ಕ್ರಿಯೇಟಿವ್ ಕಾಲೇಜಿನಲ್ಲಿ “ಕ್ರಿಯೇಟಿವ್ ಕಲಿಕೆ”!
– ಕೆಸರ್ಡೋಂಜಿ ದಿನ: ಮಣ್ಣಿನೊಂದಿಗೆ ಕಲಿಕಾ ಅನುಭವ
– ಪ್ರಗತಿಪರ ಕೃಷಿಕರಿಗೆ ಸನ್ಮಾನ: ಮಾದರಿಯಾಯ್ತು ಕಾರ್ಯಕ್ರಮ
– ತುಳುನಾಡಿನ 50ಕ್ಕೂ ಅಧಿಕ ವಿಶೇಷ ತಿಂಡಿ ತಿನಿಸು ವಿತರಣೆ
NAMMUR EXPRESS NEWS
ಕಾರ್ಕಳ: ಕ್ರಿಯೇಟಿವ್ ಪಿಯು ಕಾಲೇಜಿನ ವಾಣಿಜ್ಯ ವಿದ್ಯಾರ್ಥಿಗಳಿಗೆ ಹೀರ್ಗಾನ ಗ್ರಾಮದ ಬೆಂಗಾಲ್ ಕೃಷಿ ಭೂಮಿಯಲ್ಲಿ ಕೆಸರ್ಡೊಂಜಿ ದಿನ – ಮಣ್ಣಿನೊಂದಿಗೆ ಕಲಿಕಾ ಅನುಭವ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ವಿದ್ಯಾರ್ಥಿಗಳ ಈ ಕ್ರಿಯೇಟಿವ್ ಕಲಿಕೆ ಗಮನ ಸೆಳೆಯಿತು. ನೇಜಿ ನೆಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಹಿರ್ಗಾನ ಗ್ರಾ. ಪಂ. ಮಾಜಿ ಅಧ್ಯಕ್ಷ ಸಂತೋಷ್ ಶೆಟ್ಟಿ, ಇಂದು ನಮಗೆ ಧನಾರ್ಜನೆಗೆ ಅನೇಕ ಮಾರ್ಗಗಳಿವೆ. ಆದರೆ, ಹೊಟ್ಟೆ ತುಂಬಿಸಲು ರೈತ ಬೆಳೆದ ಬೆಳೆಯೇ ಬೇಕಾಗುತ್ತದೆ. ಆಹಾರದ ಉತ್ಪಾದನೆ ಇಲ್ಲದೇ ಹೋದರೆ ಎಷ್ಟೇ ಹಣವಿದ್ದರೂ ಬದುಕಲು ಅಸಾಧ್ಯ ಆದ್ದರಿಂದ ವಿದ್ಯಾರ್ಥಿಗಳು ಕೃಷಿಯನ್ನು ತುಚ್ಛವಾಗಿ ಕಾಣದೇ ಭೂಮಿತಾಯಿಯ ಸೇವೆ ಎಂದು ಭಾವಿಸುವಂತಾಗಿ, ದೇಶದ ಆರ್ಥಿಕ ಪ್ರಗತಿಯಲ್ಲಿ ಕೃಷಿಯ ಪಾತ್ರ ಮತ್ತಷ್ಟು ಮಹತ್ವತೆ ಪಡೆಯಲಿ ಎಂದರು.
ಹೊತ್ತು ಊಟಕ್ಕೂ ಪರದಾಟ ಎಚ್ಚರ
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಸಹ ಸಂಸ್ಥಾಪಕ ಡಾ. ಗಣನಾಥ ಶೆಟ್ಟಿ ಮಾತನಾಡಿಕೈ ಕೆಸರಾದರೆ ಬಾಯಿ ಮೊಸರು ಎಂಬ ಮಾತಿದೆ. ಆದರೆ ಇಂದು ಆಧುನಿಕತೆಯ ಭರಾಟೆಯಲ್ಲಿ ಪ್ರಸ್ತುತ ಎಲ್ಲರೂ ಕೃಷಿ ಚಟುವಟಿಕೆಯಿಂದ ದೂರವಾಗುತ್ತಿದ್ದೇವೆ. ಇದೇ ಮುಂದುವರಿದಲ್ಲಿ ಮುಂದೊಂದು ದಿನ ಒಂದು ಹೊತ್ತಿನ ಊಟಕ್ಕೂ ಪರದಾಡುವ ಪರಿಸ್ಥಿತಿ ಎದುರಾಗಬಹುದು. ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ಕೃಷಿಯತ್ತ ಯೋಚಿಸಬೇಕಾಗಿದೆ
ಪ್ರಗತಿಪರ ಕೃಷಿಕರಿಗೆ ಸನ್ಮಾನ
ಪ್ರಗತಿಪರ ಕೃಷಿಕರಾದ ವಿಠಲ್ ಕುಲಾಲ್, ಗೋಕುಲ್ ದಾಸ್ ವಾಗ್ಲೆ ಅವರನ್ನು ಇದೇ ಸಂದರ್ಭ ಸನ್ಮಾನಿಸಲಾಯಿತು. ಬಳಿಕ, ತುಳುನಾಡಿನ 50ಕ್ಕೂ ಅಧಿಕ ವಿಶೇಷ ತಿಂಡಿ ತಿನಿಸುಗಳ ವಿತರಿಸಲಾಯಿತು. ಹಳೆಯ ಕಾಲದ ಕೃಷಿ ಉಪಕರಣಗಳ ವಸ್ತು ಪ್ರದರ್ಶನ ಏರ್ಪಡಿಸಲಾಗಿತ್ತು. ವಿದ್ಯಾರ್ಥಿಗಳಿಗೆ ಕೆಸರಿನಲ್ಲಿ ವಿವಿಧ ಆಟೋಟ ಕಾರ್ಯಕ್ರಮಗಳು ನಡೆದವು. ಪ್ರಗತಿಪರ ಕೃಷಿಕ ಜಗದೀಶ್ ಕಡಂಬ, ಉದ್ಯಮಿ ಶ್ರೀಧರ ಆಚಾರ್ಯ ವೇದಿಕೆಯಲ್ಲಿ ಉಪಸ್ಥಿತರಿದದರು. ತ್ರಿಶಾ ಶೆಟ್ಟಿ ಸ್ವಾಗತಿಸಿದರು. ಸಂಸ್ಥಾಪಕ ಅಮೃತ್ ರೈ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಾನ್ವಿ ರಾವ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಸಂಜೆ ನಡೆದ ಸಮಾರೋಪ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಕೆ. ಯೋಗೀಶ್ ಕಿಣಿ, ಕೃಷಿ ಸಂಸ್ಕೃತಿಯೇ ಭಾರತದ ಜೀವಾಳ ಇದನ್ನು ನಾವು ಅರಿತು ಬದುಕಬೇಕಾಗಿದೆ ಎಂದರು. ಪತ್ರಕರ್ತ ರಾಮ್ ಅಜೆಕಾರ್,ಕೃಷಿ ಬದುಕಿನ ಕುರಿತು ಮಾತನಾಡಿದರು.
ಸಂಸ್ಥಾಪಕ ಅಶ್ವತ್ ಎಸ್. ಎಲ್ ಮಾತನಾಡಿ, ವೈಜ್ಞಾನಿಕ ಪ್ರಗತಿಯಷ್ಟೇ, ಕೃಷಿ ಕ್ಷೇತ್ರದಲ್ಲೂ ಆವಿಷ್ಕಾರ ನಡೆದು ಆರೋಗ್ಯಯುತವಾದ ಸಮೃದ್ಧ ಬದುಕು ಎಲ್ಲರಿಗೂ ದೊರೆಯುವಂಯತಾಗಲಿ ಆಶಯ ವ್ಯಕ್ತಪಡಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿದ್ವಾನ್ ಗಣಪತಿ ಭಟ್ ಮಾತನಾಡಿ, ಕೃಷಿ ಚಟುವಟಿಕೆಯಲ್ಲಿತೊಡಗಿಸಿಕೊಂಡವರಿಗೆ ಬಡತನವಿಲ್ಲ, ಪ್ರತಿ ಅನ್ನದ ಅಗುಳಿನ ಮೇಲೆ ಅತೀವ ಗೌರವವಿರಲಿ ಎಂದು ಕಿವಿಮಾತು ಹೇಳಿದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಉಪನ್ಯಾಸಕ ವಿನಾಯಕ ಜೋಗ್ ಪ್ರಶಸ್ತಿ ವಿಜೇತ ವಿದ್ಯಾರ್ಥಿಗಳ ಪಟ್ಟಿ ವಾಚಿಸಿದರು. ಸಂಸ್ಥಾಪಕರಾದ ಆದರ್ಶ ಎಂ.ಕೆ, ಅಮೃತ್ ರೈ ವೇದಿಕೆಯಲ್ಲಿ ಉಪಸ್ಥಿತರಿದ್ದರು. ರಾಘವೇಂದ್ರ ರಾವ್ ಸ್ವಾಗತಿಸಿ, ಉಮೇಶ್ ಕಾರ್ಯಕ್ರಮ ನಿರೂಪಿಸಿದರು. ಚಂದ್ರಕಾಂತ ಆಚಾರ್ಯ ವಂದಿಸಿದರು.