ಕರಾವಳಿ ಟಾಪ್ ನ್ಯೂಸ್
– ಮಂಗಳೂರು: ಕದ್ರಿ ಪೊಲೀಸ್ ಠಾಣೆ ಬಳಿ ಇದ್ದಕ್ಕಿದ್ದಂತೆ ಹೊತ್ತಿ ಉರಿದ ಕಾರು
– ಉಡುಪಿ: ಮೀನುಗಾರಿಕೆ ಕಾರ್ಮಿಕ ಸಾವು; ಪ್ರಕರಣ ದಾಖಲು!
– ಬಂಟ್ವಾಳ: ಶಾಲಾ ವಾಹನ ಢಿಕ್ಕಿ; ಸ್ಕೂಟರ್ ಸವಾರ ಸಾವು
NAMMUR EXPRESS NEWS
ಮಂಗಳೂರು:ಕಾರು ಬೆಂಕಿಗಾಹುತಿಯಾದ ಘಟನೆ ನ. 15ರಂದು ಸಂಜೆ ಕದ್ರಿ ಬಳಿ ಸಂಭವಿಸಿದೆ.
ತಲಪಾಡಿಯ ಸೆಕೆಂಡ್ ಸೇಲ್ ಮಳಿಗೆಯಿಂದ ರಿಟ್ಜ್ ಕಾರನ್ನು ಖರೀದಿಸಿ ಕೊಂಡೊಯ್ಯುತ್ತಿದ್ದರು. ಕದ್ರಿ ಪೊಲೀಸ್ ಠಾಣೆಯ ಮುಂಭಾಗ ನಿಲ್ಲಿಸಿ ಸ್ವಲ್ಪ ಹೊತ್ತಿನ ಬಳಿಕ ಮತ್ತೆ ಕಾರನ್ನು ಸ್ಟಾರ್ಟ್ ಮಾಡಿದ್ದಾರೆ. ಆಗ ಕಾರಿನ ಮುಂಭಾಗದಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ಕಾರಿನಲ್ಲಿದ್ದವರು ಕೂಡಲೇ ಕಾರಿನಿಂದ ಹೊರಗೆ ಬಂದಿದ್ದಾರೆ. ನೋಡ-ನೋಡುತ್ತಿದ್ದಂತೆಯೇ ಬೆಂಕಿ ಇಡೀ ಕಾರನ್ನು ಆವರಿಸಿತ್ತು. ಕದ್ರಿ ಅಗ್ನಿಶಾಮಕ ಠಾಣೆಯ ಅಧಿಕಾರಿ, ಸಿಬಂದಿ ಸ್ಥಳಕ್ಕೆ ಆಗಮಿಸಿ ಕಾರ್ಯಾಚಣೆ ನಡೆಸಿ ಬೆಂಕಿ ನಂದಿಸಿದರು.
* ಉಡುಪಿ: ಮೀನುಗಾರಿಕೆ ಕಾರ್ಮಿಕ ಸಾವು; ಪ್ರಕರಣ ದಾಖಲು!
ಉಡುಪಿ: ಮೀನುಗಾರಿಕೆ ಕಾರ್ಮಿಕ, ಕಾರವಾರ ಮೂಲದ ಸೋಮನಾಥ (30) ಅವರು ನಗರದ ಬಸ್ ನಿಲ್ದಾಣದಲ್ಲಿ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಎರಡು ತಿಂಗಳುಗಳಿಂದ ಮಲ್ಪೆ ಬಂದರಿನಲ್ಲಿ ಮೀನುಗಾರಿಕೆ ಕೆಲಸ ಮಾಡಿಕೊಂಡಿದ್ದ ಅವರು ನ.13ರಂದು ಬಸ್ ನಿಲ್ದಾಣದಲ್ಲಿ ನಡೆದುಕೊಂಡು ಹೋಗುತ್ತಿದಾಗ ಕುಸಿದು ಬಿದ್ದಿದ್ದರು. ಕೂಡಲೇ ಅವರನ್ನು ನಿತ್ಯಾನಂದ ಒಳಕಾಡು ಅವರು ಜಿಲ್ಲಾ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದರು. ಪರೀಕ್ಷಿಸಿದ ವೈದ್ಯರು, ಸೋಮನಾಥ ಮೃತಪಟ್ಟಿರುವುದನ್ನು ಖಚಿತಪಡಿಸಿದರು. ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
* ಬಂಟ್ವಾಳ: ಶಾಲಾ ವಾಹನ ಢಿಕ್ಕಿ; ಸ್ಕೂಟರ್ ಸವಾರ ಸಾವು
ಬಂಟ್ವಾಳ: ಬಿ.ಸಿ.ರೋಡು-ಪುಂಜಾಲಕಟ್ಟೆ ಹೆದ್ದಾರಿಯ ಮೂಡನಡುಗೋಡು ಗ್ರಾಮದ ಕೊಪ್ಪಳದಲ್ಲಿ ಸ್ಕೂಟರ್ಗೆ ಶಾಲಾ ವಾಹನ (ಟೆಂಪೋ ಟ್ರಾವೆಲರ್) ಢಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ಸವಾರ ಕೊಪ್ಪಳ ನಿವಾಸಿ ಬಾಳಪ್ಪ (63) ಅವರು ಮೃತಪಟ್ಟ ಘಟನೆ ನ. 14ರ ರಾತ್ರಿ ಸಂಭವಿಸಿದೆ. ಕೊಪ್ಪಳದಲ್ಲಿ ಅವರು ಹೊಟೇಲನ್ನು ನಡೆಸುತ್ತಿದ್ದರು.
ನ.14ರಂದು ರಾತ್ರಿ ಹೊಟೇಲ್ಗೆ ದಿನಸಿ ಸಾಮಗ್ರಿ ತರುವುದಕ್ಕಾಗಿ ಸ್ಕೂಟರ್ನಲ್ಲಿ ವಗ್ಗಕ್ಕೆ ತೆರಳಿ ಮರಳುತ್ತಿದ್ದಾಗ ಬಿ.ಸಿ.ರೋಡು ಕಡೆಯಿಂದ ತೆರಳುತ್ತಿದ್ದ ಶಾಲಾ ವಾಹನ ಢಿಕ್ಕಿ ಹೊಡೆದಿದೆ. ಗಂಭೀರ ಗಾಯಗೊಂಡ ಬಾಳಪ್ಪ ಅವರನ್ನು ತತ್ಕ್ಷಣ ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಸಾಗಿಸಲಾಗಿದ್ದು, ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಘಟನೆ ಕುರಿತು ಹೊಟೇಲ್ ಕಾರ್ಮಿಕ ಅವಿ ಡಿ’ ಸೋಜಾ ಪೊಲೀಸರಿಗೆ ದೂರು ನೀಡಿದ್ದು, ಬಂಟ್ವಾಳ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.