ಮತ್ತೆ ಪ್ರತಿಧ್ವನಿಸಿದ ಅಂಬರೀಶ್ ಸಾವು ಪ್ರಕರಣ!
- ಕೇಸ್ ಮುಚ್ಚಿಹಾಕಲು ಗೃಹಸಚಿವ ಆರಗ ಜ್ಞಾನೇಂದ್ರ ಯತ್ನ: ಬೇಳೂರು ಗೋಪಾಲ ಕೃಷ್ಣ ಆರೋಪ
- ಕುಟುಂಬದ ನ್ಯಾಯಕ್ಕಾಗಿ ಪ್ರತಿಭಟನೆ ಎಚ್ಚರಿಕೆ
NAMMUR EXPRESS NEWS
ತೀರ್ಥಹಳ್ಳಿ: ಹೊಸ ನಗರ ನಗರ ಹೋಬಳಿಯ ನೇಗಿಲೋಣಿ ಗ್ರಾಮದ ಅಂಬರೀಶ್ ಎನ್ನುವವರ ಗನ್ ಶಾಟ್ ಪ್ರಕರಣ ಇದೀಗ ರಾಜಕೀಯ ಟರ್ನ್ ಪಡೆದುಕೊಂಡಿದೆ.
ಅಂಬರೀಶ್ ಕೊಲೆ ಕೇಸನ್ನು ಮುಚ್ಚಿಹಾಕಲು ಗೃಹಸಚಿವ ಆರಗ ಜ್ಞಾನೇಂದ್ರ ಪ್ರಯತ್ನಿಸುತ್ತಿದ್ದಾರೆ ಎಂದು ಮಾಜಿ ಶಾಸಕ, ಈಡಿಗ ಸಮುದಾಯದ ಪ್ರಭಾವಿ ನಾಯಕ ಬೇಳೂರು ಗೋಪಾಲ ಕೃಷ್ಣ ಆರೋಪಿಸಿದ್ದು ಭಾರೀ ಚರ್ಚೆಗೆ ಕಾರಣವಾಗಿದೆ. ಆದರೆ ಇತ್ತ ಗೃಹ ಸಚಿವ ಆರಗ ಜ್ಞಾನೇಂದ್ರ ಘಟನೆ ನಡೆದ ಬಳಿಕ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿ ಕಾನೂನು ಪ್ರಕಾರ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚನೆ ನೀಡಿದ್ದರು. ಈ ನಡುವೆ ಮಂಗಳವಾರ ಬೇಳೂರು ಗೋಪಾಲಕೃಷ್ಣ ಮೃತ ಅಂಬರೀಷ್ ಮನೆಗೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ.
ಬೇಳೂರು ಹೇಳಿದ್ದೇನು..?: ನೇಗಿಲೋಣಿ ಗನ್ ಶಾಟ್ ಪ್ರಕರಣದಲ್ಲಿ ಘಟನೆ 26 ದಿನವಾದರೂ ಕುಟುಂಬದವರಿಗೆ ನ್ಯಾಯ ಸಿಕ್ಕಿಲ್ಲ. ಈ ಕೂಡಲೇ ಸರಿಯಾದ ರೀತಿಯಲ್ಲಿ ತನಿಖೆ ನಡೆಸಿ ಕುಟುಂಬದವರಿಗೆ ನ್ಯಾಯ ಕೊಡಿಸದಿದ್ದರೆ ಉಗ್ರ ಹೋರಾಟದ ಮಾಡುತ್ತೇವೆ. ಬಡ ಕುಟುಂಬದ ಅಂಬರೀಶ್ ಎನ್ನುವವನನ್ನು ಕೀರ್ತಿ ಎನ್ನುವ ಯುವಕ ಆಗಸ್ಟ್ 26 ರಾತ್ರಿ ಸಂಜೆ 7 ಗಂಟೆಗೆ ಕರೆದುಕೊಂಡು ಹೋಗುತ್ತಾನೆ. ಮಾರನೇ ದಿನವಾದರೂ ಅಂಬರೀಶ್ ಮನೆಗೆ ಬರದಿದ್ದಾಗ ಎಲ್ಲರೂ ಹುಡುಕಲು ಹೋದಾಗ ಮದ್ಯಾಹ್ನ ದ ವೇಳೆ ಶವ ಸಿಗುತ್ತದೆ. ಕುಟುಂಬದವರು ಪೊಲೀಸರಿಗೆ ಕಂಪ್ಲೇಂಟ್ ಮಾಡದಿದ್ದರೂ ವಿಷಯ ತಿಳಿಸದಿದ್ದರೂ ಆ ಜಾಗಕ್ಕೆ ಪೊಲೀಸರು ಬಂದಿದ್ದಾರೆ. ಕಂಪ್ಲೇಂಟ್ ಆಗದೆ ಏಕಾಏಕಿ ಪೊಲೀಸರು ಆ ಜಾಗಕ್ಕೆ ಹೇಗೆ ಬಂದರು. ಪೊಲೀಸರಿಗೆ ಮಾಹಿತಿ ತಿಳಿಸಿದವರ್ಯಾರು?
ಈ ಘಟನೆ ಅನುಮಾನ ಹುಟ್ಟಿಸಿದೆ. ಹೀಗಾಗಿ ಕೂಡಲೇ ತನಿಖೆ ನಡೆಸಬೇಕು. ಹಿಂದೂ ಕಾರ್ಯಕರ್ತರಾದ ಹರ್ಷ, ಪ್ರವೀಣ್ ಹತ್ಯೆಯಾದಾಗ ಆ ವಿಷಯವನ್ನು ದೊಡ್ಡದಾಗಿ ಮಾಡ್ತೀರಿ, ನಿಮ್ಮ ಕ್ಷೇತ್ರದಲ್ಲಿ ಶೂಟೌಟ್ ಆದರೂ ಕಣ್ಣು ಮುಚ್ಚಿ ಕುಳಿತ್ತಿದ್ದೀರಾ ಎಂದು ಬೇಳೂರು ಪ್ರಶ್ನೆ ಮಾಡಿದ್ದಾರೆ.
ನಾಯಕರಾದ ಟಿ ಎಲ್ ಸುಂದರೇಶ್, ಮಟ್ಟಿನಮನೆ ರಾಮಚಂದ್ರ, ಮಾಸ್ತಿಕಟ್ಟೆ ವಾಸಪ್ಪ, ವಿಕ್ರಂ, ನಾಗರಾಜ್ ಪೂಜಾರಿ, ತಾರಾಮೂರ್ತಿ, ಸೋಮಣ್ಣ, ಪದ್ಮನಾಬ್ ಪೂಜಾರಿ ಸೇರಿ ಹಲವರು ಉಪಸ್ಥಿತರಿದ್ದರು.
ಹಿಂದೂ ಸಾವು ಅಲ್ವಾ ಇದು..?
ಮುಸ್ಲಿಂ ಸಮುದಾಯದವರು ಸಾಯಿಸಿದ್ರೆ ಮಾತ್ರ ಹಿಂದುತ್ವ ಅಂತ ಪ್ರಚಾರ ಕೊಡ್ತೀರಾ, ಇವರು ಹಿಂದೂಗಳಲ್ವಾ?, ಸಾಯಿಸಿರುವ ವ್ಯಕ್ತಿ ಬಿಜೆಪಿ ಕಾರ್ಯಕರ್ತನಾಗಿದ್ದು ತಮ್ಮ ಕಾರ್ಯಕರ್ತರನ್ನು ಉಳಿಸಲು ಈ ರೀತಿ ಪ್ರಯತ್ನವನ್ನು ಗೃಹಸಚಿವರು ಮಾಡುತ್ತಿದ್ದಾರೆ ಎಂದು ಬೇಳೂರು ಗೋಪಾಲಕೃಷ್ಣ ಆರೋಪಿಸಿದ್ದಾರೆ.
ಅಂಗಡಿ ನಾಗರಾಜ್ ಎನ್ನುವವರ ಗನ್ ಎಂದು ಕೀರ್ತಿ ಹೇಳಿದ್ದು ಕೀರ್ತಿನೂ ಹಾಗೂ ನಾಗರಾಜ್ ಇಬ್ಬರು ಕಾಣಿಸುತ್ತಿಲ್ಲ. ಈ ಒಂದು ಕೊಲೆ ಕೇಸನ್ನು ಮುಚ್ಚಿಹಾಕಲು ಗೃಹಸಚಿವ ಆರಗ ಜ್ಞಾನೇಂದ್ರ ಪ್ರಯತ್ನಿಸುತ್ತಿದ್ದಾರೆ.
ಇನ್ನು ಕೀರ್ತಿ ಕುಟುಂಬದವರು ಅಂಬರೀಶ್ ಕುಟುಂಬದವರ ಬಳಿ ಕೇಸ್ ಮುಚ್ಚಿ ಹಾಕಲು ಪೊಲೀಸರ ಸಮ್ಮುಖದಲ್ಲೆ ರಾಜೀಯಾಗಲು ಎರಡು ಲಕ್ಷ ಕೊಡಲು ಬಂದಿದ್ದರು. ಕೂಡಲೇ ತನಿಖೆ ನಡೆಸಿ ಕುಟುಂಬಕ್ಕೆ ನ್ಯಾಯ ಸಿಗಬೇಕು. ಇಲ್ಲವಾದಲ್ಲಿ ನಾವು ಹೋರಾಟ ಮಾಡುತ್ತೇವೆ ಎಂದಿದ್ದಾರೆ