲ್ಲಿ ಹಣ,ಒಡವೆ ದೋಚಿ ಪರಾರಿಯಾಗಿದ್ದಾರೆ. ಚಿಕ್ಕಮಗಳೂರಿನಲ್ಲೂ ಇಂತಹದೊಂದು ಪ್ರಕರಣ ದಾಖಲಾಗಿದೆ. ತಾಲೂಕಿನ ಹಿರೇಮಗಳೂರಿನಲ್ಲಿ ಮುಸುಕುಧಾರಿಯೊಬ್ಬ ರಾಮಮ್ಮ ಎಂಬುವರ ಮನೆಗೆ ನುಗ್ಗಿ ಮನೆಯಲ್ಲಿದ್ದ ಬೆಳ್ಳಿ ವಸ್ತುಗಳು,35 ಸಾವಿರ ಹಣವನ್ನು ದೋಚಿ ಪರಾರಿಯಾಗಿದ್ದಾನೆ.ಕೊನೆಯಲ್ಲಿ ಸಿ.ಸಿ ಟಿ.ವಿಯನ್ನು ಧ್ವಂಸ ಮಾಡಿ ಹೋಗಿದ್ದಾರೆ.ಈ ದೃಶ್ಯ ಸಿ.ಸಿ ಟಿ.ವಿಯಲ್ಲಿ ಸೆರೆಯಾಗಿದೆ.
ಈ ಸಂಬಂಧ ಫೋಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು ಆರೋಪಿ ಸೆರೆಗೆ ಪೋಲೀಸರು ಬಲೆ ಬೀಸಿದ್ದಾರೆ.
ಬಸ್ ನಿಲುಗಡೆಗೆ ಗ್ರಾಮಸ್ಥರ ಆಗ್ರಹ..!!
ಮೂಡಿಗೆರೆ/ಕೊಟ್ಟಿಗೆಹಾರ: ತಾಲೂಕಿನ ಬಣಕಲ್ ಗ್ರಾಮ ವ್ಯಾಪ್ತಿಯ ಬಾಳೂರು ಹೋಬಳಿ ಚೆನ್ನಹಡ್ಲು,ಹಲಸಿನಮರ ಬಳಿ ಕೆಎಸ್ಆರ್ಟಿಸಿ ಬಸ್ ನಿಲ್ಲಿಸುವಂತೆ ಒತ್ತಾಯಿಸಿ ಶಾಲಾ ಮಕ್ಕಳು ಸೇರಿದಂತೆ ಸಾರ್ವಜನಿಕರು ಕೊಟ್ಟಿಗೆಹಾರ ಬಸ್ ನಿಲ್ದಾಣದಲ್ಲಿ ಹೊರನಾಡು ಬಸ್ ಚಾಲಕರಿಗೆ ಮನವಿ ಮಾಡಿದರು. ಸುಮಾರು ವರ್ಷಗಳ ಹಿಂದೆ ಬೆಂಗಳೂರಿನಿಂದ ಹೊರನಾಡಿಗೆ ಬರುವ ಬಸ್ಗಳು ಬಾಳೂರು ಸ್ಟೇಜ್ ಹಣ ಪಡೆದು ಚೆನ್ನಹಡ್ಲು ಹಾಗೂ ಹಲಸಿನ ಮರ ಬಳಿ ಬಸ್ ನಿಲುಗಡೆ ಮಾಡುತ್ತಿದ್ದರು. ಆದರೆ ಕೆಲವು ದಿನಗಳಿಂದ ಬಸ್ ನಿಲುಗಡೆ ಮಾಡದೇ ಶಾಲಾಕಾಲೇಜು ಮಕ್ಕಳಿಗೆ,ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಆದ್ದರಿಂದ ಇಲಾಖೆ ಅಧಿಕಾರಿಗಳು ಬಾಳೂರು ಸ್ಟೇಜ್ನಂತೆ ಚೆನ್ನಹಡ್ಲು ಮತ್ತು ಹಲಸಿನಮರ ಒಂದೇ ಸ್ಟೇಜ್ ಮಾಡಿ ಬಸ್ ನಿಲುಗಡೆ ಮಾಡಬೇಕು ಎಂದು ಬಾಳೂರು ಗ್ರಾ .ಪಂ ಅಧ್ಯಕ್ಷ ಬಿ.ಬಿ ಮಂಜುನಾಥ್ ಒತ್ತಾಯಿಸಿದರು.
ಕಡವೆ ಶಿಕಾರಿ.,ಓರ್ವನ ಬಂಧನ..!!
ಚಿಕ್ಕಮಗಳೂರು: ಕಡವೆ ಶಿಕಾರಿ ಮಾಡಿದ್ದ ವ್ಯಕ್ತಿ ಓರ್ವನನ್ನು ಅರಣ್ಯ ಸಂಚಾರಿ ದಳ ಅಧಿಕಾರಿಗಳು ವಾಹನ ಸಹಿತ ಎರಡು ಕೋವಿ ವಶಪಡಿಸಿಕೊಂಡಿದ್ದಾರೆ.
ಚಿಕ್ಕಮಗಳೂರು ವಲಯದ ಅತ್ತಿಗಿರಿ ಸೆಕ್ಷನ್, ತೋಗರಿಹಂಕಲ್ ಗ್ರಾಮದ ಸರ್ವೇ ಸಂಖ್ಯೆ 37 ರಲ್ಲಿ ಕೂತನ್ಕುಲ್ ಎಸ್ಟೇಟ್ ನಲ್ಲಿ ಇಂದು ನಸುಕಿನಲ್ಲಿ ತೋಟದ ರೈಟರ್ ದೇವಯ್ಯ ಕಡವೆ ಶಿಖಾರಿ ಮಾಡಿದ್ದ. ಶಿಕಾರಿ ಬಳಿಕ ಮಾಂಸವನ್ನು ತುಂಡು ಮಾಡುತ್ತಿದ್ದಾಗ ಅರಣ್ಯ ಸಂಚಾರಿ ದಳದವರು ದಾಳಿ ಮಾಡಿ ದೇವಯ್ಯನನ್ನು ಬಂಧಿಸಿ ವನ್ಯಜೀವಿ ಸಾಂಬಾರ್,ಜಿಂಕೆಯ ಅಂದಾಜು 40 ಕೆ.ಜಿ ಮಾಂಸ ಮತ್ತು ಚರ್ಮ, ಚೂರಿ ಹಾಗೂ ಬೇಟೆಗೆ ಬಳಸುತ್ತಿದ್ದ 2 ರೈಫಲ್ಗಳನ್ನು ವಶಕ್ಕೆ ಪಡೆದಿದ್ದಾರೆ.
ಒಂಟಿ ನಳಿಕೆ ರೈಫಲ್ ಹಾಗೂ ಐವತ್ತಕ್ಕೂ ಹೆಚ್ಚು ಜೀವಂತ ಬಳಸಿದ ಗುಂಡು ಪತ್ತೆಯಾಗಿದೆ. ವನ್ಯಜೀವಿ ಹಾಗೂ ಅರಣ್ಯ ಕಾಯ್ದೆಯಡಿ ಮೊಕದ್ದಮೆ ದಾಖಲಿಸಿದ್ದಾರೆ.