ಚಿಕ್ಕಮಗಳೂರು ಟಾಪ್ ನ್ಯೂಸ್..!!
– ಚಾರ್ಮಾಡಿ ಘಾಟ್ ವ್ಯಾಪ್ತಿಯಲ್ಲಿ ಕಾಡ್ಗಿಚ್ಚು
– ಅಪ್ಪನ ಸಾವಿನ ಸುದ್ದಿ ಮುಚ್ಚಿಟ್ಟು ಮಗಳ ಮದುವೆ
NAMMUR EXPRESS NEWS
ಚಾರ್ಮಾಡಿ ಘಾಟ್ ವ್ಯಾಪ್ತಿಯಲ್ಲಿ ಕಾಡ್ಗಿಚ್ಚು – ಜೀವ ಭಯದಲ್ಲಿ ಪ್ರಾಣಿಗಳು
ಕೊಟ್ಟಿಗೆಹಾರ: ಚಾರ್ಮಾಡಿ ಘಾಟ್ ವ್ಯಾಪ್ತಿಯ ಬಾಳೂರು ಮೀಸಲು ಅರಣ್ಯದಲ್ಲಿ ಸೋಮವಾರ ರಾತ್ರಿ ಕಾಡ್ಗಿಚ್ಚು ಉಂಟಾಗಿದ್ದು ನೂರಾರು ಎಕರೆ ಅರಣ್ಯ ಬೆಂಕಿಗೆ ಆಹುತಿಯಾಗಿದೆ. ಬಾಳೂರು ಮೀಸಲು ಅರಣ್ಯಕ್ಕೆ ಹೊಂದಿಕೊಂಡಿರುವ ಬಿದಿರುತಳ ಗ್ರಾಮದ ಅರಣ್ಯದಲ್ಲಿ ಕಾಡ್ಗಿಚ್ಚು ಕಾಣಿಸಿಕೊಂಡಿದ್ದು ನೂರಾರು ಎಕರೆ ಅರಣ್ಯ ನಾಶವಾಗಿರುವ ಬಗ್ಗೆ ಮಾಹಿತಿ ಲಭಿಸಿದೆ. ಕಿಡಿಗೇಡಿಗಳು ಅರಣ್ಯಕ್ಕೆ ಬೆಂಕಿ ಹಾಕಿದ್ದಾರೆ ಎಂಬ ಅನುಮಾನ ಮೂಡಿದೆ. ಕಾಡು ಪ್ರಾಣಿಗಳು ಹಾಗೂ ಸೂಕ್ಷ್ಮ ಪ್ರಭೇದದ ನೂರಾರು ಜಾತಿಯ ಪ್ರಾಣಿ ಪಕ್ಷಿಗಳ ಜೀವಕ್ಕೆ ಹಾನಿಯಾಗಿದೆ. ಬಿದಿರುತಳ ಗ್ರಾಮಕ್ಕೆ ರಸ್ತೆ ವ್ಯವಸ್ಥೆ ಇಲ್ಲದೆ ಕಾಡ್ಗಿಚ್ಚು ನಂದಿಸುವುದು ಅರಣ್ಯ ಇಲಾಖೆ ಸಿಬ್ಬಂದಿಗಳಿಗೆ ಸವಾಲಿನ ಕಾರ್ಯವಾಗಿದೆ.
ಅಪ್ಪನ ಸಾವಿನ ಸುದ್ದಿ ಮುಚ್ಚಿಟ್ಟು ಮಗಳ ಮದುವೆ..!??
ಮಗಳ ಮದುವೆಯ ಸಂಭ್ರಮದಲ್ಲಿದ್ದ ತಂದೆಯೊಬ್ಬರು ಅಪಘಾತದಲ್ಲಿ ಸಾವನ್ನಪ್ಪಿದ್ದು ಆದರೆ ಮದುವೆಯ ಬಳಿಕ ತಂದೆಯ ಸಾವಿನ ಸುದ್ದಿ ಕುಟುಂಬಸ್ಥರಿಗೆ ತಿಳಿಸಲಾಗಿದೆ.
ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ಪಟ್ಟಣದಲ್ಲಿ ಆಪ್ತಮಿತ್ರನಿಗೆ ಮಗಳ ಮದುವೆಯ ಲಗ್ನಪತ್ರಿಕೆ ಕೊಡಲು ಹೋದ ತಂದೆ ಮಾರ್ಗ ಮಧ್ಯೆ ಅಪಘಾತದಿಂದ ಸಾವನ್ನಪ್ಪಿದ್ದರು, ವಿಷಯವೇ ಗೊತ್ತಿಲ್ಲದ ಮಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟ ಹೃದಯವಿದ್ರಾವಕ ಘಟನೆ ನಡೆದಿದೆ. ನಿನ್ನೆ ಹಾಗೂ ಇವತ್ತು ತರೀಕೆರೆ ಪಟ್ಟಣದ ನಾಗಪ್ಪ ಕಾಲೋನಿ ನಿವಾಸಿ ಚಂದ್ರು ಎಂಬವರ ಮಗಳ ಮದುವೆ ನಿಶ್ಚಯವಾಗಿತ್ತು. ಮಗಳು ಎಂದು ಚಂದ್ರು ಅದ್ಧೂರಿಯಾಗಿ ಮದುವೆಗೆ ತಯಾರಿ ಮಾಡಿದ್ದರು. ಆದರೆ, ಮಗಳ ಆರತಕ್ಷತೆಯ ದಿನ ಆತ್ಮೀಯ ಸ್ನೇಹಿತರೊಬ್ಬರಿಗೆ ಲಗ್ನಪತ್ರಿಕೆ ಕೊಟ್ಟಿಲ್ಲ ಎಂದು ತರೀಕೆರೆ ತಾಲೂಕಿನ ಹುಲಿತಿಮ್ಮಾಪುರಕ್ಕೆ ಹೋಗಿ ಪತ್ರಿಕೆ ಕೊಟ್ಟು ಬರುವ ವೇಳೆ ಮಾರ್ಗ ಮಧ್ಯೆ ಬೈಕ್ ಅಪಘಾತವಾಗಿತ್ತು. ಗಂಭೀರವಾಗಿ ಗಾಯವಾಗಿದ್ದ ಚಂದ್ರುರನ್ನ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಚಂದ್ರು ಭಾನುವಾರ ಮಧ್ಯಾಹ್ನನವೇ ಮರಣ ಹೊಂದಿದ್ದರು. ವಿಷಯ ಮನೆಯವರಿಗೆ ತಿಳಿದರೆ ಮದುವೆ ನಿಲ್ಲುತ್ತೆ ಎಂದು ಕುಟುಂಬಸ್ಥರು ವಿಷಯವನ್ನ ಮೃತ ಚಂದ್ರು ಪತ್ನಿ ಹಾಗೂ ಮಗಳು ದೀಕ್ಷಾಗೆ ಹೇಳಲೇ ಇಲ್ಲ. ಅಪಘಾತವಾಗಿದೆ ಆಸ್ಪತ್ರೆಯಲ್ಲಿದ್ದಾರೆ ಎಂದು ಹೇಳಿ ಭಾನುವಾರ ಸಂಜೆ ಆರತಕ್ಷತೆ ಮುಗಿಸಿ, ಇಂದು ಬೆಳಗ್ಗೆ ಮುಹೂರ್ತವನ್ನೂ ಮುಗಿಸಿದ್ದಾರೆ. ಮುಹೂರ್ತ ಮುಗಿದ ಬಳಿಕ ವಿಷಯವನ್ನ ಮನೆಯವರಿಗೆ ತಿಳಿಸಲಾಗಿದೆ. ವಿಷಯ ಕೇಳಿ ಮೃತನ ಪತ್ನಿ ಹಾಗೂ ಮಗಳಿಗೆ ಬರಸಿಡಿಲು ಬಡಿದಂತಾಗಿ ಕುಟುಂಬಸ್ಥರ ನೋವಿನ ಆಕ್ರಂದನ ಮುಗಿಲುಮುಟ್ಟಿದೆ.