ಜ. 24ರಿಂದ 3 ದಿನ ಬಿಲ್ಲವ, ಈಡಿಗ ಪಂಗಡಗಳ ವಿಶ್ವ ಸಮ್ಮೇಳನ
– ಮಂಗಳೂರಲ್ಲಿ ಈಡಿಗ ವಿಶ್ವ ಸಮ್ಮೇಳನಕ್ಕೆ ಸಿಎಂ ಚಾಲನೆ
– ಜ.26ಕ್ಕೆ ರಾಷ್ಟ್ರಮಟ್ಟದ ಸಾಂಸ್ಕೃತಿಕ ಸ್ಪರ್ಧೆ ಆಯೋಜನೆ
– ರಾಜ್ಯದ ಮೂಲೆ ಮೂಲೆಯಿಂದ ಈಡಿಗರ ಸಮಾಗಮ
NAMMUR EXPRESS NEWS
ಮಂಗಳೂರು: ಸಸಿಹಿತ್ಲು ಅಗ್ಗಿದಕಳಿಯ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘದ ಸುವರ್ಣ ಮಹೋತ್ಸವ ವರ್ಷಾಚರಣೆ ಪ್ರಯುಕ್ತ ಸಸಿಹಿತ್ಲುವಿನಲ್ಲಿ ಬಿಲ್ಲವ ಸಮುದಾಯಕ್ಕೆ ಪ್ರಾತಿನಿಧ್ಯ ಸಿಗಬೇಕೆಂಬ ಉದ್ದೇಶದಿಂದ ಪಕ್ಷಾತೀತವಾಗಿ ಬಿಲ್ಲವ, ತೀಯಾ, ಆರ್ಯ ಈಡಿಗ, ದೀವರು, ನಾಮಧಾರಿ ಸೇರಿದಂತೆ 26 ಪಂಗಡಗಳ ವಿಶ್ವ ಸಮ್ಮೇಳನ ಹಾಗೂ ರಾಷ್ಟ್ರಮಟ್ಟದ ಸಾಂಸ್ಕೃತಿಕ ಸ್ಪರ್ಧೆ ಜ.24ರಿಂದ 26 ರವರೆಗೆ ನಡೆಯಲಿದೆ. ಸಮ್ಮೇಳನವನ್ನು ಜ.25ರಂದು ಬೆಳಗ್ಗೆ 10.30ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ. ಸಮ್ಮೇಳನದ ಸ್ವಾಗತ ಸಮಿತಿಯ ಸತ್ಯಜಿತ್ ಸುರತ್ಕಲ್ ಈ ಬಗ್ಗೆ ಮಾಹಿತಿ ನೀಡಿ,ಸಸಿಹಿತ್ಲು ಅಗ್ಗಿದಕಳಿಯ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘದ ಆಶ್ರಯದಲ್ಲಿ ನಡೆಯುವ ಈ ಕಾರ್ಯಕ್ರಮಕ್ಕೆ ರಾಜ್ಯದ ವಿವಿಧ ಭಾಗದಿಂದ ಆಗಮಿಸಲಿದ್ದಾರೆ ಎಂದಿದ್ದಾರೆ. ಜ.24ರಂದು ಸಂಜೆ 4 ಗಂಟೆಗೆ ಮುಕ್ಕ ಸತ್ಯಧರ್ಮ ದೇವಿ ದೇವಳದಿಂದ ಸಸಿಹಿತ್ಲು ಗುರು ಮಂದಿರಕ್ಕೆ ಜಾನಪದ ಮೆರವಣಿಗೆ ನಡೆಯಲಿದೆ. ಮುಂಬೈನ ಉದ್ಯಮಿ ಧನಂಜಯ್ ಶೆಟ್ಟಿ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ. ಸಂಜೆ 5.30ಕ್ಕೆ ಸುವರ್ಣ ಸಂಭ್ರಮ ಧ್ವಜಾರೋಹಣವನ್ನು ಮುಂಬೈನ ಸುವರ್ಣ ಬಾಬಾ ನೆರವೇರಿಸುವರು. ಮುಂಬೈ ಸಂಜೀವಿನಿ ಆಸ್ಪತ್ರೆಯ ಡಾ.ಸುರೇಶ್ ರಾವ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಸಂಜೆ 6 ಕ್ಕೆ ಬೀಚ್ ಫೆಸ್ಟಿವಲ್ ಉದ್ಘಾಟನೆ ನಡೆಯಲಿದೆ. 7 ಗಂಟೆಗೆ ಡ್ಯಾನ್ಸ್ ಫೆಸ್ಟ್ ಮುಕ್ತ ನೃತ್ಯ ಸ್ಪರ್ಧೆ, ರಾತ್ರಿ 9.30ಕ್ಕೆ ವಿಶ್ವಾಸ್ ಗುರುಪುರ ಬಳಗದಿಂದ ಬೀಚ್ ರಸಸಂಜೆ ಕಾರ್ಯಕ್ರಮ ಜರುಗಲಿದೆ ಎಂದು ತಿಳಿಸಿದರು.
* ಸಮ್ಮೇಳನಕ್ಕೆ ಸಿಎಂ ಚಾಲನೆ
ಜ.25ರಂದು ಬೆಳಗ್ಗೆ ಸಮ್ಮೇಳನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ. ವಿಧಾನಸಭಾ ಅಧ್ಯಕ್ಷ ಯು.ಟಿ. ಖಾದರ್, ಮಾಜಿ ಕೇಂದ್ರ ಸಚಿವ ಬಿ. ಜನಾರ್ದನ ಪೂಜಾರಿ, ಸಚಿವರಾದ ದಿನೇಶ್ ಗುಂಡೂರಾವ್, ಮಧು ಬಂಗಾರಪ್ಪ, ತೆಲಂಗಾಣ ರಾಜ್ಯಪಾಲ ತಮಿಳ್ ಇಸ್ಯೆ ಸೌಂದರ ರಾಜನ್, ತೆಲಂಗಾಣ ಸಚಿವ ಪೊನ್ನಂ ಪ್ರಭಾಕರ್, ಸಮಾಜದ ಸಂಸದರು, ಶಾಸಕರು, ಮಾಜಿ ಸಂಸದರು, ವಿಧಾನ ಪರಿಷತ್ ಸದಸ್ಯರು ಸೇರಿದಂತೆ ಅನೇಕ ಗಣ್ಯರು ಭಾಗವಹಿಸಲಿದ್ದಾ ಎಂದು ಸತ್ಯಜಿತ್ ಸುರತ್ಕಲ್ ತಿಳಿಸಿದರು.
* ಸಾಧಕರಿಗೆ ಪ್ರಶಸ್ತಿ ಪ್ರದಾನ
ಕಾರ್ಯಕ್ರಮದಲ್ಲಿ ನಾರಾಯಣ ಟಿ. ಪೂಜಾರಿ ಅವರಿಗೆ ಬಿಲ್ಲವ ರತ್ನ, ದಯಾನಂದ್ ಬೋಂಟ್ರರಿಗೆ ಬಿಲ್ಲವ ಸುವರ್ಣ ರತ್ನ, ಬಿಲ್ಲವ ಫ್ಯಾಮಿಲಿ ದುಬೈನ ಎಸ್.ಕೆ. ಪೂಜಾರಿ ಅವರಿಗೆ ಬಿಲ್ಲವ ಸೇವಾ ರತ್ನ, ಮನೋಜ್ ಸರಿಪಳ್ಳಗೆ ಬಿಲ್ಲವ ಯುವ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗುವುದು. 25ರಂದು ಸಂಜೆ 4 ರಿಂದ ರಾಷ್ಟ್ರಮಟ್ಟದ ಸಾಂಸ್ಕೃತಿಕ ಸ್ಪರ್ಧೆ ‘ಸುವರ್ಣ ಸಿರಿ-2025’ ನಡೆಯಲಿದೆ ಎಂದು ಸಮಿತಿಯ ಗೌರವಾಧ್ಯಕ್ಷ ತೇಜೋಮಯ ಹೇಳಿದ್ದಾರೆ.
* ಜ.26ಕ್ಕೆ ರಾಷ್ಟ್ರಮಟ್ಟದ ಸಾಂಸ್ಕೃತಿಕ ಸ್ಪರ್ಧೆ ಆಯೋಜನೆ
ಜ.26ರಂದು ಬೆಳಗ್ಗೆ 9ರಿಂದ ಸಾಂಸ್ಕೃತಿಕ ಸ್ಪರ್ಧೆ ನಡೆಯಲಿದೆ. 11 ಗಂಟೆಗೆ ಸಾಧಕರ ಸಮ್ಮಿಲನ ,ಸಂಜೆ 5 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ. ಮಾಜಿ ಸಚಿವ ಕೃಷ್ಣ ಜೆ. ಪಾಲೆಮಾರ್, ಡಾ.ಎ. ಸದಾನಂದ, ಉದ್ಯಮಿ ಧನಂಜಯ್ ಶೆಟ್ಟಿ ಮತ್ತು ಧರ್ಮಪಾಲ ದೇವಾಡಿಗ ಅವರಿಗೆ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಸುವರ್ಣ ಸಿರಿ ಪುರಸ್ಕಾರ ನೀಡಿ ಗೌರವಿಸಲಿದ್ದಾರೆ. ಸಂಸದ ಕ್ಯಾ. ಬ್ರಿಜೇಶ್ ಚೌಟ, ಶಾಸಕರು, ಮಾಜಿ ಶಾಸಕರು ಭಾಗವಹಿಸಲಿದ್ದಾರೆ. ರಾತ್ರಿ 9 ರಿಂದ ಕಡಲತಡಿಯಲ್ಲಿ ಸಂಗೀತ ರಸ ರಾತ್ರಿ ಕಾರ್ಯಕ್ರಮ ಜರುಗಲಿದೆ. ರಾಷ್ಟ್ರಮಟ್ಟದ ಸಾಂಸ್ಕೃತಿಕ ಸ್ಪರ್ಧೆಗೆ ಪ್ರಥಮ ಬಹುಮಾನ 1 ಲಕ್ಷ ರು. ದ್ವಿತೀಯ 50 ಸಾವಿರ, ತೃತೀಯ 40 ಸಾವಿರ, ಚತುರ್ಥ 30 ಸಾವಿರ ಮತ್ತು ಪಂಚಮ ಬಹುಮಾನ 20 ಸಾವಿರ ನಗದು ಸಹಿತ ಶಾಶ್ವತ ಫಲಕ ನೀಡಲಾಗುತ್ತದೆ. ಭಾಗವಹಿಸುವ ತಂಡಗಳಿಗೆ ತಲಾ 10 ಸಾವಿರ ರು. ನಗದು ನೀಡಲಾಗುವುದು ಎಂದು ಸಮಿತಿಯ ಗೌರವಾಧ್ಯಕ್ಷ ತೇಜೋಮಯ ಹೇಳಿದ್ದಾರೆ. ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘದ ಅಧ್ಯಕ್ಷ ಪ್ರಕಾಶ್ ಕುಮಾರ್ ಬಿ.ಎನ್, ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘದ ಗೌರವಾಧ್ಯಕ್ಷ ಚಂದಯ್ಯ ಬಿ. ಕರ್ಕೇರ, ಸಮ್ಮೇಳನ ಸಮಿತಿ ಕಾರ್ಯದರ್ಶಿ ರಮೇಶ್ ಪೂಜಾರಿ ಚೇಳಾಯರು, ಪ್ರಧಾನ ಕಾರ್ಯದರ್ಶಿ ನರೇಶ್ ಕುಮಾರ್ ಸಸಿಹಿತ್ಲು, ವಿಶ್ವ ಸಮ್ಮೇಳನ ಸಮಿತಿಯ ಎಸ್.ಆರ್. ಪ್ರದೀಪ್, ಬ್ರಹ್ಮ ಶ್ರೀ ನಾರಾಯಣ ಗುರು ಸೇವಾ ಸಂಘದ ಕೋಶಾಧಿಕಾರಿ ವಸಂತ ಪೂಜಾರಿ, ಮಹಿಳಾ ಸಮಿತಿಯ ಅಧ್ಯಕ್ಷೆ ಸರೋಜಿನಿ ಶಾಂತರಾಜ್, ವಿಶ್ವ ಸಮ್ಮೇಳನ ಸಮಿತಿ ಪ್ರಧಾನ ಸಂಚಾಲಕ ಉದಯ ಬಿ. ಸುವರ್ಣ, ಕೋಶಾಧಿಕಾರಿ ಕಿರಣ್ ಕುಮಾರ್, ಸುವರ್ಣ ಮಹೋತ್ಸವ ಸಮಿತಿ ಕೋಶಾಧಿಕಾರಿ ಭಾಸ್ಕರ ಕೋಟ್ಯಾನ್, ಪ್ರಚಾರ ಸಮಿತಿಯ ಮುಕೇಶ್, ಮಾಧ್ಯಮ ಸಮಿತಿಯ ಯಶೋಧರ ಕೋಟ್ಯಾನ್ ಮತ್ತಿತರರು ಸಮಾವೇಶದ ಯಶಸ್ಸಿಗೆ ಕೆಲಸ ಮಾಡುತ್ತಿದ್ದಾರೆ.