ಟಾಪ್ 3 ನ್ಯೂಸ್ ಮಲ್ನಾಡ್
– ಸಾಗರ ಮೂಲದ ಯುವಕನಲ್ಲೂ ಝಿಕಾ ವೈರಸ್!
– ಹೊಸನಗರ: ಭಾರಿ ಮಳೆಗೆ ಮನೆ ಗೋಡೆ ಕುಸಿತ
– ಶಿವಮೊಗ್ಗ: ಸ್ವಂತ ಮನೆಯನ್ನೇ ದೇಗುಲಕ್ಕೆ ಬರೆದುಕೊಟ್ಟ ಮಹಿಳೆ!
NAMMUR EXPRESS NEWS
ಸಾಗರ: ಶಿವಮೊಗ್ಗದಲ್ಲಿ ವೃದ್ಧ ಸಾವಿನ ಬೆನ್ನಲ್ಲೇ ಸಾಗರ ಮೂಲದ ಯುವಕನಲ್ಲೂ ಝಿಕಾ ವೈರಸ್ ಸೋಂಕು ಪತ್ತೆಯಾಗಿದೆ.ಸಾಗರ ಮೂಲದ 24 ವರ್ಷದ ಯುವಕನಲ್ಲಿ ಝಿಕಾ ವೈರಸ್ ಸೋಂಕು ಪತ್ತೆಯಾಗಿದೆ. ಝಿಕಾ ವೈರಸ್ಗೆ 74 ವರ್ಷದ ವೃದ್ಧ ಬಲಿಯಾಗಿದ್ದು ರಾಜ್ಯದಲ್ಲಿ ಝಿಕಾ ವೈರಸ್ ಹೆಚ್ಚಾಗುವ ಆತಂಕ ವ್ಯಕ್ತವಾಗಿದೆ.
– ಹೊಸನಗರ: ಭಾರಿ ಮಳೆಗೆ ಮನೆ ಗೋಡೆ ಕುಸಿತ !
ಹೊಸನಗರ : ಪಟ್ಟಣದಲ್ಲಿ ಸುರಿದ ಭಾರೀ ಮಳೆಗೆ ಮನೆಯ ಗೋಡೆ ಕುಸಿದು ನಷ್ಟ ಸಂಭವಿಸಿದ ಘಟನೆ ನಡೆದಿದೆ. ಪಟ್ಟಣದ ಹತ್ತನೇ ವಾರ್ಡ್ ವಾಸಿ ಲೇ. ಶಾರದಮ್ಮ ಕೋಂ ಶ್ರೀನಿವಾಸ್ (LIC ಕಚೇರಿ ಪಕ್ಕ) ಅವರ ಮನೆಗೋಡೆ ಕುಸಿದಿದ್ದು ಸ್ಥಳಕ್ಕೆ ಗ್ರಾಮ ಆಡಳಿತಾಧಿಕಾರಿ ಕೌಶಿಕ್ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತಿ ಸದಸ್ಯ ಗುರುರಾಜ್ ಬಜಾಜ್ ಹಾಗೂ ಮನೆ ಮಾಲೀಕ ಸತೀಶ್ ಶೇಟ್ ಇದ್ದರು.
ಸ್ವಂತ ಮನೆಯನ್ನೇ ದೇಗುಲಕ್ಕೆ ಬರೆದುಕೊಟ್ಟ ಶಿವಮೊಗ್ಗದ ಮಹಿಳೆ!
ಶಿವಮೊಗ್ಗ: ಇಲ್ಲೊಬ್ಬ ವೃದ್ಧೆ ಮಹಿಳೆಯೊಬ್ಬರು ತಮ್ಮ ಮನೆ ಹಾಗೂ ಹಣವನ್ನು ಊರಿನ ದೇವಸ್ಥಾನಕ್ಕೆ ದಾನ ನೀಡುವ ಮೂಲಕ ಮಾದರಿಯಾಗಿದ್ದಾರೆ. ವೃದ್ಧೆಯೊಬ್ಬರು ತಮ್ಮ ಕುಟುಂಬದ ಸಂಪೂರ್ಣ ಆಸ್ತಿಯನ್ನು ಗ್ರಾಮದ ದೇವಸ್ಥಾನಕ್ಕೆ ಬಿಟ್ಟುಕೊಡುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಆಯನೂರು ಬಳಿಯ ಚಾಮುಂಡಿಪುರ ಗ್ರಾಮದ ವಾಸಿಯಾಗಿರುವ 80 ವರ್ಷದ ಶಾರದಾ ಅವರು ಲಕ್ಷಾಂತರ ರೂಪಾಯಿ ಬೆಲೆ ಬಾಳುವ ತಮ್ಮ ವಾಸದ ಮನೆ ಹಾಗೂ ಜೀವನ ನಿರ್ವಹಣೆಗೆಂದು ಬ್ಯಾಂಕ್ನಲ್ಲಿಟ್ಟದ್ದ 5 ಲಕ್ಷ ರೂಪಾಯಿ ಠೇವಣಿಯನ್ನು ಗ್ರಾಮದ ಶ್ರೀ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಬರೆದುಕೊಟ್ಟಿದ್ದಾರೆ. “ನಾನು ಗ್ರಾಮದ ಚಾಮುಂಡಿ ದೇವಸ್ಥಾನದಲ್ಲಿ ನಾಲ್ಕೈದು ವರ್ಷ ಸೇವೆ ಮಾಡಿದ್ದೇನೆ. ಅಲ್ಲಿ ಕಸ ಗುಡಿಸುವ, ನೆಲ ಒರೆಸುವ ಕೆಲಸ ಮಾಡಿದ್ದೇನೆ. ಇತ್ತೀಚೆಗೆ ನನ್ನ ಪತಿ ದಮ್ಮಿನಿಂದಾಗಿ ಮೃತಪಟ್ಟರು. ಅದಾದ ನಂತರ ಇತ್ತೀಚೆಗೆ ದೇವಿ ನನಗೆ ಕನಸಿನ ರೂಪದಲ್ಲಿ ಬಂದು ಕಾಣಿಸುತ್ತಿದ್ದಳು. ಪತಿಯ ನಿಧನದ ನಂತರ ದೇವಿ ನನಗೆ ನಾನಾ ರೂಪದಲ್ಲಿ ಕನಸಿನಲ್ಲಿ ಬರುತ್ತಿದ್ದಳು. ಹೀಗಾಗಿ ನಾನು ಅಂತಿಮವಾಗಿ ಪತಿಯ ದುಡಿಮೆ ಹಣ ಹಾಗೂ ನಾನು ಗ್ರಾಮದ ಪ್ರಮುಖರ ಮನೆಯಲ್ಲಿ ಕೂಲಿ ಕೆಲಸ ಮಾಡಿ ದುಡಿದ ಹಣ ಹಾಗೂ ಮನೆಯನ್ನು ದೇವಸ್ಥಾನಕ್ಕೆ ಬರೆದುಕೊಟ್ಟಿದ್ದೇನೆ. ನನ್ನದೆಲ್ಲವನ್ನೂ ಆ ಅಮ್ಮನ ಪಾದಕ್ಕೆ ಅರ್ಪಿಸಿದ್ದೇನೆ” ಎಂದು ಶಾರದಮ್ಮ ಹೇಳುತ್ತಾರೆ.