ಮೈಕ್ರೋ ಫೈನಾನ್ಸ್ ಸಾಲಕ್ಕೆ ಬಡವರ ಬದುಕು ಬೀದಿಗೆ..!
– ಸಾಲ, ದುಬಾರಿ ಬಡ್ಡಿ ಕೊಡದವರಿಗೆ ನಿತ್ಯವೂ ಟಾರ್ಚರ್
– ಕೋರ್ಟ್ ಆದೇಶ ಪಾಲನೆಗೆ ಡಿಜಿಪಿ ಸೂಚನೆ
– ಸಾಲ ಕಟ್ಟದೆ ಸಿಬಿಲ್ ಕಳೆದುಕೊಂಡ ಲಕ್ಷ ಲಕ್ಷ ಜನ!
NAMMUR EXPRESS NEWS
ಬೆಂಗಳೂರು : ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ಮೈಕ್ರೋ ಫೈನಾನ್ಸ್ ಕಂಪನಿಗಳ ಹಾವಳಿ ಮಿತಿಮೀರಿದೆ. ಯಾವುದೇ ಭದ್ರತೆ ಇಲ್ಲದೆ ಕರೆದು ಕೊಡುವ ಸಾಲಕ್ಕೆ ಕೈಯೊಡ್ಡುವ ಬಡವರು, ಕೂಲಿ ಕಾರ್ಮಿಕರು, ಬಳಿಕ ಅಕ್ರಮ ಬಡ್ಡಿ ದಂಧೆಯ ಕಿರುಕುಳ, ದೌರ್ಜನ್ಯ ಸಹಿಸಲಾಗದೆ ಊರನ್ನೇ ತೊರೆದು ಹೋಗುತ್ತಿರುವ ಪ್ರಕರಣಗಳು ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಿವೆ. ಈ ಬೆಳವಣಿಗೆ ಬೆನ್ನಲ್ಲೇ, ಫೈನಾನ್ಸ್ ಕಂಪನಿಗಳ ದಾಖಲೆ ಪರಿಶೀಲಿಸಿ ಕಾನೂನು ರೀತಿ ಕ್ರಮ ತೆಗೆದುಕೊಳ್ಳುವಂತೆ ರಾಜ್ಯದ ಎಲ್ಲ ಪೊಲೀಸ್ ಠಾಣೆಗಳಿಗೆ ಸೂಚನೆ ಹೋಗಿದೆ. ಜತೆಗೆ ಸಾಲ ಮರುಪಾವತಿಸುವಂತೆ ಕಂಪನಿಗಳ ಪರವಾಗಿ ಜನರ ಮೇಲೆ ಒತ್ತಾಯ ಹೇರಬಾರದೆಂದು ಪೊಲೀಸರಿಗೆ ಖಡಕ್ ಎಚ್ಚರಿಕೆ ಕೂಡ ನೀಡಲಾಗಿದೆ.
ಏನಿದು ಬಡ್ಡಿ ದಂಧೆ?: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಅನುಮತಿ ಇಲ್ಲದೆ ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ಅಕ್ರಮ ಬಡ್ಡಿ ದಂಧೆ ನಡೆಸಲಾಗುತ್ತಿದೆ. ಆರ್ಥಿಕವಾಗಿ ಹಿಂದುಳಿದವರಿಗೆ ನಗದು ರೂಪದಲ್ಲಿ ನೂರಾರು ಕೋಟಿ ಸಾಲವನ್ನು ವಾರ, ತಿಂಗಳು ಲೆಕ್ಕದಲ್ಲಿ ಬಡ್ಡಿಗೆ ಕೊಡಲಾಗಿದೆ. ಕೆಲವೆಡೆ ರಾಷ್ಟ್ರೀಕೃತ ಬ್ಯಾಂಕ್ ಮುಖಾಂತರ ಗ್ರಾಮದ ಅಭಿವೃದ್ಧಿಗೆ ಕಡಿಮೆ ಬಡ್ಡಿ ದರದಲ್ಲಿ ಹಣ ನೀಡಲಾಗುತ್ತಿದೆ ಎಂದು ಸಂಘಗಳನ್ನು ರಚಿಸಿಕೊಂಡು ದಂಧೆ ನಡೆಸಲಾಗುತ್ತಿದೆ. ಪ್ರಶ್ನಿಸಿದರೆ ದಾಂಧಲೆ: ಸರ್ಕಾರದ ಅನುಮತಿ ಹಾಗೂ ಬ್ಯಾಂಕ್ ದಾಖಲೆಗಳ ಕುರಿತು ಪ್ರಶ್ನಿಸಿದವರ ಮೇಲೆ ಫೈನಾನ್ಸ್ ಸಂಸ್ಥೆಗಳ ಸಿಬ್ಬಂದಿ ಅವಾಚ್ಯ ಶಬ್ದಗಳಲ್ಲಿ ನಿಂದಿಸುತ್ತಾರೆ. ಕೆಲವೆಡೆ ಮನೆಗಳಿಗೆ ನುಗ್ಗಿ ದಾಂಧಲೆ ನಡೆಸಿರುವ ಸಂಬಂಧ ಹಲವು ಪೊಲೀಸ್ ಠಾಣೆಗಳಲ್ಲಿ ದೂರುಗಳು ದಾಖಲಾಗಿವೆ. ಆದರೆ, ಪೊಲೀಸರು ದಾಖಲೆ ಪರಿಶೀಲಿಸಿ ಕ್ರಮ ಕೈಗೊಳ್ಳುವ ಬದಲು ಫೈನಾನ್ಸ್ ಸಂಸ್ಥೆಗಳೊಂದಿಗೆ ಕೈಜೋಡಿಸಿರುವ ಆರೋಪ ಕೇಳಿಬಂದಿದೆ. 10 ಲಕ್ಷಕ್ಕೆ 2.5 ಲಕ್ಷ ಬಡ್ಡಿ! ಕೆಲ ಜಿಲ್ಲೆಗಳಲ್ಲಿ ಗೃಹಸಾಲದ ಹೆಸರಲ್ಲೂ ಲೋನ್ ಕೊಡಿಸಿ ಕಿರುಕುಳ ಕೊಡಲಾಗುತ್ತಿದೆ. 10 ಲಕ್ಷ ರೂ. ಸಾಲ ಕೊಡಿಸಿದರೆ ಆರಂಭದಲ್ಲೇ 2.50 ಲಕ್ಷ ರೂ. ಮುರಿದುಕೊಂಡು 7.50 ಲಕ್ಷ ರೂ. ಕೊಡಲಾಗುತ್ತದೆ. ಆದರೆ, ಸಾಲ ಪಡೆದ ವ್ಯಕ್ತಿ ನಿರ್ದಿಷ್ಟ ಸಮಯಕ್ಕೆ ಕಂತುಗಳ ರೂಪದಲ್ಲಿ 10 ಲಕ್ಷ ರೂ. ಮರುಪಾವತಿಸಬೇಕು. ಇಲ್ಲದಿದ್ದರೆ ಕಿರುಕುಳ ನೀಡಲಾಗುತ್ತದೆ. ಏಜೆನ್ಸಿಗಳ ಹೆಸರಲ್ಲಿ ಬ್ಯಾಂಕ್ಗಳಿಂದ ಸಾಲ ಕೊಡಿಸಿ ಕಿರುಕುಳ ನೀಡಲಾಗುತ್ತಿದೆ ಸಾಗುತ್ತಿದೆ ಎಂದು ನೊಂದವರು ಅಳಲು ತೋಡಿಕೊಂಡಿದ್ದಾರೆ. ಚಾಮರಾಜನಗರ, ರಾಮನಗರ, ಕನಕಪುರ, ನಂಜನಗೂಡು ಮತ್ತು ವರುಣಾ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಮೈಕ್ರೋ ಫೈನಾನ್ಸ್ ಕಂಪನಿಗಳ ಕಿರುಕುಳದಿಂದಾಗಿ ಹಲವು ಕುಟುಂಬಗಳು ಊರು ತೊರೆದಿವೆ. ಇನ್ನು ಕಂತು ಕಟ್ಟಲಾಗದೆ ಸಿಬಿಲ್ ಕಳೆದುಕೊಂಡ ಲಕ್ಷ ಲಕ್ಷ ಜನರ ಬದುಕು ಬೀದಿಗೆ ಬಂದು ನಿಂತಿದೆ.