ಅಯೋಧ್ಯೆ ಪ್ರಭು ಶ್ರೀರಾಮನಿಗೂ ಕಿಗ್ಗಾ ಋಷ್ಯಶೃಂಗೇಶ್ವರನಿಗೂ ಇರುವ ಸಂಬಂಧವೇನು..!!?
– ಋಷ್ಯಶೃಂಗೇಶ್ವರರ ಅವತಾರ ಹೇಗಾಯ್ತು
– ನರಸಿಂಹ ಪರ್ವತಕ್ಕೆ ಯಾಕೆ ನಾಮ ಜಪ ಯಾತ್ರೆ,ಪರ್ವತದ ವಿಶೇಷವೇನು
NAMMUR EXPRESS NEWS
ಶೃಂಗೇರಿ: ಆಯೋಧ್ಯೆ ರಾಮ ಮಂದಿರ ಲೋಕಾರ್ಪಣೆ ದಿನದಂದೇ ಕಿಗ್ಗಾ ಋಷ್ಯಶೃಂಗೇಶ್ವರನನ್ನು ನೆನೆದು,ಪೂಜಿಸಲು ಕಾರಣವೇನು..!? ಋಷ್ಯಶೃಂಗರಿಗೂ ಅಯೋಧ್ಯೆ ಶ್ರೀರಾಮನಿಗೂ ಏನು ಸಂಬಂಧ.!!? ನರಸಿಂಹ ಪರ್ವತಕ್ಕೆ ಏಕೆ ಪಾದಯಾತ್ರೆ..!?? ಇಲ್ಲಿದೆ ಇವೆಲ್ಲಾ ಕುತೂಹಲಕ್ಕೂ,ಪ್ರಶ್ನೆಗಳಿಗೂ ಉತ್ತರ..!! ಕೋಟಿ ಕೋಟಿ ಹಿಂದೂಗಳ ಸುಮಾರು 5 ಶತಮಾನದ ಕನಸು,ಹೋರಾಟ ರಾಮ ಮಂದಿರ,ಅದೆಷ್ಟೋ ತ್ಯಾಗ ಬಲಿದಾನಗಳ ಪ್ರತೀಕ ಐತಿಹಾಸಿಕ ರಾಮಜನ್ಮ ಭೂಮಿ ರಾಮ ಮಂದಿರ. ಉತ್ತರ ಪ್ರದೇಶದ ಶ್ರೀರಾಮನಿಗೂ ಕರ್ನಾಟಕಕ್ಕೂ ಅಯೋಧ್ಯೆ ಶ್ರೀರಾಮನಿಗೂ ಹಲವು ವಿಷಯಗಳಲ್ಲಿ ಸಂಬಂಧವಿದೆ ಹಾಗೆಯೇ ರಾಮನಿಗೂ ಮಲೆನಾಡಿನ ಕಿಗ್ಗಾದಲ್ಲಿರುವ ಋಷ್ಯಶೃಂಗೇಶ್ವರನಿಗೂ ಇಲ್ಲಿ ನರಸಿಂಹ ಪರ್ವತಕ್ಕೆ ಹಮ್ಮಿಕೊಂಡಿರುವ ಪಾದಯಾತ್ರೆಗೂ ಬಹಳ ಪ್ರಮುಖವಾದ ಸಂಬಂಧವಿದೆ. ಪ್ರಭು ಶ್ರೀರಾಮನ ಜನನಕ್ಕೆ ಕಾರಣರೇ ಋಷ್ಯಶೃಂಗ ಮಹಾಮುನಿಗಳು.
ಹೇಗಾಯ್ತು ಋಷ್ಯಶೃಂಗರ ಜನನ..!!?
ವಿಭಾಂಡಕರ ಘೋರ ತಪಸ್ಸಿನಿಂದ ದೇವಾನುದೇವತೆಗಳು ವಿಚಲಿತರಾಗಿರುತ್ತಾರೆ. ಆಗ ಅವರು ಅಪ್ಸರೆಯರ ಮೂಲಕ ವಿಭಾಂಡಕರ ತಪಸ್ಸನ್ನು ಭಗ್ನಗೊಳಿಸುವಲ್ಲಿ ಯಶಸ್ವಿಯಾಗುತ್ತಾರೆ. ಪರಿಣಾಮವಾಗಿ ವಿಭಾಂಡಕರ ರೇತಸ್ಸನ್ನು ತುಂಗಾನದಿಯ ನೀರಿನಲ್ಲಿ ಸೇವಿಸಿದ ಜಿಂಕೆಯು ಗರ್ಭಧರಿಸುತ್ತದೆ. ಆ ಜಿಂಕೆಯು ಶೃಂಗ(ಕೊಂಬು) ಇರುವ ಗಂಡು ಮಗುವಿಗೆ ಜನ್ಮ ನೀಡುತ್ತದೆ. ಅದನ್ನು ಗಮನಿಸಿದ ವಿಭಾಂಡಕರು ತಮ್ಮ ತ್ರಿಕಾಲ ಜ್ಞಾನದಿಂದ ಮಗುವಿನ ವೃತ್ತಾಂತವನ್ನು ಗ್ರಹಿಸಿ, ಅದು ತಮ್ಮ ಕರುಳಿನ ಕುಡಿಯೆಂದು ಅರಿತು ಮಗುವನ್ನು ತಮ್ಮೊಂದಿಗೆ ಕೊಂಡೊಯ್ದು ಸಲಹುತ್ತಾರೆ.
ಅಂಗದೇಶದಲ್ಲಿ ಮಳೆ ಸುರಿಸಿದ ಋಷ್ಯಶೃಂಗರು..!!?
ಅಂಗ ದೇಶವು 12 ವರ್ಷಗಳ ಭೀಕರ ಬರಗಾಲದಿಂದ ನರಳುತ್ತಿತ್ತು. ಆಗ ನಾರದರ ಸಲಹೆಯಂತೆ ಶೃಂಗಗಿರಿಯ ನೈಷ್ಠಿಕ ಬ್ರಹ್ಮಚಾರಿ ಋಷ್ಯಶೃಂಗರನ್ನು ಗಣಿಕಾಸ್ತ್ರೀಯರ ಮೂಲಕ ಅಂಗದೇಶದ ದೊರೆ ರೋಮಪಾದನು ಬರಮಾಡಿಕೊಳ್ಳುತ್ತಾನೆ. ಋಷ್ಯಶೃಂಗರ ಪಾದಸ್ಪರ್ಶದಿಂದ ಅಂಗದೇಶದಲ್ಲಿ ಧಾರಾಕಾರ ಮಳೆ ಸುರಿದು ಭೀಕರ ಬರಗಾಲ ಅಂತ್ಯಗೊಂಡು ಸುಭಿಕ್ಷವಾಗುತ್ತದೆ.
ಋಷ್ಯಶೃಂಗ-ಶಾಂತಾ ಕಲ್ಯಾಣವಾದದ್ದು ಹೇಗೆ..!!??
ನಾರದ ಮಹಾಮುನಿಗಳ ಸಲಹೆಯಂತೆ ರೋಮಪಾದನು ತನ್ನ ದತ್ತುಪುತ್ರಿ, ದಶರಥ ಮಹಾರಾಜನ ಮಗಳಾದ ಶಾಂತಾಳನ್ನು ಋಷ್ಯಶೃಂಗರಿಗೆ ಕೊಟ್ಟು ವಿವಾಹ ಮಾಡುತ್ತಾನೆ.
ಪುತ್ರಕಾಮೇಷ್ಠಿ ಯಾಗ, ಶ್ರೀರಾಮನ ಜನನಕ್ಕೆ ಕಾರಣರಾದ ಋಷ್ಯಶೃಂಗರು..!!??
ಪುತ್ರ ಸಂತಾನವಿಲ್ಲದ ಅಯೋಧ್ಯೆಯ ದಶರಥ ಮಹಾರಾಜನು ಮಂತ್ರಿ ಸುಮಂತನ ಸಲಹೆಯಂತೆ ಋಷ್ಯಶೃಂಗರನ್ನು ತನ್ನ ದೇಶಕ್ಕೆ ಬರಮಾಡಿಕೊಂಡು ಅವರಿಂದ ಪುತ್ರಕಾಮೇಷ್ಟಿಯಾಗವನ್ನು ಮಾಡಿಸುತ್ತಾನೆ. ಯಾಗದಿಂದ ಪ್ರಾಪ್ತವಾದ ಪಾಯಸವನ್ನು ಸೇವಿಸಿದ ಪರಿಣಾಮವಾಗಿ ಕೌಸಲೈಗೆ ರಾಮ, ಕೈಕೆಗೆ ಭರತ, ಸುಮಿತ್ರೆಗೆ ಲಕ್ಷ್ಮಣ ಮತ್ತು ಶತೃಘ್ನರ ಜನನವಾಗಿ ಲೋಕ ಕಲ್ಯಾಣಕ್ಕೆ ನಾಂದಿಯಾಗುತ್ತದೆ.
ಶಾಂತಾಸಮೇತ ಋಷ್ಯಶೃಂಗರಲ್ಲಿ ಚಂದ್ರಮೌಳೇಶ್ವರರು ಐಕ್ಯರಾಗಿದ್ದು..!!??
ಶೃಂಗಗಿರಿ ಶ್ರೀ ಮಲಹಾನಿಕರೇಶ್ವರರಲ್ಲಿ ವಿಭಾಂಡಕರು ಐಕ್ಯರಾದ ಸನ್ನಿಧಿಯಲ್ಲಿ ಆದ ದೇವವಾಣಿಯ ಆದೇಶದಂತೆ ಸಹ್ಯಾದ್ರಿ ಪರ್ವತಶ್ರೇಣಿಯ ಪಶ್ಚಿಮ ದಿಕ್ಕಿನಲ್ಲಿ ಬರುವ ನೃಸಿಂಹ ಪರ್ವತದಲ್ಲಿ ತಪಸ್ಸುಗೈದಾಗ ಅವರ ತಪಸ್ಸಿಗೆ ಮೆಚ್ಚಿ ನೃಸಿಂಹ ಸ್ವಾಮಿಯು ನೀಡಿದ ಮಂತ್ರೋಪದೇಶದಂತೆ ಪರ್ವತದ ತಪ್ಪಲಿನಲ್ಲಿರುವ ಚಂದ್ರಮೌಳೇಶ್ವರಸ್ವಾಮಿಯ ಸನ್ನಿಧಿಗೆ ಬಂದು ತಪಸ್ಸನ್ನಾಚರಿಸುತ್ತಾರೆ. ನಿರೀಕ್ಷೆಗೂ ಮೊದಲು ಭಗವಂತ ಪ್ರತ್ಯಕ್ಷನಾದಾಗ ಸಂತೋಷದ ಭರದಲ್ಲಿ ‘ನಾನು ನಿನ್ನಲ್ಲಿ ಐಕ್ಯವಾಗಬೇಕು’ ಎನ್ನುವ ಬದಲಾಗಿ ‘ನೀನು ನನ್ನಲ್ಲಿ ಐಕ್ಯನಾಗು’ ಎಂದು ವರ ಬೇಡುತ್ತಾರೆ. ಮಾತಿನ ವ್ಯತ್ಯಾಸದ ‘ಕಗ್ಗ’ ದಿಂದ ಕಾಲಕ್ರಮೇಣ ಈ ಪ್ರದೇಶವು ‘ಕಿಗ್ಗ’, ಋಷ್ಯಶೃಂಗಪುರ ಎಂದು ಹೆಸರುವಾಸಿಯಾಗಿದೆ. ಭಕ್ತಾದಿಗಳು ಸುವೃಷ್ಟಿ ಪ್ರಾಪ್ತಿ (ಮಳೆಗಾಗಿ) ಹಾಗೂ ಸತ್ಸಂತಾನ ಪ್ರಾಪ್ತಿಗಾಗಿ ಋಷ್ಯಶೃಂಗೇಶ್ವರ ಸ್ವಾಮಿಯಲ್ಲೂ, ವಿವಾಹ ಭಾಗ್ಯಕ್ಕಾಗಿ ಶಾಂತಾಮ್ಮನವರಲ್ಲಿಯೂ ಪ್ರಾರ್ಥನೆ-ಹರಕೆ ಸಲ್ಲಿಸುತ್ತಲಿದ್ದಾರೆ.
ಭಕ್ತರಿಂದ ಸಮರ್ಪಿಸಲಾದ ಬಸವ ಸ್ಟೇಚ್ಛಚಾರವಾಗಿ ತಿರುಗಲಾಗುತ್ತಿದ್ದು ನರಸಿಂಹ ಪರ್ವತದ ಪಶ್ಚಿಮದ ತಪ್ಪಲಿನ ತಿಂಗಳೆ (ದಕ್ಷಿಣ ಕನ್ನಡದಲ್ಲಿ) ಎಂಬ ಹಳ್ಳಿಯಲ್ಲಿ ಬೆಳೆ ನಾಶ ಮಾಡಿದ ಸಿಟ್ಟಿನ ಭರದಲ್ಲಿ ಆ ಕ್ಷೇತ್ರದ ಯಜಮಾನನು ಬಸವದ ಕಾಲು ಮತ್ತು ಬಾಲಕ್ಕೆ ಗಾಯಮಾಡಿದ ಪರಿಣಾಮವಾಗಿ ಬಸವ ಸಾವನ್ನಪ್ಪಿತು.ಆದರಿಂದ ಉಂಟಾದ ಕಾರ್ಯ ವಿಘ್ನಗಳಿಗೆ ಪರಿಹಾರವಾಗಿ ಕನಸಿನಲ್ಲಿ ಭಗವಂತನು ಹೇಳಿದಂತೆ ಶಿಕ್ಷೆಯ ಕಲಾ ನೈಪುಣ್ಯದಿಂದ ಏಕಶಿಲೆಯಲ್ಲಿ ಘಂಟೆ- ಗಗ್ಗರದ ನಾದ ಹೊಂದಿದ ಶಿಲಾ ವೃಷಭಮೂರ್ತಿಯನ್ನು ಪ್ರತಿಷ್ಠಾಪಿಸಿ ಪೂಜಿಸಲಾಗುತ್ತಿದೆ. ಭೂಮಿ ಉಳುಮೆ ಕಾಲದಲ್ಲಿ, ಜಾನುವಾರುಗಳ ಆರೋಗ್ಯ ಹಾಗು ವಾಹನಾಭಿವೃದ್ಧಿಗಳಿಗೆ ಭಕ್ತರು ಬಸವನನ್ನು ಪೂಜಿಸಿಕೊಂಡು ಬರುತ್ತಿದ್ದಾರೆ. ಹೀಗೆ ಕಿಗ್ಗಾದಲ್ಲಿ ನೆಲಸಿರುವ ಋಷ್ಯಶೃಂಗರು ಅಯೋಧ್ಯೆ ಶ್ರೀರಾಮನ ಜನನಕ್ಕೆ ಕಾರಣರಾಗಿ ರಾಮಾಯಣದಂತಹ ಮಹಾ ಘಟನೆಗೆ ನಾಂದಿಯಾದರು. ಎಂಬ ಪುರಾಣ ಉಲ್ಲೇಖವಿದೆ.
ಪರ್ವತದ ಮೇಲೆ ಕೊಳ ಅದರಲ್ಲಿ ಸದಾ ನೀರಿರುವುದು ವಿಸ್ಮಯ..!!
ಸಮುದ್ರ ಮಟ್ಟದಿಂದ ಸುಮಾರು 3800 ಕಿ.ಮೀ ಎತ್ತರದಲ್ಲಿರುವ ಈ ಪರ್ವತದ ಮೇಲೆ ಎರಡು ಕೊಳಗಳಿದ್ದು ಸದಾ ಕಾಲ ಇದರ ತುಂಬಾ ನೀರು ತುಂಬಿರುತ್ತದೆ. ಪಾಪದ ಕೊಳ ಪುಣ್ಯದ ಕೊಳವೆಂದು ಕರೆಯುವ ಈ ಕೊಳಗಳಲ್ಲಿ ಪಾಪದ ಕೊಳದಲ್ಲಿ ಮೊದಲು ಸ್ನಾನ ಮಾಡಿ ಪಾಪವನ್ನೆಲ್ಲ ಕಳೆದುಕೊಂಡು ನಂತರ ಪುಣ್ಯದ ಕೊಳಲ್ಲಿ ಸ್ನಾನ ಮಾಡಬೇಂಬ ನಂಬಿಕೆ ಇಲ್ಲಿನ ಜನರಲ್ಲಿದೆ. ಚಾರಣಿಗರಿಗೆ ಇದೊಂದು ಒಳ್ಳೆಯ ಚಾರಣ ಪ್ರದೇಶವಾಗಿದೆ.