ಕಾರ್ಕಳ: ತಾಲೂಕಿನ ಸಾಣೂರು ಯುವಕ ಮಂಡಲವು ಕೇವಲ ವಾರ್ಷಿಕೋತ್ಸವ ಮನೋರಂಜನೆಗೆ ಮಾತ್ರ ಸೀಮಿತವಾಗದೆ ಸಾಮಾಜಿಕ, ಶೈಕ್ಷಣಿಕ ಹಾಗೂ ಧಾರ್ಮಿಕ ಸೇವಾ ಕಾರ್ಯಗಳ ಮೂಲಕ ರಾಜ್ಯಕ್ಕೆ ಮಾದರಿಯಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ ಶ್ರೀಕಾಂತ್ ಶೆಟ್ಟಿ ಹೇಳಿದರು.
ಅವರು ಸಾಣೂರು ಪಠೇಲ್ ಮುದ್ದಣ್ಣ ಶೆಟ್ಟಿ ಸ್ಮಾರಕ ಜ್ಯೋತಿ ಕಲಾ ಮಂಟಪದಲ್ಲಿ ಶನಿವಾರ ನಡೆದ ಸಾಣೂರು ಯುವಕ ಮಂಡಲದ 71ನೇ ವಾರ್ಷಿಕೋತ್ಸವ ಸಂಭ್ರಮ ಹಾಗೂ
ಶ್ರೀ ವಾಣೀ ಯಕ್ಷಗಾನ ಸಭಾ ಯುವಕ ಮಂಡಲ ಇದರ 54ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ತುಳುನಾಡಿನ ಸಂಸ್ಕೃತಿ ಸಭ್ಯತೆ ನಮ್ಮ ಪರಿಸರ ಉಳಿಯಬೇಕಾದರೆ ಯುವಕರು ಜಾಗೃತರಾಗಬೇಕು. ಯುವಕರ ನೇತೃತ್ವದಲ್ಲಿ ತುಳುನಾಡಿನ ಸಾರ್ವಭೌಮತೆ ಉಳಿಸಬೇಕಾಗಿದೆ ಎಂದರು.
ಬರೋಡದ ಉದ್ಯಮಿ ಶಶಿಧರ್ ಶೆಟ್ಟಿ ಅವರು ಸಾಣೂರು ಗ್ರಾಮ ವ್ಯಾಪ್ತಿಯ ಬಡ ಕುಟುಂಬಗಳಿಗೆ ನೆರವಾಗುವ ಆರೋಗ್ಯ ನಿಧಿ ಯೋಜನೆಗೆ ತಮ್ಮ ದೇಣಿಗೆಯನ್ನು ನೀಡುವುದರ ಮೂಲಕ ಆರೋಗ್ಯ ನಿಧಿ ಯೋಜನೆಗೆ ಚಾಲನೆ ನೀಡಿದರು.
ಶಾಶ್ವತ ವಿದ್ಯಾ ನಿಧಿ ಶೈಕ್ಷಣಿಕ ಯೋಜನೆ ಅಡಿಯಲ್ಲಿ ಸುಮಾರು 97,000 ಮೊತ್ತವನ್ನು ಗ್ರಾಮದ ವಿಶೇಷ ಸಾಧನೆಗೈದ ವಿದ್ಯಾರ್ಥಿಗಳಿಗೆ ನೀಡಲಾಯಿತು.
ಈ ಸಂದರ್ಭದಲ್ಲಿ ಶೌರ್ಯ ವಿಪತ್ತು ಘಟಕ ಸಾಣೂರು, ಆಂಜನೇಯ ಭಜನಾ ಮಂಡಳಿ ಸಾಣೂರು, ಸ್ವಚ್ಛ ಕಾರ್ಕಳ ಬ್ರಿಗೇಡ್ ತಂಡವನ್ನು ಅಭಿನಂದಿಸಲಾಯಿತು.
ಯಕ್ಷಶ್ರೀ ಸಂಸ್ಮರಣ ಪ್ರಶಸ್ತಿಯನ್ನು ಇರ್ವತ್ತೂರು ಶಿವಣ್ಣ ಶೆಟ್ಟಿ ಅವರಿಗೆ ನೀಡಿ ಗೌರವಿಸಲಾಯಿತು. ಶೈಕ್ಷಣಿಕ ಸಾಮಾಜಿಕ ಹಾಗೂ ಕ್ರೀಡಾ ಕ್ಷೇತ್ರದಲ್ಲಿ ಸಾಧನೆಗೈದ ಊರಿನ ಸಾಧಕರನ್ನು ಅಭಿನಂದಿಸಲಾಯಿತು.
ವಾರ್ಷಿಕ ಸಂಭ್ರಮದ ಉದ್ಘಾಟನೆಯನ್ನು ಶ್ರೀಮತಿ ಎಸ್.ರೈ ಅವರು ಉದ್ಘಾಟಿಸಿದರು. ಮಂಗಳೂರು ಎಂಸಿಎಫ್ನ ಜಂಟಿ ಪ್ರಧಾನ ಪ್ರಬಂಧಕ ಕೆ.ವಿ.ಕೀರ್ತನ್ ಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು.
ವೇದಿಕೆಯಲ್ಲಿ ಸಾಣೂರು ಗ್ರಾಮ ಪಂಚಾಯತ್ ಅಧ್ಯಕ್ಷ ಯುವರಾಜ ಜೈನ್, ಉದ್ಯಮಿ ಬೋಳ ಪ್ರಶಾಂತ್ ಕಾಮತ್, ನಿವೃತ್ತ ಮುಖ್ಯ ಶಿಕ್ಷಕ ವಸಂತ ಎಂ., ವರ್ಧಮಾನ ಶಿಕ್ಷಣ ಸಂಸ್ಥೆಯ ಅಧ್ಯಕ್ಷೆ ಶಶಿಕಲಾ ಕೆ.ಹೆಗ್ಡೆ, ವೇದಮೂರ್ತಿ ಶ್ರೀರಾಮ್ ಭಟ್ ಸಾಣೂರು, ರಾಜೇಶ್ವರೀ ಎಜುಕೇಶನ್ ಫೌಂಡೇಶನ್ನ ಸಂಸ್ಥಾಪಕ ದೇವಿಪ್ರಸಾದ್ ಶೆಟ್ಟಿ, ಮಹೇಶ್ ಕುಮಾರ್, ಜೀವನ್ ರಾವ್, ವಿಘ್ನೇಶ್ ರಾವ್, ಮುರುಳಿಧರ್ ಸುವರ್ಣ, ಚಂದ್ರಹಾಸ ಪೂಜಾರಿ, ಜಯ ಶೆಟ್ಟಿಗಾರ, ಸುದರ್ಶನ್ ನಾಯಕ್, ಪ್ರಸಾದ್ ಪೂಜಾರಿ ಉಪಸ್ಥಿತರಿದ್ದರು.
ಯುವಕ ಮಂಡಲದ ಅಧ್ಯಕ್ಷ ಗುರುಪ್ರಸಾದ್ ಶೆಟ್ಟಿ ಸ್ವಾಗತಿಸಿದರು. ಕಾರ್ಯದರ್ಶಿ ಪ್ರಕಾಶ್ ರಾವ್ ವರದಿ ವಾಚಿಸಿದರು. ಪ್ರಜ್ವಲ್ ಶೆಟ್ಟಿ ಸಂದೇಶ ವಾಚಿಸಿದರು. ಮೋಹನ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಶಾಲಾ ಮಕ್ಕಳಿಂದ ವಿವಿಧ ನೃತ್ಯ ವೈವಿಧ್ಯ ಕಾರ್ಯಕ್ರಮ ಹಾಗೂ ಮಂಡಲದ ಸದಸ್ಯರಿಂದ ಉಮೇಶ್ ಮಿಜಾರ್ ರಚಿಸಿರುವ ತುಳು ಹಾಸ್ಯಮಯ ನಾಟಕ ಉಲಾ ಪಿದಾಯಿ ನಡೆಯಿತು.
(ಚಿತ್ರ: 19ಕೆವಿ-ಸಾಣೂರು ಯುವಕ ಮಂಡಲ) ಸ್ವಚ್ಛ ಕಾರ್ಕಳ ಬ್ರಿಗೇಡ್ ತಂಡವನ್ನು ಅಭಿನಂದಿಸಲಾಯಿತು.