ತೀರ್ಥಹಳ್ಳಿ ದಸರಾ ಎಷ್ಟೊಂದು ಸುಂದರ…!
- ಅ.3 ರಿಂದ 5ರವರೆಗೆ ಅದ್ದೂರಿ ದಸರಾ ಆಚರಣೆಗೆ ನಿರ್ಧಾರ
- 15 ಲಕ್ಷ ವೆಚ್ಚದಲ್ಲಿ ಸಂಭ್ರಮದ ದಸರಾ
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿಯಲ್ಲಿ ಅದ್ಧೂರಿಯಾಗಿ ದಸರಾ ಉತ್ಸವ ನಡೆಸಲು ಸಿದ್ಧತೆ ನಡೆದಿದ್ದು ಈ ಬಾರಿ ಮಹಿಳಾ ಮತ್ತು ಮಕ್ಕಳ ದಸರಾ ಕೂಡ ಗಮನ ಸೆಳೆಯಲಿದೆ.
ಮಲೆನಾಡಿನಲ್ಲಿ ಸಾಂಸ್ಕೃತಿಕ ವೈಭವ ಇರುವ ತೀರ್ಥಹಳ್ಳಿ ದಸರಾ ಭಾರೀ ಫೇಮಸ್. ಇಲ್ಲಿನ ರಾಮೇಶ್ವರ ದೇವರ ಮೆರವಣಿಗೆ ಜತೆಗೆ ದಸರಾ ಸಂಭ್ರಮ, ವಿವಿಧ ಕಲಾ ತಂಡಗಳ ರಂಗು, ಟ್ಯಾಬ್ಲೋಗಳು ಗಮನ ಸೆಳೆಯುತ್ತವೆ. ಹಬ್ಬದ ಮಾದರಿಯಲ್ಲಿ ದಸರಾ ನಡೆಯಲಿದೆ.ಈ ವರ್ಷ ಅದ್ದೂರಿ ದಸರಾ ನಡೆಸಲು ತೀರ್ಮಾನಿಸಲಾಗಿದೆ.
ಕಳೆದ ವರ್ಷ 7-8 ಲಕ್ಷ ಬಜೆಟ್ ಅಲ್ಲಿ ದಸರಾ ಮುಗಿದಿದ್ದು ಈ ವರ್ಷಸುಮಾರು 15 ಲಕ್ಷ ವೆಚ್ಚದಲ್ಲಿ ದಸರಾ ಆಚರಣೆ ಮಾಡಲು ಸೋಮವಾರ ನಡೆದ ಸಭೆಯಲ್ಲಿ ನಿರ್ಧಾರ ಮಾಡಲಾಯಿತು.
ಗೃಹ ಸಚಿವ ಆರಗ ಜ್ಞಾನೇಂದ್ರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ 3 ದಿನ ಅದ್ದೂರಿ ದಸರಾ ಆಚರಣೆ ಮಾಡಲು ನಿರ್ಧಾರ ಮಾಡಲಾಯಿತು. ಟ್ಯಾಬ್ಲೋ, ಸಾಂಸ್ಕೃತಿಕ ಕಾರ್ಯಕ್ರಮ, ಪಟ್ಟಣ ಅಲಂಕಾರ ಚೆಂದ ಮಾಡಲು ನಿರ್ಧಾರ ಮಾಡಲಾಗಿದೆ.
ತೀರ್ಥಹಳ್ಳಿಯಲ್ಲಿ ಸಂಭ್ರಮದ ದಸರಾ ಉತ್ಸವವನ್ನು ಆಚರಿಸುವ ಸಲುವಾಗಿ ಪೂರ್ವಭಾವಿ ಸಭೆಯಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರರವರ ಅಧ್ಯಕ್ಷತೆಯಲ್ಲಿ ನಡೆಯಿತು. ವೇಳೆ ಅದ್ದೂರಿ ಆಚರಣೆಗೆ ನಿರ್ಧಾರ ಮಾಡಲಾಯಿತು.
ಆನೆ ಕರೆಸಲು ಪಟ್ಟು!: ತೀರ್ಥಹಳ್ಳಿಯಲ್ಲಿ ಪ್ರತಿಯೊಬ್ಬರು ದಸರಾಕ್ಕೆ ಆನೆ ಕರೆಸಬೇಕು ಎಂದು ಆಸೆ ಹೊತ್ತಿದ್ದಾರೆ ಈ ಬಾರಿ ಗೃಹಸಚಿವರು ಇರುವುದರಿಂದ ಆನೆ ಕರೆಸುವುದು ಕಷ್ಟವಾಗುವುದಿಲ್ಲ ಎಂದು ಅನೇಕರು ಅಭಿಪ್ರಾಯ ವ್ಯಕ್ತಪಡಿಸಿದಾಗ ಉತ್ತರಿಸಿದ ಸಚಿವರು ಈ ಬಾರಿ ತೀರ್ಥಹಳ್ಳಿಯಲ್ಲಿ ಅದ್ಧೂರಿಯಾಗಿ ದಸರಾ ಉತ್ಸವ ಆಚರಿಸಬೇಕೆಂದು ಎಲ್ಲರ ಅಭಿಪ್ರಾಯವಾಗಿದ್ದು ಹೀಗಾಗಿ ಈ ಬಾರಿ ವಿಜೃಂಭಣೆಯ ದಸರಾ ನಡೆಸೋಣ. ಆನೆ ಕರೆಸುವುದು ದೊಡ್ಡ ವಿಷಯವಲ್ಲ ಆದರೆ ಅದು ಬಂದು ಹೆಚ್ಚು ಕಡಿಮೆ ಆದರೆ ತೀರ್ಥಹಳ್ಳಿಯಲ್ಲಿ ಓಡಲು ಕೂಡ ಜಾಗವಿಲ್ಲ. ಮೈಸೂರಿನಲ್ಲಿ ಒಂದು ತಿಂಗಳ ಮುಂಚೆಯೇ ಆನೆಯನ್ನು ತರಿಸಿ ಅದಕ್ಕೆ ತರಬೇತಿ ನೀಡುತ್ತಾರೆ. ವಾದ್ಯ, ಪಟಾಕಿ ಶಬ್ಧಕ್ಕೆ ಹೆದರದಂತೆ ಅಭ್ಯಾಸ ನಡೆಸುತ್ತಾರೆ. ನಾವು ತೀರ್ಥಹಳ್ಳಿ ಯಲ್ಲಿ ದಸರಾ ದಿನವೇ ಆನೆಯನ್ನು ಕರೆದುಕೊಂಡು ಬರುತ್ತೇವೆ, ಅಂಬಾರಿ ಹೊರೆಸುತ್ತೇವೆ. ತರಬೇತಿ ಇಲ್ಲದೇ ಏನಾದರೂ ಹೆಚ್ಚು ಕಡಿಮೆಯಾದಲ್ಲಿ ತೊಂದರೆಯಾಗುತ್ತದೆ. ಈ ಬಗ್ಗೆ ಯೋಚಿಸಿ ನಿರ್ಧಾರ ಮಾಡೋಣ ಎಂದರು.
ಹುಲಿವೇಷ ಸ್ಪರ್ಧೆ ಗೋಪಾಲಗೌಡ ರಂಗಮಂದಿರದಲ್ಲಿ ನಡೆಯುತ್ತದೆ. ಇಲ್ಲಿ ನಡೆದರೆ ದಸರಾ ಕಾರ್ಯಕ್ರಮದಲ್ಲಿ ಜನ ಇರುವುದಿಲ್ಲ. ಜನರೆಲ್ಲರೂ ಹುಲಿವೇಷ ಸ್ಪರ್ಧೆ ನೋಡಲು ಗೋಪಾಲಗೌಡ ರಂಗಮಂದಿರಕ್ಕೆ ಬರುತ್ತಾರೆ. ಆದ್ದರಿಂದ ಈ ಸ್ಪರ್ಧೆಯನ್ನು ಕುಶಾವತಿಯ ಬನ್ನಿ ಮಂಟಪದ ಸಮೀಪವೇ ನಡೆಸಬೇಕು ಎಂದು ಸಲಹೆ ನೀಡಲಾಯಿತು.
ನಾಗರಾಜ್ ಶೆಟ್ಟಿ, ತಹಸೀಲ್ದಾರ್ ಅಮೃತ್ ಅತ್ರೇಶ್, ಪ. ಪಂ. ಮುಖ್ಯಾಧಿಕಾರಿ ಕುರಿಯಕೋಸ್, ಸೊಪ್ಪುಗುಡ್ಡೆ ರಾಘವೇಂದ್ರ, ಸಂದೇಶ್ ಜವಳಿ, ಪ.ಪಂ. ಪ್ರಭಾರ ಅಧ್ಯಕ್ಷರಾದ ಜಯಪ್ರಕಾಶ್ ಶೆಟ್ಟಿ, ಡಾ. ನಟರಾಜ್, ಆಶಾಲತಾ, ಸೇರಿ ಹಲವರು ಉಪಸ್ಥಿತರಿದ್ದರು.
ಅ.3-5ರವರೆಗೆ ದಸರಾ ಹಬ್ಬ!
- ದಸರಾ ಸಮಿತಿಗೆ ಜವಳಿ ಸಂಚಾಲಕ
ತೀರ್ಥಹಳ್ಳಿಯಲ್ಲಿ ಅ.3ರಂದು ದಸರಾ ಶುರುವಾಗಿ ಅ.5ಕ್ಕೆ ಬನ್ನಿ ಮಂಟಪದಲ್ಲಿ ಬನ್ನಿ ಕಡಿಯುವ ಮೂಲಕ ಕಾರ್ಯಕ್ರಮ ಕೊನೆಗೊಳ್ಳುತ್ತದೆ. ಪ್ರತಿ ದಿನ ಸಾಂಸ್ಕೃತಿಕ ಕಾರ್ಯಕ್ರಮ ಇರುತ್ತದೆ. ತಹಸೀಲ್ದಾರ್ ಸಮಿತಿ ಅಧ್ಯಕ್ಷರಾಗಿದ್ದು ಗೃಹ ಸಚಿವ ಆರಗ ಜ್ಞಾನೇಂದ್ರ ಗೌರವ ಅಧ್ಯಕ್ಷರಾಗಿದ್ದಾರೆ. ಆರ್ಥಿಕ ಸಂಚಾಲಕರಾಗಿ ಸೊಪ್ಪುಗುಡ್ಡೆ ರಾಘವೇಂದ್ರ ಅವರನ್ನು ಆಯ್ಕೆ ಮಾಡಲಾಗಿದೆ.