– ವಿಟ್ಲದ ಯುವಕನ ಮನೆ ಮುಂದೆ ಧರಣಿಗೆ ಕೂತ ಉತ್ತರಭಾರತದ ಯುವತಿ!
– ಉಪ್ಪಿನಂಗಡಿ : ಸರಕಾರಿ ಸಂಘಕ್ಕೆ ಲಕ್ಷಾಂತರ ರೂ ವಂಚನೆ!
– ಮದುವೆ ಮನೆಯಲ್ಲಿ ಲಕ್ಷಾಂತರ ರೂ ಮೌಲ್ಯದ ಬ್ಯಾಗ್ ಕಳವು!
– ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಇಬ್ಬರು ಅಂದರ್!
NAMMUR EXPRESS NEWS
ವಿಟ್ಲ: ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲ ಸಮೀಪದ ಕೇಪು ಗ್ರಾಮದ ಅಡ್ಯನಡ್ಕದ ಯುವಕನೊಬ್ಬನ ಮನೆಯ ಮುಂದೆ ಉತ್ತರ ಭಾರತ ಮೂಲದ ಜಲಂದರ್ ನ ಯುವತಿಯೊಬ್ಬಳು ಧರಣಿ ನಡೆಸಿದ ಘಟನೆ ಮಂಗಳವಾರ ವರದಿಯಾಗಿದೆ. ಈಕೆ ಬೆಂಗಳೂರಿನ ಸಂಸ್ಥೆಯೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಈ ಸಂದರ್ಭ ಅಡ್ಯನಡ್ಕದ ಯುವಕನ ಪರಿಚಯವಾಗಿ ಪ್ರೇಮ ಬೆಳೆದು, ಹಣಕಾಸಿನ ವ್ಯವಹಾರಗಳೂ ನಡೆದಿದೆ ಎನ್ನಲಾಗಿದೆ. ಮಂಗಳವಾರ ಯುವಕನ ಮನೆಯ ಮುಂದೆ ಬಂದ ಸಂತ್ರಸ್ತ ಯುವತಿ, ಯುವಕನನ್ನು ತನಗೆ ಒಪ್ಪಿಸುವಂತೆ ಪಟ್ಟು ಹಿಡಿದಿದ್ದಾಳೆ. ಸ್ಥಳದಲ್ಲಿ ಜನರೂ ಜಮಾಯಿಸಿದ್ದಾರೆ. ಈ ವೇಳೆ ಸ್ಥಳಕ್ಕೆ ಆಗಮಿಸಿದ ವಿಟ್ಲ ಪೊಲೀಸರು ಯುವತಿಯನ್ನು ಠಾಣೆಗೆ ಕರೆದೊಯ್ದಿದ್ದಾರೆ. ಸ್ಥಳದಲ್ಲಿ ಎರಡು ಸಮುದಾಯದ ಜನರು ಸೇರಿದ್ದರಿಂದಾಗಿ ಪೊಲೀಸರು ಭದ್ರತೆ ಒದಗಿಸಿದರು.
– ಸರಕಾರಿ ಸಂಘಕ್ಕೆ ಲಕ್ಷಾಂತರ ರೂ ವಂಚನೆ !
ನಕಲಿ ಚಿನ್ನವನ್ನು ಅಡವಿಟ್ಟು ಸಾಲ ಪಡೆದು ಸಹಕಾರಿ ಸಂಘಗಳಿಗೆ ಲಕ್ಷಗಟ್ಟಲೆ ರೂಪಾಯಿ ವಂಚನೆ ಎಸಗಿದ ಬಗ್ಗೆ ಇಬ್ಬರ ವಿರುದ್ಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನೆಲ್ಯಾಡಿ ಕಾಮಧೇನು ಮಹಿಳಾ ಸಹಕಾರಿ ಸಂಘದ ಪ್ರಧಾನ ವ್ಯವಸ್ಥಾಪಕರು ದೂರು ನೀಡಿದ ಮೇರೆಗೆ ಈ ಪ್ರಕರಣವನ್ನು ದಾಖಲಿಸಲಾಗಿದೆ.
ಜ. 27ರಂದು ಮಧ್ಯಾಹ್ನ ಆರೋಪಿಗಳಾದ ನೆಲ್ಯಾಡಿ ಗ್ರಾಮದವರು ಎನ್ನಲಾಗಿರುವ ಕಡಬ ನಿವಾಸಿ ಸೆಬಾಸ್ಟಿಯನ್ ಮತ್ತು ಕೇರಳ ಮೂಲದ ಡಾನಿಶ್ ಎಂಬವರು ಸಂಘಕ್ಕೆ ಬಂದಿದ್ದು. ಮೇಲ್ನೋಟಕ್ಕೆ ನಕಲಿ ಎಂದು ಕಂಡು ಬಾರದಂತಹ ಒಟ್ಟು 30 ಗ್ರಾಂ ತೂಕದ 4 ನಕಲಿ ಬಳೆಗಳನ್ನು ಸಂಘದಲ್ಲಿ ಅಡಮಾನವಿರಿಸಿ, ಸಂಘದಿಂದ 1.40 ಲಕ್ಷ ರೂಪಾಯಿ ಸಾಲವಾಗಿ ಪಡೆದು ಮೋಸ ಮಾಡಿದ್ದಾರೆ ಎಂದು ದೂರು ನೀಡಲಾಗಿದೆ. ನೆಲ್ಯಾಡಿ ಮಾತ್ರವಲ್ಲದೆ, ಕಡಬ ಮತ್ತು ಉಪ್ಪಿನಂಗಡಿಯ ಸಹಕಾರಿ ಸಂಘಗಳಿಗೂ ಇವರು ವಂಚಿಸಿ ಲಕ್ಷಗಟ್ಟಲೆ ರೂಪಾಯಿ ಪಂಗನಾಮ ಹಾಕಿರುವುದಾಗಿ ಆರೋಪಿಸಲಾಗಿದೆ. ಉಪ್ಪಿನಂಗಡಿಯ ಒಡಿಯೂರು ಸಹಕಾರಿ ಸಂಘದಲ್ಲಿ 1.70 ಲಕ್ಷ ರೂ. ಸಾಲ, ಕಡಬದ ಅಲಂಕಾರು ಒಕ್ಕಲಿಗ ಸಹಕಾರಿ ಸಂಘಗಳಲ್ಲೂ ನಕಲಿ ಚಿನ್ನ ಅಡವಿಟ್ಟು 1.35 ಲಕ್ಷ ರೂ. ಸಾಲ ಪಡೆದಿರುವುದಾಗಿ ಆರೋಪಿಸಲಾಗಿದೆ.
ವಿವಿಧ ಸಹಕಾರಿ ಸಂಘಗಳಿಂದ ದೂರುಗಳು ಬಂದಿರುವರಿಂದ ಈ ಪ್ರಕರಣದಲ್ಲಿ ಸಹಕಾರಿ ಸಂಘಗಳ ಚಿನ್ನಾಭರಣ ಪರಿಶೀಲನಾಗಾರರ ಪಾತ್ರದ ಬಗ್ಗೆಯೂ ತನಿಖೆ ನಡೆಸಲಾಗುತ್ತದೆ. ಕಡಬ,ಪುತ್ತೂರು, ಸುಳ್ಯ, ಬೆಳ್ತಂಗಡಿ ತಾಲೂಕುಗಳಲ್ಲಿ ವಂಚನಾ ಪ್ರಕರಣಗಳು ನಡೆದಿರುವ ಶಂಕೆ ವ್ಯಕ್ತವಾಗಿದೆ. ತನಿಖೆ ಮುಂದುವರಿದಿದೆ.
– ಮದುವೆ ಮನೆಯಲ್ಲಿ ಲಕ್ಷಾಂತರ ರೂ ಮೌಲ್ಯದ ಸೊತ್ತುಯಿದ್ದ ಭ್ಯಾಗ್ ಕಳವು!
ಬ್ರಹ್ಮಾವರ : ಮದುಮಕ್ಕಳ ಜೊತೆ ಪೋಟೋ ತೆಗೆಸಿ ಬರುವದರಲ್ಲಿ ಕುರ್ಚಿಯ ಮೇಲಿಟ್ಟ ಲಕ್ಷಾಂತರ ಮೌಲ್ಯದ ಸೊತ್ತುಗಳಿದ್ದ ಬ್ಯಾಗ್ ನ್ನು ಕಳ್ಳನೊಬ್ಬ ಎಗರಿಸಿದ ಘಟನೆ ಬ್ರಹ್ಮಾವರದ ಶ್ಯಾಮಿಲಿ ಶನಾಯ ಹಾಲ್ನಲ್ಲಿ ನಡೆದಿದೆ. ನೀಲಾವರದ ಜಯಶ್ರೀ ಸುರೇಶ್ ಎಂಬವರ ಮಗಳ ಮದುವೆ ಆರತಕ್ಷತೆ ಸಮಾರಂಭ ಬ್ರಹ್ಮಾವರ ಶ್ಯಾಮಿಲಿ ಶನಾಯ ಹಾಲ್ನಲ್ಲಿ ನಡೆದಿದ್ದು, ಈ ವೇಳೆ ಜಯಶ್ರೀ ತನ್ನ ಕೈಯಲ್ಲಿದ್ದ ಬ್ಯಾಗನ್ನು ಹಾಲ್ ಕುರ್ಚಿಯ ಮೇಲೆ ಇಟ್ಟು ಮಗಳೊಂದಿಗೆ ಫೋಟೋ ತೆಗೆಸಿದ್ದರು. ಬಳಿಕ ಬಂದು ನೋಡಿದಾಗ ಬ್ಯಾಗ್ ಕಳವಾಗಿರುವುದು ಕಂಡುಬಂತು. ಬ್ಯಾಗ್ನಲ್ಲಿ 2,40,000 ರೂ. ಮೌಲ್ಯದ ನಗದು ಹಾಗೂ ವಸ್ತುಗಳಿದ್ದವು ಎಂದು ತಿಳಿದುಬಂದಿದೆ. ಸಿಸಿಟಿವಿ ಫೂಟೇಜ್ನಲ್ಲಿ ಕಪ್ಪು ಶರ್ಟ್ನ ಹುಡುಗ ಬ್ಯಾಗ್ ತೆಗೆದುಕೊಂಡು ಹೋಗುತ್ತಿರುವುದನ್ನು ಸೆರೆಯಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
– ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಇಬ್ಬರ ಬಂಧನ!
ಮಂಗಳೂರು: ಸಾರ್ವಜನಿಕ ರಸ್ತೆ ಬದಿಯಲ್ಲಿ ಮಾದಕ ವಸ್ತುಗಳ ಮಾರಾಟದಲ್ಲಿ ತೊಡಗಿದ್ದ ಇಬ್ಬರನ್ನು ಕೇಂದ್ರ ಉಪ- ವಿಭಾಗ ಆ್ಯಂಟಿ ಡ್ರಗ್ ತಂಡದ ಅಧಿಕಾರಿ ಮತ್ತು ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಅತ್ತಾವರದ ಆದಿತ್ಯ ಕೆ (29), ಅಡ್ಯಾರ್ ಪದವು ನಿವಾಸಿ ರೋಹನ್ ಸಿಲ್ವೇರಾ ಬಂಧಿತರು. ಬಂಧಿತರಿಂದ ಸುಮಾರು ರೂ 50,000 ಮೌಲ್ಯದ 27 ಗ್ರಾಂ ಹೈಡೋವೀಡ್ ಗಾಂಜಾ, ಸುಮಾರು ರೂ 1,00,000 ಮೌಲ್ಯದ 2 ಕೆಜಿ 95 ಗ್ರಾಂನ ಗಾಂಜಾ, ರೂ. 8000 ಮೌಲ್ಯದ ಗಾಂಜಾ ಆಪ್ ಆಯಿಲ್, ರೂ,16,800 ಮೌಲ್ಯದ ಎಲ್.ಎಸ್.ಡಿ ಸ್ಟಾಂಫ್. ಡಿಜಿಟಲ್ ತೂಕ ಮಾಪನಗಳು-2, ಕೃತ್ಯಕ್ಕೆ ಬಳಸಿದ ರೂ 90,000 ಮೌಲ್ಯದ ಎರಡು ಮೊಬೈಲ್ ಫೋನ್ ಮತ್ತು ರೂ 20 ಲಕ್ಷ ಮೌಲ್ಯದ ಕಪ್ಪು ಬಣ್ಣದ ಹುಂಡೈ ಕಂಪೆನಿಯ ವರ್ನ ಮಾಡೆಲ್ ನ ಕಾರು- 1 ಮತ್ತು ಇತರ ಸೊತ್ತುಗಳನ್ನು ಸ್ವಾದೀನಪಡಿಸಿಕೊಳ್ಳಲಾಗಿದ್ದು, ಆರೋಪಿಗಳ ವಿರುದ್ಧ ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ಎನ್ ಡಿ ಪಿ ಎಸ್ ಕಾಯ್ದೆ ಅನ್ವಯ ಪ್ರಕರಣ ದಾಖಲಾಗಿ ತನಿಖೆ ನಡೆಸಲಾಗುತ್ತಿದೆ.
– ಪುತ್ತೂರು: ನವವಿವಾಹಿತೆ ನೇಣಿಗೆ ಶರಣು!
ಪುತ್ತೂರು: ನವವಿವಾಹಿತೆಯೊಬ್ಬರು ನೇಣು ಬಿಗಿದು ಪತಿಯ ಮನೆಯಲ್ಲಿ ಆತ್ಯಹತ್ಯೆ ಮಾಡಿಕೊಂಡ ಘಟನೆ ಪುತ್ತೂರು ತಾಲೂಕಿನ ಕುರಿಯ ಗಡಾಜೆ ಎಂಬಲ್ಲಿ ನಡೆದಿದೆ. ಬೆಳ್ತಂಗಡಿ ತಾಲೂಕಿನ ಉರುವಾಲು ಗ್ರಾಮದ ಕುಕ್ಕಾಜೆ ರಾಮ್ಮಣ್ಣ ಗೌಡ ಮತ್ತು ಪುಷ್ಪ ದಂಪತಿ ಪುತ್ರಿ ಶೋಭಾ (26) ನೇಣಿಗೆ ಶರಣಾದವರು. ಶೋಭಾ ಅವರನ್ನು ಕಳೆದ ಒಂದೂವರೆ ತಿಂಗಳ ಹಿಂದೆ ಪುತ್ತೂರು ಕುರಿಯ ಗಡಾಜೆ ರೋಹಿತ್ ರವರಿಗೆ ಮದುವೆ ಮಾಡಿ ಕೊಡಲಾಗಿತ್ತು. ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪುತ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಾವಿಗೆ ಕಾರಣ ತನಿಖೆಯಿಂದ ತಿಳಿಯಬೇಕಾಗಿದೆ.