ಟಾಪ್ 5 ನ್ಯೂಸ್ ಕರ್ನಾಟಕ
– ಬೆಂಗಳೂರು : ಹೆಲ್ಮೆಟ್ ಧರಿಸಿ 2 ಲಕ್ಷ ಮೌಲ್ಯದ 3 ಹಸುಗಳ ಕಳ್ಳತನ
– ರಾಮನಗರ: ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಮಹಿಳೆ ಆತ್ಮಹತ್ಯೆ
– ಹಾಸನ : ಶಾಲೆಗೆ ಹೋಗಿದ್ದ ಮೂವರು ಮಕ್ಕಳು ನಾಪತ್ತೆ
– ಹುಬ್ಬಳ್ಳಿ : ಮಹಿಳೆ ಜತೆ ಮಾತಾಡಿದ್ದಕ್ಕೆ ಯುವಕನನ್ನ ಬೆತ್ತಲೆ ಮಾಡಿ ಹಲ್ಲೆ
– ಆನೇಕಲ್ : ಮಗುವಿಗೆ ದೃಷ್ಟಿ ತೆಗೆದ ನೀರನ್ನು ರಸ್ತೆಗೆ ಚೆಲ್ಲಿದ್ದಕ್ಕೆ ಗಲಾಟೆ ಆ ಗಲಾಟೆಯಲ್ಲಿ ವ್ಯಕ್ತಿ ಸಾವು
NAMMUR EXPRESS NEWS
ಬೆಂಗಳೂರು: ಇತ್ತೀಚೆಗಷ್ಟೇ ಚಾಮರಾಜಪೇಟೆಯಲ್ಲಿ ಹಸುವಿನ ಕೆಚ್ಚಲು ಕೊಯ್ದು ವಿಕೃತಿ ಮೆರೆದಿದ್ದ ಪ್ರಕರಣ ನಡೆದಿತ್ತು. ಈ ಬೆನ್ನಲ್ಲೇ ಅಮೃತಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹಸುಗಳು ಕಳ್ಳತನವಾಗಿರುವ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಹೆಲ್ಮೆಟ್ ಧರಿಸಿ ಬಂದ ವ್ಯಕ್ತಿಯೊಬ್ಬ 2 ಲಕ್ಷ ರೂ. ಮೌಲ್ಯದ ಮೂರು ಹಸುಗಳನ್ನು ಕಳ್ಳತನ ಮಾಡಿದ್ದಾನೆ. ಕಳ್ಳನ ಕೈಚಳಕದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಜಕ್ಕೂರಿನ ಸರ್ಕಾರಿ ಶಾಲೆಯ ಸಮೀಪ ಖಾಲಿ ಜಾಗದಲ್ಲಿ ಹಸುಗಳನ್ನು ಕಟ್ಟಿಹಾಕಲಾಗಿತ್ತು. ಆದ್ರೆ ಜ.15ರಂದು ಬೆಳಗ್ಗೆ 11 ಗಂಟೆ ಸುಮಾರಿಗೆ ಕಾಣೆಯಾಗಿವೆ. ಮೂರು ದಿನಗಳು ಹುಡುಕಾಟ ನಡೆಸಿದ ಮಾಲೀಕರು ಬಳಿಕ ಅಮೃತಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನ ಅನ್ವಯ ಜ.19ರಂದು ಎಫ್ಐಆರ್ ದಾಖಲಾಗಿದೆ.
– ರಾಮನಗರ: ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಮಹಿಳೆ ಆತ್ಮಹತ್ಯೆ
ರಾಮನಗರ: ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಬೇಸತ್ತು ಮಹಿಳೆ ಆತ್ಮಹತ್ಯೆಗೆ ಶರಣಾಗಿರುವ ಘಟನೆ ತಾಲೂಕಿನ ತಿಮ್ಮಯ್ಯನದೊಡ್ಡಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಯಶೋಧಮ್ಮ (60) ಆತ್ಮಹತ್ಯೆ ಮಾಡಿಕೊಂಡವರು. ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಯಶೋಧಮ್ಮ ಸುಮಾರು 8 ಖಾಸಗಿ ಫೈನಾನ್ಸ್ ಕಂಪನಿಗಳಿಂದ ಲಕ್ಷ ಸಾಲ ಪಡೆದಿದ್ದರು. ಕಳೆದ ಎರಡು ತಿಂಗಳಿನಿಂದ ಅನಾರೋಗ್ಯಕ್ಕೀಡಾದ ಹಿನ್ನೆಲೆ ಸರಿಯಾಗಿ ಕೆಲಸಕ್ಕೆ ಹೋಗದೇ ಸಾಲ ಮರುಪಾವತಿ ಮಾಡಿರಲಿಲ್ಲ. 2 ತಿಂಗಳು ಸಾಲ ಬಾಕಿ 2 ಉಳಿಸಿಕೊಂಡಿದ್ದ ಕಾರಣ ಫೈನಾನ್ಸ್ ಕಂಪನಿಯ ಸಿಬ್ಬಂದಿ ಮನೆ ಬಳಿ ಬಂದು ಗಲಾಟೆ ನಡೆಸಿ ಇನ್ನೆರಡು ದಿನದಲ್ಲಿ ಸಾಲ ಕಟ್ಟದಿದ್ದರೆ ಮನೆ ಜಪ್ತಿ ಮಾಡುವುದಾಗಿ ಬೆದರಿಕೆ ಹಾಕಿದ್ದರು. ಇದರಿಂದ ಬೇಸತ್ತ ಯಶೋಧಮ್ಮ ಮನೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಮೃತ ದೇಹವನ್ನು ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ರವಾನಿಸಿ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ವಾರಸುದಾರರಿಗೆ ಒಪ್ಪಿಸಲಾಯಿತು. ರಾಮನಗರ ಗ್ರಾಮಾಂತರ ಪೊಲೀಸ್ ಠಾಣೇಲಿ ಪ್ರಕರಣ ದಾಖಲಾಗಿದೆ.
– ಹಾಸನ : ಶಾಲೆಗೆ ಹೋಗಿದ್ದ ಮೂವರು ಮಕ್ಕಳು ನಾಪತ್ತೆ
ಹಾಸನ: ಶಾಲೆಗೆ ಹೋಗುವುದಾಗಿ ಹೇಳಿದ್ದ ಮೂವರು ಮಕ್ಕಳು ನಾಪತ್ತೆಯಾದ ಘಟನೆ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಕೊನಿಗಾನಹಳ್ಳಿಯಲ್ಲಿ ನಡೆದಿದೆ. ಗ್ರಾಮದ ಮೂವರು ಮಕ್ಕಳು ನಾಪತ್ತೆಯಾಗಿದ್ದಾರೆ. ಶರತ್(16), ಧನಂಜಯ(16), ಮುರಳಿ(16) ನಾಪತ್ತೆಯಾದ ಮಕ್ಕಳು. ಬುಧವಾರ ಬೆಳಗ್ಗೆ 7.30ಕ್ಕೆ ಮನೆಯಿಂದ ಶಾಲೆಗೆ ಹೋಗಿದ್ದ ಮೂವರು ನಾಪತ್ತೆಯಾಗಿದ್ದಾರೆ. ಪೋಷಕರಲ್ಲಿ ಆತಂಕ ಮೂಡಿದೆ. ಮೂವರು ವಿದ್ಯಾರ್ಥಿಗಳು ಶಾಲೆಗೆ ಗೈರು ಹಾಜರಾಗಿದ್ದ ಹಿನ್ನೆಲೆಯಲ್ಲಿ ಪೋಷಕರಿಗೆ ಕರೆ ಮಾಡಿ ಶಿಕ್ಷಕರು ಮಾಹಿತಿ ನೀಡಿದ್ದಾರೆ. ತಮ್ಮ ಮಕ್ಕಳಿಗಾಗಿ ಪೋಷಕರು ಗ್ರಾಮದಲ್ಲಿ ಹುಡುಕಾಟ ನಡೆಸಿದ್ದು, ರಾತ್ರಿಯಾದರೂ ಮಕ್ಕಳು ಮನೆಗೆ ಬಂದಿಲ್ಲ. ಶರತ್ ಬಳಿ ಇರುವ ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿದ್ದು, ಪೋಷಕರಲ್ಲಿ ಆತಂಕ ಹೆಚ್ಚಿದೆ. ಕೊನಿಗಾನಹಳ್ಳಿ ಗ್ರಾಮದ ಧರ್ಮಪ್ರಕಾಶ್, ಮನು ಹಾಗೂ ಹುಣಸೆ ಗ್ರಾಮದ ಮಹೇಂದ್ರ ಎಂಬುವವರ ಮಕ್ಕಳು ನಾಪತ್ತೆಯಾಗಿದ್ದು, ಸಕಲೇಶಪುರ ಗ್ರಾಮಾಂತರ ಠಾಣೆಗೆ ಪೋಷಕರು ದೂರು ನೀಡಿದ್ದಾರೆ.
– ಹುಬ್ಬಳ್ಳಿ : ಮಹಿಳೆ ಜತೆ ಮಾತಾಡಿದ್ದಕ್ಕೆ ಯುವಕನನ್ನ ಬೆತ್ತಲೆ ಮಾಡಿ ಹಲ್ಲೆ
ಹುಬ್ಬಳ್ಳಿ: ಹುಬ್ಬಳ್ಳಿಯಲ್ಲೊಂದು ಘನಘೋರ ಘಟನೆ ನಡೆದಿದೆ. ವಿವಾಹಿತ ಮಹಿಳೆಗೆ ಜೊತೆ ಮಾತನಾಡಿದ್ದಕ್ಕೆ ಯುವಕನನ್ನು ಬೆತ್ತಲೆ ಮಾಡಿ ಹಲ್ಲೆ ಮಾಡಿರುವ ಘಟನೆ ಹುಬ್ಬಳ್ಳಿಯ ಕಸಬಾಪೇಟೆ ಪೊಲೀಸ್ ಠಾಣೆಯ ಪಕ್ಕದ ಟಿಪ್ಪು ನಗರದಲ್ಲಿ ನಡೆದಿದೆ. ಮುಜಾಫೀರ್ ಎನ್ನುವಾತ ಜನವರಿ 21 ರಂದು ವಿವಾಹಿತ ಮಹಿಳೆ ಜೊತೆ ಮಾತಾಡಿದ್ದ. ಈ ಹಿನ್ನೆಲೆಯಲ್ಲಿ ಮಹಿಳೆಯ ಸಂಬಂಧಿಕರು ಹತ್ತು ಹದಿನೈದು ಜನರ ಗ್ಯಾಂಗ್ ಜ. 22 ಮುಜಾಫೀರ್ ಕೆಲಸ ವೇಳೆ ಹಿಡಿದು ಬೆತ್ತಲ್ಲೇ ಮಾಡಿದ್ದಾರೆ. ಅಲ್ಲದೇ ಬ್ಲೇಡ್ ನಿಂದ ಸಿಕ್ಕ ಸಿಕ್ಕಲ್ಲಿ ಕೊಯ್ದಿದ್ದಾರೆ. ಈ ಪ್ರಕರಣ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆಯೇ ಕಸಬಾಪೇಟೆ ಠಾಣೆ ಪೊಲೀಸರು ಮೂವರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆಗೊಳಪಡಿಸಿದ್ದಾರೆ. ಯುವಕ ಮುಜಾಫೀರ್ ಎನ್ನುವ ಯುವಕ ವಿವಾಹಿತ ಮಹಿಳೆಗೆ ಫೋನ್ ಕರೆ ಮಾಡಿ ಮಾತನಾಡಿದ್ದಾನೆ. ಈ ವಿಚಾರ ಮಹಿಳೆಯ ಸಂಬಂಧಿಕರಿಗೆ ಗೊತ್ತಾಗಿದ್ದು, ಬಳಿಕ ಯುವಕ ಮುಜಾಫೀರ್ನನ್ನು ಅಪಹರಣ ಮಾಡಿ ಬೆತ್ತಲೆಗೊಳಿಸಿ ಹಲ್ಲೆ ಮಾಡಿದ್ದಾರೆ. ಅಲ್ಲದೇ ಅದೇ ಬೆತ್ತಲೆ ಸ್ಥಿತಿಯಲ್ಲಿ ಮುಜಾಫೀರ್ನನ್ನು ಟಿಪ್ಪು ನಗರಕ್ಕೆ ಕರೆತಂದು ಮನೆಗೆ ಹೋಗು ಎಂದು ತಂದು ಬಿಟ್ಟಿದ್ದಾರೆ. ಸದ್ಯ ಗಾಯಗೊಂಡ ಮುಜಾಫೀರ್ ಗೆ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಇದರಿಂದ ಆಕ್ರೋಶಗೊಂಡ ಹಲ್ಲೆಗೊಳಗಾದ ಮುಜಾಫೀರ್ ಸಂಬಂಧಿಕರು, ಏನಾದರೂ ಆಗಿದ್ರೆ ಯಾರೂ ಹೊಣೆ ,ಮೈ ಮೇಲೆ ಬಟ್ಟೆ ಇಲ್ಲದಂತೆ ಬಿಟ್ಟು ಹೋಗಿದ್ದಾರೆ. ನಾವು ಪೊಲೀಸ್ ದೂರು ನೀಡಿದ್ದೇವೆ. ಇಡೀ ಓಣಿಯಲ್ಲಿ ನಾಚಿಕೆ ಬರುವ ತರ ಆಗಿದೆ. ಹೊಡೆದು ಬೆತ್ತಲೆ ಮಾಡಿ ಇಲ್ಲಿ ತಂದು ಬಿಟ್ಟಿದ್ದಾರೆ. ನಮಗೆ ನ್ಯಾಯ ಬೇಕೆಂದು ಹಲ್ಲೆಗೊಳಗಾದ ಸಂಬಂಧಿಕರು ಆಗ್ರಹಿಸಿದ್ದಾರೆ.
– ಆನೇಕಲ್ : ಮಗುವಿಗೆ ದೃಷ್ಟಿ ತೆಗೆದ ನೀರನ್ನು ರಸ್ತೆಗೆ ಚೆಲ್ಲಿದ್ದಕ್ಕೆ ಗಲಾಟೆಯಲ್ಲಿ ವ್ಯಕ್ತಿ ಸಾವು
ಆನೇಕಲ್: ಮಗುವಿಗೆ ದೃಷ್ಟಿ ತೆಗೆದ ನೀರನ್ನು ರಸ್ತೆಗೆ ಚೆಲ್ಲಿದ್ದಕ್ಕೆ ನಡೆದ ಗಲಾಟೆಯಲ್ಲಿ ವ್ಯಕ್ತಿ ಸಾವಿಗೀಡಾಗಿರುವ ಘಟನೆ ಆನೇಕಲ್ನಲ್ಲಿ ನಡೆದಿದೆ. ಈ ಸಂಬಂಧ ಇಬ್ಬರು ಮಹಿಳೆಯರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆನೇಕಲ್ ಸಮೀಪದ ದೊಡ್ಡಹಾಗಡೆ ಗ್ರಾಮದಲ್ಲಿ ಘಟನೆ ನಡೆದಿದ್ದು, ರಾಮಚಂದ್ರಪ್ಪ (45) ಮೃತ ವ್ಯಕ್ತಿ. ಅಕ್ಕಪಕ್ಕದ ನಿವಾಸಿಗಳ ಮಧ್ಯೆ ಗಲಾಟೆ ನಡೆದಿತ್ತು. ಆಸ್ಪತ್ರೆಗೆ ದಾಖಲಾಗಿದ್ದ ರಾಮಚಂದ್ರಪ್ಪ ಸಾವನ್ನಪ್ಪಿದ್ದಾರೆ. ರಾಮಚಂದ್ರಪ್ಪ ಸ್ವಂತ ಟ್ರಾಕ್ಟರ್ ಇಟ್ಟುಕೊಂಡಿದ್ದರು. ಮಗುವಿಗೆ ದೃಷ್ಟಿ ತೆಗೆದ ನೀರನ್ನು ರಸ್ತೆಗೆ ಚೆಲ್ಲಿದ್ದಕ್ಕೆ ಪಕ್ಕದ ಮನೆಯ ನಿವಾಸಿಗಳ ಜೊತೆ ಗಲಾಟೆಯಾಗಿತ್ತು. ಮಹಿಳೆಯರು ಗುಂಪು ಕಟ್ಟಿಕೊಂಡು ರಾಮಚಂದ್ರಪ್ಪ ಮೇಲೆ ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದೆ. ಈ ವೇಳೆ ಹಲ್ಲೆಯಿಂದ ನೆಲಕ್ಕೆ ಉರುಳಿ ಬಿದ್ದಿದ್ದ ರಾಮಚಂದ್ರಪ್ಪ ಕೂಡಲೇ ಆನೇಕಲ್ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೇ ರಾಮಚಂದ್ರಪ್ಪ ಮೃತಪಟ್ಟಿದ್ದಾರೆ. ಹಲ್ಲೆ ನಡೆಸಿದ ಆರೋಪದಲ್ಲಿ ಇಬ್ಬರು ಮಹಿಳೆಯರು ಪೊಲೀಸರ ವಶಕ್ಕೆ ಪಡೆದಿದ್ದಾರೆ.