ಮಧ್ಯ ಕರ್ನಾಟಕದಲ್ಲಿ ಮಳೆಗೆ ಕೊರತೆ..!
– ಇತ್ತ ಮಳೆ ಪ್ರವಾಹ, ಅತ್ತ ಮಳೆಗಾಗಿ ಪೂಜೆ
– ಬಿತ್ತನೆಗೆ ಹಿನ್ನಡೆ, ಆತಂಕದಲ್ಲಿ ಕೃಷಿಕ
NAMMUR EXPRESS NEWS
ಚಿತ್ರದುರ್ಗ: ಕರಾವಳಿ ಮತ್ತು ಮಲೆನಾಡು ಪ್ರದೇಶಗಳಲ್ಲಿ ಭೋರ್ಗರೆದು ಮಳೆ ಸುರಿದರೂ, ಮಧ್ಯ ಕರ್ನಾಟಕದಲ್ಲಿ ಮಳೆಯೇ ಇಲ್ಲ. ಇತ್ತ ಮಳೆಯ ಆರ್ಭಟಕ್ಕೆ ಮಲೆನಾಡು, ಉತ್ತರ ಕರ್ನಾಟಕ ತತ್ತರಿಸಿವೆ. ಜಲಾಶಯದಲ್ಲಿ ದಾಖಲೆ ಪ್ರಮಾಣದಲ್ಲಿ ಒಳಹರಿವು ಹೆಚ್ಚಾಗಿದ್ದು, ಮಳೆ ಬಿಡುವು ನೀಡಿದರೆ ಸಾಕು ಎಂದು ಜನ ಪ್ರಾರ್ಥಿಸುತ್ತಿದ್ದಾರೆ. ಆದರೆ ಬಯಲುಸೀಮೆಯಲ್ಲಿ ಮಾತ್ರ ಮಳೆಗಾಗಿ ಪ್ರಾರ್ಥಿಸಿ ದೇವರ ಮೊರೆ ಹೋಗಿದ್ದಾರೆ. ಬಯಲು ಸೀಮೆಯಲ್ಲಿ ಜನರು ಮಳೆಗಾಗಿ ಪೂಜೆ ಪ್ರಾರ್ಥನೆ ಸಲ್ಲಿಸುತ್ತಿದ್ದು, ಕತ್ತೆಗಳಿಗೆ ವಿಶೇಷ ಪೂಜೆ ಸಲ್ಲಿಸಿ, ಪ್ರಮುಖ ಬೀದಿಯಲ್ಲಿ ತಮಟೆ ವಾದ್ಯದೊಂದಿಗೆ ಮೆರವಣಿಗೆ ನಡೆಸಿದರು. ರಾಜ್ಯದ ವಿವಿಧೆಡೆ ನದಿ, ಕಣಿವೆ, ಕೆರೆ- ಕಟ್ಟೆ ತುಂಬಿ ಜನರು ನೆರೆ ಹಾವಳಿ ಎದುರಿಸುತ್ತಿದ್ದರೂ ಚಿತ್ರದುರ್ಗ ಜಿಲ್ಲೆಯಲ್ಲಿ ಮಳೆಯೇ ಇಲ್ಲ. ಮುಂಗಾರು ಹಂಗಾಮಿನಲ್ಲಿ ಮೊದಲ ಹಂತದಲ್ಲಿ ಬಿತ್ತಿರುವ ಶೇಂಗಾ, ತೊಗರಿ, ಸಜ್ಜೆ, ಔಡಲ, ಸಿರಿಧಾನ್ಯ ಮುಂತಾದ ಬೆಳೆ ಮಳೆ ಇಲ್ಲದ ಕಾರಣ ಬಾಡುತ್ತಿವೆ. ಎರಡನೇ ಹಂತದ ಬಿತ್ತನೆಗೆ ಶೇಂಗಾ ಬೀಜ- ಗೊಬ್ಬರ ಸಿದ್ಧತೆ ಮಾಡಿಕೊಂಡು ಮುಗಿಲ ಕಡೆ ಮಳೆಗಾಗಿ ಎದುರು ನೋಡುವಂತಾಗಿದೆ. ಇನ್ನು 3-4 ದಿನಗಳಲ್ಲಿ ಮಳೆ ಬರದೆ ಹೋದರೆ ಜೀವನ ನಡೆಸಲು ತುಂಬಾ ಕಷ್ಟವಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಬಿತ್ತನೆಗೆ ಹಿನ್ನಡೆ, ಆತಂಕದಲ್ಲಿ ಕೃಷಿಕ!
ಜೂನ್ ತಿಂಗಳಲ್ಲಿ ಮಳೆ ಕೊರತೆಯಾಗಿದ್ದು ಮಧ್ಯ ಕರ್ನಾಟಕದಲ್ಲಿ ಬಿತ್ತನೆಗೆ ಹಿನ್ನೆಡೆಯಾಗಿದೆ. ಹೀಗಾಗಿ ಕೃಷಿಕರು ಆತಂಕದಲ್ಲಿದ್ದಾರೆ.ದಾವಣಗೆರೆ ಜಿಲ್ಲೆಯಲ್ಲಿ ಮೆಕ್ಕೆ ಜೋಳ ಮತ್ತು ನೀರಾವರಿಯಲ್ಲಿ ಭತ್ತ ಮುಂಗಾರಿನ ಪ್ರಮುಖ ಬೆಳೆಯಾಗಿದ್ದು, ಈ ಬೆಳೆಗಳು ಇನ್ನೂ ಬಿತ್ತನೆ ಆಗಬೇಕಿದೆ. ಚಿತ್ರದುರ್ಗ ಜಿಲ್ಲೆಯಲ್ಲಿ ಶೇಂಗಾ ಪ್ರಮುಖ ಬೆಳೆಯಾಗಿದ್ದು ಇನ್ನೂ ಸಾಕಷ್ಟು ಪ್ರದೇಶದಲ್ಲಿ ಬಿತ್ತನೆ ಬಾಕಿಯಿದೆ.