ಮಂಗಳೂರು ನಗರಕ್ಕೆ ಮತ್ತೆ ಚಡ್ಡಿ ಗ್ಯಾಂಗ್ ಎಂಟ್ರಿ!
– ಉರ್ವದಲ್ಲಿ ವೃದ್ಧ ದಂಪತಿಗೆ ಹಲ್ಲೆ; 14ಲಕ್ಷ ರೂ. ಮೌಲ್ಯದ ಚಿನ್ನಾಭರಣ ಲೂಟಿ
– ಕರಾವಳಿ ಪೊಲೀಸರಿಗೆ ತಲೆನೋವು: ಏನಿದು ಕೇಸ್?
NAMMUR EXPRESS NEWS
ಮಂಗಳೂರು: ಇತ್ತೀಚಿಗೆ ಮಂಗಳೂರು ನಗರದ ಕೋಡಿಕಲ್ನ ಮನೆಯೊಂದಕ್ಕೆ ಐವರ ಚಡ್ಡಿ ಗ್ಯಾಂಗ್ ಮನೆಯೊಂದರ ಸರಳು ಕಟ್ ಮಾಡಿ ಮನೆಯಿಂದ 10 ಸಾವಿರ ರೂ. ನಗದು ದೋಚಿತ್ತು. ಈ ಬಗ್ಗೆ ಪೊಲೀಸರು ಕೂಡ ನಗರ ಜನತೆಯನ್ನು ಜಾಗರೂಕತೆ ವಹಿಸುವಂತೆ ಮುನ್ನೆಚ್ಚರಿಕೆ ನೀಡಿದ್ದರು. ಈ ಘಟನೆ ನಡೆದ ಒಂದೇ ದಿನದಲ್ಲಿ ಮಂಗಳೂರಿನ ಎರಡು ಕಡೆ ಅದೇ ಗ್ಯಾಂಗ್ನಿಂದ ದರೋಡೆ ನಡೆದಿರುವುದು ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ.
ನಗರದ ಉರ್ವ ಸ್ಟೋರ್ ಬಳಿಯ ದಡ್ಡಲ್ ಕಾಡ್ ಕೋಟೆಕಣಿ ಎಂಬಲ್ಲಿ ವೃದ್ಧ ದಂಪತಿ ನೆಲೆಸಿರುವ ಮನೆಗೆ ಮಂಗಳವಾರ ರಾತ್ರಿ ಸುಮಾರು 1.30ರ ಹೊತ್ತಿಗೆ ಬನಿಯನ್ ಹಾಗೂ ಚಡ್ಡಿ ಹಾಕಿದ್ದ ಗ್ಯಾಂಗ್ ಮನೆಯ ಕಿಟಕಿ ಸರಳು ಕಟ್ ಮಾಡಿ ಒಳನುಗ್ಗಿದೆ. ಬಳಿಕ ಮನೆಯಲ್ಲಿದ್ದ ವಿಕ್ಟರ್ ಮೆಂಡೋನ್ಸ & ಪೆಟ್ರಿಶಿಯಾ ಎಂಬ ವೃದ್ಧ ದಂಪತಿ ಮೇಲೆ ಮನಸೋ ಇಚ್ಛೆ ಹಲ್ಲೆಗೈದು ದರೋಡೆ ಮಾಡಿದ್ದಾರೆ. ಮುಖಕ್ಕೆ ಮಂಕಿ ಕ್ಯಾಪ್ ಹಾಕಿಕೊಂಡಿದ್ದ ಈ ಗ್ಯಾಂಗ್ನಲ್ಲಿ ನಾಲ್ವರು ಇದ್ದು, ಕನ್ನಡ ಹಾಗೂ ಹಿಂದಿ ಭಾಷೆ ಮಾತನಾಡುತ್ತಿದ್ದರು.
ಮನೆಯಲ್ಲಿನ ಕಪಾಟಿನಲ್ಲಿಟ್ಟಿದ್ದ ಸುಮಾರು 14 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಲೂಟಿ ಮಾಡಿದ್ದಾರೆ. ವಿಕ್ಟರ್ ಮೇಲೆ ದರೋಡೆಕೋರರು ರಾಡ್ನಿಂದ ಹಲ್ಲೆ ಮಾಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮನೆಯನ್ನು ದೋಚಿದ ಬಳಿಕ ಮನೆ ಮಾಲೀಕರಿಂದ ಕಾರಿನ ಕೀ ಪಡೆದುಕೊಂಡು ಅದೇ ಕಾರಿನಲ್ಲಿ ಪರಾರಿಯಾಗಿದ್ದಾರೆ. ಕಾರು ಇದೀಗ ಹೆಜಮಾಡಿ ಟೋಲ್ ಬಳಿ ಪತ್ತೆಯಾಗಿದ್ದು, ಉಡುಪಿ ಕಡೆಗೆ ಹೋಗಿರುವ ಶಂಕೆ ವ್ಯಕ್ತವಾಗಿದೆ. ರಾತ್ರಿ ಸುಮಾರು 1.30 ಸುಮಾರಿಗೆ ಮನೆಯೊಳಗೆ ಪ್ರವೇಶಿಸಿದ್ದ ಈ ಗ್ಯಾಂಗ್ ಮುಂಜಾನೆ 4.45ರವರೆಗೂ ಮನೆಯಲ್ಲಿಯೇ ಇತ್ತು ಎನ್ನಲಾಗಿದೆ. ಕಳ್ಳರು ಹೋದ ಬಳಿಕ ಗಾಯಗೊಂಡಿದ್ದ ವೃದ್ಧ ದಂಪತಿ ಪಕ್ಕದ ಮನೆಯವರಿಗೆ ಕರೆ ಮಾಡಿದ್ದಾರೆ. ನೆರೆ ಮನೆಯವರು ನಂತರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಇನ್ನೊಂದೆಡೆ ಪಂಪ್ವೆಲ್ ಸಮೀಪದ ಬಿಎಚ್ ಸ್ಟೋರ್ಗೆ ರಾತ್ರಿ ನುಗ್ಗಿದ ಕಳ್ಳರು ನಗದು ಕಳವು ಮಾಡಿದ್ದಾರೆ. ಈ ಎರಡು ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ.