ಮಂಗಳೂರು ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆ ಸಂದೇಶ!
– ರಾಮೇಶ್ವರಂ ಕೆಫೆ ಮಾದರಿಯಲ್ಲಿ ಇಮೇಲ್ ಬೆದರಿಕೆ
– ಬಜಪೆ ಠಾಣೆಗೆ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ ಸಿಬ್ಬಂದಿ ದೂರು
NAMMUR EXPRESS NEWS
ಮಂಗಳೂರು: ರಾಮೇಶ್ವರಂ ಕೆಫೆ ಮಾದರಿಯಲ್ಲಿ ಬಾಂಬ್ ಇರಿಸಿದ್ದಾಗಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬೆದರಿಕೆ ಸಂದೇಶ ಬಂದ ಬಗ್ಗೆ ತಡವಾಗಿ ವರದಿಯಾಗಿದೆ.
ನ.30ರಂದು ಬೆಳಗ್ಗೆ 10 ಗಂಟೆ ಸುಮಾರಿಗೆ ಅಕ್ರಮ್ ವಾಯ್ಕರ್ ಎನ್ನುವ ಹೆಸರಲ್ಲಿದ್ದ ಇಮೇಲ್ನಿಂದ ಬೆದರಿಕೆ ಸಂದೇಶ ಬಂದಿದೆ. ಈ ಬಗ್ಗೆ ಬಜಪೆ ಠಾಣೆಗೆ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ ಸಿಬ್ಬಂದಿ ದೂರು ನೀಡಿದ್ದಾರೆ.
ರಾಮೇಶ್ವರ ಕೆಫೆ ಬ್ಲಾಸ್ಟ್ ಅನ್ನು ಪಾಕ್ ಐಎಸ್ಐನವರು ತಮಿಳುನಾಡು ಡಿಜಿಪಿಯ ಪುತ್ರಿ ದೌಡಿ ಜೀವಾಲ್ ಎಂಬವರನ್ನು ಬಳಸಿಕೊಂಡು ಮಾಡಿದ್ದಾರೆ. ಜಮೇಶಾ ಮುಬೀನ್ ಎಂಬಾತ ಇದಕ್ಕೆ ಸಹಕಾರ ನೀಡಿದ್ದಾನೆ ಎಂದು ಇಮೇಲ್ ಸಂದೇಶದಲ್ಲಿ ಬರೆಯಲಾಗಿದೆ. ಅದರಲ್ಲಿ ವಿ.ಬಾಲಕೃಷ್ಣನ್ ಐಪಿಎಸ್, ಎಡ್ವಕೇಟ್ ಶ್ವೇತಾ, ವರುಣ್ ಐಪಿಎಸ್ ಎಂಬ ಹೆಸರುಗಳನ್ನು ಉಲ್ಲೇಖಿಸಲಾಗಿದೆ.
ಇದೇ ರೀತಿಯ ಬೆದರಿಕೆ ಸಂದೇಶ ಅಕ್ಟೋಬರ್ 25ರಂದು ತಿರುಪತಿಯ ಎರಡು ಪ್ರಸಿದ್ಧ ಹೊಟೇಲ್ಗಳಿಗೆ ಬಂದಿತ್ತು. ಅದರಲ್ಲಿಯೂ ಜಾಫರ್ ಸಾದಿಕ್ ಮತ್ತು ಕೃತಿಕಾ ಉದಯನಿಧಿ ಹೆಸರು ಉಲ್ಲೇಖಿಸಲಾಗಿದೆ.ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿರುವ ಬೆದರಿಕೆ ಸಂದೇಶದಲ್ಲಿ ತಮಿಳುನಾಡಿನ ವಿಚಾರ ಇರುವುದರಿಂದ ಅಲ್ಲಿನವರೇ ಈ ಕೃತ್ಯ ನಡೆಸಿರುವ ಸಾಧ್ಯತೆಯನ್ನು ಪೊಲೀಸರು ಶಂಕಿಸಿದ್ದಾರೆ. ಇದಲ್ಲದೆ ಈ ಹಿಂದೆಯೂ ಎರಡೂರು ಬಾರಿ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಾಂಬ್ ಬಗ್ಗೆ ಹುಸಿ ಬೆದರಿಕೆ ಸಂದೇಶ ಬಂದಿದೆ.