ರೈತರ ಬದುಕು ನುಂಗಿದ ಮಾರಿ ಕಣಿವೆ!
– ಸರ್ಕಾರ ನೀಡಿದ ಜಮೀನನ್ನೂ ಉಳುಮೆ ಮಾಡಲು ಬಿಡುತ್ತಿಲ್ಲ,
– ನಮಗೆ ಬದುಕು ಕಲ್ಪಿಸಿ: ರೈತರಿಂದ ತಹಶೀಲ್ದಾರ್ ಗೆ ಮನವಿ
NAMMUR EXPRESS NEWS
ಚಿತ್ರದುರ್ಗ: ಹೊಸದುರ್ಗ ತಾಲ್ಲೂಕಿನ ಮತ್ತೋಡು ಹೋಬಳಿ ನಾಗತಿಹಳ್ಳಿ ಗ್ರಾಮದ ಬಹುತೇಕ ಜಮೀನುಗಳು ವಿವಿ ಸಾಗರ(ಮಾರಿಕಣಿವೆ) ಭರ್ತಿಯಾದ ನಂತರ ನಾವು ಬದುಕು ಕಟ್ಟಿಕೊಂಡಿದ್ದ ಜಮೀನು ಹಿನ್ನೀರಿನಿಂದ ಬಹುತೇಕ ಮುಳುಗಡೆಯಾಗಿದ್ದು ನಾವು ಕೃಷಿ ಮಾಡಿಕೊಂಡು ಬದುಕಲು ಒಂದಡಿಯೂ ಜಾಗವಿಲ್ಲ ಇತ್ತ ಸರ್ಕಾರ ನಮಗೆ ನೀಡಿರುವ ಭೂಮಿಯನ್ನು ಕಳೆದ 45 ವರ್ಷದಿಂದ ಉಳುಮೆ ಮಾಡಲೂ ಬಿಡುತ್ತಿಲ್ಲ ನಮ್ಮ ಮೇಲೆ ನಿರಂತರವಾಗಿ ದಬ್ಬಾಳಿಕೆ ನಡೆಯುತ್ತಿದೆ. ನಮ್ಮ ಜಮೀನಿಗೆ ಉಳುಮೆ ಮಾಡಲು ಹೋದರೆ, ಹಲ್ಲೆ ಮಾಡುತ್ತಾರೆ ಎಂದು ನಾಗತಿಹಳ್ಳಿ ರೈತರು ಜಿಲ್ಲಾ ಹಾಗೂ ತಾಲ್ಲೂಕು ರೈತ ಸಂಘಟನೆ ಮುಖಂಡರೊಂದಿಗೆ ತಹಶೀಲ್ದಾರ್ ಅವರ ಬಳಿ ತಮ್ಮ ನೋವಿನ ಅಳಲು ತೋಡಿಕೊಂಡರು.
ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಈಚಘಟ್ಟದ ಸಿದ್ಧವೀರಪ್ಪ ಮಾತನಾಡಿ, ಈ ಹಿಂದೆ ರೈತ ಕುಟುಂಬದವರ ಮೇಲೆ ದಬ್ಬಾಳಿಕೆ ನಡೆದಾಗ, ಭೂರಹಿತರು ಉಳುಮೆ ಮಾಡಿಕೊಂಡು ಬದುಕಲಿ ಎಂದು ಶ್ರೀರಾಂಪುರ ಪೋಲಿಸ್ ಠಾಣೆಯಲ್ಲಿ ಸೌಹಾರ್ದಯುತವಾಗಿ ನಿರ್ಣಯ ಕೈಗೊಳ್ಳಲಾಯಿತು. ಆದರೂ ಈ ಭಾಗದಲ್ಲಿ ಪೋಲಿಸ್ ಸಿಬ್ಬಂದಿಗಳನ್ನು ನೇಮಿಸಿದ್ದು, ಉಳುಮೆ ಮಾಡಲು ಅವಕಾಶ ಕಲ್ಪಿಸದೆ, ಭಯದ ವಾತಾವರಣ ಸೃಷ್ಟಿಸಲಾಗಿದೆ. ಇವರನ್ನು ಅಡವಿಯೊಳಗೆ ಕಳಿಸಿದವರ್ಯಾರು?, ಕಂದಾಯ ಇಲಾಖೆ ಭೂಮಿಯಲ್ಲಿ ಅನಗತ್ಯವಾಗಿ ಪೋಲಿಸರ ಪ್ರವೇಶ ಏಕೆ?. ರೈತರ ಶೆಡ್ ಗಳ ಧ್ವಂಸ ಮಾಡುವ ಅಧಿಕಾರ ಕೊಟ್ಟವರ್ಯಾರು?. ಎಂದು ಪ್ರಶ್ನಿಸಿದರು.
ರೈತರು ಕಳೆದ 15 ರಿಂದ 20 ವರ್ಷ ಸಾಗುವಳಿ ಮಾಡಲಾಗುತ್ತಿತ್ತು. ನಂತರ ಅವರನ್ನು ಬೆದರಿಸಿ ಹೊರಗಡೆ ಕಳಿಸಿದ್ದಾರೆ. ಭೂಮಿ ಹೆಸರಿನಲ್ಲಿದ್ದರೂ, ಸಾಗುವಳಿ ಮಾಡಲಾಗಿಲ್ಲ. ಪ್ರಾಮಾಣಿಕವಾಗಿ ಬದುಕಲು ಭೂಮಿ ಮಾಡಿಕೊಳ್ಳಲು ಅವಕಾಶವಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.ಕೃಷಿ ಮಾಡುತ್ತಿರುವ ಸ್ಥಳ ಪರಿಶೀಲನೆ ಮಾಡಿ, ಶೆಡ್ ಹಾಕಿರೋದನ್ನ ನೋಡಿ ತಹಶೀಲ್ದಾರ್ ಅವರು ವಸ್ತುನಿಷ್ಠ ವರದಿ ನೀಡಲಿ. ನಮ್ಮ ರೈತರು ಯಾವುದೇ ಕಾನೂನು ಕೈಗೆತ್ತಿಕೊಳ್ಳುವವರಲ್ಲ, ತಮ್ಮ ಜೀವನಕ್ಕಾಗಿ ಬದುಕಲು ಕೃಷಿ ಮಾಡುತ್ತಿದ್ದಾರೆ. ಕೃಷಿ ನಂಬಿರುವವರು ಬದುಕಲೇಬೇಕು ಎಂದು ಒತ್ತಾಯಿಸಿದರು.ವಿವಿ ಸಾಗರ ಭರ್ತಿಯಾದಾಗ ಸಂತ್ರಸ್ತರಿಗೆ ಭೂರಹಿತರಿಗೆ ಜಿಲ್ಲಾಡಳಿತ ಮಾನವೀಯತೆ ಮೆರೆಯಬೇಕು. ಕಳೆದ ವರ್ಷ ಬರಗಾಲದಿಂದ ರೈತ ತತ್ತರಿಸಿ ಹೋಗಿದ್ದಾನೆ. ಭೂಮಿ ಸಾಗುವಳಿ ಮಾಡುತ್ತಿರುವವರು ಅಪರಾಧಿಗಳಲ್ಲ, ಅನಪೇಕ್ಷಿತವಾಗಿ ಪೋಲಿಸ್ ರೈತರ ಜಮೀನಿನ ಬಳಿ ಹೋಗೋದು ಬೇಡ ಎಂದು ಆಕ್ರೋಶವಾಗಿ ನುಡಿದರು.
ತಹಸೀಲ್ದಾರ್ ಹೇಳಿದ್ದೇನು?
ಈ ಬಗ್ಗೆ ಪ್ರತಿಕ್ರಿಯಿಸಿದ ತಹಶೀಲ್ದಾರ್ ತಿರುಪತಿ ಪಾಟೀಲ್ ಅವರು, ಸ್ಥಳ ಪರಿಶೀಲನೆ ನಡೆಸಿ, ನೈಜ ವರದಿಯನ್ನು ಜಿಲ್ಲಾಧಿಕಾರಿಗಳಿಗೆ ಕಳುಹಿಸಲಾಗುವುದು. ಅವರ ನಿರ್ದೇಶನದಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಅಲ್ಲಿಯವರೆಗೂ ಎಲ್ಲರೂ ಶಾಂತಿಯುತವಾಗಿರಬೇಕು ಎಂದು ರೈತರಿಗೆ ಮನವಿ ಮಾಡಿದರು. ಇದೇ ಸಮಯದಲ್ಲಿ ತಾಲೂಕ ರೈತ ಸಂಘದ ಅಧ್ಯಕ್ಷ ಬೋರೇಶ್, ಕರಿಸಿದ್ದಯ್ಯ ಶಿವಣ್ಣ, ನಿರಂಜನಮೂರ್ತಿ ಮೂಡಲಗಿರಿಯಪ್ಪ ದೊಡ್ಡಯ್ಯ ಸೇರಿದಂತೆ ನಾಗಥೆಹಳ್ಳಿ ಗ್ರಾಮದ ಸಂತ್ರಸ್ತ ರೈತ ಮಹಿಳೆಯರು ಹಾಜರಿದ್ದರು.