ಮಲೆನಾಡಿನಲ್ಲಿ ಅಬ್ಬರದ ಮಳೆ..!
– ತುಂಗಭದ್ರಾ ಸೇರಿ ಬಹುತೇಕ ಡ್ಯಾಂಗಳ ನೀರಿನ ಮಟ್ಟ ಹೆಚ್ಚಳ
– ಮೈದುಂಬಿದ ತುಂಗೆ, ಶರಾವತಿ, ಭದ್ರೆ: ಜನಜೀವನ ಅಸ್ತವ್ಯಸ್ತ
NAMMUR EXPRESS NEWS
ಮಲೆನಾಡು: ಮಲೆನಾಡಿನಲ್ಲಿ ಮಳೆ ಆರ್ಭಟ ಮುಂದುವರೆದಿದ್ದು, ಶಿವಮೊಗ್ಗ ಮತ್ತು ಚಿಕ್ಕಮಗಳೂರು ಪ್ರಮುಖ ನದಿಗಳು ಮೈದುಂಬಿ ಹರಿಯುತ್ತಿದ್ದು ಜಲಾಶಯಕ್ಕೆ ನೀರಿನ ಹರಿವು ಹೆಚ್ಚಾಗಿದೆ.ರಾಜ್ಯದಲ್ಲಿ ಭರ್ಜರಿ ಮಳೆಯಿಂದಾಗಿ ಕೆರೆ, ಕುಂಟೆ, ಹಳ್ಳ-ಕುಳ್ಳ ಮತ್ತು ನದಿಗಳಲ್ಲಿ ಹರಿವು ಹೆಚ್ಚಾಗಿದೆ. ತೀರ್ಥಹಳ್ಳಿ ಸೇರಿ ಅನೇಕ ಭಾಗದಲ್ಲಿ ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿವೆ. ಎಡಬಿಡದೆ ಮಳೆ ಸುರಿಯುತ್ತಿದೆ. ಜನ ಮನೆಯಿಂದ ಹೊರ ಬರಲು ಸಾಧ್ಯವಾಗುತ್ತಿಲ್ಲ. ಇನ್ನೂ ಮಲೆನಾಡಿನಲ್ಲಿ ಭಾರಿ ಮಳೆ ಯಾಗುತ್ತಿರುವುದರಿಂದ ತುಂಗಭದ್ರಾ ನದಿಗೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ.
ತುಂಗಾ ಜಲಾಶಯಕ್ಕೆ 39 ಸಾವಿರ ಕ್ಯೂಸೆಕ್ಸ್ ಗೂ ಅಧಿಕ ನೀರು ಬರುತ್ತಿದ್ದು ಅಷ್ಟೂ ನೀರನ್ನು ನದಿಗೆ ಬಿಡಲಾಗುತ್ತಿದ್ದು ತುಂಗಾ ನದಿ ಮೈದುಂಬಿ ಹರಿಯುತ್ತಿದೆ. ಅಧಿಕ ಪ್ರಮಾಣದ ಮಳೆ ಆಗುತ್ತಿರುವ ಹಿನ್ನೆಲೆ, ತುಂಗಭದ್ರಾ ಜಲಾಶಯಕ್ಕೆ ಜೀವಕಳೆ ಬಂದಿದೆ. ಪರಿಣಾಮ ಜಲಾಶಯಕ್ಕೆ ಒಳ ಹರಿವಿನ ಪ್ರಮಾಣದಲ್ಲಿ ಮತ್ತಷ್ಟು ಹೆಚ್ಚಳವಾಗಿದೆ. ಕಳೆದ ನಾಲ್ಕು ಐದು ದಿನದಲ್ಲಿ ನಾಲ್ಕಕ್ಕೂ ಅಧಿಕ ಟಿಎಂಸಿ ನೀರು ಜಲಾಶಯಕ್ಕೆ ಹರಿದು ಬಂದಿದೆ. ಬತ್ತಿ ಬರಡಾಗಿದ್ದ ತುಂಗಭದ್ರಾ ಜಲಾಶಯಕ್ಕೆ ಮತ್ತೆ ಮರುಜೀವ ಬಂದಂತಾಗಿದೆ.