ಮಂಗಳೂರು ವಿವಿ ವಿರುದ್ದ ಹೆಚ್ಚಿದ ವಿದ್ಯಾರ್ಥಿಗಳ ಸಿಟ್ಟು!
* ವಿವಿ ವ್ಯಾಪ್ತಿಯ ಕಾಲೇಜಲ್ಲಿ ಪರೀಕ್ಷೆ ಮತ್ತು ಪ್ರವೇಶ ಶುಲ್ಕ ಏಕಾಏಕಿ ಏರಿಕೆ
* ವಿದ್ಯಾರ್ಥಿಗಳ ಶುಲ್ಕದಿಂದಲೇ ಎಲ್ಲವನ್ನು ಭರಿಸುವ ಅನಿವಾರ್ಯತೆ
NAMMUR EXPRESS NEWS
ಮಂಗಳೂರು: ಮಂಗಳೂರು ವಿವಿ ವಿರುದ್ದ ಇದೀಗ ವಿದ್ಯಾರ್ಥಿಗಳು ರೊಚ್ಚಿಗೆ ಎದ್ದಿದ್ದಾರೆ. ವಿವಿ ವ್ಯಾಪ್ತಿಯ ಕಾಲೇಜಲ್ಲಿ ಪರೀಕ್ಷೆ ಮತ್ತು ಪ್ರವೇಶ ಶುಲ್ಕ ಏಕಾಏಕಿ ಏರಿಕೆಮಾಡಿದ್ದು ವಿದ್ಯಾರ್ಥಿಗಳ ಶುಲ್ಕದಿಂದಲೇ ಎಲ್ಲವನ್ನು ಭರಿಸುವ ಅನಿವಾರ್ಯತೆ ಬಗ್ಗೆ ಆಕ್ರೋಶ ವ್ಯಕ್ತವಾಗಿದೆ.
ಶುಲ್ಕ ಕಡಿಮೆ ಮಾಡಬೇಕು ಸೇರಿ ವಿವಿಧ ಬೇಡಿಕೆ ಈಡೇರಿಕೆ ಒತ್ತಾಯಿಸಿ ಎಬಿವಿಪಿ ವಿಧ್ಯಾರ್ಥಿಗಳು ನ.15 ಪ್ರತಿಭಟನೆ ಮಾಡಿದ್ದು, ಪ್ರತಿಭಟನಾ ನಿರತ ವಿದ್ಯಾರ್ಥಿಗಳು ಮಂಗಳೂರು ವಿವಿಯ ಆಡಳಿತ ಸೌಧಕ್ಕೆ ನುಗ್ಗಲು ಯತ್ನಿಸಿದ ಘಟನೆ ವಿಶ್ವವಿದ್ಯಾಲಯದ ಬಳಿ ನಡೆಯಿತು.
ಮಂಗಳೂರು ವಿವಿ ವ್ಯಾಪ್ತಿಯ ಕಾಲೇಜುಗಳಲ್ಲಿ ಪರೀಕ್ಷೆ ಮತ್ತು ಪ್ರವೇಶ ಶುಲ್ಕವನ್ನು ಏಕಾಏಕಿ 60-80 ಪರ್ಸೆಂಟ್ ಏರಿಸಿದ್ದನ್ನು ವಿರೋಧಿಸಿ ಎಬಿವಿಪಿ ವಿದ್ಯಾರ್ಥಿಗಳು ಕೊಣಾಜೆ ಮಂಗಳೂರು ವಿವಿಯ ಆಡಳಿತ ಸೌಧಕ್ಕೆ ಮುತ್ತಿಗೆ ಹಾಕಿದ್ದಾರೆ. ಈ ವೇಳೆ, ವಿದ್ಯಾರ್ಥಿಗಳು ಆಡಳಿತ ಸೌಧ ಕಟ್ಟಡದ ಮುಂಭಾಗದ ಗಾಜನ್ನು ಪುಡಿಗೈದು ಆಕ್ರೋಶ ವ್ಯಕ್ತಪಡಿಸಿದರು.
ಪೊಲೀಸರ ಬ್ಯಾರಿಕೇಡ್ ನಡುವೆಯೂ ವಿದ್ಯಾರ್ಥಿಗಳು ಘೋಷಣೆ ಕೂಗುತ್ತಾ ನುಗ್ಗಿ ಬಂದಿದ್ದು ಆಡಳಿತ ಸೌಧಕ್ಕೆ ಒಳನುಗ್ಗಲು ಯತ್ನಿಸಿದ್ದಾರೆ. ಪ್ರತಿಭಟನೆ ಸ್ಥಳಕ್ಕೆ ಆಗಮಿಸಿದ ಕುಲಪತಿ ಪ್ರೊ.ಪಿ.ಎಲ್ ಧರ್ಮ, ವಿದ್ಯಾರ್ಥಿಗಳನ್ನು ಸಮಾಧಾನ ಪಡಿಸಲು ಯತ್ನಿಸಿದರು.
ಆದಷ್ಟು ಶೀಘ್ರ ಸಮಸ್ಯೆ ಪರಿಹರಿಸುತ್ತೇನೆ ಎಂದು ಹೇಳಿದ ಕುಲಪತಿ ಮಾತಿಗೆ ವಿದ್ಯಾರ್ಥಿಗಳು ವಿರೋಧ ವ್ಯಕ್ತಪಡಿಸಿದರು. ಇದಕ್ಕುತ್ತರಿಸಿದ ವೀಸಿ, ಸರ್ಕಾರದಿಂದ ದಿನನಿತ್ಯದ ಖರ್ಚಿಗೆ ಒಂದು ರೂಪಾಯಿ ಕೂಡ ಬರುತ್ತಿಲ್ಲ. ವಿದ್ಯಾರ್ಥಿಗಳ ಶುಲ್ಕದಿಂದಲೇ ಎಲ್ಲವನ್ನು ಭರಿಸುವ ಅನಿವಾರ್ಯತೆ ಇದೆ. ಸರ್ಕಾರ ಆಂತರಿಕ ಸಂಪನ್ಮೂಲ ಹೆಚ್ಚಿಸಿಕೊಳ್ಳಿ ಅಂದಿದೆ. ಹೀಗಾಗಿ ಅನಿವಾರ್ಯವಾಗಿ ಶುಲ್ಕ ಹೆಚ್ಚಿಸಿದ್ದೇವೆ.
ಆದರೂ ಸರ್ಕಾರ ಹೇಳಿರುವುದಕ್ಕಿಂತ ಕಡಿಮೆ ಶುಲ್ಕ ತೆಗೆದುಕೊಳ್ಳುತ್ತಿದ್ದೇವೆ. ಆರು ವರ್ಷಗಳ ಬಳಿಕ ಶುಲ್ಕ ಹೆಚ್ಚಳ ಮಾಡಲಾಗಿದೆ. ರಾಷ್ಟ್ರೀಯ ಶಿಕ್ಷಣ ನೀತಿ ಪ್ರಕಾರ ಗ್ರೇಡ್ ಮೂಲಕ ವರ್ಕ್ ನೀಡಬೇಕಾಗುತ್ತೆ. ಹೀಗಾಗಿ ಸರಿ ಮಾಡಲು ಸರ್ಕಾರವನ್ನು ಕೇಳಿಕೊಂಡಿದ್ದೇವೆ. ಸರ್ಕಾರ ಇಲ್ಲಿಯವರೆಗೂ ಸರಿಪಡಿಸಿಲ್ಲ ಎಂದು ಅಸಹಾಯಕತೆ ತೋರಿದರು.