6 ಮೇಳಗಳಿಂದ ಈವರೆಗೆ “ಶ್ರೀದೇವಿ ಮಹಾತ್ಮೆ ಪ್ರಸಂಗ” ಶತಕ ಪ್ರದರ್ಶನ
– ಶತಕ ದಾಟಿದ ಕಟೀಲು ದೇವಿ ಮಹಾತ್ಮೆ ಯಕ್ಷಗಾನ
– 36 ದಿನಗಳಲ್ಲಿ 216 ಆಟ 109 ದೇವಿ ಮಹಾತ್ಮೆ ಪ್ರಸಂಗ
NAMMUR EXPRESS NEWS
ಕೊಲ್ಲೂರು: ಕಟೀಲು ಯಕ್ಷಗಾನ ಮೇಳಗಳ ಪ್ರಸಕ್ತ ವರ್ಷದ ತಿರುಗಾಟ ಆರಂಭವಾಗಿ 36 ದಿನಗಳು ಕಳೆದಿದ್ದು, 6 ಮೇಳಗಳಿಂದ ಈವರೆಗೆ ಶ್ರೀದೇವಿ ಮಹಾತ್ಮೆ ಪ್ರಸಂಗ ಶತಕ ಪ್ರದರ್ಶನ ಕಂಡು ಮುಂದುವರಿದಿವೆ. ಕಟೀಲು ಕ್ಷೇತ್ರದ ರಥಬೀದಿಯಲ್ಲಿ ನ.25 ರಂದು ಆರೂ ಮೇಳಗಳ ಸೇವೆಯಾಟ ನಡೆದು ಗೆಜ್ಜೆ ಕಟ್ಟಿ ತಿರುಗಾಟಕ್ಕೆ ನ.26ರಂದು ಹೊರಟ ಆರು ಮೇಳಗಳ ತಿರುಗಾಟ 2024ರ ಡಿ.31 ಕ್ಕೆ 36 ದಿನಗಳಾಗಿವೆ. ಕಳೆದ 36 ದಿನಗಳ ತಿರುಗಾಟದಲ್ಲಿ ಒಂದನೇ ಮೇಳದಿಂದ 20, ಎರಡನೇ ಮೇಳದಿಂದ 20, ಮೂರನೇ ಮೇಳದಿಂದ 18, ನಾಲ್ಕನೇ ಮೇಳದಿಂದ 14, ಐದನೇ ಮೇಳದಿಂದ 19 ಹಾಗೂ ಆರನೇ ಮೇಳದಿಂದ 18 ಶ್ರೀದೇವಿ ಮಹಾತ್ಮೆ ಪ್ರಸಂದ ಪ್ರದರ್ಶಿತವಾಗಿವೆ.
– ಎರಡಂಕೆ ತಲುಪಿಲ್ಲ ಕಟೀಲು ಕ್ಷೇತ್ರ ಮಹಾತ್ಮೆ
ಕಟೀಲು ಕ್ಷೇತ್ರ ಮಹಾತ್ಮೆ 9 ಪ್ರದರ್ಶನಗಳನ್ನು ಮಾತ್ರ ಕಂಡಿದೆ. 1 ನೇ ಮೇಳದಿಂದ ಒಂದು, 2, 3, 4 ಹಾಗೂ 6ನೇ ಮೇಳಗಳು ತಲಾ 2 ಪ್ರದರ್ಶನ ನೀಡಿವೆ. 5 ನೇ ಮೇಳದಲ್ಲಿ ಈವರೆಗೂ ಕಟೀಲು ಕ್ಷೇತ್ರ ಮಹಾತ್ಮೆ ಪ್ರದರ್ಶನವಾಗಿಲ್ಲ. ಎಕ್ಕಾರು ಗುಡ್ಡೆಸಾನದ ಸ್ವಾಗತ ಗೋಪುರದ ಬಳಿ ಈವರೆಗೆ ಕಟೀಲಿನ 3 ಬಯಲಾಟಗಳು ನಡೆದಿದ್ದು ಮೂರು ಕೂಡ ಶ್ರೀದೇವಿ ಮಹಾತ್ಮೆಯೇ ಆಗಿತ್ತು. ಮತ್ತೊಂದು ವಿಶೇಷವೆಂದರೆ ಕಾಲಮಿತಿಗೆ ಒಗ್ಗಿ ಹೋದ ಪ್ರೇಕ್ಷಕರು, ಪೂರ್ತಿ ಆಟ ನೋಡುವತ್ತ ಮನಸ್ಸು ಮಾಡಿದ್ದು ಮಾತ್ರವಲ್ಲದೆ ಊಟ-ಉಪಾಹಾರ ಸತ್ಕಾರದ ವಿಚಾರದಲ್ಲೂ ಸಂಘಟಕರು ಖುಷಿ ಕಾಣುತ್ತಿದ್ದಾರೆ. ಇವೆಲ್ಲವುಗಳ ಮಧ್ಯೆ ಶ್ರೀದೇವಿ ಮಹಾತ್ಮೆ ಪ್ರದರ್ಶನವೇ ಹೆಚ್ಚಾಗಿ ಪ್ರದರ್ಶನಗೊಳ್ಳುತ್ತಿರುವುದಕ್ಕೆ ಸೇವಾಕರ್ತರ ಭಕ್ತಿಭಾವವೇ ಪ್ರಧಾನ ಕಾರಣವೆನ್ನಲಾಗಿದೆ.
– ವಿಶೇಷತೆಗಳು :-
*36 ದಿನಗಳ ತಿರುಗಾಟದಲ್ಲಿ ಕಟೀಲು ಕ್ಷೇತ್ರದಲ್ಲಿ ಆಟವೇ ಇಲ್ಲದ ದಿನಗಳು 2 ಮಾತ್ರ. ಉಳಿದೆಲ್ಲ ದಿನಗಳಲ್ಲಿ ಕ್ಷೇತ್ರದ ಸರಸ್ವತಿ ಸದನ, ಮಹಾಲಕ್ಷ್ಮೀ ಸದನಗಳಲ್ಲಿ ಕನಿಷ್ಠ ಒಂದಾದರೂ ಪ್ರದರ್ಶನವಿತ್ತು.
*ಒಂದೇ ದಿನ 2 ಕಡೆ ಕಟೀಲು ಕ್ಷೇತ್ರ ಮಹಾತ್ಮೆ ಪ್ರದರ್ಶನಗೊಂಡ ಸಂದರ್ಭ ಒಂದು ಬಾರಿ.
*ಶ್ರೀಮಹಾದೇವಿ ಲಲಿತೋಪಖ್ಯಾನ ಪ್ರಸಂಗವನ್ನು ಐದನೇ ಮೇಳ 3 ಕಡೆ, 6ನೇ ಮೇಳ 1 ಕಡೆ ಮಾತ್ರ ಪ್ರದರ್ಶಿಸಿದೆ.
*ದೇವಿ ಮಹಾತ್ಮೆ ಪ್ರದರ್ಶನವೇ ಇಲ್ಲದ ದಿನ ಯಾವುದೂ ಇಲ್ಲ.
*ಒಂದೇ ದಿನ ಗರಿಷ್ಠ 5 ದೇವಿ ಮಹಾತ್ಮೆ ಡಿ.21 ರಂದು ಪ್ರದರ್ಶನಗೊಂಡಿದೆ.
*ಡಿ.13ರಂದು ಒಂದೇ ದಿನ ಒಂದೇ ದೇವಿ ಮಹಾತ್ಮೆ ಪ್ರದರ್ಶನ ಕಂಡಿದೆ.
*ಈವರೆಗೆ ಒಂದೇ ದಿನ 2 ದೇವಿ ಮಹಾತ್ಮೆ 10 ಬಾರಿ, 3 ದೇವಿ ಮಹಾತ್ಮೆ 9 ಬಾರಿ, 4 ದೇವಿ ಮಹಾತ್ಮೆ 12 ಬಾರಿ ಪ್ರದರ್ಶನಗೊಂಡಿದೆ.