ಪುನೀತ್ ಜನ್ಮದಿನ ಇನ್ನು ಮುಂದೆ ಸ್ಪೂರ್ತಿ ದಿನ!
- ರಾಜ್ಯ ಸರ್ಕಾರದ ಮಹತ್ವದ ನಿರ್ಧಾರ
- ಕರ್ನಾಟಕ ರತ್ನ ಪ್ರಶಸ್ತಿ ನೀಡಿಯೂ ಗೌರವ
- ಯುವ ಜನತೆಗೆ ಮಾದರಿಯಾದ ಪುನೀತ್!
NAMMUR EXPRESS NEWS
ಬೆಂಗಳೂರು: ಕನ್ನಡ ಖ್ಯಾತ ನಟ, ಮಾನವೀಯತೆಯ ಇನ್ನೊಂದು ಮುಖ, ಪುನೀತ್ ರಾಜ್ಕುಮಾರ್ ನಮ್ಮನಗಲಿ ಒಂದು ವರ್ಷ ಕಳೆಯಲು ಇನ್ನೇನು ಒಂದು ತಿಂಗಳು ಮಾತ್ರ ಬಾಕಿ ಉಳಿದಿದೆ. ಅವರ ನೆನಪು ಇನ್ನು ಜನ ಮಾನಸದಲ್ಲಿ ಮಾಸಿಲ್ಲ.
ರಾಜ್ಯ ಸರ್ಕಾರ ಈಗಾಗಲೇ ಪುನೀತ್ ರಾಜ್ಕುಮಾರ್ ಮರಣೋತ್ತರ ಕರ್ನಾಟಕ ರತ್ನವನ್ನು ನೀಡಿ ಗೌರವಿಸಿದೆ. ಇದರ ಜೊತೆಯಲ್ಲಿ ಇದೀಗ ಪುನೀತ್ ಗೌರವಾರ್ಥ ಮತ್ತೊಂದು ಕಾರ್ಯಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ. ಈ ವಿಚಾರವಾಗಿ ಬೆಂಗಳೂರಿನ ಚೌಡಯ್ಯ ಸ್ಮಾರಕ ಸಭಾಭವನದಲ್ಲಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಮಾರ್ಚ್ 17ರಂದು ಪುನೀತ್ ರಾಜ್ ಕುಮಾರ್ ಜನ್ಮದಿನವನ್ನು ಸ್ಪೂರ್ತಿ ದಿನವನ್ನಾಗಿ ಸರ್ಕಾರದ ವತಿಯಿಂದ ಆಚರಿಸುವುದಾಗಿ ಹೇಳಿದ್ದಾರೆ.
ಬ್ರಹ್ಮರ್ಷಿ ನಾರಾಯಣ ಗುರು ಜಯಂತಿ ಕಾರ್ಯಕ್ರಮದ ಅಂಗವಾಗಿ ಬೆಂಗಳೂರಿನ ಚೌಡಯ್ಯ ಸ್ಮಾರಕ ಸಭಾಭವನಕ್ಕೆ ಆಗಮಿಸಿದ್ದ ಸಿಎಂ ಬಸವರಾಜ ಬೊಮ್ಮಾಯಿ ಈ ನಿರ್ಧಾರವನ್ನು ಘೋಷಿಸಿದ್ದಾರೆ. ಪುನೀತ್ ರಾಜ್ಕುಮಾರ್ ಜನ್ಮದಿನವನ್ನು ಸ್ಪೂರ್ತಿ ದಿನವನ್ನಾಗಿ ಆಚರಿಸಲು ಸಾಕಷ್ಟು ಮನವಿ ಕೇಳಿ ಬಂದ ಹಿನ್ನೆಲೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಈ ನಿರ್ಧಾರ ಘೋಷಿಸಿದ್ದಾರೆ.
ಸಿಎಂ ಹೇಳಿದ್ದೇನು?: ಸಿಎಂ ಬಸವರಾಜ ಬೊಮ್ಮಾಯಿ, ಪುನೀತ್ ರಾಜ್ ಕುಮಾರ್ ನನಗೆ ವೈಯಕ್ತಿಕವಾಗಿ ಅತ್ಯಂತ ಪ್ರೀತಿಪಾತ್ರರಾಗಿದ್ದ ವ್ಯಕ್ತಿ. ನಾಡಿನ ಯುವಕರಿಗೆ ಅವರೊಂದು ಸ್ಪೂರ್ತಿ. ಅವರ ಅಕಾಲಿಕ ನಿಧನವು ಕರ್ನಾಟಕಕ್ಕೆ ತುಂಬಲಾರದ ಒಂದು ನಷ್ಟವಾಗಿದೆ. ತಮ್ಮ ಜೀವನದುದ್ದಕ್ಕೂ ಯುವಕರಿಗೆ ಸ್ಫೂರ್ತಿ ನೀಡಿರುವ ಪುನೀತ್ ರಾಜ್ಕುಮಾರ್ ಜನ್ಮದಿನವನ್ನು ಸ್ಪೂರ್ತಿ ದಿನ ಎಂದು ಸರ್ಕಾರ ಆಚರಿಸಲಿದೆ ಎಂದು ಹೇಳಿದ್ದಾರೆ.
ಪುನೀತ್ ರಾಜಕುಮಾರ್ ಈಡಿಗ ಸಮುದಾಯದ ಮೇರು ಪ್ರತಿಭೆ. ಈಡಿಗ- ಬಿಲ್ಲವ ಸಮುದಾಯದ ವಿದ್ಯಾರ್ಥಿಗಳ ಶೈಕ್ಷಣಿಕ ಹಾಗೂ ಇನ್ನಿತರ ಅಭಿವೃದ್ಧಿಗೆ ಪ್ರತ್ಯೇಕ ನಿಧಿಯನ್ನು ಪ್ರಾರಂಭಿಸುತ್ತೇವೆ. ಬೆಂಗಳೂರಿನಲ್ಲಿ ನಾರಾಯಣ ಗುರು ಹೆಸರಿನಲ್ಲಿ ಸಭಾಭವನ ನಿರ್ಮಿಸಲು ಐದು ಕೋಟಿ ರೂಪಾಯಿಗಳನ್ನು ಶೀಘ್ರದಲ್ಲಿಯೇ ಮಂಜೂರು ಮಾಡುತ್ತೇವೆ ಎಂದು ಹೇಳಿದರು .