ಟಾಪ್ 4 ನ್ಯೂಸ್ ಮಲ್ನಾಡ್
– ರಾಜ್ಯದಲ್ಲಿ ‘ಝೀಕಾ’ ವೈರಸ್ ಗೆ ಮೊದಲ ಬಲಿ!
– ಶಿವಮೊಗ್ಗದಲ್ಲಿ 74 ವರ್ಷದ ವೃದ್ಧ ಸಾವು
– ಶಿಕಾರಿಪುರ: ಭಟ್ಕಳದಲ್ಲಿ ಶಿಕಾರಿಪುರದ ಭಿಕ್ಷುಕ ಸಾವು
– ಶಿವಮೊಗ್ಗ: ಬಾವಿಗೆ ಬಿದ್ದು ಗೃಹಿಣಿ ಸಾವು
– ಹೊಸನಗರ: ಕಾಡುಕೋಣಗಳ ದಾಳಿ: ಜನರಿಗೆ ಭಯ
NAMMUR EXPRESS NEWS
ಶಿವಮೊಗ್ಗ: ರಾಜ್ಯದಲ್ಲಿ ಝೀಕಾ ವೈರಸ್ ಗೆ ಮೊದಲ ಬಲಿಯಾಗಿದೆ.
ಶಿವಮೊಗ್ಗದಲ್ಲಿ ಝೀಕಾ ವೈರಸ್ ಗೆ ವೃದ್ಧರೊಬ್ಬರೂ ಸಾವನ್ನಪ್ಪಿದ್ದಾರೆ. ಶಿವಮೊಗ್ಗ ಜಿಲ್ಲೆಯ ಗಾಂಧಿ ನಗರದ ನಿವಾಸಿಯ ವೃದ್ಧರು ಜೂನ್ 19ರಂದು ತೀವ್ರ ಜ್ವರದಿಂದ ಬಳಲುತ್ತಿದ್ದರು. ಜೂನ್ 21ರಂದು ಝೀಕಾ ವೈರಸ್ ಪತ್ತೆಯಾಗಿತ್ತು. ಹಾಗಾಗಿ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ವೃದ್ಧರು ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ನಂತರ ಡಿಸ್ಚಾರ್ಜ್ ಆಗಿದ್ದರು. ಅದಾದ ಬಳಿಕ ಕುಟುಂಬದವರು ಗುರುವಾರ ಮನೆಗೆ ಕರೆದುಕೊಂಡು ಹೋಗಿದ್ದರು. ಶುಕ್ರವಾರ ಮನೆಯಲ್ಲಿ 74 ವರ್ಷದ ವೃದ್ಧರು ಝೀಕಾ ವೈರಸ್ ನಿಂದ ಮೃತಪಟ್ಟಿದ್ದಾರೆ. ಹೀಗಾಗಿ ಶಿವಮೊಗ್ಗದಲ್ಲಿ ಜೀವ ವೈರಸ್ ಗೆ 74 ವರ್ಷದ ವೃದ್ಧರು ಮೊದಲ ಬಲಿಯಾಗಿದ್ದಾರೆ.
– ಶಿಕಾರಿಪುರ: ಭಟ್ಕಳದಲ್ಲಿ ಶಿಕಾರಿಪುರದ ಭಿಕ್ಷುಕ ಸಾವು
ಶಿಕಾರಿಪುರ: ಉತ್ತರ ಕನ್ನಡ ಜಿಲ್ಲೆ ಭಟ್ಕಳದ ಹಳೇ ಬಸ್ ನಿಲ್ದಾಣ ಬಳಿ ಮಲಗಿದ್ದಲ್ಲಿಯೇ ಶಿಕಾರಿಪುರ ಮೂಲದ ಭಿಕ್ಷುಕ ಮೃತಪಟ್ಟಿರುವ ಘಟನೆ ನಡೆದಿದೆ. ಈ ಕುರಿತು ಭಟ್ಕಳ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದ ಆಶ್ರಯ ಬಡಾವಣೆ ನಿವಾಸಿ ರೆಹಮತುಲ್ಲಾ ಬಹಾದ್ದೂರಸಾಬ್ (65) ಮೃತ ವ್ಯಕ್ತಿ. ಈತ ಭಟ್ಕಳಕ್ಕೆ ಭಿಕ್ಷೆ ಬೇಡುವ ಸಲುವಾಗಿ ಬಂದವನು ಎಂದು ತಿಳಿದುಬಂದಿದೆ. ಜು.3ರಂದು ಸಾಯಂಕಾಲ 5 ಗಂಟೆಗೆ ಭಟ್ಕಳ ಹಳೇ ಬಸ್ ನಿಲ್ದಾಣ ಬಳಿ ಶ್ರೀ ಬೃಂದಾವನ ಜ್ಯುವೆಲ್ಲರಿ ವರ್ಕ್ಸ್ ಅಂಗಡಿಯ ಎದುರುಗಡೆ ಅಸ್ವಸ್ಥನಾಗಿ ಮಲಗಿಕೊಂಡಿದ್ದ. ಜುಲೈ 4ರ ಬೆಳಿಗ್ಗೆ 9 ಗಂಟೆಯ ನಡುವಿನ ಅವಧಿಯಲ್ಲಿ ಮಲಗಿದ್ದಲ್ಲಿಯೇ ಮೃತಪಟ್ಟಿದ್ದಾನೆ.
– ಶಿವಮೊಗ್ಗ: ಬಾವಿಗೆ ಬಿದ್ದು ಗೃಹಿಣಿ ಸಾವು
ಶಿವಮೊಗ್ಗ: ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದ ಮಹಿಳೆ ಯೊಬ್ಬರು ಬಾವಿಗೆ ಬಿದ್ದು ಸಾವನ್ನಪ್ಪಿರುವ ಘಟನೆ ಸೊರಬ ತಾಲೂಕು ಕಾರಗೋಡು ಗ್ರಾಮದಲ್ಲಿ ಸಂಭವಿಸಿದೆ. ರೇಖಾ (35) ಮೃತ ಮಹಿಳೆ. ರೇಖಾ ಅವರನ್ನು ಸಿದ್ದಾಪುರ ತಾಲ್ಲೂಕಿನ ಮಂಡ್ಲಿಕೊಪ್ಪ ಗ್ರಾಮಕ್ಕೆ ಮದುವೆ ಮಾಡಿಕೊಡಲಾಗಿತ್ತು. ಈ ನಡುವೆ ಮಾನಸಿಕ ಕಾಯಿಲೆಯಿಂದ ರೇಖಾ ಬಳಲುತ್ತಿದ್ದರು ಎನ್ನಲಾಗಿದೆ. ಇತ್ತೀಚೆಗೆ ತವರು ಮನೆಗೆ ಬಂದಿದ್ದರು. ಬುಧವಾರ ರಾತ್ರಿ ಅವರು ತಮ್ಮ ಮನೆಯ ಹಿತ್ತಲಿನಲ್ಲಿರುವ ಬಾವಿಗೆ ಅವರು ಬಿದ್ದಿದ್ದಾರೆ. ಮನೆಯಲ್ಲಿ ರೇಖಾ ಕಾಣದ ಹಿನ್ನೆಲೆಯಲ್ಲಿ ಅವರಿಗಾಗಿ ಎಲ್ಲೆಡೆ ಹುಡುಕಾಡಿದ ಮನೆಯವರಿಗೆ ಗುರುವಾರ ಬೆಳಗ್ಗೆ ಬಾವಿಯಲ್ಲಿ ಶವ ತೇಲುತ್ತಿರುವುದು ಕಂಡಿದೆ. ಸೊರಬ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.
– ಹೊಸನಗರ: ಕಾಡುಕೋಣಗಳ ದಾಳಿಯಿಂದ ಕಂಗೆಟ್ಟ ಗ್ರಾಮಸ್ಥರು
ಹೊಸನಗರ: ಹೊಸನಗರ ತಾಲೂಕಿನ ಯಡೂರು, ಸುಳುಗೋಡು ಭಾಗದಲ್ಲಿ ಕಾಡುಕೋಣಗಳ ಹಾವಳಿ ಹೆಚ್ಚಾಗಿದ್ದು ಗ್ರಾಮಸ್ಥರು ಹೈರಾಣಾಗಿದ್ದಾರೆ.ಯಡೂರು ಮತ್ತು ಸುಳುಗೋಡು ಗ್ರಾಪಂ ವ್ಯಾಪ್ತಿಯ ಅನೇಕ ಅಡಿಕೆ ತೋಟಗಳಿಗೆ ನುಗ್ಗಿ ದಾಂಧಲೆ ನಡೆಸುತ್ತಿವೆ. ಕಳೆದ ಒಂದು ತಿಂಗಳಿಂದ ರೈತ ಜಮೀನು ಕಾಡುಕೋಣಗಳ ಹಾವಳಿಗೆ ತುತ್ತಾಗಿದ್ದು ತಮ್ಮ ಬೆಳೆಗಳನ್ನು ರಕ್ಷಿಸಲು ರೈತರು ಹೆಣಗಾಡುವಂತಾಗಿದೆ. ಈಭಾಗದಲ್ಲಿ ಒಂಟಿಮನೆಗಳು ಹೆಚ್ಚಿದ್ದು ಮನೆಗೆ ಹೋಗಿಬರಲು ಕೂಡ ಜನರು ಭಯಪಡುವಂತಾಗಿದೆ. ವಾರದ ಹಿಂದೆ ವ್ಯಕ್ತಿಯೋರ್ವ ಮೈಮೇಲೆ ಎರಗಿ ದೂಡಿ ಕೆಡವಿದ ಘಟನೆ ಕೂಡ ನಡೆದಿದೆ ಎಂದು ಸ್ಥಳೀಯರು ಹೇಳುತ್ತಾರೆ.