ಕರಾವಳಿ ಟಾಪ್ ನ್ಯೂಸ್
– ಬ್ಯಾಂಕ್ ದರೋಡೆ: ಆರೋಪಿ ಕಾಲಿಗೆ ಪೊಲೀಸರಿಂದ ಗುಂಡು!
– ಮಂಗಳೂರು: ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ; 21ನೇ ಆರೋಪಿಯ ಬಂಧನ
– ಮೂಡುಬಿದಿರೆ: ಬಸ್ಸಿನಿಂದ ಬಿದ್ದು ವೃದ್ಧ ಗಂಭೀರ
NAMMUR EXPRESS NEWS
ಮಂಗಳೂರು: ಕೆ.ಸಿ. ರಸ್ತೆಯಲ್ಲಿರುವ ಕೋಟೆಕಾರ್ ವ್ಯವಸಾಯ ಸೇವಾ ಸಹಕಾರಿ ಸಂಘ ನಿಯಮಿತ (ಸಹಕಾರಿ ಸಂಘ) ಶಾಖೆಯಲ್ಲಿ ನಡೆದ ಹಗಲು ದರೋಡೆ ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳಲ್ಲಿ ಒಬ್ಬನ ಮೇಲೆ ಪೊಲೀಸರು ಗುಂಡು ಹಾರಿಸಿದ್ದಾರೆ. ಸ್ಥಳ ಪರಿಶೀಲನೆ ವೇಳೆ ಆರೋಪಿಯು ಉಳ್ಳಾಲ ಪೊಲೀಸ್ ಇನ್ಸ್ಪೆಕ್ಟರ್ ಬಾಲಕೃಷ್ಣ ಅವರನ್ನು ಇರಿದು ಪರಾರಿಯಾಗಲು ಯತ್ನಿಸಿದ್ದರು. ಮುಂಬೈನ ಚೆಂಬೂರು ಬಳಿಯ ತಿಲಕ್ ನಗರದ ನಿವಾಸಿ, ಶಂಕಿತ ಕಣ್ಣನ್ ಮಣಿ (36) ಕಾಲಿಗೆ ಗುಂಡು ಹಾರಿಸಲಾಗಿದ್ದು, ನಂತರ ಚಿಕಿತ್ಸೆಗಾಗಿ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ತಿಳಿಸಿದ್ದಾರೆ. ಕೋಟೆಕಾರ್ ಸಹಕಾರ ಸಂಘ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಿರುನಲ್ವೇಲಿ ಬಳಿ ಮೂವರನ್ನು ಬಂಧಿಸಲಾಗಿದೆ. ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಸೇವೆ ಸಲ್ಲಿಸುತ್ತಿರುವ ಸಿಸಿಬಿ ಪೊಲೀಸ್ ಕಾನ್ಸ್ಟೆಬಲ್ಗಳಾದ ಅಂಜನಪ್ಪ ಮತ್ತು ನಿತಿನ್ ಕೂಡ ಗಾಯಗೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ.
ಸ್ಥಳ ಪರಿಶೀಲನೆ ವೇಳೆ ಮಣಿ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಈ ಘಟನೆ ಸಂಭವಿಸಿದೆ. ಸ್ಥಳದಲ್ಲಿ ದೊರೆತ ಒಡೆದ ಬಿಯರ್ ಬಾಟಲಿಯಿಂದ ಮಣಿ ಅಂಜನಪ್ಪ ಮತ್ತು ನಿತಿನ್ ಮೇಲೆ ಹಲ್ಲೆ ನಡೆಸಿದ್ದಾನೆ. ತನಿಖಾಧಿಕಾರಿಯೂ ಆಗಿದ್ದ ಇನ್ಸ್ಪೆಕ್ಟರ್ ಬಾಲಕೃಷ್ಣ ಅವರನ್ನು ತಳ್ಳಿ, ಇರಿದು ಕೊಲ್ಲಲು ಯತ್ನಿಸಿದ. ಪೊಲೀಸರ ಎಚ್ಚರಿಕೆಗೆ ಅವನು ಕಿವಿಗೊಡಲಿಲ್ಲ. ಗಾಳಿಯಲ್ಲಿ ಹಾರಿಸಿದ ನಂತರ, ಸಿಸಿಬಿ ಪೊಲೀಸ್ ಇನ್ಸ್ಪೆಕ್ಟರ್ ಮಣಿಯ ಕಾಲಿಗೆ ಗುಂಡು ಹಾರಿಸಿ ಅವನನ್ನು ವಶಕ್ಕೆ ಪಡೆದರು ಎಂದು ಪೊಲೀಸ್ ಆಯುಕ್ತರು ವಿವರಿಸಿದರು. ಈ ಸಂಬಂಧ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
– ಮಂಗಳೂರು: ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ; 21ನೇ ಆರೋಪಿಯ ಬಂಧನ
ಮಂಗಳೂರು: ಜುಲೈನಲ್ಲಿ ಮಂಗಳೂರು ಜಿಲ್ಲೆಯ ಬೆಳ್ಳಾರೆ ಗ್ರಾಮದಲ್ಲಿ ಹತ್ಯೆಗೀಡಾಗಿದ್ದ ಹಿಂದೂ ಸಂಘಟನೆಗಳ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಅವರ ಪ್ರಕರಣಕ್ಕೆ ಸಂಬಂಧಿಸಿದಂತೆ ಜ. 21ರಂದು ಮತ್ತೊಂದು ಬಂಧನವಾಗಿದೆ.
ಪ್ರಕರಣದ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಅತೀಖ್ ಅಹ್ಮದ್ ಎಂಬಾತನನ್ನು ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ಬಂಧನವಾಗಿರುವವರಲ್ಲಿ ಈತ 21ನೇ ಆರೋಪಿ. ಈತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ಸದಸ್ಯನೆಂದು ಹೇಳಲಾಗಿದೆ. 2022ರ ಜುಲೈನಲ್ಲಿ ಬೆಳ್ಳಾರೆಯಲ್ಲಿ ಪ್ರವೀಣ್ ನೆಟ್ಟಾರು ಅವರ ಹತ್ಯೆ ಮಾಡಲಾಗಿತ್ತು. ಪ್ರಾಥಮಿಕ ತನಿಖೆಯಲ್ಲಿ ಇದು ಪಿಎಫ್ಐ ಸಂಘಟನೆಯ ಸದಸ್ಯರ ಕುಕೃತ್ಯ ಎಂಬುದು ತಿಳಿದುಬಂದಿದ್ದರಿಂದ ಆಗ ರಾಜ್ಯ ಸರ್ಕಾರ, ಇದನ್ನು ಎನ್ಐಗೆ ವಹಿಸಿತ್ತು. ಆಗಿನಿಂದಲೂ ತನಿಖೆ ನಡೆಸುತ್ತಿರುವ ಎನ್ಐಎ ಇದುವರೆಗೆ 21 ಮಂದಿಯನ್ನು (ಜ. 21ರ ಅತೀಕ್ ಅಹ್ಮದ್ ಬಂಧನವೂ ಸೇರಿ) ಬಂಧಿಸಲಾಗಿದೆ. ಇನ್ನೂ ಆರು ಆರೋಪಿಗಳು ತಲೆಮರೆಸಿಕೊಂಡಿದ್ದು ಅವರಿಗಾಗಿ ಎನ್ಐಎ ಅಧಿಕಾರಿಗಳು ಬಲೆ ಬೀಸಿದ್ದಾರೆ. ಅವರನ್ನು ಹಿಡಿದುಕೊಟ್ಟವರಿಗೆ ಬಹುಮಾನವನ್ನು ನೀಡುವುದಾಗಿಯೂ ಘೋಷಿಸಲಾಗಿದೆ. ಅತೀಖ್, ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ಪ್ರಮುಖ ಸಂಚುಕೋರ ಎಂದು ಗುರುತಿಸಲ್ಪಟ್ಟ ಮುಸ್ತಫಾ ಪೈಚಾರ್ಗೆ ಆಶ್ರಯ ನೀಡಿ ಸಹಾಯ ಮಾಡಿದ್ದ ಎಂದು ವರದಿಗಳಲ್ಲಿ ಉಲ್ಲೇಖಿಸಲಾಗಿದೆ. ಪ್ರವೀಣ್ ನೆಟ್ಟಾರು ಅವರನ್ನು ಗುರುತಿಸಿ ಅವರನ್ನು ಕೊಲೆ ಮಾಡಲು ಮುಸ್ತಾಫ ಯೋಜಿಸಿದ್ದ. ಆತನಿಗೆ ಆಶ್ರಯ ಕೊಡುವ ಮೂಲಕ ಅತೀಖ್ ಈತನಿಗೆ ಸಹಕರಿಸಿದ್ದ ಎಂದು ವರದಿಗಳಲ್ಲಿ ಉಲ್ಲೇಖಿಸಲಾಗಿದೆ.
– ಮೂಡುಬಿದಿರೆ: ಬಸ್ಸಿನಿಂದ ಬಿದ್ದು ವೃದ್ಧರ ಸ್ಥಿತಿ ಗಂಭೀರ
ಮೂಡುಬಿದಿರೆ: ಸಂಪಿಗೆ ಕಡೆಯಿಂದ ಮೂಡುಬಿದಿರೆಗೆ ಧಾವಿಸುತ್ತಿದ್ದ ಕೋಟ್ಯಾನ್ ಹೆಸರಿನ ಖಾಸಗಿ ಬಸ್ನಿಂದ ವೃದ್ದರೊಬ್ಬರು ಆಯಾ ತಪ್ಪಿ ಕೆಳಗೆ ಬಿದ್ದು ಅವರ ಸ್ಥಿತಿ ಗಂಭೀರಗೊಂಡಿದ್ದು ಸ್ಥಳಿಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಸ್ ಸ್ಟಾಂಡಿನಿಂದ ಬಸ್ಸಿಗೆ ಮೆಲೆ ಹತ್ತಿ ಇನ್ನೇನು ಕುಳಿತುಕೊಳ್ಳಬೇಕು, ಅಷ್ಟರಲ್ಲಿ ಬಸ್ ಮುಂದಕ್ಕೆ ಚಲಿಸಿ ಆಯಾ ತಪ್ಪಿ ಬಸ್ಸುನಿಂದ ಕೆಳಗೆ ಬಿದ್ದಿದ್ದಾರೆ ಎಂದು ಮಾಹಿತಿ ಲಭಿಸಿದೆ. ಅದರೂ ಮುಂದೆ ಕುಳಿತಿದ್ದ ಬಸ್ ಕಂಡಕ್ಟರ್ ಗಮನಕ್ಕೆ ಬಾರದಿರುವುದು ಬಸ್ಸಿನಲ್ಲಿ ಅಳವಡಿಸಿದ ಸಿಸಿ ಕ್ಯಾಮರ ದೃಶ್ಯದಲ್ಲಿ ಕಾಣಬಹುದು. ಈಗಾಗಾಲೆ ಕೋಟ್ಯಾನ್ ಬಸ್ ಅನ್ನು ಮೂಡುಬಿದಿರೆ ಪೋಲಿಸ್ ಠಾಣೆಗೆ ತೆಗೆದುಕೊಂಡು ಹೋಗಲಾಗಿದೆ ಎಂದು ಸ್ಥಳೀಯರು ತಿಳಿಸಿರುತ್ತಾರೆ.