- ಸಿಎಂ, ಯಡಿಯೂರಪ್ಪ ಗಣ್ಯರಿಂದ ಅಂತಿಮ ನಮನ
- ಉತ್ತರ ಕರ್ನಾಟಕದ ರಾಜಕೀಯ ಕೊಂಡಿ ಕಳಚಿತು
- ತಂದೆಯ ಉತ್ತರಾಧಿಕಾರಿಯಾಗಿ ಪುತ್ರ ನಿಖಿಲ್ ಕತ್ತಿ?
NAMMUR EXPRESS NEWS
ಬೆಳಗಾವಿ: ಹೃದಯಾಘಾತದಿಂದ ಬುಧವಾರ ನಿಧನರಾಗಿರುವ ಸಚಿವ ಉಮೇಶ್ ಕತ್ತಿ ಅವರ ಅಂತಿಮ ಸಂಸ್ಕಾರ ಅವರ ತಂದೆಯ ಸಮಾಧಿ ಸಮೀಪವೇ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲ್ಲೂಕಿನ ಬೆಲ್ಲದ ಬಾಗೇವಾಡಿ ಗ್ರಾಮ ವಿಶ್ವರಾಜ ಸಕ್ಕರೆ ಕಾರ್ಖಾನೆ ಆವರಣದಲ್ಲಿ ಸಕಲ ಸರ್ಕಾರಿ ಗೌರವದೊಂದಿಗೆ ನಡೆಯಿತು.
ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಬಾಗೇವಾಡಿಯ ಶಿವಾನಂದ ಸ್ವಾಮೀಜಿ ಸಾನ್ನಿಧ್ಯದಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು.
ಕತ್ತಿ ಮನೆತನದ ಸ್ವಂತ ಜಮೀನಿನಲ್ಲಿ ವೀರಶೈವ ಲಿಂಗಾಯತ ಸಮುದಾಯದ ವಿಧಿ-ವಿಧಾನಗಳ ಪ್ರಕಾರ ಅಂತ್ಯಕ್ರಿಯೆ ನಡೆಯಿತು. ಕಲ್ಕೂರ ರಸ್ತೆಗೆ ಹೊಂದಿಕೊಂಡಿರುವ ಉಮೇಶ ಕತ್ತಿ ಅವರ ತೋಟದಲ್ಲಿ, ಅವರ ತಂದೆ-ತಾಯಿಯವರ ಸಮಾಧಿ ಸಮೀಪವೇ ಅಂತಿಮ ಸಂಸ್ಕಾರ ನೆರವೇರಿತು. ಪುತ್ರ ನಿಖಿಲ್ ವಿಧಿ-ವಿಧಾನಗಳನ್ನು ನೆರವೇರಿಸಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಗೃಹ ಸಚಿವ ಆರಗ ಜ್ಞಾನೇಂದ್ರ, ಸಚಿವರಾದ ಆರ್. ಅಶೋಕ, ಕೋಟ ಶ್ರೀನಿವಾಸ ಪೂಜಾರಿ, ಗೋವಿಂದ ಕಾರಜೋಳ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ, ಶಾಸಕರಾದ ಶ್ರೀಮಂತ ಪಾಟೀಲ, ರಮೇಶ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ, ಅಭಯ ಪಾಟೀಲ, ಮಹೇಶ ಕುಮಟಳ್ಳಿ, ಮಹಾದೇವಪ್ಪ ಯಾದವಾಡ ಇತರರು ಅಂತಿಮ ನಮನ ಸಲ್ಲಿಸಿದರು.
ಉಮೇಶ್ ಕತ್ತಿ ನಿಧನದ ಬಳಿಕ ಹುಕ್ಕೇರಿ ಕ್ಷೇತ್ರದಿಂದ ಅವರ ಪುತ್ರ ನಿಖಿಲ್ ಸ್ಪರ್ಧೆ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ಬಗ್ಗೆ ಈಗ ಚರ್ಚೆ ಕೂಡ ನಡೆಯುತ್ತಿದೆ.