ಟಾಪ್ 6 ನ್ಯೂಸ್ ಮಲ್ನಾಡ್
ಟ್ಯಾಂಕರ್ – ಒಮಿನಿ ನಡುವೆ ಡಿಕ್ಕಿ:ಸ್ಥಳದಲ್ಲಿಯೇ ಸಾವು
– ಸಾಗರದ ಆನಂದಪುರದಲ್ಲಿ ಘಟನೆ: ತೀರ್ಥಹಳ್ಳಿ ಮೂಲದ ವ್ಯಕ್ತಿ ದುರ್ಮರಣ
– ತೀರ್ಥಹಳ್ಳಿ: ಹಾಸ್ಟೆಲ್’ನ ಅಡುಗೆಯಲ್ಲಿ ಪತ್ತೆಯಾದ ಸತ್ತ ಹಲ್ಲಿ!
– ಶಿವಮೊಗ್ಗ: ರೈಲಿನ ಬೋಗಿಯಲ್ಲಿ ವ್ಯಕ್ತಿಯ ಮೃತದೇಹ ಪತ್ತೆ
– ಶಿವಮೊಗ್ಗ : ಬಸ್ ನಲ್ಲಿರುವಾಗಲೇ ಲ್ಯಾಪ್ ಟ್ಯಾಪ್ ಕಳುವು
– ಭದ್ರಾವತಿ: ಪೊಲೀಸರ ಅಮಾನತು
– ಹೊಸನಗರ: ವಿದ್ಯುತ್ ಪ್ರವಹಿಸಿ ಕಂಬದಿಂದ ಕೆಳಗೆ ಬಿದ್ದ ಕಾರ್ಮಿಕ!
NAMMUR EXPRESS NEWS
ಸಾಗರ: ನಂದಿನಿ ಹಾಲಿನ ಟ್ಯಾಂಕರ್ – ಒಮಿನಿ ನಡುವೆ ಡಿಕ್ಕಿ ಅಪಘಾತವೊಂದು ಸಾಗರ ತಾಲ್ಲೂಕು ಆನಂದಪುರ ಸಮೀಪದ ಗೌತಮಪುರದಲ್ಲಿ ಸಂಭವಿಸಿದೆ. ಘಟನೆಯಲ್ಲಿ ತೀರ್ಥಹಳ್ಳಿ ಮೂಲದ ವ್ಯಕ್ತಿ ಮೃತಪಟ್ಟಿದ್ದಾರೆ.
ತಡರಾತ್ರಿ ವಾಹನಗಳ ನಡುವೆ ಡಿಕ್ಕಿ ಸಂಭವಿಸಿ ವ್ಯಕ್ತಿಯೊಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಬಗ್ಗೆ ಇಲ್ಲಿ ವರದಿಯಾಗಿದೆ. ಸಾಗರ ತಾಲ್ಲೂಕು ಆನಂದಪುರದಿಂದ ಶಿಕಾರಿಪುರದ ಕಡೆಗೆ ಹೋಗುತ್ತಿದ್ದ ಹಾಲಿನ ಕ್ಯಾಂಟರ್ ಹಾಗೂ ಶಿಕಾರಿಪುರದಿಂದ ಕೋಣಂದೂರು ಕಡೆ ತೆರಳುತ್ತಿದ್ದ ಕಾರಿನ ನಡುವೆ ಡಿಕ್ಕಿಯಾಗಿದ್ದು, ಘಟನೆಯಲ್ಲಿ ಕಾರಿನಲ್ಲಿ ಚಾಲಕನ ಪಕ್ಕ ಕುಳಿತಿದ್ದ ಈರಪ್ಪ(58) ಎಂಬವರು ಸಾವನ್ನಪ್ಪಿದ್ದಾರೆ. ತೀರ್ಥಹಳ್ಳಿ ತಾಲ್ಲೂಕಿನ ಕೋಣಂದೂರು ಸಮೀಪದ ಗ್ರಾಮವೊಂದರ ನಿವಾಸಿಯಾಗಿರುವ ಈರಪ್ಪ ಸಾವನ್ನಪ್ಪಿದರೇ, ಘಟನೆಯಲ್ಲಿ ನಾಗಾರ್ಜುನ, ಶಮಂತ್, ರುದ್ರೇಶ್, ನಿತಿನ್ ಅವರಿಗೆ ಗಾಯಗಳಾಗಿವೆ. ಇನ್ನೂ ಈ ಸಂಬಂಧ ಆನಂದಪುರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ತೀರ್ಥಹಳ್ಳಿ: ಹಾಸ್ಟೆಲ್’ನ ಅಡುಗೆಯಲ್ಲಿ ಪತ್ತೆಯಾದ ಸತ್ತ ಹಲ್ಲಿ!
ತೀರ್ಥಹಳ್ಳಿ: ತೀರ್ಥಹಳ್ಳಿ ಪಟ್ಟಣದ ಸೊಪ್ಪುಗುಡ್ಡೆಯಲ್ಲಿರುವ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ಪೂರ್ವ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ ಹಲ್ಲಿ ಬಿದ್ದಿದ್ದ ಸಾರನ್ನೇ ವಿದ್ಯಾರ್ಥಿಗಳಿಗೆ ನೀಡಲಾಗಿದೆ ಎಂಬ ದೂರು ಕೇಳಿ ಬಂದಿದೆ. ಇತ್ತೀಚಿಗೆ ಊಟಕ್ಕಾಗಿ ತಟ್ಟೆ ಹಿಡಿದ ಸಂದರ್ಭದಲ್ಲಿ ನಾಲೈದು ವಿದ್ಯಾರ್ಥಿನಿಯರಿಗೆ ಹಲ್ಲಿಯ ತಲೆ, ಕಾಲು, ಬಾಲದ ತುಂಡುಗಳು ಸಿಕ್ಕಿರುವುದಾಗಿ ಮಾತು ಕೇಳಿ ಬಂದಿದ್ದು ಇದು ಇನ್ನಷ್ಟು ಆತಂಕ ಮೂಡಿಸಿದೆ.
– ಶಿವಮೊಗ್ಗ: ಬಂದ ರೈಲಿನ ಬೋಗಿಯಲ್ಲಿ ವ್ಯಕ್ತಿಯ ಮೃತದೇಹ ಪತ್ತೆ
ಶಿವಮೊಗ್ಗ : ತುಮಕೂರು ಟು ಶಿವಮೊಗ್ಗ ಟ್ರೈನ್ 16567 ನಲ್ಲಿನ ಬೋಗಿಯೊಂದರಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆಯಾಗಿರುವ ಬಗ್ಗೆ ಪ್ರಕಟಣೆಯನ್ನು ನೀಡಲಾಗಿದೆ. ಜೂನ್ 25 ರಂದು ನಡೆದ ಘಟನೆ ಇದಾಗಿದೆ. ಅಂದು ಮಧ್ಯರಾತ್ರಿ 1 ಗಂಟೆಗೆ ಶಿವಮೊಗ್ಗ ರೈಲ್ವೆ ನಿಲ್ದಾಣಕ್ಕೆ ನಂ 16567 ರೈಲುಗಾಡಿ ಬಂದು ನಿಂತಿತ್ತು. ಆ ರೈಲಿನ ಕೋಚ್ ನಂ ಜಿಎಸ್ಆರ್ಡಿ/ಎಸ್ಡಬ್ಲ್ಯುಆರ್/144211 ರಲ್ಲಿ ಸುಮಾರು 65 ವರ್ಷದ ಪುರುಷನ ಶವ ಪತ್ತೆಯಾಗಿದೆ. ಈ ಸಂಬಂಧ ಶಿವಮೊಗ್ಗ ರೈಲ್ವೇ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತದೇಹವನ್ನು ಮೆಗ್ಗಾನ್ ಆಸ್ಪತ್ರೆಯ ಶೈತ್ಯಾಗಾರದಲ್ಲಿ ಇರಿಸಲಾಗಿದೆ. ಆದರೆ ಇದುವರೆಗೂ ಮೃತರ ಗುರುತು ಪತ್ತೆಯಾಗಿಲ್ಲ. ಹೀಗಾಗಿ ಪ್ರಕಟಣೆಯನ್ನ ನೀಡಲಾಗಿದೆ. ಮೃತ ವ್ಯಕ್ತಿಯು ಸುಮಾರು 5.10 ಅಡಿ ಎತ್ತರವಿದ್ದು, ಕೃಶವಾದ ಶರೀರ, ಕಪ್ಪು ಮೈಬಣ್ಣ, ಕೋಲುಮುಖ, ನೀಳ ಮೂಗು, ಸುಮಾರು ಒಂದು ಇಂಚು ಉದ್ದದ ಕಪ್ಪುಬಿಳಿ ಕೂದಲು,ಕುರುಚಲು ಗಡ್ಡ ಬಿಟ್ಟಿರುತ್ತಾನೆ. ಬಿಳಿ ಬಣ್ಣದ ತುಂಬು ತೋಳಿನ ಶರ್ಟ್, ತಿಳಿ ನೀಲಿ ಬಣ್ಣದ ಕಾಟನ್ ಚಡ್ಡಿ ಧರಿಸಿರುತ್ತಾನೆ. ಈ ವ್ಯಕ್ತಿಯ ವಾರಸುದಾರರು ಯಾರಾದರು ಇದ್ದಲ್ಲಿ, ಶಿವಮೊಗ್ಗ ರೈಲ್ವೇ ಪೊಲೀಸ್ ಸಬ್ಇನ್ಸಪೆಕ್ಟರ್ ದೂ.ಸಂ: 08182 222974 ಮತ್ತು 9480802124 ನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಶಿವಮೊಗ್ಗ ರೈಲ್ವೇ ಪೊಲೀಸ್ ಠಾಣೆ ಸಬ್ ಇನ್ಸ್ಪೆಕ್ಟರ್ ಪ್ರಕಟಣೆ ತಿಳಿಸಿದಾರೆ.
– ಶಿವಮೊಗ್ಗ : ಬಸ್ ನಲ್ಲಿರುವಾಗಲೇ ಲ್ಯಾಪ್ ಟ್ಯಾಪ್ ಕಳುವು
ಶಿವಮೊಗ್ಗ: ಶಿವಮೊಗ್ಗದ ಕೆಎಸ್ ಆರ್ ಟಿಸಿ ಬಸ್ ಸ್ಟ್ಯಾಂಡ್ ನಲ್ಲಿ ಕಳ್ಳರ ಕೈಚಳಕ ಮುಂದುವರೆದಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷದ ಪ್ರಕರಣ ಕಡಿಮೆ. ಈ ವರ್ಷದಲ್ಲಿ ಇದು 5-7 ನೇ ಪ್ರಕರಣವಿರಬಹುದು. ಸುಮಾರು 3 ವರ್ಷಗಳಿಂದ ಬೆಂಗಳೂರಿನಲ್ಲಿ ಟೆಗೂಟೆಕ್ ಇಂಡಿಯಾ ಪ್ರೈವೇಟ್ ಲಿ. ಕಂಪನಿಯಲ್ಲಿ ಪ್ರೋಡಕ್ಷನ್ ಪ್ಲಾನರ್ & ಕಂಟ್ರೋಲರ್ ಆಗಿ ಕೆಲಸ ಮಾಡಿಕೊಂಡಿದ್ದ ಯುವತಿಯೊಬ್ಬರ ಕಂಪನಿ ವತಿಯಿಂದ ಕೆಲಸಕ್ಕಾಗಿ ನೀಡಿದ್ದ HP Pavilion Ryzen 5 Hex ಲ್ಯಾಪ್ ಟಾಪ್ ಕಳುವಾಗಿದೆ. ಶನಿವಾರ & ಭಾನುವಾರ ರಜೆ ಇದ್ದುದರಿಂದ ಊರಿಗೆ ಬಂದಿದ್ದ ಯುವತಿ ವಾಪಾಸ್ ಬೆಂಗಳೂರಿಗೆ ಹೋಗಲು ತನ್ನ ಅಕ್ಕಳ ಜೊತೆ ಪ್ರಯಾಣ ಬೆಳೆಸಿದ್ದಾರೆ. ಜೂ.23 ರಂದು ಶಿವಮೊಗ್ಗದ ಕೆ.ಎಸ್.ಆರ್.ಟಿ.ಸಿ ಬಸ್ ಸ್ಟ್ಯಾಂಡ್ನಲ್ಲಿ ಬೆಂಗಳೂರಿಗೆ ಹೋಗುವ ಕೆಎ-17 ಎಫ್-1487 ಬಸ್ ಹತ್ತಿ ಕುಳಿತಿದ್ದರು. ಲಗೇಜ್ ಕ್ಯಾರಿಯರ್ ನಲ್ಲಿ, ಲಗೇಜ್ ಇದ್ದ ಒಂದು ಬ್ಯಾಗ್ ಮತ್ತು ಲ್ಯಾಪ್ ಟಾಪ್ ಇದ್ದ ಬ್ಯಾಗನ್ನು ಇಟ್ಟಿದ್ದರು, ಜನರು ಹೆಚ್ಚಾಗಿದ್ದು, ಬಸ್ ತುಂಬಾ ರಶ್ ಆಗಿದೆ. ಜನರು ಸ್ಟ್ಯಾಂಡಿಂಗ್ ನಲ್ಲಿದ್ದರು, ನೀರು ಕುಡಿಯಲು ಲಗೇಜ್ ಬ್ಯಾಗ್ನಲ್ಲಿಟ್ಟಿದ್ದ ನೀರಿನ ಬಾಟಲ್ ತೆಗೆಯಲು ಹೋದಾಗ ಲಗೇಜ್ ಕ್ಯಾರಿಯರ್ ನಲ್ಲಿಟ್ಟಿದ್ದ ಲ್ಯಾಪ್ ಟಾಪ್ ಇದ್ದ ಬ್ಯಾಗ್ ಇರಲಿಲ್ಲ. ನಂತರ ಬಸ್ಸಿನಲ್ಲಿ ಎಲ್ಲಾ ಕಡೆ ಹುಡುಕಾಡಿದರೂ ಬ್ಯಾಗ್ ಇರಲಿಲ್ಲ. ಪ್ರಯಾಣಿಕರಂತೆ ಬಂದು ಲ್ಯಾಪ್ ಟಾಪ್ ಇದ್ದ ಬ್ಯಾಗ್ ನ್ನು ಕಳವು ಮಾಡಲಾಗಿದೆ.
– ಭದ್ರಾವತಿ: ಪೊಲೀಸರ ಅಮಾನತು
ಭದ್ರಾವತಿ: ಭದ್ರಾವತಿಯ ಎರಡು ಠಾಣೆಯ ಪೊಲೀಸ್ ಸಿಬ್ಬಂದಿಗಳನ್ನ ಅಮಾನತುಗೊಳಿಸಲಾಗಿದೆ. ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಜಿ.ಕೆ. ಆದೇಶಿಸಿದ್ದಾರೆ. ಭದ್ರಾವತಿಯ ಸಂಚಾರಿ ಪೊಲೀಸ್ ಠಾಣೆಯಲ್ಲಿ ಹೆಡ್ ಕಾನ್ ಸ್ಟೇಬಲ್ ಉಲ್ಲಾಸ್ ಎಂಬುವರನ್ನ ಅಮಾನತುಗೊಳಿಸಿದರೆ, ಬಹಳ ಕುತೂಹಲ ಮೂಡಿಸಿದ್ದ ಭದ್ರಾವತಿ ಹಳೇ ನಗರ ಪೊಲೀಸ್ ಠಾಣೆಯ ಗಿರೀಶ್ ರನ್ನ ಅಮಾನತುಗೊಳಿಸಿ ಎಸ್ಪಿ ಅವರು ಆದೇಶಿಸಿದ್ದಾರೆ. ಅಪಘಾತಗೊಂಡಿದ್ದ ವಾಹನವನ್ನ ಅದಲು ಬದಲು ಮಾಡಿದ ಪ್ರಕರಣದಲ್ಲಿ ಸಂಚಾರಿ ಪೊಲೀಸ್ ಠಾಣೆಯ ಉಲ್ಲಾಸ್ ವಿರುದ್ಧ ಎಸ್ಪಿ ಅವರಿಗೆ ಮಾಹಿತಿ ಹೋಗಿತ್ತು. ಕರ್ತವ್ಯದಲ್ಲಿ ನಿರ್ಲಕ್ಷತೆಯ ಹಿನ್ನಲೆಯಲ್ಲಿ ಅವರನ್ನ ಅಮಾನತುಗೊಳಿಸಲಾಗಿದೆ. ಭದ್ರಾವತಿಯ ಹಳೇ ನಗರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಗಿರೀಶ್ ಗೆ ರೌಡಿ ಎಲಿಮೆಂಟ್ಸ್ ಜೊತೆ ಸಂಪರ್ಕ ಹೊಂದಿದ್ದ ಆರೋಪದ ಮೇರೆಗೆ ಅಮಾನತುಗೊಳಿಸಲಾಗಿದೆ.
– ರಿಪ್ಪನಪೇಟೆ : ವಿದ್ಯುತ್ ಪ್ರವಹಿಸಿ ಕಂಬದಿಂದ ಕೆಳಗೆ ಬಿದ್ದ ಕಾರ್ಮಿಕ
ರಿಪ್ಪನಪೇಟೆ : ವಿದ್ಯುತ್ ಕಂಬವೇರಿದ ಗುತ್ತಿಗೆ ಕಾರ್ಮಿಕನೊಬ್ಬನಿಗೆ ಕರೆಂಟ್ ಶಾಕ್ ಆಗಿ ಕಂಬದಿಂದ ಕೆಳಗೆ ಬಿದ್ದು ಗಂಭೀರ ಗಾಯಗೊಂಡಿರುವ ಘಟನೆ ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಅರಸಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಟಾಣಿಜೇಡ್ಡು ಗ್ರಾಮದಲ್ಲಿ ನಡೆದಿದೆ. ಶಿಗ್ಗಾಂವ್ ಮೂಲದ ರಮೇಶ್(24) ಗಂಭೀರ ಗಾಯಗೊಂಡಿರುವ ವಿದ್ಯುತ್ ಗುತ್ತಿಗೆ ಕಾರ್ಮಿಕನಾಗಿದ್ದಾನೆ.
ಬಟಾಣಿಜೆಡ್ಡು ಗ್ರಾಮದಲ್ಲಿ ಕಾಮಗಾರಿ ನಿಮಿತ್ತ ಗುತ್ತಿಗೆ ಕಾರ್ಮಿಕ ರಮೇಶ್ ಲೈಟ್ ಕಂಬವೇರಿದ್ದು ಈ ಸಂಧರ್ಭದಲ್ಲಿ ಆತನಿಗೆ ವಿದ್ಯುತ್ ಪ್ರವಹಿಸಿ ಕಂಬದಿಂದ ಕೆಳಗೆ ಬಿದ್ದು ಗಂಭೀರ ಗಾಯಗೊಂಡಿದ್ದಾನೆ.ಕೂಡಲೇ ಆತನನ್ನು ರಿಪ್ಪನ್ಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆತಂದು ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗಕ್ಕೆ ರವಾನಿಸಲಾಗಿದೆ. ಮೂಲಗಳ ಪ್ರಕಾರ ಕಾಮಗಾರಿಯ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡದೇ ನಿರ್ಲಕ್ಷ್ಯತನದಿಂದ ಫೋನಿನಲ್ಲಿ ಯುವತಿಯೊಂದಿಗೆ ಮಾತನಾಡುತ್ತಾ ಲೈಟ್ ಕಂಬವೇರಿದ್ದ ಗುತ್ತಿಗೆ ನೌಕರ ರಮೇಶ್ ವಿದ್ಯುತ್ ಶಾಕ್ ನಿಂದ ಕೆಳಗೆ ಬಿದ್ದಿದ್ದಾನೆ ಎನ್ನಲಾಗುತ್ತಿದ್ದು ಹೆಚ್ಚಿನ ಮಾಹಿತಿ ತಿಳಿದುಬರಬೇಕಾಗಿದೆ. ರಿಪ್ಪನ್ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.