ಮಂಗಳೂರಿನಲ್ಲಿ ಮಣ್ಣು ಕುಸಿತಕ್ಕೆ ಓರ್ವ ಬಲಿ!
– ವಿಫಲವಾದ ಕಾರ್ಯಾಚರಣೆ, ಮತ್ತೋರ್ವ ಕಾರ್ಮಿಕ ಮೃತ್ಯು
– 7 ಗಂಟೆ ಬಳಿಕ ಶವ ಹೊರ ತೆಗೆದ ರಕ್ಷಣಾ ಸಿಬ್ಬಂದಿ
NAMMUR EXPRESS NEWS
ಮಂಗಳೂರು: ನಿರ್ಮಾಣ ಹಂತದ ಕಟ್ಟಡದ ಬಳಿ ಭೂಕುಸಿತ ಸಂಭವಿಸಿ ಮಣ್ಣಿನಡಿ ಸಿಲುಕಿದ್ದ ಕಾರ್ಮಿಕನ ರಕ್ಷಣೆ ಕಾರ್ಯಾಚರಣೆ ವಿಫಲವಾಗಿದೆ. ದುರಂತದಲ್ಲಿ ಓರ್ವ ಕಾರ್ಮಿಕ ಮೃತಪಟ್ಟಿದ್ದಾನೆ. ಮೃತ ಕಾರ್ಮಿಕನನ್ನು ಉತ್ತರ ಪ್ರದೇಶ ಮೂಲದ ಚಂದನ್ ಕುಮಾರ್ (30) ಎಂದು ತಿಳಿದು ಬಂದಿದೆ.
ನಗರದ ಬಲ್ಮಠ ಬಳಿ ಬುಧವಾರ ಮಧ್ಯಾಹ್ನದ ವೇಳೆ ನಿರ್ಮಾಣ ಹಂತದ ಕಟ್ಟಡದ ಬಳಿ ಧರೆ ಕುಸಿದು ಇಬ್ಬರು ಬಿಹಾರ ಮೂಲದ ಕಾರ್ಮಿಕರು ಮಣ್ಣಿನಡಿ ಸಿಲುಕಿದ್ದರು. ಘಟನೆ ನಡೆದ ಬಗ್ಗೆ ವರದಿಯಾಗುತ್ತಲೇ ಸ್ಥಳಕ್ಕೆ ಅಗ್ನಿಶಾಮಕ ದಳ , ಎಸ್ ಡಿ ಆರ್ ಎಫ್, ಎನ್ ಡಿ ಆರ್ ಎಫ್ ತಂಡ ದೌಡಾಯಿಸಿ ರಕ್ಷಣಾ ಕಾರ್ಯಾಚರಣೆ ನಡೆಸಲು ಆರಂಭಿಸಿದ್ದರು ಇದಾದ ಕೆಲವು ಗಂಟೆಗಳ ಬಳಿಕ ಓರ್ವ ಕಾರ್ಮಿಕನನ್ನು ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.
ಇದಾದ ಬಳಿಕ ಮಣ್ಣಿನಡಿ ಸಿಲುಕಿದ್ದ ಚಂದನ್ ಪತ್ತೆಗೆ ಕಾರ್ಯಾಚರಣೆ ಮುಂದುವರೆದಿತ್ತು. ರಿಟೇನಿಂಗ್ ವಾಲ್ ಮತ್ತು ಶೀಟ್ ಗಳ ಮಧ್ಯೆ ಸಿಲುಕಿದ್ದ ಕಾರ್ಮಿಕನ ರಕ್ಷಣೆಗಾಗಿ ರಾತ್ರಿಯ ವರೆಗೂ ಕಾರ್ಯಾಚರಣೆ ನಡೆಸಿದರೂ ಕಾರ್ಮಿಕನನ್ನು ರಕ್ಷಿಸಲು ಸಾಧ್ಯವಾಗಲಿಲ್ಲ ಸುಮಾರು ಏಳು ಗಂಟೆಯ ವೇಳೆಗೆ ಮೃತದೇಹವನ್ನು ಎನ್ ಡಿ ಆರ್ ಎಫ್ ತಂಡ ಹೊರತೆಗೆದಿದೆ ಎಂದು ತಿಳಿದುಬಂದಿದೆ.