ಭೂಗರ್ಭದಿಂದ ಜೈನ ವಿಶೇಷ ಕಲಾಕೃತಿಗಳು ಪತ್ತೆ!
– ಹಾಸನ ಜಿಲ್ಲೆ ಅರಕಲಗೂಡು ತಾಲೂಕಲ್ಲಿ ಸಿಕ್ಕ ಅಪರೂಪದ ಕಲಾಕೃತಿ
– ಜೈನರ ಮಹತ್ವದ ಇತಿಹಾಸ ಪತ್ತೆ
NAMMUR EXPRESS NEWS
ಅರಕಲಗೂಡು: ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಕೊಣನೂರು ಹೋಬಳಿಯ ಸುಳುಗೋಡಸೋಮವಾರ ಗ್ರಾಮದ ಜಮೀನಿನಲ್ಲಿ ಉಳುಮೆ ಮಾಡುತ್ತಿದ್ದ ವೇಳೆ ಭೂಗರ್ಭದಿಂದ ಜೈನ ಮತಕ್ಕೆ ಸೇರಿದ ತೀರ್ಥಂಕರರ ಹಾಗೂ ಸ್ಥಂಭದ ಕಲಾಕೃತಿಗಳು ಕಂಡುಬಂದಿವೆ. ಈ ಹಿಂದೆಯೂ ಕೂಡ ಸುಳುಗೋಡು ಸೋಮವಾರ ಗ್ರಾಮದ ಜಮೀನಿನ ಕೆಲವು ಕಡೆಗಳಲ್ಲಿ ಜೈನ ಮತಕ್ಕೆ ಸೇರಿದ ಕಲಾಕೃತಿಗಳು ಕಂಡುಬಂದಿದ್ದವು.ಗ್ರಾಮದಲ್ಲಿ ಕಂಬವನ್ನು ಹೋಲುವ ಶಿಲಾ ಕೆತ್ತನೆ ಪತ್ತೆಯಾಗಿವೆ. ಕಳೆದ ವರ್ಷ ಇದೇ ಗ್ರಾಮದಲ್ಲಿ ಜೈನಬಸದಿ, ಬಳಪದ ಕಲ್ಲಿನ ವಿಗ್ರಹ ಮೂರ್ತಿಗಳು, ಕಲ್ಲಿನ ದೀಪ, ಕೆತ್ತನೆಯ ಕಂಬಗಳು, ನಿಷದಿಗಲ್ಲು ಹಾಗೂ ಶಾಸನ ಕಂಬಗಳು ಮೊದಲಾದ ಶಿಲಾವಶೇಷಗಳು ಪತ್ತೆಯಾಗಿದ್ದವು. ಗ್ರಾಮದ ಹೊಲವೊಂದರಲ್ಲಿ ಉಳುವ ಸಂದರ್ಭ ಈ ಕೆತ್ತನೆ ಇರುವ ಕಂಬದ ಮಾದರಿ ಸಿಕ್ಕಿದ್ದು ಕಳೆದ ವರ್ಷ ಇದೇ ಗ್ರಾಮದ ನಂದಿ ದೇವಾಲಯದ ಪಕ್ಕದಲ್ಲಿರುವ ಹೊಲದಲ್ಲಿ ಜೆಸಿಬಿ ಯಂತ್ರದಿಂದ ನೆಲವನ್ನು ಮಟ್ಟ ಮಾಡುತ್ತಿದ್ದಾಗ ಬಳಪದ ಕಲ್ಲಿನ ಎರಡು ವಿಗ್ರಹ ಮೂರ್ತಿಗಳು ಹಾಗೂ ದೇವಾಲಯಕ್ಕೆ ಸಂಬಂಧಿಸಿದ ಕೆತ್ತನೆಯ ಕಲ್ಲು ಕಂಬಗಳು ದೊರೆತಿವೆ ಹಾಗೂ ಇದೇ ಜಾಗದಲ್ಲಿ ಶಿಲಾ ಶಾಸನ ಕಂಬವೂ ಇದೆ. ಈ ಹಿಂದೆ ಮಹಾವೀರನ ವಿಗ್ರಹ ಕೂಡ ಈ ಗ್ರಾಮದ ಒಂದು ಜಮೀನಿನಲ್ಲಿ ಸಿಕ್ಕಿದ್ದು ಅದನ್ನು ಗ್ರಾಮದ ಯುವಕರು ದೇವಾಲಯದ ಮುಂಭಾಗದಲ್ಲಿ ಇಟ್ಟು ರಕ್ಷಿಸಿದ್ದಾರೆ. ಈ ಗ್ರಾಮದಲ್ಲಿ ಇನ್ನೂ ಹಲವಾರು ಇದೇ ಮಾದರಿಯ ಶಿಲಾವಷೇಶಗಳು ಲಭ್ಯವಿರಬಹುದು ಎಂದು ಗ್ರಾಮಸ್ಥರು ಅಭಿಪ್ರಾಯಪಟ್ಟಿದ್ದಾರೆ. ಈ ಗ್ರಾಮದಲ್ಲಿ ಹೇಮಾವತಿ ಹಿನ್ನೀರಿನಿಂದ ಮುಳುಗಡೆಯಾದ ಪ್ರದೇಶದ ಸುಮಾರು 15 ಗ್ರಾಮಗಳ ಜನರು 1963 ರಿಂದ ಈಚೆಗೆ ಬಂದು ವಾಸವಾಗಿದ್ದಾರೆ. ಹಾಗಾಗಿ ಈ ಗ್ರಾಮಕ್ಕೆ ಸಂಬಂಧಿಸಿದ ಐತಿಹಾಸಿಕ ಸಂಗತಿಗಳ ಬಗ್ಗೆ ನಿಖರ ಮಾಹಿತಿ ಯಾರಿಗೂ ತಿಳಿದಿಲ್ಲ. ಹೀಗಾಗಿ ಇಲ್ಲಿನ ಶಿಲಾವಶೇಷಗಳ ಬಗ್ಗೆ ವಿವರವಾಗಿ ತಿಳಿಯುವ ನಿಟ್ಟಿನಲ್ಲಿ ಸಂಬಂಧಪಟ್ಟ ಇಲಾಖೆಯವರು ಗಮನಹರಿಸಿ ಉತ್ಪನನ ಮಾಡಿ ಇಂತಹ ಜೈನಬಸದಿ, ಬಳಪದ ಕಲ್ಲಿನ ವಿಗ್ರಹ ಮೂರ್ತಿಗಳು, ಕಲ್ಲಿನ ದೀಪ, ಕೆತ್ತನೆಯ ಕಂಬಗಳು, ನಿಷದಿಗಲ್ಲು ಹಾಗೂ ಶಾಸನ ಕಂಬಗಳು ಮೊದಲಾದ ಶಿಲಾವಶೇಷಗಳನ್ನು ಸಂರಕ್ಷಿಸಿ ಒಂದು ರೂಪು ಕೊಡುವ ಅಗತ್ಯವಿದೆ.ಈ ಊರಿಗೆ ತುಂಬಾ ಹತ್ತಿರದ ಶನಿವಾರಸಂತೆಯ ಸಮೀಪದ ಮುಳ್ಳೂರು ಗ್ರಾಮ ಕೊಡಗಿನ ಮತ್ತೊಂದು ‘ಜೈನಕಾಶಿ’ ಎನಿಸಿದೆ. ಇಲ್ಲಿ ಜೈನ ತೀರ್ಥಂಕರರ ಸ್ಮರಣೆಗಾಗಿ ನಿರ್ಮಿಸಿರುವ ತ್ರಿವಳಿ ಜೈನ ಬಸದಿಗಳಿವೆ. ಈ ಬಸದಿಗಳು ಸಾವಿರಾರು ವರ್ಷಗಳ ಇತಿಹಾಸದ ಮೇಲೆ ಬೆಳಕು ಚೆಲ್ಲುತ್ತಿವೆ. ಕೊಡಗಿನ ಮತ್ತೊಂದು ಸುಂದರ ಪ್ರವಾಸಿ ತಾಣವಾಗುವ ಕಾಯಕಲ್ಪಕ್ಕಾಗಿ ಕಾದು ನಿಂತಿವೆ. ಹನಸೋಗೆ ಶಾಸನದಂತೆ ಗಂಗರು- ಚೋಳರ ಯುದ್ಧದಲ್ಲಿ ಜಯಗಳಿಸಿದ ಚೋಳರ ಮಾಂಡಳಿಕರಾಗಿದ್ದ ಕೊಂಗಾಳ್ವರು ಮುಳ್ಳೂರನ್ನು ತಮ್ಮ ರಾಜಧಾನಿಯನ್ನಾಗಿ ಮಾಡಿಕೊಂಡು ಆಡಳಿತ ಎಂದು ಇತಿಹಾಸದಲ್ಲಿ ಉಲ್ಲೇಖವಾಗಿದೆ.