-‘ಕುವೆಂಪು ಸಾಹಿತ್ಯ ಮತ್ತು ಸಮಕಾಲೀನತೆ’ ಕುರಿತು ಕಾರ್ಯಗಾರ
-ಗೋಷ್ಠಿಯಲ್ಲಿ ಮಾತನಾಡುವ ಸಂಪನ್ಮೂಲ ವ್ಯಕ್ತಿಗಳು
ತೀರ್ಥಹಳ್ಳಿ: ಕುವೆಂಪು ಕನ್ನಡ ಅಧ್ಯಯನ ಕೇಂದ್ರ ಕುಪ್ಪಳಿ, ಕನ್ನಡ ವಿಶ್ವವಿದ್ಯಾಲಯ ಹಂಪಿ, ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು ಹಾಗೂ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನದ ಸಹಯೋಗದಲ್ಲಿ ಜನವರಿ 20 ಹಾಗೂ 21ರಂದು ಕುಪ್ಪಳಿಯ ಹೇಮಾಂಗಣದಲ್ಲಿ ‘ಕುವೆಂಪು ಸಾಹಿತ್ಯ ಮತ್ತು ಸಮಕಾಲೀನತೆ’ ಕುರಿತು ರಾಷ್ಟ್ರಮಟ್ಟದ ಕಾರ್ಯಾಗಾರ ನಡೆಯಲಿದೆ ಎಂದು ಕಮ್ಮಟದ ನಿರ್ದೇಶಕ ಡಾ.ಬಿ.ಎಂ. ಪುಟ್ಟಯ್ಯ ತಿಳಿಸಿದ್ದಾರೆ.
ಕಾರ್ಯಾಗಾರವನ್ನು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ.ಮನು ಬಳಿಗಾರ್ ಉದ್ಘಾಟಿಸುತ್ತಿದ್ದು, ಅಧ್ಯಕ್ಷತೆಯನ್ನು ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ.ಸ.ಚಿ. ರಮೇಶ ವಹಿಸುವರು.
ಗೋಷ್ಠಿಯಲ್ಲಿ ‘ಶ್ರೀ ರಾಮಾಯಣ ದರ್ಶನಂ ಸಮಕಾಲೀನ ವಿಚಾರಗಳು’ ಕುರಿತು ಡಾ.ರಾಜೆಂದ್ರ ಬುರಡಿಕಟ್ಟಿ, ‘ಕುವೆಂಪು ಸಾಹಿತ್ಯ ವಿಮರ್ಶೆ’ ಕುರಿತು ಡಾ.ಎಚ್. ಶಶಿಕಲಾ, ‘ಕುವೆಂಪು ಕಥೆಗಳ ಮಾದರಿ’ ಬಗ್ಗೆ ಡಾ.ನಾಗಭೂಷಣ ಬಗ್ಗನಡು, ‘ಕುವೆಂಪು ಕಾವ್ಯ: ಸಮಕಾಲೀನತೆ’ ಕುರಿತು ಕಮ್ಮಟ ನಿರ್ದೇಶಕ ಡಾ.ಬಿ.ಎಂ. ಪುಟ್ಟಯ್ಯ, ‘ಕುವೆಂಪು ಸಾಹಿತ್ಯದಲ್ಲಿ ಪರಿಸರ’ದ ಬಗ್ಗೆ ಡಾ.ಲಿಂಗಪ್ಪ ಗೋನಾಳ್ ಹಾಗೂ ‘ಕುವೆಂಪು ನಾಟಕಗಳಲ್ಲಿ ಸಮಕಾಲೀನ ಪ್ರಜ್ಞೆ’ ಕುರಿತು ಡಾ.ಭಾರತೀದೇವಿ ಪಿ. ವಿಷಯ ಮಂಡಿಸುವರು. ನಂತರ ಕಮ್ಮಟಾರ್ಥಿಗಳಿಂದ ಸಾಮೂಹಿಕ ಚರ್ಚೆ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.
ಜನವರಿ 21ರಂದು ‘ಕುವೆಂಪು ಸಾಹಿತ್ಯ ಮತ್ತು ಸಮಕಾಲೀನ ಬದುಕು’ ಗೋಷ್ಠಿಯಲ್ಲಿ ಸಂವಾದಕರಾಗಿ ಡಾ.ಕಲ್ಪನಾ ಎಚ್.ಕೆ., ಕರಗುಂದ ರಾಮಣ್ಣ, ಶಿವಾನಂದ ಕರ್ಕಿ, ಡಾ.ಬಿ. ಗಣಪತಿ, ಡಾ.ರತ್ನಾಕರ ಸಿ., ಡಾ.ರಾಜಶೇಖರ ಹಳೇಮನೆ, ಡಾ.ಪ್ರಕಾಶ ಮರಗನಹಳ್ಳಿ, ಡಾ.ಕೆ.ಎನ್. ಮಂಜುನಾಥ್ ಹಾಗೂ ಡಾ.ದೊರೇಶ್ ಪಾಲ್ಗೊಳ್ಳುವರು.
ಅಂದು ಸಂಜೆ ನಡೆಯಲಿರುವ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಕನ್ನಡ ವಿಶ್ವವಿದ್ಯಾಲಯದ ಕುಲಸಚಿವ ಡಾ.ಎ. ಸುಬ್ಬಣ್ಣ ರೈ ವಹಿಸುವರು. ಕನ್ನಡ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಡಾ.ಎಚ್.ಎಸ್. ರಘುನಾಥ್ ಸಮಾರೋಪ ಭಾಷಣ ಮಾಡುವರು. ಡಾ.ಬಿ.ಎಂ. ಪುಟ್ಟಯ್ಯ ಉಪಸ್ಥಿತರಿರುವರು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.