ಇನ್ಮುಂದೆ ತುಳು ರಾಜ್ಯದ 2ನೇ ಅಧಿಕೃತ ಭಾಷೆ?!
– ಕರಾವಳಿಗರ ಬಹುಕಾಲದ ಕನಸಿಗೆ ಮರುಜೀವ
– ತುಳುವರಿಗೆ ಭರವಸೆ ನೀಡಿದ ಸಿಎಂ: ಈಡೇರುತ್ತಾ..?
ಮಂಗಳೂರು: ಪಂಚದ್ರಾವಿಡ ಭಾಷೆಗಳಲ್ಲಿ ಒಂದಾಗಿರುವ ತುಳು ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸುವ ಪ್ರಯತ್ನ ಜಾರಿಯಲ್ಲಿರುವುದಕ್ಕೆ ಪೂರಕವಾಗಿ ಇದನ್ನು ಕರ್ನಾಟಕದ 2ನೇ ಅಧಿಕೃತ ಭಾಷೆಯನ್ನಾಗಿ ಘೋಷಿಸುವ ಬಹುಕಾಲದ ಕನಸಿಗೆ ಮರುಜೀವ ದೊರಕಿದೆ. ಈ ಭಾಷೆಯ ಇತಿಹಾಸ ಏನು? ಸ್ಥಾನಮಾನ ದೊರೆತರೆ ಶಿಕ್ಷಣ, ಆಡಳಿತದಲ್ಲಾಗುವ ಪರಿಣಾಮ ಏನಾಗಿರಬಹುದು. ಮಂಗಳೂರು ಸಮೀಪ ಈಚೆಗೆ ನಡೆದ “ಕಂಬಳ್ಳೋತ್ಸವ’ದಲ್ಲಿ ಭಾಗವಹಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು “ತುಳು ಭಾಷೆಯನ್ನು ರಾಜ್ಯದ 2ನೇ ಅಧಿಕೃತ ಭಾಷೆಯನ್ನಾಗಿ ಮಾಡುವ ಪ್ರಸ್ತಾವವನ್ನು ಸರಕಾರ ಗಂಭೀರವಾಗಿ ಪರಿಗಣಿಸಲಿದೆ’ ಎಂದು ಹೇಳುವ ಮೂಲಕ ಈ ವಿಷಯದ ಕುರಿತಾಗಿನ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ. ಯಾವುದೇ ಭಾಷೆ ಉಳಿಯುವುದು ಬರಹದ ಮೂಲಕ ಅಲ್ಲ. ಅದು ಮಾತನಾಡುವ ಮೂಲಕ. ಆ ನಿಟ್ಟಿನಲ್ಲಿ ತುಳು ಇದೇ ನೆಲೆಯಲ್ಲಿ ಇನ್ನೂ ಉಳಿದುಕೊಂಡಿದೆ, ಬೆಳೆದುಕೊಂಡಿದೆ. ಕರಾವಳಿಯಲ್ಲಿ ಕನ್ನಡ ಪ್ರಧಾನ ಭಾಷೆಯಾಗಿದ್ದರೂ ತುಳು ಸಂಪರ್ಕ ಭಾಷೆಯಾಗಿ ಸಾರ್ವತ್ರಿಕವಾಗಿದೆ. ಈ ಭಾಗಗಳಲ್ಲಿ ಎಲ್ಲರ ವ್ಯಾವಹಾರಿಕ ಭಾಷೆಯಾಗಿ ತುಳು ಬೆಸೆದುಕೊಂಡಿದೆ
– ತುಳುವಿಗೆ ರಾಜ್ಯಭಾಷೆ ಗೌರವ ಪರಿಗಣನೆ; ನರಿಂಗಾನ ಕಂಬಳೋತ್ಸವದಲ್ಲಿ ಸಿಎಂ ಭರವಸೆ
ತುಳುನಾಡಿನಲ್ಲಿ ಕಂಬಳ ಅತ್ಯಂತ ಪುರಾತನ ಹಾಗೂ ಬಹಳ ಜನಪ್ರಿಯ ಕ್ರೀಡೆಯಾಗಿ ಜನಮನಸ್ಸಲ್ಲಿ ನೆಲೆಯೂರಿದೆ. ಇದಕ್ಕೆ ಪೂರಕವಾಗಿ ತುಳು ಭಾಷೆಯನ್ನು ಎರಡನೇ ರಾಜ್ಯ ಭಾಷೆಯನ್ನಾಗಿ ಪರಿಗಣಿಸುವ ಬಗ್ಗೆ ರಾಜ್ಯ ಸರಕಾರ ಗಂಭೀರವಾಗಿ ಪರಿಗಣಿಸಲಿದೆ ಎಂದು ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದ್ದಾರೆ. ವಿಧಾನಸಭೆಯ ಸ್ಪೀಕರ್ ಯು. ಟಿ ಖಾದರ್ ನೇತೃತ್ವದಲ್ಲಿ ಆಯೋ ಜಿಸಲಾದ ಲವ –ಕುಶ ಜೋಡುಕರೆ ನರಿಂಗಾನ ಕಂಬಳೋತ್ಸವದಲ್ಲಿ ಈ ಮಾತನ್ನು ಹೇಳಿದ್ದಾರೆ. ತುಳು ಸ್ಥಾನಮಾನಕ್ಕಾಗಿ ಅನೇಕ ಕರಾವಳಿ ಗಣ್ಯರು, ರಾಜಕಾರಣಿಗಳು, ಭಾಷಾ ತಜ್ಞರು, ಅನೇಕರು ಹೋರಾಟ ಮಾಡುತ್ತಿದ್ದಾರೆ.