ಮಲೆನಾಡಲ್ಲಿ ಆತಂಕ ತಂದ ಕೊಳೆ ರೋಗ!
– ಅಡಿಕೆ ತೋಟದಲ್ಲಿ ಉದುರುತ್ತಿರುವ ಅಡಿಕೆ ಫಸಲು
– ಮರದ ಕೆಳಗೆ ಹರಳಿನ ರಾಶಿ ಕಂಡು ಕಂಗೆಟ್ಟ ಕೃಷಿಕ
– ಅಡಿಕೆ ಕೊಳೆ ರೋಗದ ನಿರ್ವಹಣಾ ಕ್ರಮಗಳೇನು?
ವಿಶೇಷ ವರದಿ
NAMMUR EXPRESS NEWS
ಮಲೆನಾಡಿನಲ್ಲಿ ಜನ ವರುಣನ ಆರ್ಭಟಕ್ಕೆ ಅಕ್ಷರಶಃ ನಲುಗಿದ್ದು ಈ ಭಾಗದ ಪ್ರಮುಖ ವಾಣಿಜ್ಯ ಬೆಳೆಯಾದ ಅಡಿಕೆಯ ಹರಳುಗಳು ಉದುರುತ್ತಿದೆ.
ಜೂನ್ ನಲ್ಲಿ ಆರಂಭವಾಗಬೇಕ್ಕಿದ ಮುಂಗಾರು ಜುಲೈನಲ್ಲಿ ಚುರುಕಾಗಿದ್ದು ಎಡ ಬಿಡದೆ ಸುರಿಯುತ್ತಿರುವ ಮಳೆಯಿಂದ ಅಡಿಕೆಮರದ ಹರಳುಗಳು ಉದುರುತ್ತಿವೆ. ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಹರಳು ಉದುರುತ್ತಿರುವುದು ಕಂಡು ಬಂದಿದೆ.
ತೋಟದಲ್ಲಿ ಹೆಚ್ಚಾದ ತೇವ: ರೋಗ ಹೆಚ್ಚಳ!
ಬೇಸಿಗೆಯಲ್ಲಿ ಸುಡು ಬಿಸಿಲಿನ ವಾತಾವರಣದಿಂದ ನೀರಿನ ಮಟ್ಟದಲ್ಲಿ ಇಳಿಕೆಯಾಗಿತ್ತು. ಇದರಿಂದ ತೋಟಗಳು ಒಣಗಿ ಹೋಗಿದ್ದವು. ಈಗ ನಿರಂತರ ಮಳೆ ಸುರಿಯುತ್ತಿರುವುದರಿಂದಾಗಿ ಬಹುತೇಕ ರೈತರಿಗೆ ಔಷಧಿ ಸಿಂಪಡಿಸಲು ಸಾಧ್ಯವಾಗಿಲ್ಲ. ಮಳೆಯ ಜೊತೆಗೆ ಶೀತ ಗಾಳಿಯು ಬೀಸುತ್ತಿರುವುದು ಮತ್ತು ತೋಟದಲ್ಲಿ ನೀರು ನಿಂತಿರುವುದರಿಂದ ವಾತಾವರಣದಲ್ಲಿನ ತೇವಾಂಶವೂ ಹೆಚ್ಚಳವಾಗಿದ್ದು, ಈ ರೋಗ ಹರಡಲು ಮುಖ್ಯ ಕಾರಣವಾಗಿದೆ.
ಏನಿದು ಕೊಳೆ ರೋಗ?
ಅಡಿಕೆಗೆ ತಗಲುವ ಕೊಳೆ ರೋಗದ ಪೈಥೋಪೆರ ಮೆಡಿಯಾ ಹೆಸರಿನ ಶಿಲೀಂದ್ರದಿಂದ ರೋಗದ ತಗುಲಿ ಗಿಡದ ತೊಟ್ಟು ಕೊಳೆತು ಅಡಿಕೆ ಕಾಯಿ ಉದುರುತ್ತದೆ ರೋಗ ತೀವ್ರವಾದರೆ ತೊಂಡೆ ಸುಳಿ ಕೊಳೆತು ಗಿಡಗಳೇ ನಾಶವಾಗುತ್ತವೆ. ಮಳೆಗಾಲದಲ್ಲಿ ಮರಗಳಿಗೆ ಸರಿಯಾಗಿ ಪೋಷಕಾಂಶದ ನಿರ್ವಹಣೆ ಮಾಡದಿದ್ದಲ್ಲಿ ರೋಗ ರೋಗನಿರೋಧಕ ಶಕ್ತಿ ಕಡಿಮೆಯಾಗಿ ಎಲೆ ಚುಕ್ಕಿ ರೋಗ ಸಹ ಕಾಣಿಸಿಕೊಳ್ಳುತ್ತದೆ. ಮಳೆಗಾಲದಲ್ಲಿ ರೋಗ ಬಾಧಿಸುವುದು ಸರ್ವೆ ಸಾಮಾನ್ಯವಾಗಿದ್ದರೂ ನಿಯಂತ್ರಣಕ್ಕೆ ಸಿಗುತ್ತಿತ್ತು.
ರೈತರ ಕಂಗೆಡಿಸಿದ ರೋಗಗಳು!
ಇತ್ತೀಚಿಗೆ ಕಂಡುಬರುವ ವಿವಿಧ ರೋಗಗಳು ಅಡಿಕೆಯನ್ನೇ ಅವಲಂಬಿಸಿರುವ ಕೃಷಿಕರನ್ನು ಆತಂಕಕ್ಕೆಡೆ ಮಾಡಿದೆ ಕೊಳೆ ರೋಗ, ಎಲೆ ಹಳದಿರೋಗ ,ಎಲೆ ಚುಕ್ಕಿ ರೋಗ ,ಕೆಂಪುನುಸಿ, ಹಿಂಗಾರ ಒಣಗುವುದು ಹೀಗೆ ಒಂದರೆ ಹಿಂದೆ ಒಂದರಂತೆ ಬರುತ್ತಿರುವ ರೋಗ ರೈತರನ್ನು ಹೈರಾಣಾಗಿಸಿದೆ.
ಅಡಿಕೆ ಕೊಳೆ ರೋಗದ ನಿರ್ವಹಣಾ ಕ್ರಮಗಳು
– ಬಿದ್ದಿರುವ ಕಾಯಿ, ಹಿಂಗಾರವನ್ನು ಆರಿಸಿ ತೆಗೆದು ಗುಂಡಿಗೆ ಹಾಕಿ ಮುಚ್ಚುವುದು ಅಥವಾ ಸುಡುವುದು.
– ತೋಟದಲ್ಲಿ ನೀರು ನಿಲ್ಲದಂತೆ ಬಸಿ ಕಾಲುವೆ ಮಾಡಿ ನೀರು ಹರಿದು ಹೋಗುವ ವ್ಯವಸ್ಥೆ ಮಾಡಬೇಕು.
-ಗಾಳಿ ಆಡುವಂತೆ ಮಾಡಲು ಅಂತರ ಬೆಳೆಗಳ ಅಥವಾ ಹೆಚ್ಚುವರಿ ಕಾಡು ಮರಗಳ ರೆಂಬೆ ಕತ್ತರಿಸುವುದು.
-ಮಣ್ಣು ಪರೀಕ್ಷೆ ಆಧಾರದ ಮೇಲೆ ಶಿಫಾರಸ್ಸು ಮಾಡಿದ ಸುಣ್ಣ ಸಾವಯವ ಗೊಬ್ಬರ ಮತ್ತು ರಾಸಾಯನಿಕ ಗೊಬ್ಬರ ಹಾಕುವುದು.
– ತುಂತುರು ಮಳೆ ಇದ್ದಾಗ ಬೋರ್ಡೋ ದ್ರಾವಣವನ್ನು ಶುಷ್ಕ ಮಳೆ ಇದ್ದಾಗ ಬೋರ್ಡೋ ದ್ರಾವಣದ ಮತ್ತು ಶಿಲೀಂದ್ರ ನಾಶಕಗಳ ಸಿಂಪಡಣೆ ಮುಂತಾದ ಮುನ್ನೇಚರಿಕೆ ಕ್ರಮಗಳನ್ನು ತೆಗೆದುಕೊಂಡು ಇದರ ಮೂಲಕ ಕೊಳೆ ರೋಗವನ್ನು ನಿಯಂತ್ರಣಕ್ಕೆ ತರಬಹುದು.
ಎಲ್ಲಾ ಕೃಷಿ ಸುದ್ದಿಗಳಿಗಾಗಿ ನಮ್ಮೂರ್ ಎಕ್ಸ್ಪ್ರೆಸ್ ವೀಕ್ಷಿಸಿ.