ಟಾಪ್ 5 ನ್ಯೂಸ್ ಮಲ್ನಾಡ್
– ಮಲೆನಾಡಿಗೂ ಕಾಲಿಟ್ಟ ಮಹಾಮಾರಿ ಡೆಂಗ್ಯೂ: ಮಹಿಳೆ ಸಾವು
– ಅರೋಗ್ಯ ಇಲಾಖೆ ಎಚ್ಚರ: ಹೊಸನಗರದಲ್ಲಿ ಘಟನೆ
– ತರೀಕೆರೆ: ಕಾರಿನ ಗಾಜು ಒಡೆದು 2.50 ಲಕ್ಷ ರೂ. ದೋಚಿದ ಕಳ್ಳರು
– ಶಿವಮೊಗ್ಗ: ಬಂಧಿಸಲು ಹೋದ ಪೊಲೀಸ್ ಸಿಬ್ಬಂದಿಗೆ ಚೂರಿ ಇರಿತ: ರೌಡಿ ಕಾಲಿಗೆ ಗುಂಡೇಟು
– ಶಿವಮೊಗ್ಗ: ಆಯನೂರು ಬಳಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಹಳ್ಳಕ್ಕೆ ಬಿದ್ದ ಕಾರು, ನಾಲ್ವರಿಗೆ ಗಾಯ
– ಭದ್ರಾವತಿ: ಆಟೊಮೊಬೈಲ್ನಲ್ಲಿ ಕಳ್ಳತನ, ಇಬ್ಬರು ಸೆರೆ
– ಶಿವಮೊಗ್ಗ: ವಿದ್ಯುತ್ ಕಂಬಕ್ಕೆ ಬಸ್ ಡಿಕ್ಕಿ ಅಪಾಯದಿಂದ ಪಾರು
NAMMUR EXPRESS NEWS
ಹೊಸನಗರ: ಮಹಾಮಾರಿ ಡೆಂಗ್ಯೂ ಈಗ ಮಲೆನಾಡಿಗೂ ಕಾಲಿಟ್ಟಿದ್ದು ಹೊಸನಗರದಲ್ಲಿ ಮಹಿಳೆ ಬಲಿಯಾಗಿದ್ದಾರೆ. ಅನೇಕರು ಆಸ್ಪತ್ರೆ ದಾಖಲಾಗಿದ್ದಾರೆ.ರಶ್ಮಿ ಆರ್ ನಾಯಕ್ (42) ಮೃತ ಮಹಿಳೆ.ರಶ್ಮಿ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್ಪೇಟೆ ನಿವಾಸಿ.ಕಳೆದ ಕಳೆದ 15-20 ದಿನಗಳಿಂದ ತೀವ್ರ ಜ್ವರದಿಂದ ಬಳಲುತ್ತಿದ್ದ ಮಹಿಳೆ ಶಿವಮೊಗ್ಗ ಖಾಸಗಿ ಆಸ್ಪತ್ರೆಗೆ ದಾಖಲಾಗಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಿಸದೆ ಮಂಗಳವಾರ ಮಧ್ಯಾಹ್ನ ರಶ್ಮಿ ಕೊನೆಯುಸಿರು ಎಳೆದಿದ್ದಾರೆ. ಪತಿ ಹಾಗೂ ಇಬ್ಬರು ಪುತ್ರರರನ್ನು ಹೊಂದಿರುವ ರಶ್ಮಿ ಸಾವು ಈಗ ಮಲೆನಾಡಲ್ಲಿ ಆತಂಕ ಸೃಷ್ಟಿ ಮಾಡಿದೆ.
ಈಗಾಗಲೇ ರಿಪ್ಪನ್ಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ ಸಾಕಷ್ಟು ಡೆಂಗ್ಯೂ ಪ್ರಕರಣಗಳು ಪತ್ತೆಯಾಗಿದೆ.ಡೆಂಗ್ಯೂ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ನಿರ್ಲಕ್ಷ್ಯ ಆರೋಪವನ್ನು ಗ್ರಾಮಸ್ಥರು ಮಾಡಿದ್ದಾರೆ.ಸಾರ್ವಜನಿಕರಿಂದ ಆರೋಗ್ಯ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.
ತರೀಕೆರೆ: ಕಾರಿನ ಗಾಜು ಒಡೆದು 2.50 ಲಕ್ಷ ರೂ. ದೋಚಿದ ಕಳ್ಳರು
ತರೀಕೆರೆ: ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ನಿಲ್ಲಿಸಿದ್ದ ಕಾರಿನ ಗಾಜು ಒಡೆದು 2.50 ಲಕ್ಷ ರೂ. ಹಣವನ್ನು ಕಳ್ಳರು ದೋಚಿ ಪರಾರಿಯಾಗಿದ್ದಾರೆ. ಯರೇಹಳ್ಳಿ ಗ್ರಾಮದ ಚಂದ್ರನಾಯಕ ಎಂಬುವರು ಸೋಮವಾರ ಪಟ್ಟಣದ ಕೆನರಾ ಬ್ಯಾಂಕಿನಲ್ಲಿ ಚಿನ್ನಾಭರಣ ಅಡವಿಟ್ಟು 2.50 ಲಕ್ಷ ರೂ. ಸಾಲ ಪಡೆದಿದ್ದರು. ಹಣವನ್ನು ಕಾರಿನಲ್ಲಿ ಇಟ್ಟು, ಪಟ್ಟಣದಲ್ಲಿ ಹಾದು ಹೋಗುವಾಗ ರಾಷ್ಟ್ರೀಯ ಹೆದ್ದಾರಿ ಪಕ್ಕದ ಪಾದಚಾರಿ ಮಾರ್ಗದಲ್ಲಿ ನಿಲ್ಲಿಸಿ ತಿಂಡಿ ತಿನ್ನಲು ಹೊಟೇಲಿಗೆ ಹೋಗಿದ್ದರು. ಈ ವೇಳೆ ಕಾರಿನ ಗಾಜು ಒಡೆದು, ಡ್ಯಾಶ್ ಬೋರ್ಡ್ನಲ್ಲಿಟ್ಟಿದ್ದ ಹಣ ಕದ್ದು ಕಾಲ್ಕಿತ್ತಿದ್ದಾರೆ. ಕಳ್ಳರು ಹಿಂಬದಿಯಿಂದಲೇ ಹಿಂಬಾಲಿಸಿಕೊಂಡು ಕೃತ್ಯ ಎಸಗಿರುವ ಅನುಮಾನವಿದೆ. ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
– ಶಿವಮೊಗ್ಗ: ಬಂಧಿಸಲು ಹೋದ ಪೊಲೀಸ್ ಸಿಬ್ಬಂದಿಗೆ ಚೂರಿ ಇರಿತ : ರೌಡಿ ಕಾಲಿಗೆ ಗುಂಡೇಟು
ಶಿವಮೊಗ್ಗ : ಬಂಧಿಸಲು ಹೋದ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ಇರಿದು ಪರಾರಿಯಾಗಲು ಮುಂದಾದ ರೌಡಿ ಶೀಟರ್ ಕಾಲಿಗೆ ಪೊಲೀಸರು ಗುಂಡು ಹೊಡೆದಿದ್ದಾರೆ. ಶಿವಮೊಗ್ಗ ಜಿಲ್ಲೆಯ ಕುಂಸಿ ಪೊಲೀಸ್ ಠಾಣೆ ವ್ಯಾಪ್ತಿಯ ತ್ಯಾಜ್ಯವಳ್ಳಿ ಅರಣ್ಯ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ರಝಾಕ್ ಬಂಧಿತ ಆರೋಪಿಯಾಗಿದ್ದು ಗುಂಡೇಟಿನಿಂದ ಗಾಯಗೊಂಡಿರುವ ಆತನನ್ನು ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ರಜಾಕ್ ಮೇಲೆ ಕೊಲೆ ಯತ್ನ ಸೇರಿ ಐದಾರು ಗಂಭೀರ ಅಪರಾಧ ಪ್ರಕರಣಗಳು ದಾಖಲಾಗಿವೆ. ಹೊಳೆಹೊನ್ನೂರು ಠಾಣೆ ಇನ್ಸ್ಪೆಕ್ಟರ್ ನೇತೃತ್ವದಲ್ಲಿ ಈತನ ಬಂಧನಕ್ಕೆ ತೆರಳಿತ್ತು. ಬಂಧಿಸಲು ಹೋದಾಗ ಈತ ಪೊಲೀಸ್ ಸಿಬ್ಬಂದಿ ಕಾಲಿಗೆ ಚಾಕುವಿನಿಂದ ಇರಿದು ಗಾಯಗೊಳಿಸಿದ್ದ. ಈ ಸಂದರ್ಭದಲ್ಲಿ ಸಿಬ್ಬಂದಿಯನ್ನು ಪಾರು ಮಾಡಲು ಹಾಗೂ ಆತ್ಮರಕ್ಷಣೆಗಾಗಿ ಇನ್ಸ್ಪೆಕ್ಟರ್ ಲಕ್ಷ್ಮಿಪತಿ ರೌಡಿಶೀಟರ್ ಕಾಲಿಗೆ ಗುಂಡು ಹೊಡೆದಿದ್ದಾರೆ. ಗಾಯಗೊಂಡಿರುವ ಆರೋಪಿ ರಜಾಕ್ ಹಾಗೂ ಹಲ್ಲೆಗೊಳಗಾದ ಪೊಲೀಸ್ ಸಿಬ್ಬಂದಿಯನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
– ಶಿವಮೊಗ್ಗ: ಆಯನೂರು ಬಳಿಯಲ್ಲಿ ಹಳ್ಳಕ್ಕೆ ಬಿದ್ದ ಕಾರು
ಶಿವಮೊಗ್ಗ: ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಹಳ್ಳಕ್ಕೆ ಬಿದ್ದ ಪರಿಣಾಮ ನಾಲ್ವರು ಗಾಯಗೊಂಡಿರುವ ಘಟನೆ ಶಿವಮೊಗ್ಗ ತಾಲೂಕಿನ ಆಯನೂರು ಬಳಿ ನಡೆದಿದೆ. ಘಟನೆಯಿಂದ ಕಾರಿನಲ್ಲಿದ್ದ ಮೂವರು ಮಹಿಳೆಯರು ಮತ್ತು ಓರ್ವ ಬಾಲಕನಿಗೆ ಗಾಯವಾಗಿದ್ದು ಅವರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಕಾರಿನಲ್ಲಿದ್ದವರು ಚಿತ್ರದುರ್ಗದಿಂದ ಸಾಗರಕ್ಕೆ ತೆರಳುತ್ತಿದ್ದರು ಎನ್ನಲಾಗಿದ್ದು ಆಯನೂರು ಸಮೀಪ ಚಾಲಕನ ನಿಯಂತ್ರಣ ತಪ್ಪಿದ ಸ್ವಿಫ್ಟ್ ಡಿಸೈರ್ ಕಾರು ಹಳ್ಳಕ್ಕೆ ಬಿದ್ದಿದ್ದೆ. ಕುಂಸಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸುತ್ತಿದ್ದಾರೆ.
– ಭದ್ರಾವತಿ: ಆಟೊಮೊಬೈಲ್ನಲ್ಲಿ ಕಳ್ಳತನ, ಇಬ್ಬರು ಸೆರೆ
ಭದ್ರಾವತಿ: ಇಲ್ಲಿನ ಹಳನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಅಂಗಡಿಯ ರೋಲಿಂಗ್ ಶೆಟರ್ನ ಲಾಕ್ ಮುರಿದು ಹಣ ಕಳುವು ಮಾಡಿದ ಪ್ರಕರಣವನ್ನ ಪೊಲೀಸರು ಬೇಧಿಸಿದ್ದಾರೆ. ಆರೋಪಿಗಳಾದ ಇಲ್ಲಿನ ಯಕಿನ್ನಾ ಕಾಲೋನಿಯ ಸೈಯದ್ ಹಸೇನ್ ಅಲಿಯಾಸ್ ಜಂಗ್ಲಿ (19), ಸೈಯದ್ ಇರ್ಫಾನ್ ಅಲಿಯಾಸ್ ಕಾಲು (21) ಇವರನ್ನು ದಸ್ತಗಿರಿ ಮಾಡಿ, ಆರೋಪಿತರಿಂದ ಕಳ್ಳತನ ಮಾಡಿಕೊಂಡು ಹೋದ ನಗದು ಹಣ ರೂ 40,000 ಗಳನ್ನು ಅಮಾನತ್ತು ಪಡಿಸಿಕೊಳ್ಳಲಾಗಿದೆ. ಜೂ.17 ರಂದು ರಾತ್ರಿ ಭದ್ರಾವತಿ ಓಎಎಂ ರಸ್ತೆಯ ಮಂಜುನಾಥ ಆಟೋ ಸ್ಪೇರ್ಸ್ ಆಯುಧದ ಸಹಾಯದಿಂದ ಅಂಗಡಿಯ ರೋಲಿಂಗ್ ಶೆಡ್ ನ್ನು ಮೀಟಿ ಒಳಗೆ ಹೋಗಿ ಡ್ರಾ ನಲ್ಲಿ ಇಟ್ಟಿದ್ದ ನಗದು ಹಣವನ್ನು ಕಳ್ಳತನ ಮಾಡಿಕೊಂಡು ಹೋಗಿರುವ ಬಗ್ಗೆ ಹಳೇನಗರ ಪೊಲೀಸ್ ಠಾಣಾದಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದಲ್ಲಿ ಆರೋಪಿತರ ಪತ್ತೆಗಾಗಿ ಎಸ್ ಪಿ ಮಿಥುನ್ಕುಮಾರ್ ಸಿಪಿಐ ಶೈಲಕುಮಾರ್, ವೃತ್ತ ನಿರೀಕ್ಷಕರು ನಗರ ವೃತ್ತ ಭದ್ರಾವತಿ ರವರ ಮೇಲ್ವಿಚಾರಣೆಯಲ್ಲಿ ಶರಣಪ್ಪ ಹೆಚ್, ಪಿಎಸ್ಐ ಹಳಿನಗರ ಪೊಲೀಸ್ ಠಾಣೆ ಮತ್ತು ಸಿಬ್ಬಂಧಿಗಳಾದ ಹೆಚ್ ಸಿ ಹಾಲಪ್ಪ ಪಿಸಿ ನಾರಾಯಣ ಸ್ವಾಮಿ, ಮೌನೇಶ್ ಶೀಕಲ್, ಚಿಕ್ಕಪ್ಪ ಎಸ್ ಮತ್ತು ಪ್ರವೀಣ್ ರವರುಗಳನ್ನೊಳಗೊಂಡ ತನಿಖಾ ತಂಡವನ್ನು ರಚಿಸಿದ್ದರು.
– ಶಿವಮೊಗ್ಗ: ವಿದ್ಯುತ್ ಕಂಬಕ್ಕೆ ಬಸ್ ಡಿಕ್ಕಿ ಅಪಾಯದಿಂದ ಪಾರು
ಶಿವಮೊಗ್ಗ: ಬೆಂಗಳೂರಿಗೆ ತೆರಳುತ್ತಿದ್ದ ಖಾಸಗಿ ಬಸ್ ವೊಂದು ವಿದ್ಯುತ್ ಕಂಬಕ್ಕೆ ಡಿಕ್ಕಿಯಾದ ಪರಿಣಾಮ ಕರೆಂಟ್ ವಯರ್ ಬಸ್ ಮೇಲೆ ಬಿದ್ದು ಹಲವರಿಗೆ ಗಾಯಗಳಾದ ಘಟನೆ ಕಳೆದ ರಾತ್ರಿ ಇಲ್ಲಿ ಸಂಭವಿಸಿದೆ.
ತಕ್ಷಣವೆ ಅಲ್ಲಿದ್ದವರು ಮೆಸ್ಕಾಂಗೆ ಕರೆ ಮಾಡಿ ವಿದ್ಯುತ್ ಕಟ್ ಮಾಡಿಸಿದ ಪರಿಣಾಮ ಯಾರಿಗೂ ಅಪಾಯವಾಗಿಲ್ಲ. ಆಕಸ್ಮಾತ್ ಆಗಿ ಬಸ್ ಚಾಲಕನ ನಿಯಂತ್ರಣ ತಪ್ಪಿ ಪಿಳ್ಳಂಗೆರೆ ಕ್ರಾಸ್ ಬಳಿಯಲ್ಲಿ ಒಮಿನಿ ಕಾರಿಗೆ ಡಿಕ್ಕಿಯಾಗಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮ ವಿದ್ಯುತ್ ವಯರ್ ಬಸ್ ಮೇಲೆ ಬಿದ್ದಿತ್ತು. ತಂತಿಯಲ್ಲಿ ಇನ್ನೂ ವಿದ್ಯುತ್ ಪ್ರವಹಿಸುತ್ತಿತ್ತು. ಪ್ರಯಾಣಿಕರ ರಕ್ಷಣೆ: ಇದೇ ವೇಳೆ ಅದೇ ಮಾರ್ಗವಾಗಿ ತೆರಳುತ್ತಿದ್ದ ಸವಾರರು ತಮ್ಮ ವಾಹನ ನಿಲ್ಲಿಸಿ ರಕ್ಷಣೆಗೆ ದೌಡಾಯಿಸಿದ್ದಾರೆ. ಮೆಸ್ಕಾಂಗೆ ಕರೆ ಮಾಡಿ ವಿದ್ಯುತ್ ಹರಿವಿಕೆಯನ್ನು ನಿಲ್ಲಿಸಿದ್ದಾರೆ. ಆ ಬಳಿಕ ಬಸ್ನಿಂದ ಪ್ರಯಾಣಿಕರನ್ನು ಹೊರಕ್ಕೆ ಕರೆತಂದಿದ್ದಾರೆ. ಸ್ಥಳಕ್ಕೆ ಬಂದ ಸ್ಥಳೀಯ ಗ್ರಾಮಸ್ಥರು ಪ್ರಯಾಣಿಕರಿಗೆ ಪ್ರಾಥಮಿಕ ಚಿಕಿತ್ಸೆ ನೆರವಾಗಿ ಆಂಬುಲೆನ್ಸ್ ಕರೆಸಿ, ಅವರನ್ನ ಆಸ್ಪತ್ರೆಗೆ ರವಾನಿಸಿದ್ದಾರೆ. ಘಟನೆಯಲ್ಲಿ ಕೆಲವು ಪ್ರಯಾಣಿಕರಿಗೆ ನೆಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಆದರೆ ಚಾಲಕನಿಗೆ ಗಂಭೀರ ಗಾಯವಾಗಿದ್ದು, ಅವರನ್ನು ಸಹ ಆಸತ್ರೆಗೆ ದಾಖಲಿಸಲಾಗಿದೆ.